ಉತ್ತರ ಪ್ರದೇಶದ ಆ ಜಿಲ್ಲೆಯ ಹೆಸರೆತ್ತಿದರೆ ಜನರು ಹೆದರುತ್ತಿದ್ದದ್ದು ಏಕೆ...? ಎಸ್‌ಪಿ-ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಾ ಮೂಲ ಕಾರಣ ಬಿಚ್ಚಿಟ್ಟ ಸಿಎಂ ಯೋಗಿ! | CM Yogi Adityanath

CM Yogi Adityanath |  ಎಸ್‌ಪಿ-ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಾ ಮೂಲ ಕಾರಣ ಬಿಚ್ಚಿಟ್ಟ ಸಿಎಂ ಯೋಗಿ!
CM Yogi Adityanath | ಎಸ್‌ಪಿ-ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಾ ಮೂಲ ಕಾರಣ ಬಿಚ್ಚಿಟ್ಟ ಸಿಎಂ ಯೋಗಿ!
Published on
ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ಗಾಜಿಪುರಕ್ಕೆ ಭೇಟಿ ನೀಡಿ, ಬರೋಬ್ಬರಿ 692 ಕೋಟಿ ರೂಪಾಯಿ ಮೌಲ್ಯದ 268 ಅಭಿವೃದ್ದಿ ಯೋಜನೆಗಳಿಗೆ ಚಾಲನೆ ನೀಡಿದರು ಹಾಗೂ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, ಗಾಜಿಪುರ ಜಿಲ್ಲೆಗೆ ಗುರುತಿನ ಬಿಕ್ಕಟ್ಟು ಸೃಷ್ಟಿಸಿದಕ್ಕಾಗಿ ಸಮಾಜವಾದಿ ಪಾರ್ಟಿ ಮತ್ತು ಕಾಂಗ್ರೆಸ್ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ತಮ್ಮ ಶೌರ್ಯ ಪ್ರದರ್ಶಿಸಿದ ವೀರರನ್ನು ನೆನಪಿಸಿಕೊಳ್ಳಿ. ಹುತಾತ್ಮ ರಾಮ್ ಉಗ್ರ ಪಾಂಡೆ ಅವರು ಇದೇ ಪವಿತ್ರ ಭೂಮಿಯವರಾಗಿದ್ದರು. ಅವರ ವೀರಾವೇಷದ ಸೇವೆಯನ್ನು ಗೌರವಿಸಿ ಭಾರತೀಯ ಸೈನ್ಯದ ಅತ್ಯುನ್ನತ ಬಹುಮಾನವಾದ ಮಹಾವೀರ ಚಕ್ರವನ್ನು ಮರಣೋತ್ತರವಾಗಿ ನೀಡಲಾಯಿತು. ಕುಬೇರನಾಥ ರಾಯ್ ಹಿಂದಿ ಸಾಹಿತ್ಯದ ಪ್ರಸಿದ್ಧ ಪ್ರಬಂಧಕಾರರು ಮತ್ತು ವಿದ್ವಾಂಸರಾಗಿದ್ದರು. ಗೋಪಾಲರಾಮ್ ಗಹ್ಮರಿ (ಗಹ್ಮರಿ ಬಾಬು) ಅವರ ಹೆಸರಿನಲ್ಲಿ ಗೋಪಾಲ್ ರಾಯ್ ಅವರು 200ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ ಎಂದು ಹೇಳಲಾಗುತ್ತದೆ.

ಗಾಜಿಪುರ ಜಿಲ್ಲೆ ಅನಾಮಧೇಯವಾಗಿದ್ದು ಏಕೆ..?

