ದೀರ್ಘಾವಧಿ ಅಧಿಕಾರ ಅಭಿನಂದನೆ ಮಹಾಪೂರ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಣ್ಯರಿಂದ ಅಭಿನಂದನೆಗಳು
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಣ್ಯರಿಂದ ಅಭಿನಂದನೆಗಳು
Published on

ನವದೆಹಲಿ: ನರೇಂದ್ರ ಮೋದಿ ಅವರು 2014ರ ಮೇ 26ರಂದು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು ಬುಧವಾರಕ್ಕೆ ಸತತ 4,399 ದಿನಗಳಾಗಿವೆ. ಈ ಮೂಲಕ 1952ರ ಮೊದಲ ಸಾರ್ವತ್ರಿಕ ಚುನಾವಣೆ ನಂತರ ಚುನಾಯಿತ ಸರ್ಕಾರದ ಮುಖ್ಯಸ್ಥರಾಗಿ ಸತತ 4,398 ದಿನಗಳ ಕಾಲ ಸೇವೆ ಸಲ್ಲಿಸಿದ್ದ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ದಾಖಲೆಯನ್ನು ಮೋದಿ ಹಿಂದಿಕ್ಕಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನೆಯ ಮಹಾಪೂರವೇ ಹರಿದುಬಂದಿದೆ.

ಭಾರತದಲ್ಲಿ ಸತತವಾಗಿ ಅತಿ ಹೆಚ್ಚು ದಿನಗಳ ಕಾಲ ಚುನಾಯಿತ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಕೇಂದ್ರ ಸಚಿವ ಸಂಪುಟ ಶ್ಲಾಘಿಸಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ, ಅವರ ‘ವಿಕಸಿತ ಭಾರತ’ದ ದೂರದೃಷ್ಟಿಗೆ ಸಂಪೂರ್ಣ ಬೆಂಬಲ ಸೂಚಿಸುವ ಮಹತ್ವದ ನಿರ್ಣಯ ಅಂಗೀಕರಿಸಲಾಯಿತು.

ಜವಹರಲಾಲ್ ನೆಹರು ಅವರು ಚುನಾಯಿತ ಪ್ರಧಾನಿಯಾಗಿದ್ದ 4,398 ದಿನಗಳ ದಾಖಲೆ ಮೀರಿ, ಮೋದಿ ಅವರು ಅಧಿಕಾರದಲ್ಲಿ 4,399 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸಚಿವ ಸಂಪುಟದ ಸಹೋದ್ಯೋಗಿಗಳು ಅವರಿಗೆ ಎದ್ದು ನಿಂತು ಗೌರವ ವಂದನೆ ಸಲ್ಲಿಸಿದರು. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವ ಮೋದಿ ಅವರ ದೃಢಸಂಕಲ್ಪ ಮತ್ತು ಸಾರ್ವಜನಿಕ ಸೇವೆಗೆ ಸಂಪುಟ ಪ್ರಶಂಸೆ ವ್ಯಕ್ತಪಡಿಸಿದೆ.

ನರೇಂದ್ರ ಮೋದಿಯವರ ಅವಧಿಯಲ್ಲಿ ಕೈಗೊಂಡ ಒಳಗೊಳ್ಳುವಿಕೆ ಮತ್ತು ಸಾಮಾಜಿಕ ನ್ಯಾಯದ ಪ್ರಯತ್ನಗಳು, ರಾಷ್ಟ್ರೀಯ ಭದ್ರತೆ ಹಾಗೂ ಬಡವರ ಕಲ್ಯಾಣ ಯೋಜನೆಗಳನ್ನು ನಿರ್ಣಯದಲ್ಲಿ ಮುಕ್ತಕಂಠದಿಂದ ಶ್ಲಾಘಿಸಲಾಗಿದೆ. ಕಳೆದ 12 ವರ್ಷಗಳಲ್ಲಿ 25 ಕೋಟಿಗೂ ಹೆಚ್ಚು ಜನರು ಬಡತನದಿಂದ ಹೊರಬಂದಿರುವುದಕ್ಕೆ ಪ್ರಧಾನಿಯವರ ಜನಪರ ನೀತಿಗಳೇ ಕಾರಣ ಎಂದು ಸಂಪುಟ ತಿಳಿಸಿದೆ. ಆರು ದಶಕಗಳ ಬಳಿಕ ಸತತ ಮೂರನೇ ಬಾರಿಗೆ ಅಧಿಕಾರ ಹಿಡಿದಿರುವ ಎನ್​ಡಿಎ ಸರ್ಕಾರ, ಮೋದಿ ಅವರ ನಾಯಕತ್ವದಲ್ಲಿ ದೇಶವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸ ವ್ಯಕ್ತಪಡಿಸಿದೆ.

