ಆಪರೇಷನ್ ಕಮಲದ ಭೀತಿ.. 100ಕ್ಕೂ ಹೆಚ್ಚು ಕಾಂಗ್ರೆಸ್​ ಅಭ್ಯರ್ಥಿಗಳು ರೆಸಾರ್ಟ್‌ಗೆ ಶಿಫ್ಟ್! | Gujarat Politics

Gujarat Politics
Gujarat Politics
Published on
ಗಾಂಧಿನಗರ: ನವಸಾರಿ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ರಂಗೇರಿದ್ದು, ಗುಜರಾತ್ ರಾಜಕೀಯ ಈಗ ರೆಸಾರ್ಟ್ ಪಾಲಿಟಿಕ್ಸ್ ಗೆ ಸಾಕ್ಷಿಯಾಗಿದೆ. ಆಡಳಿತಾರೂಢ ಬಿಜೆಪಿ ಈಗಾಗಲೇ ಜಿಲ್ಲೆಯಾದ್ಯಂತ 52 ಸ್ಥಾನಗಳನ್ನು ಅವಿರೋಧವಾಗಿ ಗೆಲ್ಲುವ ಮೂಲಕ ಬಲಿಷ್ಠ ಮುನ್ನಡೆ ಸಾಧಿಸಿರುವುದು ಕಾಂಗ್ರೆಸ್ ಪಾಳಯದಲ್ಲಿ ದೊಡ್ಡ ಮಟ್ಟದ ತಲ್ಲಣ ಸೃಷ್ಟಿಸಿದೆ.
ಈ ಹಿನ್ನೆಲೆಯಲ್ಲಿ ತನ್ನ ಅಭ್ಯರ್ಥಿಗಳ ಪಕ್ಷಾಂತರ ಮತ್ತು ಕುದುರೆ ವ್ಯಾಪಾರದ ಭೀತಿಯಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ತನ್ನ 100ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ರಹಸ್ಯ ಮತ್ತು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಪಟೇಲ್ ಈ ಬೆಳವಣಿಗೆಯ ಕುರಿತು ಮಾತನಾಡುತ್ತಾ, ಬಿಜೆಪಿ ಸರ್ಕಾರಿ ಯಂತ್ರ ಮತ್ತು ಪೊಲೀಸ್ ಪಡೆಯನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ವಿರೋಧ ಪಕ್ಷದ ಅಭ್ಯರ್ಥಿಗಳ ಮೇಲೆ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ರಾಜಕೀಯ ಜಿದ್ದಾಜಿದ್ದಿನ ನಡುವೆ ಬೆದರಿಕೆ ಮತ್ತು ಒತ್ತಡದ ಪ್ರಕರಣಗಳು ಮುನ್ನೆಲೆಗೆ ಬಂದಿದ್ದು, ವನ್ಸ್ಡಾ ತಾಲ್ಲೂಕಿನ ಅಭ್ಯರ್ಥಿಗಳನ್ನು ರಕ್ಷಿಸಲು ಕಾಂಗ್ರೆಸ್ ಹರಸಾಹಸ ಪಡುತ್ತಿದೆ. ಜಿಲ್ಲಾ ಪಂಚಾಯತ್ ಅಭ್ಯರ್ಥಿಯೊಬ್ಬರ ಕುಟುಂಬ ಸದಸ್ಯರನ್ನು ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕುವ ಮೂಲಕ ಉಮೇದುವಾರಿಕೆ ಹಿಂಪಡೆಯಲು ಬಿಜೆಪಿ ಒತ್ತಡ ಹೇರಿದೆ ಎಂಬ ಆರೋಪಗಳು ಕೇಳಿಬಂದಿವೆ.
ಇದಷ್ಟೆ ಅಲ್ಲದೇ ಉಮರ್ಗಮ್ ಪ್ರದೇಶದಲ್ಲಿ ಇತ್ತೀಚೆಗೆ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಚುನಾವಣಾ ಪ್ರಕ್ರಿಯೆಯಲ್ಲಿ ಅಧಿಕಾರಿಗಳ ಮೇಲೆ ಹೇರಲಾಗುತ್ತಿರುವ ಅಗಾಧ ಒತ್ತಡಕ್ಕೆ ಕನ್ನಡಿ ಹಿಡಿದಿದೆ ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದು, ಬಿಜೆಪಿಯ ಈ ಆಪರೇಷನ್ ಕಮಲದಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾಗಿದೆ ಎನ್ನುವುದು ವಿರೋಧ ಪಕ್ಷದ ನಾಯಕರ ವಾದವಾಗಿದೆ.

ಇದು ಕೇವಲ ಬಾಹ್ಯ ಸಮಸ್ಯೆಯಲ್ಲ

ಕಾಂಗ್ರೆಸ್ ಎದುರಿಸುತ್ತಿರುವುದು ಕೇವಲ ಬಾಹ್ಯ ಸವಾಲನ್ನಲ್ಲ, ಬದಲಾಗಿ ಪಕ್ಷದ ಒಳಗೆ ಆಂತರಿಕ ಅಶಾಂತಿಯೂ ಮನೆಮಾಡಿದೆ. ಚುನಾವಣೆಯ ಸಮಯದಲ್ಲಿ ಅಭ್ಯರ್ಥಿಗಳಿಗೆ ಪಕ್ಷದ ಅಧಿಕೃತ ಆದೇಶಗಳನ್ನು ತಲುಪಿಸುವಲ್ಲಿ ಸಂಘಟನಾತ್ಮಕ ವಿಫಲತೆ ಎದ್ದು ಕಾಣುತ್ತಿದ್ದು, ವನ್ಸ್ಡಾ ಭಾಗದಲ್ಲಿ ಜಿಲ್ಲಾಧ್ಯಕ್ಷರ ಕಾರ್ಯತಂತ್ರದ ಬಗ್ಗೆ ಸ್ವಪಕ್ಷದ ಕಾರ್ಯಕರ್ತರೇ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಪಕ್ಷಕ್ಕೆ ಇಕ್ಕಟ್ಟಿನ ಪರಿಸ್ಥಿತಿ ತಂದೊಡ್ಡಿದೆ.
ಬೆಲೆ ಏರಿಕೆ ಮತ್ತು ನಿರುದ್ಯೋಗದಂತಹ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗಲು ಕಾಂಗ್ರೆಸ್ ಯೋಜಿಸಿದ್ದರೂ, ಸದ್ಯಕ್ಕೆ ತನ್ನ ಅಭ್ಯರ್ಥಿಗಳನ್ನು ಒಗ್ಗಟ್ಟಾಗಿ ಉಳಿಸಿಕೊಳ್ಳುವುದೇ ಪಕ್ಷದ ಮೊದಲ ಆದ್ಯತೆಯಾಗಿದೆ. ಇತ್ತ ಬಿಜೆಪಿ ಈಗಾಗಲೇ ಜಿಲ್ಲಾ ಪಂಚಾಯತ್, ಪುರಸಭೆ ಮತ್ತು ತಾಲ್ಲೂಕು ಪಂಚಾಯತ್‌ಗಳಲ್ಲಿ ಗಮನಾರ್ಹ ಸಂಖ್ಯೆಯ ಸ್ಥಾನಗಳನ್ನು ಗೆದ್ದು ಬೀಗುತ್ತಿದ್ದು, ನವಸಾರಿ ರಾಜಕೀಯದ ಈ ಚದುರಂಗದಾಟ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net