ಕಾಂಗ್ರೆಸ್ ದೇಶವನ್ನು ಭ್ರಷ್ಟಾಚಾರದ ಪ್ರಪಾತಕ್ಕೆ ದೂಡಿತ್ತು: 12 ವರ್ಷಗಳ ಎನ್‌ಡಿಎ ಸಂಭ್ರಮದಲ್ಲಿ ಪಿಎಂ ಮೋದಿ ವಾಗ್ದಾಳಿ! PM Modi

ಕಾಂಗ್ರೆಸ್ ದೇಶವನ್ನು ಭ್ರಷ್ಟಾಚಾರದ ಪ್ರಪಾತಕ್ಕೆ ದೂಡಿತ್ತು: 12 ವರ್ಷಗಳ ಎನ್‌ಡಿಎ ಸಂಭ್ರಮದಲ್ಲಿ ಪಿಎಂ ಮೋದಿ ವಾಗ್ದಾಳಿ!
ಕಾಂಗ್ರೆಸ್ ದೇಶವನ್ನು ಭ್ರಷ್ಟಾಚಾರದ ಪ್ರಪಾತಕ್ಕೆ ದೂಡಿತ್ತು: 12 ವರ್ಷಗಳ ಎನ್‌ಡಿಎ ಸಂಭ್ರಮದಲ್ಲಿ ಪಿಎಂ ಮೋದಿ ವಾಗ್ದಾಳಿ!
Published on
ನವದೆಹಲಿ: ಕಾಂಗ್ರೆಸ್ ಪಕ್ಷದ ಸುದೀರ್ಘ ಕಾಲದ ವಂಚನೆ, ಭ್ರಷ್ಟಾಚಾರ ಮತ್ತು ತಾರತಮ್ಯದ ಆಡಳಿತದಿಂದ ಬೇಸತ್ತಿದ್ದ ದೇಶದ ಜನತೆ, 2014ರಲ್ಲಿ ನಮ್ಮ ಮೇಲೆ ಅಪಾರ ಭರವಸೆ ಇಟ್ಟು ಎನ್‌ಡಿಎ ಮೈತ್ರಿಕೂಟವನ್ನು ಅಧಿಕಾರಕ್ಕೆ ತಂದರು. ಸತತವಾಗಿ ಸುದೀರ್ಘ ಅವಧಿಗೆ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ನನ್ನ ಜೀವನದ ಪರಮ ಸೌಭಾಗ್ಯ. ಇದನ್ನು ನಾನು ವೈಯಕ್ತಿಕ ಸಾಧನೆ ಎಂದು ಭಾವಿಸುವುದಿಲ್ಲ, ಇದು ಎನ್‌ಡಿಎ ಕುಟುಂಬದ ಪ್ರತಿಯೊಬ್ಬ ಕಾರ್ಯಕರ್ತನ ಸಾಮೂಹಿಕ ಯಜ್ಞದ ಫಲ ಎಂದು ಪ್ರಧಾನಿ ನರೇಂದ್ರ ಮೋದಿ(PM Modi) ಹೇಳಿದ್ದಾರೆ.
ಕೇಂದ್ರದಲ್ಲಿ ಎನ್‌ಡಿಎ ಆಡಳಿತ 12 ವರ್ಷ ಪೂರೈಸಿದ ಮತ್ತು ಜವಾಹರ್ ಲಾಲ್ ನೆಹರೂ ಅವರ ದಾಖಲೆಯನ್ನು ಮೀರಿಸಿ ದೇಶದ ಅತಿ ಹೆಚ್ಚು ದಿನಗಳ ಸತತ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಐತಿಹಾಸಿಕ ಸಂದರ್ಭದಲ್ಲಿ ದೆಹಲಿಯ ಭಾರತ ಮಂಟಪದಲ್ಲಿ ನಡೆದ ಮಹಾ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು.

ನನಗೆ ದೇಶದ ಜನರೇ ಸಾಕ್ಷಾತ್ ದೇವರ ಸ್ವರೂಪ"