ಕಳೆದ 12 ವರ್ಷಗಳಲ್ಲಿ ಜಾರಿಗೆ ತಂದ ಪ್ರಮುಖ ಸುಧಾರಣೆಗಳಾದ ಸಂವಿಧಾನದ ವಿಧಿ 370ರ ರದ್ದತಿ, ಜಿಎಸ್​ಟಿ ಜಾರಿ, ‘ಒನ್ ರ್ಯಾಂಕ್ ಒನ್ ಪೆನ್ಷನ್’, ಹೊಸ ಅಪರಾಧ ಕಾನೂನು ಗಳು, ಉತ್ಪಾದನಾ ವಲಯಕ್ಕೆ ಉತ್ತೇಜನ, ನಕ್ಸಲಿಸಂ ಹತ್ತಿಕ್ಕುವಿಕೆ ಮತ್ತು ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಸ್ಥಾಪನೆಯಂಥ ಕ್ರಮಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಜಿ20 ಶೃಂಗಸಭೆಯ ಯಶಸ್ಸಿನ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಹೆಚ್ಚಿರುವುದನ್ನು ಸಂಪುಟದ ನಿರ್ಣಯ ವಿಶೇಷವಾಗಿ ಉಲ್ಲೇಖಿಸಿದೆ.

ವಾರಾಣಸಿಯಲ್ಲಿ ವಿಶೇಷ ಪೂಜೆ, ಸ್ವಚ್ಛತಾ ಅಭಿಯಾನ

ಪ್ರಧಾನಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರವಾದ ವಾರಾಣಸಿಯಲ್ಲಿ ಬುಧವಾರ ವಿಶೇಷ ಪೂಜೆ ಹಾಗೂ ವಿವಿಧ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಉತ್ತರ ಪ್ರದೇಶ ಸಚಿವ ರವೀಂದ್ರ ಜೈಸ್ವಾಲ್ ನೇತೃತ್ವದಲ್ಲಿ ಮಹಾವೀರ ದೇವಸ್ಥಾನದಲ್ಲಿ ಪ್ರಧಾನಿಯವರ ದೀರ್ಘಾ ಯುಷ್ಯ, ಉತ್ತಮ ಆರೋಗ್ಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಪಂಡಿತ್ ದೀನ್ ದಯಾಳ್ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಿಸಲಾಯಿತು ಹಾಗೂ ಶಾಸ್ತ್ರಿ ಘಾಟ್​ನಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಅಲ್ಲದೆ, ‘ನಮಾಮಿ ಗಂಗೆ’ ಸ್ವಯಂ ಸೇವಕರು ಕಾಶಿ ವಿಶ್ವನಾಥ ದೇವಸ್ಥಾನದ ಗಂಗಾ ದ್ವಾರದಲ್ಲಿ ಪ್ರಧಾನಿ ಮೋದಿ ಅವರ ಭಾವಚಿತ್ರ ಮತ್ತು ರಾಷ್ಟ್ರಧ್ವಜ ಹಿಡಿದು ವಿಶೇಷ ಗಂಗಾ ಆರತಿ ನೆರವೇರಿಸಿದರು.

ಥಾಣೆಯಲ್ಲಿ ಮಹಾ ಆರತಿ

ಮಹಾರಾಷ್ಟ್ರದ ಥಾಣೆ ನಗರದ ವಿವಿಧ ದೇವಾಲಯಗಳಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಹಾಗೂ ಮಹಾ ಆರತಿ ಆಯೋಜಿಸಿದ್ದರು. ಪ್ರಧಾನಿ ಮೋದಿ ಅವರ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಮತ್ತು ಉಜ್ವಲ ಭವಿಷ್ಯಕ್ಕಾಗಿ ನೌಪದಾದಲ್ಲಿರುವ 125 ವರ್ಷ ಹಳೆಯ ಪ್ರಸಿದ್ಧ ಶ್ರೀ ಗಾವ್ದೇವಿ ದೇವಸ್ಥಾನದಲ್ಲಿ ಭವ್ಯ ಮಹಾ ಆರತಿ ನಡೆಸಲಾಯಿತು ಎಂದು ಬಿಜೆಪಿ ಕಾರ್ಪೆರೇಟರ್ ಸಂಜಯ್ ವಘುಲೆ ತಿಳಿಸಿದ್ದಾರೆ. ಈ ಧಾರ್ವಿುಕ ಕಾರ್ಯಕ್ರಮದಲ್ಲಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.

