13 ವರ್ಷಗಳಿಂದ ದೆಹಲಿಯ ಬೆಲೆಬಾಳುವ ಬಂಗಲೆಯಲ್ಲಿ ಉಚಿತ ವಾಸ; ಒಂದೇ ಒಂದು ರೂಪಾಯಿ ಬಾಡಿಗೆ ಕಟ್ಟಿಲ್ಲವಂತೆ ಕಾಂಗ್ರೆಸ್! | 24 Akbar Road

24 Akbar Road | 13 ವರ್ಷಗಳಿಂದ ದೆಹಲಿಯ ಬೆಲೆಬಾಳುವ ಬಂಗಲೆಯಲ್ಲಿ ಉಚಿತ ವಾಸ; ಒಂದೇ ಒಂದು ರೂಪಾಯಿ ಬಾಡಿಗೆ ಕಟ್ಟಿಲ್ಲವಂತೆ ಕಾಂಗ್ರೆಸ್!
24 Akbar Road | 13 ವರ್ಷಗಳಿಂದ ದೆಹಲಿಯ ಬೆಲೆಬಾಳುವ ಬಂಗಲೆಯಲ್ಲಿ ಉಚಿತ ವಾಸ; ಒಂದೇ ಒಂದು ರೂಪಾಯಿ ಬಾಡಿಗೆ ಕಟ್ಟಿಲ್ಲವಂತೆ ಕಾಂಗ್ರೆಸ್!
Published on
24 Akbar Road: ಇಂಡಿಯಾ ಟುಡೇ ಪಡೆದುಕೊಂಡಿರುವ ಮಾಹಿತಿ ಹಕ್ಕು ಕಾಯ್ದೆ (RTI) ಉತ್ತರದ ಪ್ರಕಾರ, ಕಾಂಗ್ರೆಸ್ ಪಕ್ಷ 2013ರ ಜೂನ್ 26 ರಿಂದ ದೆಹಲಿಯ 24, ಅಕ್ಬರ್ ರೋಡ್‌ನಲ್ಲಿರುವ ತನ್ನ ಪ್ರಧಾನ ಕಚೇರಿಯನ್ನು ಅನಧಿಕೃತ ಆಕ್ರಮಿಸಿಕೊಂಡಿದೆ ಎನ್ನಲಾಗಿದೆ. ಈ ಅವಧಿಯಲ್ಲಿ ಈ ಬಂಗಲೆಯಿಂದ ಸರ್ಕಾರಕ್ಕೆ ಯಾವುದೇ ರೀತಿಯ ಬಾಡಿಗೆ ಸಿಕ್ಕಿಲ್ಲ ಎಂದು ವರದಿಯಾಗಿದೆ.
ಈ ಬಂಗಲೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಪಾವತಿಸಬೇಕಾದ ಬಾಕಿ ಮೊತ್ತವನ್ನು ಸರ್ಕಾರ ಇನ್ನೂ ನಿರ್ಧರಿಸಿಲ್ಲ ಮತ್ತು ಪ್ರಸ್ತುತ ಈ ವಿಷಯ ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಎಸ್ಟೇಟ್ ನಿರ್ದೇಶನಾಲಯವು ಈ ಆರ್​​ಟಿಐ ಅರ್ಜಿಗೆ ನೀಡಿರುವ ಪ್ರತಿಕ್ರಿಯೆಯಲ್ಲಿ, ಲೂಟಿಯನ್ಸ್ ದೆಹಲಿಯಲ್ಲಿರುವ ಬಂಗಲೆ ಸಂಖ್ಯೆ 24, ಅಕ್ಬರ್ ರೋಡ್ ಅನ್ನು 1992 ಆಗಸ್ಟ್ 7 ರಂದು ಕಾಂಗ್ರೆಸ್ ಪಕ್ಷಕ್ಕೆ ಹಂಚಿಕೆ ಮಾಡಲಾಗಿತ್ತು ಎಂದು ತಿಳಿಸಿದೆ. ಆದರೆ, ಈ ಕರಾರಿನ ಪ್ರಕಾರ 2013ರ ಜೂನ್ 26ಕ್ಕೆ ಆ ಅವಧಿ ಮುಗಿಯಬೇಕಿತ್ತು. ಆದರೆ ಅಂದಿನಿಂದ ಈ ಬಂಗಲೆಯು ಪಕ್ಷದ ಅನಧಿಕೃತ ವಶದಲ್ಲೇ ಉಳಿದುಕೊಂಡಿದೆ ಎಂದು ತಿಳಿದುಬಂದಿದೆ.

