ಸೀತಾರಾಮ್ ಕೇಸರಿ ಬಂಧನದಿಂದ ಸೋನಿಯಾ ಪಟ್ಟಾಭಿಷೇಕದವರೆಗೆ.. ಅಕ್ಬರ್ ರಸ್ತೆ ಬಂಗಲೆ ಉಳಿಸಿಕೊಳ್ಳಲು ಈ ಘಟನೆಗಳೇ ಕಾರಣಾನಾ..? | Congress Office

Congress Office | ಕಾಂಗ್ರೆಸ್​ ಕಚೇರಿ
Congress Office | ಕಾಂಗ್ರೆಸ್​ ಕಚೇರಿ
Published on
ದೆಹಲಿ: ಇಲ್ಲಿನ ಅತ್ಯಂತ ಪ್ರತಿಷ್ಠಿತ ಲುಟ್ಯೆನ್ಸ್ ವಲಯದಲ್ಲಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿ (Congress Office) 24, ಅಕ್ಬರ್ ರಸ್ತೆ ಬಂಗಲೆಯನ್ನು ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ಆದೇಶಿಸಿದ್ದು, ಶನಿವಾರದೊಳಗೆ ಬಂಗಲೆಗಳನ್ನು ತೆರವುಗೊಳಿಸುವಂತೆ ಸೂಚಿಸಿದೆ.
ಐಟಿಒ ಬಳಿಯ ಕೋಟ್ಲಾ ಮಾರ್ಗದಲ್ಲಿ ಕಾಂಗ್ರೆಸ್ ತನ್ನ ಹೊಸ ಪ್ರಧಾನ ಕಚೇರಿಯಾದ ಇಂದಿರಾ ಭವನವನ್ನು ಉದ್ಘಾಟಿಸಿದ ಬೆನ್ನಲ್ಲೇ ಈ ನೋಟಿಸ್ ಹೊರಬಿದ್ದಿದೆ. ಆದರೆ ಈ ಬಂಗಲೆಗಳು ಕಾಂಗ್ರೆಸ್ ಪರಂಪರೆಯ ಅವಿಭಾಜ್ಯ ಅಂಗವಾಗಿದ್ದು ಇವುಗಳನ್ನು ಉಳಿಸಿಕೊಳ್ಳಲು ಪಕ್ಷವು ನ್ಯಾಯಾಲಯದ ಮೊರೆ ಹೋಗಲಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ವಾದವೇನು..?

ಕಾಂಗ್ರೆಸ್ ನಾಯಕರು ಈ ಕ್ರಮವನ್ನು ಸೇಡಿನ ರಾಜಕೀಯ ಎಂದು ಕರೆದಿದ್ದು, ಈ ಬಗ್ಗೆ ಮಾತನಾಡಿರುವ ಹಿರಿಯ ನಾಯಕ ಪ್ರಮೋದ್ ತಿವಾರಿ, ಬಿಜೆಪಿ ಸರ್ಕಾರ ಸೇಡಿನ ಮನೋಭಾವದಿಂದ ವರ್ತಿಸುತ್ತಿದೆ. ಈ ಕಚೇರಿಯು ಕಾಂಗ್ರೆಸ್ ಇತಿಹಾಸದೊಂದಿಗೆ ಬೆಸೆದುಕೊಂಡಿದೆ. ನಾವು ಇದನ್ನು ಖಾಲಿ ಮಾಡುವುದಿಲ್ಲ ಮತ್ತು ಕಾನೂನುಬದ್ಧವಾಗಿ ಹೋರಾಡುತ್ತೇವೆ ಎಂದು ಹೇಳಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ, ಕಾಂಗ್ರೆಸ್ ಈ ಬಂಗಲೆಗಳಿಗೆ ಮಾರುಕಟ್ಟೆ ದರದಲ್ಲಿ ಬಾಡಿಗೆ ಪಾವತಿಸುತ್ತಿದೆ. ಈ ಬಂಗಲೆಗಳನ್ನು ತನ್ನ ಇಬ್ಬರು ಸಂಸದರ ಹೆಸರಿನಲ್ಲಿ ಹಂಚಿಕೆ ಮಾಡಲು ಪ್ರಯತ್ನಿಸಲಾಗಿದ್ದರೂ ಅದು ಸಾಧ್ಯವಾಗಿಲ್ಲ. ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಮತ್ತು ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಸೇರಿದಂತೆ ಅನೇಕರು ಸರ್ಕಾರಿ ಬಂಗಲೆಗಳಲ್ಲೇ ಇರುವಾಗ ನಮ್ಮನ್ನು ಮಾತ್ರ ಏಕೆ ಗುರಿಯಾಗಿಸಲಾಗುತ್ತಿದೆ? ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕರು ಹೇಳಿದ್ದೇನು..?