ವಿಶೇಷ ಆರತಿ, ಪ್ರಾರ್ಥನಾ ಸಭೆ

ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶಮಾ ಅವರು ಜೈಪುರದ ಪ್ರಸಿದ್ಧ ಮೋತಿ ಡುಂಗ್ರಿ ಗಣೇಶ ದೇವಸ್ಥಾನದಲ್ಲಿ ಪ್ರಧಾನಿ ಮೋದಿಯವರ ಆರೋಗ್ಯ, ದೀರ್ಘಾಯುಷ್ಯ ಮತ್ತು ನಿರಂತರ ದೇಶಸೇವೆಗಾಗಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ, ಬುಧವಾರ ರಾಜಸ್ಥಾನದಾದ್ಯಂತ ವಿಶೇಷ ಧಾರ್ವಿುಕ ಕಾರ್ಯಕ್ರಮ, ಪ್ರಾರ್ಥನೆಗಳನ್ನು ಆಯೋಜಿಸಲಾಗಿತ್ತು. ರಾಜ್ಯದ ದೇವಸ್ಥಾನ ಇಲಾಖೆ ವತಿಯಿಂದ ರಾಜಸ್ಥಾನದ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಆರತಿ ಮತ್ತು ಪ್ರಾರ್ಥನಾ ಸಭೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಜಾಗತಿಕ ನಾಯಕರ ಶುಭಾಶಯ

ಅಮೆರಿಕದ ಗಣ್ಯರ ಹಾರೈಕೆ

‘25 ಕೋಟಿ ಜನರನ್ನು ಬಡತನದಿಂದ ಮುಕ್ತ ಗೊಳಿಸಿ, ಭಾರತವನ್ನು ವಿಶ್ವದ ಅತ್ಯಂತ ವೇಗದ ಆರ್ಥಿಕತೆಯನ್ನಾಗಿಸಿದ ಮೋದಿಯವರ ಆಡಳಿತ ಶ್ಲಾಘನೀಯ’ ಎಂದು ಟೆಕ್ಸಾಸ್​ನ ರಿಪಬ್ಲಿಕನ್ ಸೆನೆಟರ್ ಜಾನ್ ಕಾರ್ನಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಮೋದಿಯವರ ನಾಯಕತ್ವದಲ್ಲಿ ಭಾರತ-ಅಮೆರಿಕ ಪಾಲುದಾರಿಕೆ ಜಾಗತಿಕ ಮತ್ತು ಕಾರ್ಯತಂತ್ರದ ಮಟ್ಟಕ್ಕೆ ಬೆಳೆದಿದೆ’ ಎಂದು ಟೆನ್ನೆಸ್ಸಿಯ ಸೆನೆಟರ್ ಬಿಲ್ ಹ್ಯಾಗರ್ಟಿ ಪ್ರಶಂಸಿಸಿದ್ದಾರೆ.

ಭಾರತದ ಆರ್ಥಿಕತೆ ಮತ್ತು ಜಾಗತಿಕ ಮಟ್ಟದಲ್ಲಿ ದೇಶದ ಸ್ಥಾನಮಾನ ಬದಲಾಯಿ ಸಿದ ನಿಜವಾದ ರಾಜತಾಂತ್ರಿಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೖತ್ಪೂರ್ವಕ ಅಭಿನಂದನೆಗಳು.

| ಸ್ಕಾಟ್ ಮಾರಿಸನ್ ಮಾಜಿ ಪ್ರಧಾನಿ, ಆಸ್ಟ್ರೇಲಿಯಾ.

ಈ ಸಾಧನೆ ಭಾರತದ ಅಭಿವೃದ್ಧಿ, ಸಮೃದ್ಧಿ ಮತ್ತು ಜಾಗತಿಕ ವೇದಿಕೆಯಲ್ಲಿ ದೇಶದ ಸ್ಥಾನಮಾನ ಹೆಚ್ಚಿಸುವಲ್ಲಿ ಮೋದಿಯವರ ವರ್ಷಗಳ ಸಮರ್ಪಿತ ಸಾರ್ವಜನಿಕ ಸೇವೆ ಮತ್ತು ನಾಯಕತ್ವಕ್ಕೆ ಸಾಕ್ಷಿ.

| ಅನ್ವರ್ ಇಬ್ರಾಹಿಂ ಮಲೇಷ್ಯಾ ಪ್ರಧಾನಿ.