ಇಷ್ಟೊಂದು ಮಹಾನ್ ವ್ಯಕ್ತಿಗಳಿಗೆ ಜನ್ಮ ನೀಡಿದ ನಮ್ಮ ಗಾಜಿಪುರ ಜಿಲ್ಲೆ ಅನಾಮಧೇಯವಾಗಿದ್ದು ಏಕೆ..? ಅದರ ಹೆಸರು ಮುಳುಗಿಹೋಗಿದ್ದು ಏಕೆ..? ಈ ಜಿಲ್ಲೆಯ ಹೆಸರು ಹೇಳಿದರೆ ಜನರು ನಡುಗುತ್ತಿದ್ದುದು ಏಕೆ..? ಇಲ್ಲಿಗೆ ಬರಲು ಜನ ಹೆದರುತ್ತಿದ್ದುದು ಏಕೆ..? ಈ ಗುರುತಿನ ಬಿಕ್ಕಟ್ಟನ್ನು ಸೃಷ್ಟಿಸಿದವರು ಯಾರು..? ನಿಮಗಾಗಿ ಏನನ್ನೂ ಮಾಡದೆ, ಕೇವಲ ಗುರುತಿನ ಬಿಕ್ಕಟ್ಟನ್ನು ತಂದೊಡ್ಡಿದವರೇ ಈ ಪರಿಸ್ಥಿತಿಗೆ ಕಾರಣ ಎಂದು ವಿಪಕ್ಷಗಳ ವಿರುದ್ಧ ಪ್ರಶ್ನೆಗಳ ಸುರಿಮಳೆಗೈದರು.
ಮೂಲಸೌಕರ್ಯ ಹಾಗೂ ದೇಶಪ್ರೇಮದ ಕುರಿತು ಮಾತನಾಡಿದ ಸಿಎಂ ಯೋಗಿ, ಈ ಬಿಕ್ಕಟ್ಟು ಸೃಷ್ಟಿಸಿದ ಜನರು, ದೇಶದ ರಕ್ಷಣೆಗಾಗಿ ತಮ್ಮನ್ನೇ ಸಮರ್ಪಿಸಿಕೊಂಡ ಭಾರತದ ರಾಷ್ಟ್ರೀಯ ವೀರರಿಗೆ ಗೌರವ ನೀಡುವ ಬದಲು, ವಿದೇಶಿ ಆಕ್ರಮಣಕಾರರನ್ನು ಮಹಿಮಾಯೋಗ್ಯರನ್ನಾಗಿ ಮಾಡಿದರು. ಆದರೆ ಇಂದು ನಮ್ಮ ಬಿಜೆಪಿ-ಎನ್‌ಡಿಎ ಡಬಲ್ ಎಂಜಿನ್ ಸರ್ಕಾರವು ದೇಶದ ರಾಷ್ಟ್ರೀಯ ನಾಯಕರಿಗೆ ಸಂಪೂರ್ಣ ಗೌರವ ನೀಡುತ್ತಿದೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. 1000 ವರ್ಷಗಳ ಹಿಂದೆ ಸಾಲಾರ್ ಮಸೂದ್ ಎಂಬ ಆಕ್ರಮಣಕಾರ ಭಾರತವನ್ನು ಮೆಟ್ಟಿ ತುಳಿಯುವ ಉದ್ದೇಶದಿಂದ ಬಂದಿದ್ದ. ಆದರೆ ಭಾರತದ ಮಹಾನ್ ನಾಯಕ, ರಾಷ್ಟ್ರೀಯ ವೀರ ಮಹಾರಾಜ ಸುಹೇಲ್ ದೇವ್ ಸಾಲಾರ್ ಮಸೂದನನ್ನು ಮೆಟ್ಟಿ ತುಳಿದು, ಬಹ್ರೈಚ್‌ನ ಚಿತ್ತೌರಾ ಎಂಬಲ್ಲಿ ಆತನಿಗೆ ಕಠಿಣ ಶಿಕ್ಷೆ ವಿಧಿಸಿರುವುದಾಗಿ ತಿಳಿಸಿದರು.