ಇನ್ನೊಂದೆಡೆ ಬಿಜೆಪಿಯ ರಾಜ್ಯಸಭಾ ಸಂಸದ ಮನನ್ ಕುಮಾರ್ ಮಿಶ್ರಾ ಮಾತನಾಡಿ, ಕಾಂಗ್ರೆಸ್ ಈಗಾಗಲೇ ತನ್ನ ಹೊಸ ಪ್ರಧಾನ ಕಚೇರಿಯನ್ನು ನಿರ್ಮಿಸಿರುವಾಗ, ಅಲ್ಲಿಗೆ ತೆರಳಿ ಈ ಬಂಗಲೆಯನ್ನು ಕೂಡಲೇ ಖಾಲಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಕಚೇರಿಯ ಹಿನ್ನಲೆ; ಇದನ್ನು ಉಳಿಸಿಕೊಳ್ಳಲು ಪಕ್ಷ ಬಯಸುತ್ತಿರುವುದೇಕೆ..?
ಬ್ರಿಟಿಷ್ ಆಳ್ವಿಕೆಯಲ್ಲಿ ವೈಸ್ರಾಯ್ ಲಾರ್ಡ್ ಲಿನ್ಲಿತ್ಗೋ ಅವರ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದ ಸರ್ ರೆಜಿನಾಲ್ಡ್ ಮ್ಯಾಕ್ಸ್‌ವೆಲ್ ಇಲ್ಲಿ ವಾಸಿಸುತ್ತಿದ್ದರು. 1960ರ ದಶಕದ ಆರಂಭದಲ್ಲಿ ಇದು ಮ್ಯಾನ್ಮಾರ್ ರಾಯಭಾರಿ ಡಾವ್ ಖಿನ್ ಕಿ ಅವರ ನಿವಾಸವಾಗಿತ್ತು. ಅವರ ಪುತ್ರಿ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂ ಕಿ ಕೂಡ ಈ ಮನೆಯಲ್ಲಿ ಹಲವಾರು ವರ್ಷ ಕಳೆದಿದ್ದಾರೆ.
1970ರ ದಶಕದ ಉತ್ತರಾರ್ಧದಲ್ಲಿ ಈ ಬಂಗಲೆಯ ಪ್ರಮುಖ ಅಧ್ಯಾಯ ಆರಂಭವಾಯಿತು. 1977ರ ಸೋಲಿನ ಬಳಿಕ ಪಕ್ಷ ವಿಭಜನೆಯಾದಾಗ, ಇಂದಿರಾ ಗಾಂಧಿಯವರ ನಿಷ್ಠ ಸಂಸದ ಜಿ. ವೆಂಕಟಸ್ವಾಮಿ ತಮ್ಮ ಬಂಗಲೆಯನ್ನು ಪಕ್ಷದ ಕೆಲಸಕ್ಕೆ ನೀಡಿದರು.

