ಕಾಂಗ್ರೆಸ್ ನುಸುಳುಕೋರರ ರಕ್ಷಾಕವಚ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಗಂಭೀರ ಆರೋಪ! | Himanta Biswa Sarma

Himanta Biswa Sarma
Himanta Biswa Sarma
Published on
ದಿಸ್ಪುರ್​: ಅಸ್ಸಾಂನಲ್ಲಿನ ಜನಸಂಖ್ಯಾ ಬದಲಾವಣೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ(Himanta Biswa Sarma), 2027 ರಲ್ಲಿ ಜನಗಣತಿ ವರದಿ ಬಿಡುಗಡೆಯಾಗುವ ಹೊತ್ತಿಗೆ ಈಶಾನ್ಯ ರಾಜ್ಯದಲ್ಲಿ ಬಾಂಗ್ಲಾದೇಶ ಮೂಲದ ಮುಸ್ಲಿಂ ಜನಸಂಖ್ಯೆಯು ಸುಮಾರು ಶೇ. 40 ರಷ್ಟು ಇರುತ್ತದೆ ಎಂದು ಪುನರುಚ್ಛರಿಸಿದ್ದಾರೆ.
ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದ ಶರ್ಮಾ, ಕಾಂಗ್ರೆಸ್ ನುಸುಳುಕೋರರನ್ನು ಬೆಂಬಲಿಸುತ್ತಿದೆ, ಅವರನ್ನು ರಾಜ್ಯದಿಂದ ಹೊರಹಾಕುವುದು ಮುಂದುವರಿಯುತ್ತದೆ, ಬಾಂಗ್ಲಾದೇಶದ ಮುಸ್ಲಿಮರ ಜನಸಂಖ್ಯೆ ಶೇಕಡಾ 50 ದಾಟಿದರೆ ಅವರು ಇಡೀ ರಾಜ್ಯವನ್ನೇ ವಶಪಡಿಸಿಕೊಳ್ಳುತ್ತಾರೆ, ಇದನ್ನು ಕೈ ನಾಯಕರು ಅರ್ಥಮಾಡಿಕೊಳ್ಳಬೇಕು ಎಂದರು.
2011 ರ ಜನಗಣತಿಯ ಪ್ರಕಾರ, ಅಸ್ಸಾಂನಲ್ಲಿ ಶೇಕಡಾ 34 ರಷ್ಟು ಮುಸ್ಲಿಂ ಜನಸಂಖ್ಯೆ ಇತ್ತು, ನಾವು ಶೇಕಡಾ ಮೂರು ಅಸ್ಸಾಮಿ ಮುಸ್ಲಿಮರನ್ನು ಬಿಟ್ಟುಕೊಟ್ಟರೆ, ಬಾಂಗ್ಲಾದೇಶ ಮೂಲದ ಮುಸ್ಲಿಂ ಜನಸಂಖ್ಯೆಯು ಅಸ್ಸಾಂನಲ್ಲಿ ಶೇಕಡಾ 31 ರಷ್ಟಿತ್ತು. 2021 ರಲ್ಲಿ ಯಾವುದೇ ಜನಗಣತಿಯನ್ನು ನಡೆಸಲಾಗಿಲ್ಲ. 2027 ರಲ್ಲಿ ಜನಗಣತಿ ವರದಿ ಹೊರಬರುವಷ್ಟರಲ್ಲಿ ಬಾಂಗ್ಲಾ ಮೂಲದ ಮುಸ್ಲಿಮರು ಶೇಕಡಾ 40ಕ್ಕೆ ಏರಿಕೆಯಾದರು ಅಚ್ಚರಿಪಡಬೇಕಿಲ್ಲ ಎಂದು ಹೇಳಿದರು.