ಎಸ್‌ಪಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಮಹಾರಾಜ ಸುಹೇಲ್ ದೇವ್ ಕುರಿತು ಮಾತನಾಡಿದ ಯೋಗಿ ಆದಿತ್ಯನಾಥ್, ಸಮಾಜವಾದಿ ಪಾರ್ಟಿ ಮತ್ತು ಕಾಂಗ್ರೆಸ್ ಪಕ್ಷಗಳು ಮಹಾರಾಜ ಸುಹೇಲ್ ದೇವ್ ಅವರ ಹೆಸರಿನಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಎಂದಿಗೂ ಅವಕಾಶ ನೀಡಲಿಲ್ಲ. ವಿದೇಶಿ ಆಕ್ರಮಣಕಾರರ ಕ್ರೌರ್ಯದಿಂದ ಈ ದೇಶವನ್ನು ದೀರ್ಘಕಾಲ ಕಾಪಾಡಿದ ಮಹಾರಾಜ ಸುಹೇಲ್ ದೇವ್ ಅವರ ಶೌರ್ಯ, ಪರಾಕ್ರಮ ಮತ್ತು ಬುದ್ಧಿವಂತಿಕೆಗೆ ಕೃತಜ್ಞತೆ ಸಲ್ಲಿಸುವ ಬದಲು, ಕಾಂಗ್ರೆಸ್ ಮತ್ತು ಸಮಾಜವಾದಿ ಪಾರ್ಟಿ ನಮ್ಮ ರಾಷ್ಟ್ರೀಯ ನಾಯಕರಿಗೆ ಅಪಮಾನ ಮಾಡಿದವು.
ಈ ನಾಯಕರು ಆಕ್ರಮಣಕಾರ ಘಾಜಿ ಸಾಲಾರ್ ಮಸೂದ್ ಘಾಜಿಯ ನೆನಪಿನಲ್ಲಿ ಮೇಳಗಳನ್ನು ಆಯೋಜಿಸುತ್ತಿದ್ದರು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ನಾವು ಇದನ್ನು ಸಂಪೂರ್ಣವಾಗಿ ನಿರಾಕರಿಸಿದೆವು. ಸಾಲಾರ್ ಮಸೂದ್ ಮೇಳ ನಡೆಯುವುದಿಲ್ಲ; ಮೇಳ ನಡೆದರೆ ಅದು ಮಹಾರಾಜ ಸುಹೇಲ್ ದೇವ್ ನೆನಪಿನಲ್ಲೇ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದೆವು ಎಂದರು.
ಮುಂದುವರಿದು ಮಾತನಾಡಿದ ಸಿಎಂ ಯೋಗಿ, ಇಂದು ಬಹ್ರೈಚ್‌ನ ಅದೇ ಸ್ಥಳದಲ್ಲಿ ನಾವು ಮಹಾರಾಜ ಸುಹೇಲ್ ದೇವ್ ಭವ್ಯವಾದ ಪ್ರತಿಮೆ ಮತ್ತು ಸ್ಮಾರಕವನ್ನು ನಿರ್ಮಿಸಿದ್ದೇವೆ ಎಂದು ಹೇಳಲು ನನಗೆ ಸಂತೋಷವಾಗುತ್ತದೆ. ಈಗ ಅಲ್ಲಿ ಮೇಳ ನಡೆಯುತ್ತಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ನಾವು ಮಹಾರಾಜ ಸುಹೇಲ್ ದೇವ್ ಅವರನ್ನು ಭಾರತದ ರಾಷ್ಟ್ರೀಯ ನಾಯಕರನ್ನಾಗಿ ಗೌರವಿಸುತ್ತೇವೆ. ಬಹ್ರೈಚ್‌ನಲ್ಲಿ ಅವರ ಹೆಸರಿನಲ್ಲಿ ವೈದ್ಯಕೀಯ ಕಾಲೇಜು ಹಾಗೂ ಅಜಂಘಡದಲ್ಲಿ ವಿಶ್ವವಿದ್ಯಾಲಯವನ್ನು ಸಹ ಸ್ಥಾಪಿಸಿದ್ದೇವೆ ಎಂದು ಸರಕಾರದ ಸಾಧನೆಗಳನ್ನು ವಿವರಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net