ಸುನಿಧಿ ಚೌಹಾಣ್​​ ಮ್ಯೂಸಿಕ್ ಕನ್ಸರ್ಟ್​​ಗೆ ಷರತ್ತುಬದ್ಧ ಅನುಮತಿ; ಈ ಹಾಡುಗಳನ್ನು ಹಾಡುವಂತಿಲ್ಲ; ಏನಿದು ವಿವಾದ? | Sunidhi Chauhan

ಗಾಯಕಿ ಸುನಿಧಿ ಚೌಹಾಣ್
ಗಾಯಕಿ ಸುನಿಧಿ ಚೌಹಾಣ್
Published on
ಪಣಜಿ: ಖ್ಯಾತ ಬಾಲಿವುಡ್ ಗಾಯಕಿ ಸುನಿಧಿ ಚೌಹಾಣ್ ತಮ್ಮ ವೃತ್ತಿಜೀವನದಲ್ಲಿ ಹಲವಾರು ಸೂಪರ್‌ಹಿಟ್ ಹಾಡುಗಳನ್ನು ಹಾಡಿದ್ದಾರೆ. ಅಷ್ಟೇ ಅಲ್ಲದೇ ಮ್ಯೂಸಿಕ್ ಕನ್ಸರ್ಟ್​ಗಳನ್ನು ಆಯೋಜಿಸುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಅದೇ ರೀತಿ ಇಂದು(ಜ. 25) ಗೋವಾದಲ್ಲಿ ನಿಗದಿಯಾಗಿದ್ದ ಮ್ಯೂಸಿಕ್ ಕನ್ಸರ್ಟ್​​ಗೆ ವಿಘ್ನ ಎದುರಾಗಿದ್ದು, ಕಾರ್ಯಕ್ರಮದಲ್ಲಿ ಕೆಲವು ಹಾಡುಗಳನ್ನು ಹಾಡದಂತೆ ಅವರಿಗೆ ನಿರ್ಬಂಧ ಹೇರಲಾಗಿದೆ.
ದಿ ಅಲ್ಟಿಮೇಟ್ ಸುನಿಧಿ ಲೈವ್ ಎಂಬ ಹೆಸರಿನಲ್ಲಿ ಭಾನುವಾರ ರಾತ್ರಿ ಗೋವಾದ ವೆರ್ನಾದಲ್ಲಿರುವ 1919 ಸ್ಪೋರ್ಟ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕನ್ಸರ್ಟ್​ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಐದು ವರ್ಷದಿಂದ ಹಿಡಿದು ಅದಕ್ಕಿಂತ ಹೆಚ್ಚಿನ ಮಕ್ಕಳು ಮತ್ತು ವಯಸ್ಕರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.
ಆದರೆ, ದಕ್ಷಿಣ ಗೋವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು, ಕನ್ಸರ್ಟ್​​ ಆಯೋಜಕರಿಗೆ ಕಟ್ಟುನಿಟ್ಟಿನ ಸಲಹೆಯನ್ನು ನೀಡಿದೆ ಎನ್ನಲಾಗಿದೆ. ಮ್ಯೂಸಿಕ್ ಕನ್ಸರ್ಟ್​​ನಲ್ಲಿ ತಂಬಾಕು, ಧೂಮಪಾನ ಅಥವಾ ಮದ್ಯಪಾನದಂತಹ ಕೆಟ್ಟ ಅಭ್ಯಾಸಗಳನ್ನು ಉತ್ತೇಜಿಸುವ ಯಾವುದೇ ಹಾಡುಗಳನ್ನು ಹಾಡಬಾರದು ಎಂದು ಕಟ್ಟು ನಿಟ್ಟಾಗಿ ಸೂಚನೆ ನೀಡಿದೆ.

ಯಾವ ಹಾಡುಗಳಿಗೆ? ಯಾಕೆ ಆಕ್ಷೇಪ?

ಸುನಿಧಿ ಚಹೌಣ್ ಅವರ ಜನಪ್ರಿಯ ಹಾಡುಗಳಾದ ‘ಬೀದಿ ಜಲೈಲೆ’ ಮತ್ತು ‘ಶರಬಿ’ ಎಂಬ ಹಾಡುಗಳು ತಂಬಾಕು ಮತ್ತು ಮದ್ಯ ಸೇವನೆಯನ್ನು ಉತ್ತೇಜಿಸುತ್ತವೆ, ಮಕ್ಕಳ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತವೆ. ಅವುಗಳನ್ನು ಮಕ್ಕಳಿರುವ ಕಾರ್ಯಕ್ರಮದಲ್ಲಿ ಹಾಡದಂತೆ ಕ್ರಮಕೈಗೊಳ್ಳಬೇಕೆಂದು ಎಂದು ಚಂಡೀಗಢದ ವಿವಿಯ ಅಸೋಸಿಯೇಟ್ ಪ್ರೊಫೆಸರ್ ಡಾ.ಪಂಡಿತರಾವ್ ಅವರು ದೂರು ನೀಡಿದ್ದರು.
ಈ ದೂರಿನನ್ವಯ, ಬಾಲ ನ್ಯಾಯ(ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 201 ರ ಸೆಕ್ಷನ್ 3(IV) ಅನ್ನು ಉಲ್ಲೇಖಿಸಿ, ಮಕ್ಕಳಿಗೆ ಸಂಬಂಧಿಸಿದ ದೈಹಿಕ, ಮಾನಸಿಕ, ನೈತಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಗಣನೆಗೆ ತೆಗೆದುಕೊಳ್ಳಬೇಕು. ಜಿಲ್ಲಾಡಳಿತ ಯಾವುದೇ ಕಾರ್ಯಕ್ರಮದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಆದರೆ ಮಕ್ಕಳ ಕಲ್ಯಾಣವನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ. ಆಯೋಜಕರು ಕಾನೂನಿನ ವ್ಯಾಪ್ತಿಯಲ್ಲಿ ಕಾರ್ಯಕ್ರಮವನ್ನು ನಡೆಸಬೇಕು ಎಂದು ಸೂಚಿಸಿದೆ.
ಸುನಿಧಿ ಚಹೌಣ್ ಮ್ಯೂಸಿಕ್ ಕನ್ಸರ್ಟ್​ಗಳಲ್ಲಿ ಇಂತಹ ನಿರ್ಬಂಧ ಎದುರಿಸಿದಿ ಮೊದಲ ಸಿಂಗರ್ ಅಲ್ಲ, ಈ ಹಿಂದೆ ಡಾ. ಪಂಡಿತರಾವ್ ಅವರ ದೂರುಗಳ ಆಧಾರದ ಮೇಲೆ ದಿಲ್ಜಿತ್ ದೋಸಾಂಜ್, ಕರಣ್ ಔಜ್ಲಾ ಮತ್ತು ಕೋಲ್ಡ್‌ಪ್ಲೇನಂತಹ ದೊಡ್ಡ ಹೆಸರುಗಳು ಸಹ ಇದೇ ರೀತಿಯ ಸೂಚನೆಗಳನ್ನು ಪಡೆದಿರುವ ವರದಿಗಳಿವೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net