Amit Shahs Claim | 15 ವೋಟ್​ಗಳಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್​ಗೆ 12, ಆದರೂ ನೆಹರು ಆಯ್ಕೆಯಾಗಿದ್ದು ಹೇಗೆ..? ರಟ್ಟಾಯ್ತು ಗೆಲುವಿನ ಗುಟ್ಟು

Amit Shahs Claim
Amit Shahs Claim
Published on
ದೆಹಲಿ: 1946 ರಲ್ಲಿಯೇ ಜವಾಹರಲಾಲ್ ನೆಹರು ಪರವಾಗಿ ಮತಕಳ್ಳತನ ನಡೆದಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಷಾ ಆರೋಪಕ್ಕೆ ಕಾಂಗ್ರೆಸ್​ ಸಂಸದ ಮಾಣಿಕ್​ ರಾಮ್​​ ಟಾಗೋರ್​ ಪ್ರತಿಕ್ರಿಯೆ ನೀಡಿದ್ದು, ಷಾ ಹೇಳಿಕೆ ತಪ್ಪಾಗಿದೆ ಮತ್ತು ಅದರಲ್ಲಿ ಯಾವುದೇ ಹುರುಳಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಟಾಗೋರ್, ಈ ಪ್ರಕ್ರಿಯೆಯನ್ನು ಬಹು ಪ್ರಾಂತೀಯ ಕಾಂಗ್ರೆಸ್ ಸಮಿತಿಯ ನಾಮನಿರ್ದೇಶನಗಳು ಮತ್ತು ಮಹಾತ್ಮ ಗಾಂಧಿಯವರ ಮಧ್ಯಸ್ಥಿಕೆಯಲ್ಲಿ ಆಯೋಜಿಸಲಾಗಿದೆಯೇ ಹೊರತು ಯಾವುದೇ ಚುನಾವಣೆಯ ಮೂಲಕ ಅಲ್ಲ ಎಂದು ಬರೆದುಕೊಂಡಿದ್ದಾರೆ.
15 ಪ್ರಾಂತೀಯ ಕಾಂಗ್ರೆಸ್ ಸಮಿತಿಗಳಲ್ಲಿ (ಪಿಸಿಸಿ) ಹನ್ನೆರಡು ಸರ್ದಾರ್ ಪಟೇಲ್ ಅವರನ್ನು ನಾಮನಿರ್ದೇಶನ ಮಾಡಿದೆ. ನೆಹರು ಪಿಸಿಸಿ ನಾಮನಿರ್ದೇಶನಗಳನ್ನು ಪಡೆಯಲಿಲ್ಲ. ಪಿಸಿಸಿ ನಾಮನಿರ್ದೇಶನಗಳ ನಂತರ, ಗಾಂಧಿ ಆಯ್ಕೆಯಾದರು. ಅವರು ಪಟೇಲ್​​ರನ್ನು ಹಿಂದೆ ಸರಿಯುವಂತೆ ಕೇಳಿಕೊಂಡರು. ಪಟೇಲ್ ಸದಾ ಗಾಂಧಿ ಆಶಯವನ್ನು ಗೌರವಿಸಿ ಕಣದಿಂದ ಹಿಂದೆ ಸರಿದರು, ನೆಹರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರು ಎಂದು ಟಾಗೋರ್ ತಿಳಿಸಿದ್ದಾರೆ.

ಅಮಿತ್ ಷಾ ಭಾಷಣದಲ್ಲಿ ಸ್ಪಷ್ಟತೆ ಇಲ್ಲ

ಅಮಿತ್ ಷಾ ಭಾಷಣದ ಬಗ್ಗೆ ಮಾತನಾಡಿದ ಶಿವಸೇನೆ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ, ಗೃಹ ಸಚಿವರ ಮಾತಿನಲ್ಲಿ ಸ್ಪಷ್ಟತೆ ಇರಲಿಲ್ಲ, ಅನಾವಶ್ಯಕವಾಗಿ ಕಾಂಗ್ರೆಸ್ ನಾಯಕರ ಹೆಸರನ್ನು ಇದರಲ್ಲಿ ಎಳೆದು ತರಲಾಗಿದೆ, ಭಾಷಣದ ವೇಳೆ ಸಾಕಷ್ಟು ಅಸಂಸದೀಯ ಪದಗಳನ್ನು ಬಳಸಿದ್ದಾರೆ. ಚುನಾವಣಾ ಸುಧಾರಣೆಯ ಕುರಿತಾಗಿ ಅವರ ಬಳಿ ಯಾವುದೇ ಉತ್ತರಗಳಿಲ್ಲ ಎಂದು ಹೇಳಿದರು.

