ಮಲಯಾಳಿ ಮುಸ್ಲಿಂ ಒಬ್ಬರ ಮನೆಗೆ ಹೋಗಿ ಕಾಂಗ್ರೆಸ್​ ನಾಯಕರು ಹಂದಿಮಾಂಸದೂಟ ಕೇಳುತ್ತಾರಾ?: ರಾಜೀವ್​ ಚಂದ್ರಶೇಖರ್ | Rajeev Chandrasekhar

ಕೇರಳಂ ಲೋಕಭವನದಲ್ಲಿ ಕಡ್ಡಾಯವಾಗಿ ಕೇವಲ ಸಸ್ಯಹಾರಿ ಆಹಾರವನ್ನು ತಯಾರಿಸಬೇಕೆಂಬ ರಾಜ್ಯಪಾಲ ಓಂ ಪ್ರಕಾಶ್ ಮಾಥುರ್ ಅವರ ಆದೇಶವನ್ನು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರನ್ ಸಮರ್ಥಿಸಿಕೊಂಡಿದ್ದಾರೆ.
Rajeev Chandrasekhar
Published on: 

ತಿರುವನಂತಪುರಂ: ಕೇರಳಂ ಲೋಕಭವನದಲ್ಲಿ ಕಡ್ಡಾಯವಾಗಿ ಕೇವಲ ಸಸ್ಯಹಾರಿ ಆಹಾರವನ್ನು ತಯಾರಿಸಬೇಕೆಂಬ ರಾಜ್ಯಪಾಲ ಓಂ ಪ್ರಕಾಶ್ ಮಾಥುರ್ ಅವರ ಆದೇಶವನ್ನು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರನ್ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಸಾರ್ವಜನಿಕ ವಿಷಯಗಳನ್ನು ಜನರ ಗಮನದಿಂದ ಬೇರೆಡೆ ಸೆಳೆಯಲು ಇಂತಹ ವಿವಾದವನ್ನು ಹುಟ್ಟು ಹಾಕಿದ್ದಾರೆ. ಲೋಕಭವನದಲ್ಲಿ ಯಾವ ರೀತಿಯ ಆಹಾರ ತಯಾರಿಸಬೇಕೆಂಬುದು ರಾಜ್ಯಪಾಲರ ವಿವೇಚನೆಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕರು ಮಲಯಾಳಿ ಮುಸ್ಲಿಂ ವ್ಯಕ್ತಿಯೊಬ್ಬರ ಮನೆಗೆ ಹೋಗಿ, ಅಲ್ಲಿ ಹಂದಿಮಾಂಸವನ್ನು ಬಡಿಸಬೇಕೆಂದು ಕೇಳುತ್ತಾರೆಯೇ? ಲೋಕ ಭವನದಲ್ಲಿ ವಾಸಿಸುತ್ತಿರುವ ರಾಜ್ಯಪಾಲರಿಗೆ ತಮ್ಮ ಸಂಸ್ಕೃತಿ ಮತ್ತು ಆದ್ಯತೆಗಳಿಗೆ ಅನುಗುಣವಾಗಿ ಯಾವ ಆಹಾರವನ್ನು ಬಡಿಸಬೇಕು ಎಂದು ನಿರ್ಧರಿಸುವ ಹಕ್ಕಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Also Read
ಯಾರ ಶಾಂತಿಗಾಗಿ ನಾನು ಸಹಿ ಹಾಕಬೇಕು?: ಪೀಸ್ ಬಾಂಡ್​ಗೆ ಸಹಿ ಹಾಕಲು ನಿರಾಕರಿಸಿದ ನೇಹಾ ಬೋರಾ | Neha Bora
Rajeev Chandrasekhar

ಕಾಂಗ್ರೆಸ್ ಪಕ್ಷಕ್ಕೆ ವಿವೇಕವೇ ಇಲ್ಲ. ಇದು ಕೇವಲ ಮೂರ್ಖತನವಷ್ಟೇ ಅಲ್ಲ, ಅದಕ್ಕೂ ಮೀರಿದ ಸ್ಥಿತಿಯಲ್ಲಿದೆ. ವಿ.ಡಿ. ಸತೀಶನ್ ನೇತೃತ್ವದ ಸರ್ಕಾರ ಬಂದು 150 ದಿನಗಳು ಕಳೆದಿವೆ. ರಾಜ್ಯದಲ್ಲಿ ಜನ ನಮಗೇನು ಸಿಕ್ಕಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ಸರ್ಕಾರ ಒಂದೂ ಮಾತನ್ನು ಚರ್ಚಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಆದರೆ, ರಾಜ್ಯಪಾಲರ ಆಹಾರ ಪದ್ಧತಿಯ ಬಗ್ಗೆ ಚರ್ಚಿಸಲು ಕಾಂಗ್ರೆಸ್​ ನಾಯಕರಿಗೆ ಆಸಕ್ತಿಯಿದೆ. ಇದೂ ಕೂಡ ರಾಹುಲ್ ಗಾಂಧಿಯವರ ಮೋಸದ ರಾಜಕೀಯದ ಒಂದು ಭಾಗವಾಗಿದೆ. ಅವರು ಈ ರಾಜಕೀಯ ಪಕ್ಷವನ್ನು, ಅರ್ಥಹೀನ ವಿಷಯಗಳ ಬಗ್ಗೆಯೇ ಮಾತನಾಡುತ್ತಾ ಕಾಲಹರಣ ಮಾಡುವ, ವಿವೇಕಹೀನ ಜನರ ಗುಂಪನ್ನಾಗಿ ಪರಿವರ್ತಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇರಳ ರಾಜ್ಯಪಾಲರಾಗಿ ಓಂ ಪ್ರಕಾಶ್ ಮಾಥುರ್ ಅವರು ಶುಕ್ರವಾರ(ಅ. 23) ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಲೋಕ ಭವನದ ಅಡುಗೆಮನೆಯಲ್ಲಿ ಮಾಂಸ ಮತ್ತು ಮೀನು ಬೇಯಿಸಬಾರದು ಎಂದು ಆದೇಶ ಹೊರಡಿಸಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಮತ್ತು ಸಿಪಿಎಂ ವಾಗ್ದಾಳಿ ನಡೆಸಿವೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net