2013 ರಿಂದ ಯಾವುದೇ ಬಾಡಿಗೆ ಸ್ವೀಕರಿಸಿಲ್ಲ!...

24, ಅಕ್ಬರ್ ರೋಡ್ ಬಂಗಲೆಗೆ ಸಂಬಂಧಿಸಿದಂತೆ 2013 ರಿಂದ ಯಾವುದೇ ಬಾಡಿಗೆಯನ್ನು ಸ್ವೀಕರಿಸಿಲ್ಲ ಎಂದು ಎಸ್ಟೇಟ್ ನಿರ್ದೇಶನಾಲಯ ತನ್ನ ಆರ್​ಟಿಐ ಉತ್ತರದಲ್ಲಿ ಸ್ಪಷ್ಟಪಡಿಸಿದೆ. ಕಾಂಗ್ರೆಸ್ ಪಕ್ಷದಿಂದ ಬರಬೇಕಾದ ಬಾಕಿ ಮೊತ್ತವನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಬಂಗಲೆ ಖಾಲಿ ಮಾಡುವಂತೆ ಕಾಂಗ್ರೆಸ್‌ಗೆ ನೀಡಲಾದ ನೋಟೀಸ್‌ಗಳ ಪ್ರತಿಗಳನ್ನು ನೀಡಲು ಸರ್ಕಾರ ನಿರಾಕರಿಸಿದೆ. ಈ ದಾಖಲೆಗಳನ್ನು ಪ್ರತ್ಯೇಕವಾಗಿ ಎತ್ತಿಡುವುದು ಕಷ್ಟ ಹಾಗೂ ಇದರಿಂದ ಸರ್ಕಾರದ ಕೆಲಸಕ್ಕೆ ಅಡಚಣೆಯಾಗುತ್ತದೆ ಎಂದು ಆರ್​ಟಿಐ ಕಾಯ್ದೆಯ ನಿಯಮ 7(9) ರ ಅಡಿಯಲ್ಲಿ ಈ ಮಾಹಿತಿಯನ್ನು ನೀಡಲಾಗಿಲ್ಲ.
2018 ರಲ್ಲಿ ಇಂಡಿಯಾ ಟುಡೇ ಪಡೆದುಕೊಂಡಿದ್ದ ಹಿಂದಿನ ಆರ್​ಟಿಐ ಉತ್ತರದಲ್ಲಿ ಈ ಇತ್ತೀಚಿನ ಪ್ರಕಟಣೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಆ ವೇಳೆ ಎಸ್ಟೇಟ್ ನಿರ್ದೇಶನಾಲಯವು 24, ಅಕ್ಬರ್​​ ರೋಡ್​​ ಕಚೇರಿಯ ಲೈಸೆನ್ಸ್ ಶುಲ್ಕವನ್ನು 2017, ಜುಲೈ 1 ರಿಂದ ಜಾರಿಗೆ ಬರುವಂತೆ ತಿಂಗಳಿಗೆ 3,920ರೂಗೆ ಪರಿಷ್ಕರಿಸಲಾಗಿದೆ ಎಂದು ತಿಳಿಸಿತ್ತು. ಆ ಉತ್ತರದಲ್ಲಿ ಕಾಂಗ್ರೆಸ್‌ಗೆ ನೀಡಲಾಗಿದ್ದ 2013 ರ ರದ್ದತಿ ಪತ್ರವನ್ನು ಲಗತ್ತಿಸಲಾಗಿತ್ತು ಮತ್ತು ಬಂಗಲೆಯನ್ನು ತನ್ನ ಬಳಿಯೇ ಉಳಿಸಿಕೊಂಡು ಸಾಮಾನ್ಯ ಲೈಸೆನ್ಸ್ ಶುಲ್ಕವನ್ನು ವಿಧಿಸುವಂತೆ ಕಾಂಗ್ರೆಸ್ ಮಾಡಿದ ವಿನಂತಿಯು ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಉಲ್ಲೇಖಿಸಲಾಗಿತ್ತು.