ಸತತ 3 ಅವಧಿಗಳಲ್ಲಿ ಭಾರತದ ಜನರು ಮೋದಿ ಯವರ ನಾಯಕತ್ವದ ಮೇಲೆ ಇಟ್ಟಿರುವ ನಂಬಿಕೆಯನ್ನು ಈ ಸಾಧನೆ ಪ್ರತಿಬಿಂಬಿಸುತ್ತದೆ. ಅವರು ನೈಜೀರಿಯಾದ ಆಪ್ತಮಿತ್ರ ಮಾತ್ರವಲ್ಲ, ನನ್ನ ವಿಶ್ವಾಸಾರ್ಹ ಮಿತ್ರ ಕೂಡ.

| ಬೋಲಾ ಅಹ್ಮದ್ ಟಿನುಬು ಅಧ್ಯಕ್ಷ, ನೈಜೀರಿಯಾ.

ಇದು ಐತಿಹಾಸಿಕ ಮೈಲಿಗಲ್ಲು, ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಮಾಲ್ಡೀವ್ಸ್-ಭಾರತ ಸಂಬಂಧಗಳು ಗಣನೀಯವಾಗಿ ಅಭಿವೃದ್ಧಿ ಹೊಂದಿ, ಬಲಗೊಂಡಿವೆ.

| ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಮಾಜಿ ಅಧ್ಯಕ್ಷ, ಮಾಲ್ಡೀವ್ಸ್

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಸತತ 3 ಅವಧಿಗಳಲ್ಲಿ ಜನರು ನಿಮ್ಮ ನಾಯಕತ್ವದ ಮೇಲೆ ಇಟ್ಟಿರುವ ನಂಬಿಕೆಯನ್ನು ಇದು ತೋರಿಸುತ್ತದೆ.

| ವಿಲಿಯಂ ಸ್ಯಾಮೋಯಿ ರುಟೊ ಅಧ್ಯಕ್ಷ, ಕೀನ್ಯಾ.

ಮೋದಿಯವರು ನನ್ನ ಸ್ನೇಹಿತ, ಹಿರಿಯ ಸಹೋದರ ಮತ್ತು ಮಾರ್ಗದರ್ಶಿ. ಅವರ ನಮ್ರತೆ, ಜನಸೇವಾ ಬದ್ಧತೆ ಭೂತಾನ್ ಮೇಲಿರುವ ಆಪ್ತ ಬಾಂಧವ್ಯ ಶ್ಲಾಘನಾರ್ಹ.

| ದಾಶೋ ತ್ಶೆರಿಂಗ್ ಟೋಬ್ಗಾಯ್ ಪ್ರಧಾನಿ, ಭೂತಾನ್

ಮೋದಿಯವರ ನಾಯಕತ್ವವು ಕೋಟ್ಯಂತರ ಜನರನ್ನು ಬಡತನದಿಂದ ಮುಕ್ತಗೊಳಿಸಿದೆ, ಅವರು ಗ್ಲೋಬಲ್ ಸೌತ್​ನ ಪ್ರಬಲ ಧ್ವನಿಯಾಗಿದ್ದಾರೆ.

| ಅಬಿ ಅಹ್ಮದ್ ಅಲಿ ಪ್ರಧಾನಿ, ಇಥಿಯೋಪಿಯಾ

ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿರುವುದು ಹಾಗೂ ಭಾರತದ ಅತಿ ದೀರ್ಘಾವಧಿ ಸೇವೆ ಸಲ್ಲಿಸಿದ ಪ್ರಧಾನಮಂತ್ರಿ ಆಗಿರುವುದು ಐತಿಹಾಸಿಕ ಸಾಧನೆ.

| ಉಖ್ನಾಗಿನ್ ಖರೆಲ್​ಸುಕ್​ಅಧ್ಯಕ್ಷ, ಮಂಗೋಲಿಯಾ.

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಜನರು ಮೋದಿಯವರ ನಾಯಕತ್ವದ ಮೇಲಿಟ್ಟಿರುವ ನಂಬಿಕೆಗೆ ಈ ಸಾಧನೆ ಸಾಕ್ಷಿ. ಒಪ್ಪಂದದಂತೆ ಕೊರಿಯಾ-ಭಾರತ ವಿಶೇಷ ಕಾರ್ಯತಂತ್ರ ಮತ್ತಷ್ಟು ಬಲಪಡಿಸಲಿಕ್ಕಾಗಿ ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತಿರುವೆ.

| ಲೀ ಜೆ ಮ್ಯುಂಗ್ ಅಧ್ಯಕ್ಷ, ದಕ್ಷಿಣ ಕೊರಿಯಾ.

