Priyanka Gandhi | ಪ್ರಿಯಾಂಕಾ ಗಾಂಧಿ ಪ್ರಧಾನಿಯಾಗಬೇಕೆಂದ ಕಾಂಗ್ರೆಸ್​ ಸಂಸದ; ಪಕ್ಷಕ್ಕೆ ರಾಹುಲ್​ ನಂಬಿಕೆ ಇಲ್ಲ ಎಂದು ಬಿಜೆಪಿ ವ್ಯಂಗ್ಯ

ಕಾಂಗ್ರೆಸ್​ ಸಂಸದೆ ಪ್ರಿಯಾಂಕಾ ಗಾಂಧಿ ಮತ್ತು ವಿಪಕ್ಷ ನಾಯಕ ರಾಹುಲ್​ ಗಾಂಧಿ
ಕಾಂಗ್ರೆಸ್​ ಸಂಸದೆ ಪ್ರಿಯಾಂಕಾ ಗಾಂಧಿ ಮತ್ತು ವಿಪಕ್ಷ ನಾಯಕ ರಾಹುಲ್​ ಗಾಂಧಿ
Published on
ನವದೆಹಲಿ: ಕಾಂಗ್ರೆಸ್​ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾರನ್ನು(Priyanka Gandhi) ಪ್ರಧಾನಿಯನ್ನಾಗಿ ಮಾಡಿ ಮತ್ತು ಇಂದಿರಾ ಗಾಂಧಿಯಂತೆ ಬಾಂಗ್ಲಾದೇಶದ ಮೇಲೆ ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಾರೆಂದು ನೋಡಿ ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಮಂಗಳವಾರ (ಡಿ.23) ಹೇಳಿದ್ದಾರೆ.
ಈ ಬಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕಾಂಗ್ರೆಸ್ ಸಂಸದ, ಪ್ರಿಯಾಂಕಾರನ್ನು ಪ್ರಧಾನಿಯನ್ನಾಗಿ ಮಾಡಿ ಮತ್ತು ಇಂದಿರಾ ಗಾಂಧಿಯಂತೆ ಅವರು ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಾರೆಂದು ನೋಡಿ ಎಂದು ಬಿಜೆಪಿಗೆ ಸಲಹೆ ನೀಡಿದ್ದಾರೆ. ಅಲ್ಲದೆ, ಪ್ರಿಯಾಂಕಾ ಗಾಂಧಿಯು ತಮ್ಮ ಹೆಸರಿನ ಹಿಂದೆ ಗಾಂಧಿ ಎಂದು ಸೇರಿಸಿಕೊಂಡಿದ್ದಾರೆ. ಅವರು ಇಂದಿರಾ ಗಾಂಧಿಯವರ ಮೊಮ್ಮಗಳು, ಪಾಕಿಸ್ತಾನಕ್ಕೆ ತುಂಬಾ ಹಾನಿ ಮಾಡಿದವರು, ಪಾಕ್​ಗೆ ಆ ಗಾಯಗಳು ಇನ್ನೂ ವಾಸಿಯಾಗಿಲ್ಲ ಎಂದು ಮಸೂದ್ ತಿಳಿಸಿದ್ದಾರೆ.
ಬಾಂಗ್ಲಾದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ಬಗ್ಗೆ ಮಸೂದ್ ಸಾಕಷ್ಟು ಬಲವಾಗಿ ಮಾತನಾಡಲಿಲ್ಲ ಎಂಬ ಬಿಜೆಪಿ ಆರೋಪಗಳಿಗೆ ಪ್ರತಿಕ್ರಿಯೆಯಾಗಿ ಈ ಹೇಳಿಕೆಗಳು ನೀಡಿದ್ದಾರೆ.

ಕಾಂಗ್ರೆಸ್​ಗೆ ರಾಹುಲ್​ ಮೇಲೆ ನಂಬಿಕೆ ಇಲ್ಲ ಬಿಜೆಪಿ ವ್ಯಂಗ್ಯ

ಮಸೂದ್ ಮಾತಿಗೆ ಪ್ರತಿಕ್ರಿಯಿಸಿದ ಬಿಜೆಪಿ, ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿಯವರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದೆ ಎಂದು ವ್ಯಂಗ್ಯವಾಡಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ವಕ್ತಾರ ಶಹಜಾದ್ ಪೂನವಾಲ್ಲಾ, ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರು ರಾಹುಲ್ ಗಾಂಧಿಯ ಮೇಲೆ ಇನ್ನು ಮುಂದೆ ನಂಬಿಕೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ, ಕಾಂಗ್ರೆಸ್​ ನಾಯಕರಿಗೆ ರಾಹುಲ್ ಗಾಂಧಿಯವರ ಮೇಲೆ ಯಾರಿಗೂ ವಿಶ್ವಾಸವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡಲು ಕಾಂಗ್ರೆಸ್ ನಾಯಕರು ಈಗ ಒತ್ತಡ ಹೇರುತ್ತಿದ್ದಾರೆ. ಅಲ್ಲದೆ, ಅವರ ಪತಿ ರಾಬರ್ಟ್ ವಾದ್ರಾ ಈ ಕ್ರಮವನ್ನು ಬೆಂಬಲಿಸುತ್ತಿದ್ದಾರೆ ಎಂದು ಪೂನವಾಲ್ಲಾ ತಿಳಿಸಿದ್ದಾರೆ. ಅಲ್ಲದೆ, ಇದು ರಾಹುಲ್ ಗಾಂಧಿ ಸಾರ್ವಜನಿಕ ಬೆಂಬಲವನ್ನು ಮಾತ್ರವಲ್ಲದೆ ಅವರ ಪಕ್ಷದೊಳಗಿನ ಬೆಂಬಲವನ್ನೂ ಕಳೆದುಕೊಂಡಿದ್ದಾರೆ ಎಂಬುದನ್ನು ಸೂಚಿಸುತ್ತದೆ ಎಂದು ಶಹಜಾದ್ ಪೂನವಾಲ್ಲಾ ತಿಳಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net