ಬಿಜೆಪಿ ಬಾಕಿ ಮೊತ್ತದ ಕಥೆ ಏನು..?

ಇತ್ತೀಚಿನ ಆರ್​​ಟಿಐ ಅರ್ಜಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಮಾಜಿ ಪ್ರಧಾನ ಕಚೇರಿಯಾಗಿದ್ದ ಲೂಟಿಯನ್ಸ್ ದೆಹಲಿಯ 11, ಅಶೋಕ್ ರೋಡ್ ಬಂಗಲೆಯ ಕುರಿತಾಗಿಯೂ ಮಾಹಿತಿ ಕೋರಲಾಗಿತ್ತು. ಈ ಬಂಗಲೆಯನ್ನು 1985, ಮಾರ್ಚ್ 21 ರಂದು ಬಿಜೆಪಿ ಪಕ್ಷಕ್ಕೆ ಹಂಚಿಕೆ ಮಾಡಲಾಗಿತ್ತು ಎಂಬುದನ್ನು ಎಸ್ಟೇಟ್ ನಿರ್ದೇಶನಾಲಯ ದೃಢಪಡಿಸಿದೆ. ಆದರೆ, ಈ ಆಸ್ತಿಯು ಈಗ ಲೋಕಸಭಾ ಸದಸ್ಯರ ಪೂಲ್‌ನ ಭಾಗವಾಗಿದೆ ಎಂದು ನಿರ್ದೇಶನಾಲಯ ತಿಳಿಸಿದೆ. ಹೀಗಾಗಿ ಬಾಡಿಗೆ ಸಂಗ್ರಹ ಮತ್ತು ಬಾಡಿಗೆ ಪಾವತಿಸುತ್ತಿರುವ ಸಂಸ್ಥೆಯ ಕುರಿತ ಮಾಹಿತಿಯ ಅರ್ಜಿಯನ್ನು ಲೋಕಸಭಾ ಸಚಿವಾಲಯಕ್ಕೆ ವರ್ಗಾಯಿಸಲಾಗಿದೆ. ಸರ್ಕಾರದ ಕಡೆಗೆ ಬಿಜೆಪಿಯಿಂದ ಪಾವತಿಯಾಗಬೇಕಾದ ಬಾಕಿ ಮೊತ್ತವೇನಾದರೂ ಇದ್ದರೆ, ಅದು ಕೂಡ ಪ್ರಸ್ತುತ ಪರಿಶೀಲನೆಯಲ್ಲಿದೆ ಮತ್ತು ಇನ್ನೂ ನಿರ್ಧರಿಸಲಾಗಿಲ್ಲ ಎಂದು ಉತ್ತರದಲ್ಲಿ ತಿಳಿಸಲಾಗಿದೆ.
2019 ರಲ್ಲಿ ಇಂಡಿಯಾ ಟುಡೇ ಪಡೆದುಕೊಂಡಿದ್ದ ಆರ್​ಟಿಐ ಉತ್ತರದ ಪ್ರಕಾರ, 11, ಅಶೋಕ್ ರೋಡ್ ಬಂಗಲೆಯು ಬಿಜೆಪಿಯ ಪಕ್ಷದ ಕಚೇರಿಯಾಗಿ ಅವರ ಸ್ವಾಧೀನದಲ್ಲೇ ಮುಂದುವರಿದಿತ್ತು. 2018 ರಲ್ಲಿ ಸಲ್ಲಿಸಲಾಗಿದ್ದ RTI ಅರ್ಜಿಯ ಉತ್ತರದಲ್ಲಿ, ಈ ಬಂಗಲೆಯ ನಿಗದಿತ ಲೈಸೆನ್ಸ್ ಶುಲ್ಕವನ್ನು 2017, ಜುಲೈ 1 ರಿಂದ ಜಾರಿಗೆ ಬರುವಂತೆ ತಿಂಗಳಿಗೆ 3,920ರೂಗೆ ಪರಿಷ್ಕರಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿತ್ತು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net