ಸ್ಪೀಕರ್ ಕೊಠಡಿಯಲ್ಲಿ ಪ್ರಧಾನಿಗೆ ಕಾಂಗ್ರೆಸ್ ಸಂಸದರಿಂದ ಬೆದರಿಕೆ ಆರೋಪ: ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ ಸಚಿವ ಕಿರಣ್ ರಿಜಿಜು | Kiren Rijiju

ಘಟನೆಯ ವಿಡಿಯೋ
ಘಟನೆಯ ವಿಡಿಯೋ
Published on
ನವದೆಹಲಿ: ಸಂಸತ್​​ನಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ವೈಷಮ್ಯ ದಿನೇ ದಿನೇ ಹೆಚ್ಚಾಗುತ್ತಿದ್ದು, ಇಂದು(ಫೆ. 12) ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು(Kiren Rijiju) ಸ್ಪೀಕರ್ ಕೊಠಡಿಯಲ್ಲಿ ಪ್ರಧಾನಿ ಮೋದಿಗೆ ಕಾಂಗ್ರೆಸ್​ ಸಂಸದರು ಬೆದರಿಕೆ ಹಾಕಿದ್ದರು ಎಂದು ಮತ್ತೊಂದು ವಿಡುಯೋ ಬಿಡುಗಡೆ ಮಾಡಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ರಿಜಿಜು, 20 ರಿಂದ 25 ಕಾಂಗ್ರೆಸ್ ಸಂಸದರು ಗೌರವಾನ್ವಿತ ಸ್ಪೀಕರ್ ಅವರ ಕೊಠಡಿಗೆ ಪ್ರವೇಶಿಸಿ, ಅವರನ್ನು ನಿಂದಿಸಿ, ಪ್ರಧಾನ ಮಂತ್ರಿಯವರಿಗೆ ಬೆದರಿಕೆ ಹಾಕಿದಾಗ ಕಾಂಗ್ರೆಸ್ ಸಂಸದರೊಬ್ಬರು ತೆಗೆದ ವೀಡಿಯೊ ಕ್ಲಿಪ್ ಇದು. ನಮ್ಮ ಪಕ್ಷವು ಚರ್ಚೆಯಲ್ಲಿ ನಂಬಿಕೆ ಇಡುತ್ತದೆ. ದೈಹಿಕವಾಗಿ ಬೆದರಿಕೆ ಹಾಕಲು ಸಂಸದರನ್ನು ಎಂದಿಗೂ ಪ್ರೋತ್ಸಾಹಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ರಿಜಿಜು ಪೋಸ್ಟ್ ಮಾಡಿದ ವಿಡಿಯೋದಲ್ಲಿ, ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಮಹಿಳಾ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೊಠಡಿಗೆ ತೆರಳಿದ್ದು, ಕಾಂಗ್ರೆಸ್ ಸಂಸದೆ ಜ್ಯೋತಿಮಣಿ, ವರ್ಷ ಗಾಯಕ್ವಾಡ್ ಸೇರಿ ಹಲವರು ಕೇಂದ್ರ ಸಚಿವ ರಿಜಿಜು ಕಡೆ ಮತ್ತು ನಿಶಿಕಾಂತ್ ದುಬೆ ಕಡೆ ಬೆರಳು ತೋರಿಸಿ ಜೋರಾಗಿ ಮಾತನಾಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರು ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ ಅವರ ಪುಸ್ತಕವನ್ನು ಉಲ್ಲೇಖಿಸಿದ್ದಕ್ಕೆ ಪ್ರತಿಯಾಗಿ, ಮಾಜಿ ಪ್ರಧಾನಿ ನೆಹರು ಮತ್ತು ಇಂದಿರಾ ಗಾಂಧಿ ಬಗ್ಗೆ ಅನುಚಿತ ವ್ಯಾಖ್ಯಾಗಳನ್ನು ಮಾಡಿದ ದಿನದಂದು ಈ ಘಟನೆ ನಡೆದಿದೆ ಎನ್ನಲಾಗಿದೆ.
ಸದನದಲ್ಲಿ ಮಾತನಾಡಿದ್ದ ದುಬೆ, ಕೆಲವು ಪುಸ್ತಕಗಳನ್ನು ತಂದು ಅವುಗಳಲ್ಲಿನ ನೆಹರಾ-ಗಾಂಧಿ ಕುಟುಂಬದ ಕುರಿತಾದ ಆಕ್ಷೇಪಾರ್ಹ ಮಾಹಿತಿಗಳನ್ನು ಟೀಕಿಸಿದ್ದರು. ಇದರಿಂದ ಕರಳಿದ್ದ ಕಾಂಗ್ರೆಸ್ ಸಂಸದರು, ಪ್ರಿಯಾಂಕಾ ಗಾಂಧಿ & ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಸ್ಪೀಕರ್ ಕೊಠಡಿಗೆ ತೆರಳಿ ದುಬೆ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದರು. ಈ ವೇಳೆ ಕಾಂಗ್ರೆಸ್ ಸಂಸದರಾದ ಜ್ಯೋತಿಮಣಿ, ವರ್ಷ ಗಾಯಕ್ವಾಡ್ ದುಬೆ ವಿರುದ್ಧ ಏರು ಧ್ವನಿಯಲ್ಲೇ ಕೂಗಾಡಿದ್ದರು ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net