ಸಮಾವೇಶದಲ್ಲಿ ಮಿತ್ರಪಕ್ಷಗಳ ನಾಯಕರು ಸಲ್ಲಿಸಿದ ಅಭಿನಂದನಾ ನಿರ್ಣಯವನ್ನು ಸ್ವೀಕರಿಸಿ ಮಾತನಾಡಿದ ಪ್ರಧಾನಿ, ರಾಜಕೀಯ ಜೀವನದಲ್ಲಿ ಸಾಗುತಲಿರು, ಸಾಗುತಲಿರು ಎಂಬ ಮಂತ್ರವನ್ನು ಜಪಿಸುತ್ತಾ, ಸಾಲು ಸಾಲು ಏಳುಬೀಳುಗಳನ್ನು ಕಂಡು ಇಲ್ಲಿಯವರೆಗೆ ಬಂದಿದ್ದೇನೆ. ಎಂದಿಗೂ ನಾನು ಈ ಮೈಲಿಗಲ್ಲನ್ನು ತಲುಪುತ್ತೇನೆ ಎಂದು ಯೋಚಿಸಿರಲಿಲ್ಲ. ಭಾರತಾಂಬೆಯ ಸೇವೆ ಮಾಡುವುದು ದೇವರ ವಿಶೇಷ ಕೃಪೆಯಿಂದ ಮಾತ್ರ ಸಾಧ್ಯ. ನನಗೆ ಈ ದೇಶದ 140 ಕೋಟಿ ಜನರೇ ಸಾಕ್ಷಾತ್ ದೇವರ ಸ್ವರೂಪ. ಹೀಗಾಗಿಯೇ ನಾನು ರಾಜಕಾರಣವನ್ನು ಕೇವಲ ಅಧಿಕಾರ ಎಂದು ನೋಡದೆ, ಒಂದು ಆಧ್ಯಾತ್ಮಿಕ ಸಾಧನೆ ಎಂದು ಭಾವಿಸಿದ್ದೇನೆ ಎಂದರು.
ಬಡತನದಿಂದ ಮೇಲೆ ಬಂದು ಈಗಷ್ಟೇ ಹೊಸ ಮಧ್ಯಮ ವರ್ಗಕ್ಕೆ ಸೇರ್ಪಡೆಯಾಗಿರುವ ನಾಗರಿಕರು ಮತ್ತೆ ಬಡತನದ ಸುಳಿಗೆ ಸಿಲುಕದಂತೆ ನೋಡಿಕೊಳ್ಳುವುದು ನಮ್ಮ ಮುಂದಿರುವ ಅತಿ ದೊಡ್ಡ ಜವಾಬ್ದಾರಿ. ದೇಶದ ಯುವಕರು, ಮಹಿಳೆಯರು, ರೈತರು ಮತ್ತು ಮಧ್ಯಮ ವರ್ಗದ ಪ್ರತಿಯೊಂದು ಕನಸನ್ನು ನನಸು ಮಾಡಲು ನಾವು ಹಗಲಿರುಳು ಶ್ರಮಿಸಬೇಕಾಗಿದೆ ಎಂದು ಪಿಎಂ ಮೋದಿ ಕರೆ ನೀಡಿದ್ದಾರೆ.

ಹಿಂದೂ ಗ್ರೋತ್ ರೇಟ್" ಅಲ್ಲ, ಅದು ಕಾಂಗ್ರೆಸ್ ಗ್ರೋತ್ ರೇಟ್!

ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಈ ದೇಶವನ್ನು ಅಸಹಾಯಕತೆ, ಭ್ರಷ್ಟಾಚಾರ ಮತ್ತು ಕೀಳರಿಮೆಯ ಪ್ರಪಾತಕ್ಕೆ ದೂಡಿತ್ತು. ಭಾರತದಲ್ಲಿ ಅಭಿವೃದ್ಧಿ ಎಂಬುದು ಆಮೆಯ ವೇಗದಲ್ಲೇ ಸಾಗಬೇಕು, ಇಲ್ಲಿ ವೇಗದ ಪ್ರಗತಿ ಅಸಾಧ್ಯ ಎಂದೇ ಜನರನ್ನು ನಂಬಿಸಲಾಗಿತ್ತು. ಕಾಂಗ್ರೆಸ್ ತನ್ನ ಆಡಳಿತದ ವೈಫಲ್ಯ ಮತ್ತು ನಿಧಾನಗತಿಯ ಬೆಳವಣಿಗೆಗೆ ಅತ್ಯಂತ ಚಾಣಾಕ್ಷತನದಿಂದ ಹಿಂದೂ ಗ್ರೋತ್ ರೇಟ್ ಎಂಬ ಪಟ್ಟ ಹೊರಿಸಿತು. ತಪ್ಪು, ವೈಫಲ್ಯ ಎಲ್ಲವೂ ಕಾಂಗ್ರೆಸ್ ಪಕ್ಷದ್ದು, ಆದರೆ ಕಳಂಕ ಮಾತ್ರ ದೇಶದ ಬಹುಸಂಖ್ಯಾತ ಹಿಂದೂ ಜನಸಂಖ್ಯೆಯ ಮೇಲೆ ಎಂದಿದ್ದಾರೆ. ನಿಜ ಹೇಳಬೇಕೆಂದರೆ ಅದಕ್ಕೆ ಕಾಂಗ್ರೆಸ್ ಗ್ರೋತ್ ರೇಟ್ ಎಂದೇ ಹೆಸರಿಡಬೇಕಿತ್ತು ಎಂದು ತಿರುಗೇಟು ನೀಡಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅವರ ನಾಯಕತ್ವದಲ್ಲಿ ಎನ್‌ಡಿಎ ಸರ್ಕಾರ ಬಂದಾಗಲಷ್ಟೇ ದೇಶ ಮೊದಲ ಬಾರಿಗೆ ವೇಗದ ಅಭಿವೃದ್ಧಿಯ ಮುಖ ನೋಡಿತು. ಆದರೆ 2004ರಲ್ಲಿ ಮತ್ತೆ ದೇಶ ಕಾಂಗ್ರೆಸ್‌ನ ಅಸ್ಥಿರತೆಯ ಸುಳಿಗೆ ಸಿಲುಕಿತು ಎಂದು ಮೋದಿ ಇತಿಹಾಸವನ್ನು ನೆನಪಿಸಿಕೊಂಡರು.