ಬಾಂಗ್ಲಾ ನಾಯಕನ ಎಚ್ಚರಿಕೆ

ಭಾರತದ ಈಶಾನ್ಯವನ್ನು ಪ್ರತ್ಯೇಕಿಸುವುದರ ಬಗ್ಗೆ ಹಲವಾರು ಬಾಂಗ್ಲಾದೇಶ ನಾಯಕರು ಹೇಳಿಕೆಗಳನ್ನು ನೀಡಿದ್ದು. ಈ ತಿಂಗಳ ಪ್ರಾರಂಭದಲ್ಲಿ ಬಾಂಗ್ಲಾದೇಶ ರಾಷ್ಟ್ರೀಯ ನಾಗರಿಕ ಪಕ್ಷದ (ಬಿಎನ್‌ಸಿಪಿ) ನಾಯಕ ಹಸ್ನತ್ ಅಬ್ದುಲ್ಲಾ, ಈಶಾನ್ಯದ ಪ್ರತ್ಯೇಕತಾವಾದಿ ಅಂಶಗಳಿಗೆ ಬೆಂಬಲ ನೀಡುತ್ತಾ, ಭಾರತ ಬಾಂಗ್ಲಾದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದರೆ, ನಾವು ಈಶಾನ್ಯವನ್ನು ಪ್ರತ್ಯೇಕಿಸುತ್ತೇವೆ, ಚಿಕನ್ಸ್ ನೆಕ್ ಎಂದೇ ಕರೆಸಿಕೊಳ್ಳುವ ಸಿಲಿಗುರಿ ಕಾರಿಡಾರ್ ಮೇಲೆ ಹೆಚ್ಚಿನ ಅವಲಂಬನೆ ಇರುವುದರಿಂದ ಈಶಾನ್ಯವು ದುರ್ಬಲವಾಗಿದೆ ಎಂದು ಹೇಳಿದ್ದರು.

ಇದೇ ಮೊದಲಲ್ಲ...

ಸಿಎಂ ಹಿಮಂತ್​ ಶರ್ಮಾ ಈ ರೀತಿ ಹೇಳಿಕೆ ನೀಡುತ್ತಿರುವುದು ಇದು ಮೊದಲೇನಲ್ಲ.​ ಕೆಲವು ದಿನಗಳ ಹಿಂದೆ ಮಾತನಾಡಿದ್ದ ಅವರು ವಲಸಿಗರ ಸಂಖ್ಯೆ ಶೇಕಡಾ 10 ರಷ್ಟು ಹೆಚ್ಚಾದರೆ, ಆಸ್ಸಾಂ ಬಾಂಗ್ಲಾದೇಶದ ಭಾಗವಾಗಬಹುದು ಎಂದು ಎಚ್ಚರಿಕೆ ನೀಡಿದ್ದರು. ಅಸ್ಸಾಂನಲ್ಲಿ ದಶಕಗಳಿಂದ ನಡೆಯುತ್ತಿರುವ ಅನಿಯಂತ್ರಿತ ವಲಸೆಯಿಂದಾಗಿ ಸ್ಥಳೀಯ ಜನಸಂಖ್ಯೆ ತಮ್ಮ ಅಸ್ತಿತ್ವದ ಬಗ್ಗೆಯೇ ಯೋಚಿಸುವಂತಾಗಿದ್ದು, ರಾಜ್ಯದಲ್ಲಿನ ಮುಸ್ಲಿಂ ಜನಸಂಖ್ಯೆ ಶೇ.50 ದಾಟಿದರೆ ಉಳಿದ ಸಮುದಾಯಗಳು ಅಳಿಸಿಹೋಗುತ್ತವೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕಳವಳ ವ್ಯಕ್ತಪಡಿಸಿದ್ದಾರೆ.
ಅಜೆಂಡಾ ಆಜ್‌ತಕ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಶರ್ಮಾ, ಅಂಕಿಅಂಶಗಳ ಅಂದಾಜಿನ ಪ್ರಕಾರ, 1961 ರಿಂದ 4-5 ಪ್ರತಿಶತದಷ್ಟು ಸ್ಥಿರವಾದ ದಶಕದ ಬೆಳವಣಿಗೆಯ ದರದಿಂದಾಗಿ, 2021 ರಲ್ಲಿ ಸುಮಾರು 38 ಪ್ರತಿಶತದಷ್ಟು ಅಸ್ಸಾಂನ ಮುಸ್ಲಿಂ ಜನಸಂಖ್ಯೆಯು 2027 ರ ವೇಳೆಗೆ 40 ಪ್ರತಿಶತವನ್ನು ತಲುಪಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಜನಸಂಖ್ಯಾ ಅಂಕಿಅಂಶಗಳನ್ನು ಉಲ್ಲೇಖಿಸಿದ ಶರ್ಮಾ, 1951 ರಲ್ಲಿ 80 ಲಕ್ಷದಷ್ಟಿದ್ದ ಜನಸಂಖ್ಯೆ ಇಂದು 3.1 ಕೋಟಿಗೆ ಏರಿಕೆಯಾಗಿದೆ, ಇದರಲ್ಲಿ ಸ್ಥಳೀಯರು ಸುಮಾರು 70 ಲಕ್ಷ, ಉಳಿದ 2.4 ಕೋಟಿ ಜನರು ವಲಸಿಗರು, ಈ ಒತ್ತಡವು ಅಸ್ಸಾಂನ ಭೂಮಿ, ಸಂಪನ್ಮೂಲಗಳು, ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳಿದರು. 1979–85ರ ಅಸ್ಸಾಂ ಚಳವಳಿ ಮತ್ತು ನಂತರದ 1985ರ ಅಸ್ಸಾಂ ಒಪ್ಪಂದವು ಬಾಂಗ್ಲಾದೇಶದಿಂದ ಅಕ್ರಮ ವಲಸೆಯ ಬಗ್ಗೆ ಕಳವಳಗಳಿಂದ ನಡೆಸಲ್ಪಟ್ಟಿದೆ, 40 ವರ್ಷಗಳ ಸುಧೀರ್ಘ ಪಯಣದ ಬಳಿಕವೂ ನಾವು ಇನ್ನೂ ಅದರ ಅನುಷ್ಠಾನಕ್ಕಾಗಿ ಹೋರಾಡುತ್ತಿದ್ದೇವೆ ಎಂದು ಶರ್ಮಾ ಅಸಹಾಯಕತೆ ವ್ಯಕ್ತಪಡಿಸಿದರು.