ಪ್ರಮುಖ ಘಟನೆಗಳು

ಈ ಬಂಗಲೆಯು ಭಾರತೀಯ ರಾಜಕೀಯದ ಹಲವು ನಿರ್ಣಾಯಕ ಕ್ಷಣಗಳಿಗೆ ಸಾಕ್ಷಿಯಾಗಿದ್ದು, 1977ರ ಹೀನಾಯ ಸೋಲಿನ ಮೂರು ವರ್ಷಗಳ ಬಳಿಕ 1980ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪುನರಾಗಮನವನ್ನು ಇದೇ ಕಚೇರಿಯಲ್ಲಿ ಆಚರಿಸಲಾಗಿತ್ತು. ಇಂದಿರಾ ಗಾಂಧಿ ಹತ್ಯೆಯ ಬಳಿಕ, ರಾಜೀವ್ ಗಾಂಧಿ ಅಧಿಕಾರ ಸ್ವೀಕಾರ ಹಾಗೂ 1989ರ ನಂತರದ ಸಮ್ಮಿಶ್ರ ಸರ್ಕಾರದ ಯುಗದ ಸಂದರ್ಭದಲ್ಲಿ ಇದು ಕೇಂದ್ರಬಿಂದುವಾಗಿತ್ತು.

ಸೀತಾರಾಮ್ ಕೇಸರಿ ಘಟನೆ

1997ರಲ್ಲಿ ಎಚ್.ಡಿ. ದೇವೇಗೌಡ ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಸೀತಾರಾಮ್ ಕೇಸರಿ ಇಲ್ಲೇ ಘೋಷಿಸಿದ್ದರು. ಆ ದಿನಗಳಲ್ಲಿ ಮಾಧ್ಯಮ ಪ್ರತಿನಿಧಿಗಳ ಸಂಖ್ಯೆ ತುಂಬಾ ಹೆಚ್ಚಾಗಿದ್ದರಿಂದ, ಮಾಧ್ಯಮ ಸಮಾಲೋಚನಾ ಕೊಠಡಿಯಲ್ಲಿ ಸ್ಥಳಾವಕಾಶ ಕಲ್ಪಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಕೇಸರಿ ಅವರು ಇದೇ ಹುಲ್ಲುಹಾಸಿನ ಮೇಲೆ ಪತ್ರಿಕಾಗೋಷ್ಠಿ ನಡೆಸಬೇಕಾಯಿತು.
ಇದಾದ ಬಳಿಕ ನಡೆದ ಅಧಿಕಾರ ವರ್ಗಾವಣೆಯ ವೇಳೆ ಸೋನಿಯಾ ಗಾಂಧಿ ಅಧಿಕಾರ ವಹಿಸಿಕೊಂಡಾಗ, ಕೇಸರಿ ಅವರನ್ನು ಸ್ನಾನಗೃಹದಲ್ಲಿ ಬಂಧಿಸಿಡಲಾಗಿತ್ತು ಎಂಬ ವರದಿಗಳು ಇಲ್ಲಿಂದಲೇ ಹೊರಬಂದಿದ್ದವು ಮತ್ತು ಶರದ್ ಪವಾರ್, ಪಿ.ಎ. ಸಂಗ್ಮಾ ಮತ್ತು ತಾರಿಕ್ ಅನ್ವರ್, ಸೋನಿಯಾರ ಇಟಾಲಿಯನ್ ಮೂಲದ ಬಗ್ಗೆ ಬಂಡಾಯವೆದ್ದು ಎನ್‌ಸಿಪಿ ರಚನೆಗೆ ದಾರಿ ಮಾಡಿಕೊಟ್ಟಿದ್ದು ಕೂಡ ಇದೇ ಕಚೇರಿಯಲ್ಲಿ.
ಗೆಲುವು ಮತ್ತು ಸೋಲು: 2004 ಮತ್ತು 2009ರ ಯುಪಿಎ ಗೆಲುವು ಹಾಗೂ ನಂತರದ ಮೂರು ಸಾರ್ವತ್ರಿಕ ಚುನಾವಣೆಗಳ ಸೋಲಿಗೂ ಈ ಬಂಗಲೆ ಸಾಕ್ಷಿಯಾಗಿದ್ದು, ಇದರೊಂದಿಗಿರುವ ಭಾವನಾತ್ಮಕ ಸಂಬಂಧದ ಕಾರಣಕ್ಕೆ ಪಕ್ಷ ಹಠಕ್ಕೆ ಬಿದ್ದು ಈ ಕಚೇರಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net