ಸವಾಲುಗಳ ಮಧ್ಯೆ ಚರೈವೇತಿ ಮೋದಿ ಭಾವುಕ ನುಡಿ

ಭಾರತದ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಅವಧಿಗೆ ಸತತವಾಗಿ ಚುನಾಯಿತ ಪ್ರಧಾನಿಯಾಗಿ ದೇಶದ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ನನ್ನ ಪರಮ ಸೌಭಾಗ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಜಧಾನಿ ನವದೆಹಲಿಯಲ್ಲಿ ಬುಧವಾರ ನಡೆದ ಎನ್​ಡಿಎ ಮೈತ್ರಿಕೂಟದ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಐತಿಹಾಸಿಕ ದಿನವನ್ನು ಅತ್ಯಂತ ಸ್ಮರಣೀಯವಾಗಿಸಿದ ಮೈತ್ರಿ ಕೂಟದ ಎಲ್ಲ ನಾಯಕರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.

ತಮ್ಮ ಸುದೀರ್ಘ ರಾಜಕೀಯ ಪ್ರಯಾಣದ ಏಳು ಬೀಳುಗಳನ್ನು ಸ್ಮರಿಸಿದ ಪ್ರಧಾನಿ, ‘ಅನೇಕ ಸವಾಲುಗಳ ಮಧ್ಯೆಯೂ ‘ಚರೈವೇತಿ, ಚರೈವೇತಿ’ (ಯಾವಾಗಲೂ ಮುನ್ನಡೆಯುತ್ತಿರು) ಎಂಬ ಮಂತ್ರದೊಂದಿಗೆ ನಾನು ಸಾಗಿದ್ದೇನೆ ಎಂದರು. ಎಂದಾದರೂ ಒಂದು ದಿನ ಈ ಮೈಲಿಗಲ್ಲನ್ನು ತಲುಪುತ್ತೇನೆ ಎಂದು ನಾನು ಖಂಡಿತ ಊಹಿಸಿರಲಿಲ್ಲ. ಭಾರತ ಮಾತೆಯ ಸೇವೆ ಮಾಡುವುದು ದೇವರ ವಿಶೇಷ ಕೃಪೆಯಿಂದ ಮಾತ್ರ ಸಾಧ್ಯ. ನನಗೆ ದೇಶದ ಜನರೇ ದೇವರ ಸ್ವರೂಪ. ಹೀಗಾಗಿಯೇ ನಾನು ಈ ದೇಶಸೇವೆಯನ್ನು ಕೇವಲ ಅಧಿಕಾರ ಎಂದು ನೋಡದೆ, ಒಂದು ಆಧ್ಯಾತ್ಮಿಕ ಸಾಧನೆ ಮತ್ತು ಸಾಮೂಹಿಕ ಯಜ್ಞ ಎಂದು ಭಾವಿಸಿದ್ದೇನೆ ಎಂದು ಅವರು ತಿಳಿಸಿದರು.

ಸುಶಾಸನದ ಅಳತೆಗೋಲು...

ಭಾರತದ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಅವಧಿಗೆ ಸತತ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ ಎಂಬ ಐತಿಹಾಸಿಕ ರಾಜಕೀಯ ಮೈಲಿಗಲ್ಲನ್ನು ದಾಟಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್​ನಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ‘ಸಾರ್ವಜನಿಕ ಸೇವೆಯೇ ಸುಶಾಸನದ ಅತ್ಯುನ್ನತ ಅಳತೆಗೋಲು. ಯಾರು ನಮ್ರತೆ, ಸಮರ್ಪಣಾ ಮನೋಭಾವ ಮತ್ತು ಕರ್ತವ್ಯ ಪ್ರಜ್ಞೆಯಿಂದ ದಣಿವಿನ ಅರಿವಿಲ್ಲದೆ ಕೆಲಸ ಮಾಡುತ್ತಾರೋ, ಅಂಥ ವ್ಯಕ್ತಿ ಮಾತ್ರ ಜನರ ನಂಬಿಕೆ ಗಳಿಸಲು ಸಾಧ್ಯ’ ಎಂದು ಬರೆದಿದ್ದಾರೆ. ಈ ಸಂಬಂಧ ಅವರು ಸಂಸ್ಕೃತದ ಶ್ಲೋಕವೊಂದನ್ನು ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net