ಮೊಬೈಲ್‌ನಿಂದ ಸೆಮಿಕಂಡಕ್ಟರ್‌ವರೆಗೆ: 12 ವರ್ಷಗಳ ಬದಲಾವಣೆಯ ಪರ್ವ

ಕಳೆದ 12 ವರ್ಷಗಳಲ್ಲಿ ಭಾರತ ಸಾಧಿಸಿದ ಅಭಿವೃದ್ಧಿಯ ಅಂಕಿ-ಅಂಶಗಳನ್ನು ಪ್ರಧಾನಿ ಮೋದಿ ಹೆಮ್ಮೆಯಿಂದ ತೆರೆದಿಟ್ಟರು.
ಮೊಬೈಲ್ ಕ್ರಾಂತಿ: 2014ರಲ್ಲಿ ಭಾರತವು ಬಹುತೇಕ ಮೊಬೈಲ್ ಫೋನ್‌ಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಇಂದು ಭಾರತದಲ್ಲೇ 33 ಕೋಟಿಗೂ ಅಧಿಕ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಸ್ವದೇಶಿಯಾಗಿ ಉತ್ಪಾದಿಸಲಾಗುತ್ತಿದೆ.
ಸೌರಶಕ್ತಿ: 2014ರಲ್ಲಿ ಕೇವಲ 2.5 ಗಿಗಾವ್ಯಾಟ್ ಇದ್ದ ಸೌರಶಕ್ತಿ ಸಾಮರ್ಥ್ಯ, ಇಂದು ಬರೋಬ್ಬರಿ 150 ಗಿಗಾವ್ಯಾಟ್‌ಗಳನ್ನು ದಾಟಿದೆ.
ಎಥೆನಾಲ್ ಬ್ಲೆಂಡಿಂಗ್: ಇಂಧನದಲ್ಲಿ ಎಥೆನಾಲ್ ಮಿಶ್ರಣ ಪ್ರಮಾಣ ಶೇ 1.5 ರಿಂದ ಶೇ 20 ಕ್ಕೆ ಏರಿಕೆಯಾಗಿದೆ.
ಸೆಮಿಕಂಡಕ್ಟರ್: ದೇಶದಲ್ಲಿ ಒಂದೂ ಸೆಮಿಕಂಡಕ್ಟರ್ ಘಟಕ ಇರಲಿಲ್ಲ, ಇಂದು 10 ಕ್ಕೂ ಹೆಚ್ಚು ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳು ನಿರ್ಮಾಣ ಹಂತದಲ್ಲಿದ್ದು, ಭಾರತವನ್ನು ಆಧುನಿಕತೆಯತ್ತ ಮುನ್ನಡೆಸುತ್ತಿವೆ.
ನಮ್ಮ ಸರ್ಕಾರ ಮೀನುಗಾರರು, ಬೀದಿಬದಿ ವ್ಯಾಪಾರಿಗಳು (ಸ್ವನಿಧಿ ಕಾರ್ಡ್) ಮತ್ತು ದಿವ್ಯಾಂಗರಿಗಾಗಿ ಪ್ರತ್ಯೇಕ ಸಚಿವಾಲಯ ಹಾಗೂ ಯೋಜನೆಗಳನ್ನು ತರುವ ಮೂಲಕ ಕೊನೆಯ ಸಾಲಿನ ವ್ಯಕ್ತಿಗೂ ಅಭಿವೃದ್ಧಿಯ ಫಲ ಸಿಗುವಂತೆ ಮಾಡಿದೆ. 2047ರ ವೇಳೆಗೆ ವಿಕಸಿತ ಭಾರತ ನಿರ್ಮಿಸುವ ನಮ್ಮ ಸಂಕಲ್ಪ ಅಚಲವಾಗಿದೆ ಎಂದು ಪ್ರಧಾನಿ ಮೋದಿ ಸಾರಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net