ಬಂಗಾಳದಲ್ಲಿ 'ಕೈ' ಕಟ್ಟಿಹಾಕಿದರೇ ದೀದಿ..? ರಾಹುಲ್ ಗಾಂಧಿ ರ‍್ಯಾಲಿಗೆ ಟಿಎಂಸಿ ಸರ್ಕಾರ ಅನುಮತಿ ನೀಡುತ್ತಿಲ್ಲವೆಂದ ಕಾಂಗ್ರೆಸ್​ ನಾಯಕರು | Rahul Gandhi Rally

Rahul Gandhi Rally | ರಾಹುಲ್ ಗಾಂಧಿ ರ‍್ಯಾಲಿಗೆ ಟಿಎಂಸಿ ಸರ್ಕಾರ ಅನುಮತಿ ನೀಡುತ್ತಿಲ್ಲವೆಂದ ಕಾಂಗ್ರೆಸ್​ ನಾಯಕರು
Rahul Gandhi Rally | ರಾಹುಲ್ ಗಾಂಧಿ ರ‍್ಯಾಲಿಗೆ ಟಿಎಂಸಿ ಸರ್ಕಾರ ಅನುಮತಿ ನೀಡುತ್ತಿಲ್ಲವೆಂದ ಕಾಂಗ್ರೆಸ್​ ನಾಯಕರು
Published on
ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ರಾಜಕೀಯ ಸಂಘರ್ಷ ತಾರಕಕ್ಕೇರಿದ್ದು, ಗುರುವಾರ ನಡೆಯಲಿರುವ ಮೊದಲ ಹಂತದ ಮತದಾನಕ್ಕೂ ಮುನ್ನ ಕೋಲ್ಕತ್ತಾದಲ್ಲಿ ಆಯೋಜಿಸಲಾಗಿದ್ದ ರಾಹುಲ್ ಗಾಂಧಿ ಅವರ ಬೃಹತ್ ರ‍್ಯಾಲಿಗೆ (Rahul Gandhi Rally) ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಸರ್ಕಾರ ಅನುಮತಿ ನಿರಾಕರಿಸಿದೆ ಎಂದು ಕಾಂಗ್ರೆಸ್ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.
ಪೊಲೀಸರು ಮತ್ತು ಸ್ಥಳೀಯ ಜಿಲ್ಲಾಡಳಿತ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದು, ಉದ್ದೇಶಪೂರ್ವಕವಾಗಿ ಅನುಮತಿ ನಿರಾಕರಿಸಿದ್ದಾರೆ, ಮಾಲ್ಡಾ ಮತ್ತು ಮುರ್ಷಿದಾಬಾದ್‌ನಲ್ಲಿ ರಾಹುಲ್ ಗಾಂಧಿ ನಡೆಸಿದ ರ‍್ಯಾಲಿಗಳ ಜನಬೆಂಬಲ ಕಂಡು ಟಿಎಂಸಿ ಹಾಗೂ ಬಿಜೆಪಿ ಬೆದರಿವೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಶುಭಂಕರ್ ಸರ್ಕಾರ್ ವಾಗ್ದಾಳಿ ನಡೆಸಿದ್ದಾರೆ.
ಸಂಜೆ 6 ಗಂಟೆಯವರೆಗೆ ಅನುಮೋದನೆಗಾಗಿ ಕಾಯಲಾಗಿದ್ದರೂ, ಸಕಾಲದಲ್ಲಿ ಸ್ಪಂದನೆ ಸಿಗದ ಕಾರಣ ಕಾರ್ಯಕ್ರಮದ ಸಿದ್ಧತೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ಪಕ್ಷ ವಿವರಣೆ ನೀಡಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 25 ಅಥವಾ 26 ರಂದು ಕಾರ್ಯಕ್ರಮ ನಡೆಸಲು ಅನುಮತಿ ಕೋರಿ ಹೊಸದಾಗಿ ಅರ್ಜಿಯನ್ನು ಸಲ್ಲಿಸಲು ಪಕ್ಷ ನಿರ್ಧರಿಸಿದೆ ಎಂದು ವರದಿಯಾಗಿದೆ.

ನಿಯಮದ ಪಾಠ ಮಾಡಿದ ಟಿಎಂಸಿ

ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಸಚಿವೆ ಶಶಿ ಪಂಜಾ , ಸಾರ್ವಜನಿಕ ಸಭೆಗಳಿಗೆ ಅನುಮತಿ ಪಡೆಯಲು ಸುವಿಧಾ ಪೋರ್ಟಲ್ ಮೂಲಕ ಕನಿಷ್ಠ 2 ರಿಂದ 7 ದಿನಗಳ ಮೊದಲು ಅರ್ಜಿ ಸಲ್ಲಿಸಬೇಕೆಂಬ ನಿಯಮವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಿಯಮವು ಎಲ್ಲಾ ರಾಜಕೀಯ ಪಕ್ಷಗಳಿಗೂ ಅನ್ವಯವಾಗಲಿದ್ದು, ಕಾರ್ಯಕ್ರಮ ರದ್ದತಿಗೆ ರಾಜ್ಯ ಸರ್ಕಾರ ಜವಾಬ್ದಾರಿಯಲ್ಲ, ಈ ಬಗ್ಗೆ ಚುನಾವಣಾ ಆಯೋಗವೇ ಉತ್ತರಿಸಬೇಕು ಎಂದು ತಿರುಗೇಟು ನೀಡಿದ್ದಾರೆ.
294 ಸದಸ್ಯ ಬಲದ ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಕಳೆದ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿದ್ದ ಕಾಂಗ್ರೆಸ್, ಈ ಬಾರಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಪೈಪೋಟಿಯನ್ನು ತ್ರಿಕೋನ ಹೋರಾಟವನ್ನಾಗಿ ಪರಿವರ್ತಿಸಲು ಬೆವರು ಹರಿಸುತ್ತಿದೆ. ಸತತ ನಾಲ್ಕನೇ ಬಾರಿ ಅಧಿಕಾರ ಹಿಡಿಯಲು ಟಿಎಂಸಿ ಪ್ರಯತ್ನಿಸುತ್ತಿದ್ದರೆ, ರಾಜ್ಯದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲು ಬಿಜೆಪಿ ಸಜ್ಜಾಗಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net