ಟೊಳ್ಳುತನ ಎಂದ ಪ್ರಮೋದ್ ತಿವಾರಿ

ಅಮಿತ್ ಷಾ ಭಾಷಣದ ಕುರಿತಾಗಿಯೇ ಮಾತನಾಡಿದ ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ, ಸಚಿವರು ಪ್ರಮುಖ ಮತ್ತು ನೈಜ ಸಮಸ್ಯೆಗಳನ್ನು ಬಗೆಹರಿಸುವ ಬದಲು, ವಿಷಯಾಂತರ ಮಾಡಿ ಕಾಂಗ್ರೆಸ್ ಸಂಘಟನೆಯ ಬಗ್ಗೆ ಮಾತನಾಡಿದ್ದಾರೆ. ಅವರು ಪ್ರಸ್ತಾಪಿಸಿದ ವಿಷಯಗಳಿಗೂ, ಮತದಾರರ ಪಟ್ಟಿ ಪರಿಷ್ಕರಣೆಗೂ ಯಾವುದೇ ಸಂಬಂಧವಿಲ್ಲ. ನಿಖರವಾದ ಉತ್ತರಗಳನ್ನು ನೀಡುವ ಬದಲು, ಷಾ ಟೊಳ್ಳುತನವನ್ನು ಪ್ರದರ್ಶಿಸುತ್ತಿದ್ದಾರೆ ಎನ್ನುವುದನ್ನು ಅವರ ವೈಖರಿ ಸಾಬೀತುಪಡಿಸಿದೆ ಎಂದು ತಿಳಿಸಿದರು.

ಅಮಿತ್​ ಷಾ ಆರೋಪವೇನು..?

  • ಸ್ವಾತಂತ್ರ್ಯಕ್ಕೂ ಸಿಗುವುದಕ್ಕೂ ಮುನ್ನ, ಸರ್ದಾರ್ ಪಟೇಲ್ ಅವರು ಜವಾಹರಲಾಲ್ ನೆಹರು ಅವರಿಗಿಂತ ಹೆಚ್ಚಿನ ಮತಗಳನ್ನು ಪಡೆದರು. ಆದರೆ ನೆಹರು ಪ್ರಧಾನಿಯಾದರು ಎಂದು ಷಾ ಆರೋಪಿಸಿದ್ದಾರೆ.
  • ಇಂದಿರಾ ಗಾಂಧಿ ರಾಯ್ ಬರೇಲಿಯಿಂದ ಚುನಾವಣೆಯಲ್ಲಿ ಗೆದ್ದಾಗ ಮತ ಕಳ್ಳತನ ಮಾಡಿದರು ಮತ್ತು ಅಲಹಾಬಾದ್ ಹೈಕೋರ್ಟ್ ಚುನಾವಣೆಯನ್ನು ಅಕ್ರಮ ಎಂದು ತೀರ್ಪು ನೀಡಿತು. ಇದಾದ ಬಳಿಕ ಪ್ರಧಾನ ಮಂತ್ರಿಯಾದವರು ಪರಿಶೀಲನೆಗೆ ಒಳಪಡುವುದಿಲ್ಲ ಎಂದು ಹೊಸ ಕಾನೂನು ರಚಿಸುವ ಮೂಲಕ ಇಂದಿರಾ ಸ್ವತಃ ವಿನಾಯಿತಿ ಪಡೆದರು ಎಂದು ಹೇಳಿದರು.
  • ಮತ ಕಳ್ಳತನ ಮೂರನೇ ಉದಾಹರಣೆಯೆಂದರೆ ಅರ್ಹತೆ ಇಲ್ಲದವರೂ ಮತ ಚಲಾಯಿಸಬಹುದು ಎಂದು ಷಾ ಹೇಳಿದರು. ಸೋನಿಯಾ ಗಾಂಧಿ ದೇಶದ ನಾಗರಿಕರಾಗುವ ಮೊದಲೇ ಮತದಾರರಾಗಿದ್ದರು ಎಂದು ಇತ್ತೀಚಿನ ನ್ಯಾಯಾಲಯದಲ್ಲಿನ ಪ್ರಕರಣವನ್ನು ಉಲ್ಲೇಖಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net