ರಾಜ್ಯಸಭೆಗೆ ಕೈ ಕಲಿಗಳ ಪಟ್ಟಿ ರಿಲೀಸ್: ತೆಲಂಗಾಣದಿಂದ ಅಭಿಷೇಕ್ ಮನು ಸಿಂಘ್ವಿ, ವೆಮ್ ನರೇಂದರ್ ರೆಡ್ಡಿ ಅಖಾಡಕ್ಕೆ! | Congress List

Congress List |  ಕಾಂಗ್ರೆಸ್​​ನ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿಗೆ
Congress List | ಕಾಂಗ್ರೆಸ್​​ನ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿಗೆ
Published on
ನವದೆಹಲಿ: ಮುಂಬರುವ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು (Congress List) ಪ್ರಕಟಿಸಿದ್ದು, ಆರು ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸಿದೆ. ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿಗೆ ತೆಲಂಗಾಣದಿಂದ ಅವಕಾಶ ನೀಡಲಾಗಿದೆ.
ತೆಲಂಗಾಣದಿಂದ ಸಿಂಘ್ವಿ ಜೊತೆಗೆ ವೆಮ್ ನರೇಂದರ್ ರೆಡ್ಡಿ, ಛತ್ತೀಸ್‌ಗಢದಿಂದ ಫುಲೋ ದೇವಿ ನೇತಮ್, ಹರಿಯಾಣದಿಂದ ಕರಮ್‌ವೀರ್ ಸಿಂಗ್ ಬೌಧ್, ಹಿಮಾಚಲ ಪ್ರದೇಶದ ಅನುರಾಗ್ ಶರ್ಮಾ ಮತ್ತು ತಮಿಳುನಾಡಿನಿಂದ ಎಂ ಕ್ರಿಸ್ಟೋಫರ್ ತಿಲಕ್ ನಾಮನಿರ್ದೇಶನಗೊಂಡಿದ್ದಾರೆ.
ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನುಮೋದಿಸಿದ್ದು, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದಾರೆ.

ತೆಲಂಗಾಣದಲ್ಲಿ ಎರಡು ಸ್ಥಾನಗಳು ಖಾಲಿ

ತೆಲಂಗಾಣದಲ್ಲಿ ಅಭಿಷೇಕ್ ಸಿಂಘ್ವಿ ಮತ್ತು ಕೆ.ಆರ್. ಸುರೇಶ್ ರೆಡ್ಡಿಯವರ ಪ್ರಸ್ತುತ ಅವಧಿ ಏಪ್ರಿಲ್ 9 ರಂದು ಕೊನೆಗೊಳ್ಳುವುದರಿಂದ ಎರಡು ರಾಜ್ಯಸಭಾ ಸ್ಥಾನಗಳು ಖಾಲಿಯಾಗಲಿವೆ. ರಾಜ್ಯದಲ್ಲಿ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ, ವಿಧಾನಸಭೆಯಲ್ಲಿ ಪಕ್ಷದ ಸಂಖ್ಯಾ ಬಲದಿಂದಾಗಿ ಸಿಂಘ್ವಿ ಮೇಲ್ಮನೆಯಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ.

ಕಾಂಗ್ರೆಸ್ ನಾಯಕರಿಗೆ ಧನ್ಯವಾದ ತಿಳಿಸಿದ ವೇಂ ನರೇಂದ್ರ ರೆಡ್ಡಿ

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಾಜಿ ಶಾಸಕ ವೆಂ ನರೇಂದರ್ ರೆಡ್ಡಿ, ತಮ್ಮನ್ನು ಅಭ್ಯರ್ಥಿಯನ್ನಾಗಿಸಿದ ಕಾಂಗ್ರೆಸ್​ ನಾಯಕರಿಗೆ ಧನ್ಯವಾದ ತಿಳಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ನನ್ನನ್ನು ಪಕ್ಷದ ರಾಜ್ಯಸಭಾ ಅಭ್ಯರ್ಥಿಯಾಗಿ ಘೋಷಿಸಿದ್ದಕ್ಕಾಗಿ ಗೌರವಾನ್ವಿತ ಸೋನಿಯಾ ಗಾಂಧಿ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಸಂಸದ ಪ್ರಿಯಾಂಕಾ ಗಾಂಧಿ, ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೇರಿದಂತೆ ಅನೇಕ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ರಾಜ್ಯಸಭಾ ಚುನಾವಣೆಗಳು

ರಾಜ್ಯಸಭೆಯ 37 ಸ್ಥಾನಗಳಿಗೆ ಮಾರ್ಚ್ 16 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ. ಮಹಾರಾಷ್ಟ್ರ, ಒಡಿಶಾ, ತೆಲಂಗಾಣ ಸೇರಿದಂತೆ ಒಟ್ಟು 10 ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಹಾಲಿ ಸದಸ್ಯರ ಅವಧಿ ಮುಗಿದಿರುವುದರಿಂದ ಈ ಚುನಾವಣೆ ಎದುರಾಗಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net