ಅಧಿಕೃತ ನಿವಾಸದಲ್ಲೇ ತೃತೀಯಲಿಂಗಿ ಜತೆ ಸಚಿವರ ಸಲುಗೆ: ವಿಡಿಯೋ ವೈರಲ್ ಬೆನ್ನಲ್ಲೇ ವಜಾಕ್ಕೆ ಆಗ್ರಹಿಸಿದ ಕಾಂಗ್ರೆಸ್! Narhari Zirwal
ಅಧಿಕೃತ ನಿವಾಸದಲ್ಲೇ ತೃತೀಯಲಿಂಗಿ ಜತೆ ಸಚಿವರ ಸಲುಗೆ: ವಿಡಿಯೋ ವೈರಲ್ ಬೆನ್ನಲ್ಲೇ ವಜಾಕ್ಕೆ ಆಗ್ರಹಿಸಿದ ಕಾಂಗ್ರೆಸ್! Narhari Zirwal
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಹಾರಾಷ್ಟ್ರ ಸಚಿವ ನರಹರಿ ಜಿರ್ವಾಲ್ ಅವರದ್ದು ಎನ್ನಲಾದ ಆಕ್ಷೇಪಾರ್ಹ ವಿಡಿಯೋ ವೈರಲ್
ಜಾಲತಾಣದಲ್ಲಿ ಸದ್ದು ಮಾಡುತ್ತಿದೆ ತೃತೀಯಲಿಂಗಿಯ ಜತೆ ತುಂಬಾ ಸಲುಗೆಯಿಂದ ಇರುವ ವಿಡಿಯೋ
ವಿಡಿಯೋ ಬೆಳಕಿಗೆ ಬಂದ ಬೆನ್ನಲ್ಲೇ ವಿಪಕ್ಷಗಳಿಂದ ಸಚಿವರ ರಾಜೀನಾಮೆಗೆ ಒತ್ತಾಯ
ಮುಂಬೈ: ಮಹಾರಾಷ್ಟ್ರ ಸಚಿವ ನರಹರಿ ಜಿರ್ವಾಲ್ ( Narhari Zirwal ) ಅವರು ತೃತೀಯಲಿಂಗಿಯ ಜತೆ ತುಂಬಾ ಸಲುಗೆಯಿಂದ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಸಚಿವರ ರಾಜೀನಾಮೆಗೆ ಒತ್ತಾಯಿಸಿ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ.
ಮಹಾರಾಷ್ಟ್ರದ ಆಹಾರ ಮತ್ತು ಔಷಧ ಸಚಿವ ಹಾಗೂ ಎನ್‌ಸಿಪಿ ನಾಯಕ ನರಹರಿ ಜಿರ್ವಾಲ್ ಅವರ ಆಕ್ಷೇಪಾರ್ಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಸಚಿವರು, ತೃತೀಯಲಿಂಗಿಯ ಜತೆ ತಮ್ಮ ಅಧಿಕೃತ ನಿವಾಸದಲ್ಲಿ ಆಕ್ಷೇಪಾರ್ಹ ಸ್ಥಿತಿಯಲ್ಲಿ ಇರುವ ದೃಶ್ಯಗಳು ವೈರಲ್ ವಿಡಿಯೋದಲ್ಲಿದೆ.
ವೈರಲ್ ವಿಡಿಯೋ ಟೀಕೆಗೆ ಗುರಿಯಾದ ಬೆನ್ನಲ್ಲೇ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ, ಸಚಿವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆಗೆ ಇಳಿದಿವೆ. ಆದರೆ, ಇಷ್ಟೆಲ್ಲ ವಿವಾದವಾದರು ಸಚಿವರು ಈ ವಿಚಾರದ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಅಂದಹಾಗೆ, ಕಳೆದ ಎರಡು ತಿಂಗಳಲ್ಲಿ ಸಚಿವರು ವಿವಾದಕ್ಕೆ ಸಿಲುಕುತ್ತಿರುವುದು ಇದು ಎರಡನೇ ಬಾರಿ. ಸಚಿವಾಲಯದ ಕಟ್ಟಡದಲ್ಲಿ ಲಂಚ ಸ್ವೀಕರಿಸಿದ್ದಕ್ಕಾಗಿ ಭ್ರಷ್ಟಾಚಾರ ನಿಗ್ರಹ ದಳವು ಸಚಿವರ ಗುಮಾಸ್ತರನ್ನು ಈ ಹಿಂದೆ ಬಂಧಿಸಿದೆ. ಇದೀಗ ಅದೇ ಸಚಿವರ ಆಕ್ಷೇಪಾರ್ಹ ದೃಶ್ಯಗಳು ಬೆಳಕಿಗೆ ಬಂದಿವೆ.
ತಮ್ಮ ಸುತ್ತ ಎಬ್ಬಿರುವ ವಿವಾದದ ಬಗ್ಗೆ ಜಿರ್ವಾಲ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಅಧ್ಯಕ್ಷೆ ಸುನೇತ್ರಾ ಪವಾರ್ ಅವರಿಗೆ ವಿವರಣೆ ನೀಡಿದ್ದಾರೆ ಎಂದು ವರದಿಯಾಗಿದೆ.
ಜಿರ್ವಾಲ್ ಅವರು ನಾಸಿಕ್ ಜಿಲ್ಲೆಯ ದಿಂಡೋರಿಯಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಉಪಸಭಾಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ದಿವಂಗತ ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರ ಆಪ್ತರಾಗಿದ್ದರು. ಬುಡಕಟ್ಟು ಜನಾಂಗದ ನಾಯಕರಾಗಿರುವ ಜಿರ್ವಾಲ್, ಬಾರಾಮತಿಯಲ್ಲಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಮೃತಪಟ್ಟ ಬಳಿಕ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ಅಧ್ಯಕ್ಷೆಯಾಗಿ ಸುನೇತ್ರಾ ಪವಾರ್ ಅವರ ಹೆಸರನ್ನು ಸಾರ್ವಜನಿಕವಾಗಿ ಸೂಚಿಸಿದ ಮೊದಲ ವ್ಯಕ್ತಿ ಜಿರ್ವಾಲ್.
ಅಜಿತ್ ಪವಾರ್ ಅವರ ಮರಣದ ನಂತರ ಎನ್‌ಸಿಪಿಯೊಳಗಿನ ಆಂತರಿಕ ವಿವಾದಗಳು ಇಂತಹ ವಿಡಿಯೋ ಸೋರಿಕೆಗೆ ಕಾರಣ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ತಮ್ಮದೇ ಪಕ್ಷದವರು ವಿಡಿಯೋ ಸೋರಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಇದೇ ಸಂದರ್ಭದಲ್ಲಿ ವಿಡಿಯೋದ ಸತ್ಯಾಸತ್ಯತೆಯನ್ನು ಇನ್ನೂ ದೃಢೀಕರಿಸಿಲ್ಲ. ಸದ್ಯ ಈ ವಿಡಿಯೋ ಮಹಾರಾಷ್ಟ್ರ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ, (ಏಜೆನ್ಸೀಸ್).