ಸಂಸದ ಸ್ಥಾನ ಖಾಲಿ ಮಾಡುವ ಮಾತೇ ಇಲ್ಲ!...ವದಂತಿಗಳಿಗೆ ಖಡಕ್ ಉತ್ತರ ನೀಡಿದ ಯೂಸುಫ್ ಪಠಾಣ್ | Yusuf Pathan

Yusuf Pathan | ಸಂಸದ ಯೂಸುಫ್ ಪಠಾಣ್
Yusuf Pathan | ಸಂಸದ ಯೂಸುಫ್ ಪಠಾಣ್
Published on
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಲೋಕಸಭೆ ಪ್ರವೇಶಿಸಲಿದ್ದಾರೆ ಎಂಬ ರಾಜಕೀಯ ವದಂತಿಗಳಿಗೆ ಈಗ ಮತ್ತೊಂದು ಮಹತ್ವದ ತಿರುವು ಸಿಕ್ಕಿದ್ದು, ದೀದಿ ಅವರಿಗಾಗಿ ತಾವು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪಕ್ಷ ಸೂಚಿಸಿದೆ ಎಂಬ ವರದಿಗಳನ್ನು ತೃಣಮೂಲ ಕಾಂಗ್ರೆಸ್ (TMC) ಸಂಸದ ಹಾಗೂ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ತಳ್ಳಿಹಾಕಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪಠಾಣ್ ಅವರನ್ನು ಒಪ್ಪಿಸಲು ತಮ್ಮನ್ನು ಸಂಪರ್ಕಿಸಲಾಗಿತ್ತು ಎಂಬ ಸುದ್ದಿಗಳನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ನಿರಾಕರಿಸಿದ್ದಾರೆ. ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದ್ದ ಈ ವರದಿಯಲ್ಲಿನ ಆರೋಪಗಳನ್ನು ಇಬ್ಬರೂ ಸಂಪೂರ್ಣವಾಗಿ ನಿರಾಕರಿಸಿದ್ದಾರೆ.

ರಾಜೀನಾಮೆ ಸುದ್ದಿ ನಿರಾಕರಿಸಿದ ಯೂಸುಫ್ ಪಠಾಣ್

ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಸ್ಪಷ್ಟನೆ ನೀಡಿರುವ ಪಠಾಣ್​, ಮಮತಾ ಬ್ಯಾನರ್ಜಿ ಅವರು ಈ ವಿಷಯದ ಬಗ್ಗೆ ನನ್ನೊಂದಿಗೆ ಎಂದಿಗೂ ಮಾತನಾಡಿಲ್ಲ. ಈ ವರದಿ ಸಂಪೂರ್ಣವಾಗಿ ಸುಳ್ಳು, ಪಕ್ಷದ ಇತರ ಯಾವುದೇ ನಾಯಕರು ಸಹ ತಮಗೆ ಸಂಸದ ಸ್ಥಾನ ತೆರವುಗೊಳಿಸುವಂತೆ ಕೇಳಿಲ್ಲ ಎಂದು ಅವರು ಖಚಿತಪಡಿಸಿದ್ದಾರೆ.
ವಿವಾದಕ್ಕೆ ಕಾರಣವೇನು?
ಬಂಗಾಳಿ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯೇ ಈ ಎಲ್ಲಾ ವಿವಾದಗಳಿಗೆ ಮೂಲ ಕಾರಣವಾಗಿತ್ತು. ಉಪಚುನಾವಣೆಯ ಮೂಲಕ ಮಮತಾ ಬ್ಯಾನರ್ಜಿ ಅವರನ್ನು ಸಂಸತ್ತಿಗೆ ಕಳುಹಿಸಲು ತೃಣಮೂಲ ಕಾಂಗ್ರೆಸ್ ಬಹರಂಪುರ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಯೋಚಿಸುತ್ತಿದೆ ಎಂದು ಆ ವರದಿಯಲ್ಲಿ ಹೇಳಲಾಗಿತ್ತು. ಯೂಸುಫ್ ಪಠಾಣ್ ಅವರಿಗೆ ಈ ಸಂದೇಶವನ್ನು ತಲುಪಿಸಲು ಪಕ್ಷವು ಸೌರವ್ ಗಂಗೂಲಿ ಅವರ ಸಹಾಯವನ್ನು ಕೋರಿತ್ತು ಮತ್ತು ಪಠಾಣ್ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು ಎಂದೂ ಆ ಲೇಖನದಲ್ಲಿ ಆರೋಪಿಸಲಾಗಿತ್ತು. ಉಲ್ಲೇಖಾರ್ಹ ಸಂಗತಿಯೆಂದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಪಠಾಣ್ ಅವರು ಕಾಂಗ್ರೆಸ್‌ನ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಸೋಲಿಸಿ ಬಹರಂಪುರ ಕ್ಷೇತ್ರದಿಂದ ಗೆದ್ದಿದ್ದರು.

ಸೌರವ್ ಗಂಗೂಲಿ ಪ್ರತಿಕ್ರಿಯೆ

ಪಠಾಣ್ ಅವರಿಗಿಂತ ಮೊದಲೇ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸೌರವ್ ಗಂಗೂಲಿ, ತಮ್ಮ ಹೆಸರನ್ನು ಬಳಸಿಕೊಂಡು ಮಾಡಲಾದ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಹೇಳಿದ್ದರು. ಈ ಲೇಖನದಲ್ಲಿ ನನ್ನನ್ನು ಉಲ್ಲೇಖಿಸಿ ಬರೆಯಲಾದ ಅಂಶಗಳಲ್ಲಿ ಸತ್ಯಾಂಶವೇ ಇಲ್ಲ ಗಂಗೂಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಯೂಸುಫ್ ಪಠಾಣ್ ಅವರಿಗೆ ಯಾವುದೇ ಸಂದೇಶ ತಲುಪಿಸಲು ಮಮತಾ ಬ್ಯಾನರ್ಜಿ ತಮಗೆ ಹೇಳಿಲ್ಲ ಮತ್ತು ತಾವು ಈ ವಿಷಯವಾಗಿ ಪಠಾಣ್ ಅವರನ್ನು ಸಂಪರ್ಕಿಸಿಯೇ ಇಲ್ಲ ಎಂದು ಗಂಗೂಲಿ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ, ಪಠಾಣ್ ಅವರು ಪ್ರಸ್ತಾವನೆಯನ್ನು ನಿರಾಕರಿಸಿದ್ದಾರೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಯೂಸುಫ್ ಪಠಾಣ್ ಮತ್ತು ಸೌರವ್ ಗಂಗೂಲಿ ಇಬ್ಬರೂ ಈ ವರದಿಗಳನ್ನು ಕಡಾಖಂಡಿತವಾಗಿ ನಿರಾಕರಿಸಿರುವುದರಿಂದ, ಮಮತಾ ಬ್ಯಾನರ್ಜಿ ಅವರ ಸಂಸತ್ ಪ್ರವೇಶದ ಕುರಿತು ವದಂತಿ ಹಬ್ಬಿಸಿದ್ದ ಪತ್ರಿಕಾ ವರದಿ ಈಗ ಚರ್ಚೆಗೆ ಗ್ರಾಸವಾಗಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net