ಪಕ್ಷದಲ್ಲಾಗಲೀ, ದೇಶದಲ್ಲಾಗಲೀ ಹೇಳಿಕೊಳ್ಳುವಂತಹ ರಾಜಕೀಯ ಪ್ರಭಾವ ಉಳಿಸಿಕೊಂಡಿರದ ‘ಸ್ವಘೊಷಿತ ಗಾಂಧಿಯನ್, ನೆಹ್ರೂವಿಯನ್, ರಾಜೀವಿಯರ್’ ಮಣಿಶಂಕರ್ ಅಯ್ಯರ್ರ ಅಭಿಪ್ರಾಯಗಳು ಕಾಂಗ್ರೆಸ್ ಮೇಲೆ ಅಥವಾ ರಾಷ್ಟ್ರ ರಾಜಕಾರಣದ ಮೇಲೆ ಯಾವ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮವನ್ನೂ ಬೀರಲಾರವು. ಆದರೆ ಅವು ಕೇರಳದಲ್ಲಿ ಎಲ್ಡಿಎಫ್ ಕೈಯಲ್ಲಿ ಒಂದು ತುತ್ತೂರಿಯಾಗಿ ಬಳಕೆಯಾಗಬಹುದು, ಆ ಮೂಲಕ ಪಿಣರಾಯಿ ವಿಜಯನ್, ಮುಖ್ಯವಾಗಿ ಮುಸ್ಲಿಂ ಸಮುದಾಯದಲ್ಲಿ, ತಮ್ಮ ಬೆಂಬಲಿಗ ವರ್ಗವನ್ನು ತುಸುವಾದರೂ ವೃದ್ಧಿಸಿಕೊಳ್ಳಲೂಬಹುದು. ಇಂದು ಕೇರಳದಲ್ಲಿ ಎಲ್ಡಿಎಫ್ಗೆ ಬಿಜೆಪಿ ಒಡ್ಡುತ್ತಿರುವ ಸವಾಲಿನ ಹಿನ್ನೆಲೆಯಲ್ಲಿ ವಿಜಯನ್ ಅವರಿಗೆ ತಮ್ಮ ಬೆಂಬಲಿಗ ವರ್ಗವನ್ನು ಯಾವ ವಿಧಾನದಿಂದಾದರೂ ವಿಸ್ತರಿಸಿಕೊಳ್ಳುವ ಅನಿವಾರ್ಯತೆ ಇದೆ. ಅಂತಹ ಯಾವ ಅವಕಾಶವನ್ನೂ ಅವರು ಬಿಡಲಾರರು.