ಲಕ್ಷ ಕೊಟ್ಟರು ಮುಸ್ಲಿಮರು ನೀಡಲ್ಲ...

ಮುಸ್ಲಿಮರು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ತಮಗೆ ಮತ ಹಾಕುವುದಿಲ್ಲ ಎಂದಿರುವ ಹಿಮಂತ್​ ಶರ್ಮಾ, ಒಂದು ಘಟನೆಯನ್ನೂ ಸಹ ಉಲ್ಲೇಖಿಸಿದ್ದು, ಈ ಹಿಂದೆ ಒಬ್ಬ ಮುಸ್ಲಿಂ ವ್ಯಕ್ತಿ, ಅಗತ್ಯವಿದ್ದರೆ ಮೂತ್ರಪಿಂಡವನ್ನು ದಾನ ಮಾಡುತ್ತೇನೆ ಆದರೆ ನಿಮಗೆ ಮತ ನೀಡುವುದಿಲ್ಲ ಎಂದಿದ್ದನ್ನು ನೆನಪಿಸಿಕೊಂಡರು. ಮತದಾನ ಎನ್ನುವುದು ಯೋಜನೆಗಳಿಗಾಗಿ ಅಲ್ಲ, ಬದಲು ಸಿದ್ಧಾಂತಕ್ಕಾಗಿ ಎನ್ನುವುದನ್ನು ಇದು ತೋರಿಸುತ್ತದೆ ಎಂದು ಹೇಳಿದರು.
ಒಂದು ಲಕ್ಷ ರೂಪಾಯಿ ನೀಡಿದರೂ ಮುಸ್ಲಿಂ ಮತದಾರರು ತಮ್ಮನ್ನು ಬೆಂಬಲಿಸುವುದಿಲ್ಲ ಎಂದಿರುವ ಶರ್ಮಾ, ಅಸ್ಸಾಂನಲ್ಲಿ ನಮ್ಮ ಮಿಯಾ ಮುಸ್ಲಿಂ ಜನರ ದೊಡ್ಡ ಪಾಲು ನನಗೆ ಮತ ಹಾಕುವುದಿಲ್ಲ ಎಂದರು. ಅಕ್ರಮ ವಲಸೆಯ ಬಗ್ಗೆ ತಮ್ಮ ನಿಲುವನ್ನು ಪುನರುಚ್ಚರಿಸಿದ ಹಿಮಂತ್​ ಶರ್ಮಾ, ಅಕ್ರಮ ನುಸುಳುಕೋರರ ವಿರುದ್ಧ ಕ್ರಮ ಕೈಗೊಳ್ಳುವುದು ತಮ್ಮ ಸಾಂವಿಧಾನಿಕ ಜವಾಬ್ದಾರಿ ಎಂದು ಹೇಳಿದರು. ಕೆಲವು ಮಿಯಾ ಮುಸ್ಲಿಮರು ಸುಮಾರು 10 ಲಕ್ಷ ಎಕರೆ ಅರಣ್ಯ ಭೂಮಿಯನ್ನು ಅತಿಕ್ರಮಿಸಿದ್ದಾರೆ, ಅಂತಹವರ ವಿರುದ್ಧ ಸರ್ಕಾರ ತೆಗೆದುಕೊಂಡ ಕ್ರಮಗಳು ಸಮುದಾಯದ ರಾಜಕೀಯ ವಿರೋಧವನ್ನು ಹೆಚ್ಚಿಸಿವೆ ಎಂದು ಹೇಳಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net