ಕುಸಿತದಲ್ಲಿ ರೂಪಾಯಿ ಮತ್ತು ಬಿಜೆಪಿ ಜನಪ್ರಿಯತೆ ನಡುವೆ ತೀವ್ರ ಸ್ಪರ್ಧೆ; ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತಕ್ಕೆ ಅಖಿಲೇಶ್ ಲೇವಡಿ | Akhilesh Yadav

ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್
ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್
Published on
ನವದೆಹಲಿ: ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 95 ರೂ.ಗೆ ಹತ್ತಿರ ಕುಸಿದಿದ್ದಕ್ಕೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದು, ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ಜನಪ್ರಿಯತೆ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ ಎಂದು ಕಾಲೆಳೆದಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಅವರು, ಕುಸಿಯುವ ಓಟದಲ್ಲಿ ರೂಪಾಯಿ ಮತ್ತು ಬಿಜೆಪಿಯ ವರ್ಚಸ್ಸಿನ ನಡುವೆ ತೀವ್ರ ಸ್ಪರ್ಧೆ ನಡೆಯುತ್ತಿದೆ. ಬಿಜೆಪಿ ಸದಸ್ಯರ ದುಷ್ಕೃತ್ಯಗಳು, ಹಗರಣಗಳು ಹಾಗೂ ಭ್ರಷ್ಟಾಚಾರಗಳು ಹೆಚ್ಚು ಹೆಚ್ಚು ಬಹಿರಂಗಗೊಳ್ಳುತ್ತಿದ್ದಂತೆ, ಬಿಜೆಪಿಯ ಇಮೇಜ್ ಇನ್ನಷ್ಟು ಕುಸಿಯುತ್ತಲೇ ಇದೆ ಎಂದಿದ್ದಾರೆ.
ಬಿಜೆಪಿ ಸದಸ್ಯರು ಮತ್ತು ಅವರ ಸಹಚರರ ಬಗ್ಗೆ ಹಗರಣಗಳು ನಿಜಕ್ಕೂ ಬಹಿರಂಗವಾಗುತ್ತಿವೆ. ಆದರೆ ಯಾವುದೇ ರಾಜೀನಾಮೆಗಳು ಬರುತ್ತಿಲ್ಲ. ಬಿಜೆಪಿ ಯಾವಾಗಲೂ ನೈತಿಕ ದಿವಾಳಿತನದಿಂದ ಬಳಲುತ್ತಿದೆ. ಆದರೆ ಈಗ ಅದು ಅದರ ಸಂಪೂರ್ಣ ಉತ್ತುಂಗಕ್ಕೇರಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರೂಪಾಯಿ ಮೌಲ್ಯ ಸಮರ್ಥಿಸಿಕೊಂಡ ವಿತ್ತ ಸಚಿವೆ

ಇನ್ನೂ ಸೋಮವಾರ(ಮಾ. 30) ಲೋಕಸಭೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತವನ್ನು ಸಮರ್ಥಿಸಿಕೊಂಡಿರುವ ನಿರ್ಮಲಾ ಸೀತಾರಾಮನ್, ದೇಶದ ಆರ್ಥಿಕತೆ ಮೂಲಭೂತ ಅಂಶಗಳು ಸರಿಯಿದ್ದು, ಇತರೆ ಮಾರುಕಟ್ಟೆಯ ಆರ್ಥಿಕತೆಗೆ ಹೋಲಿಸಿದ್ರೆ, ಅಮೆರಿಕಾದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಉತ್ತಮವಾಗಿದೆ ಎಂದು ಹೇಳಿದ್ದಾರೆ.
ಭಾರತದ ಆರ್ಥಿಕತೆ ಬಲಿಷ್ಟವಾಗಿದ್ದು, ನಮ್ಮ ಆರ್ಥಿಕತೆ ಮತ್ತು ಹಣಕಾಸಿ ಕೊರತೆಯ ನಿರ್ವಹಣೆಯನ್ನು ಇಡೀ ಜಗತ್ತು ಹೊಗಳುತ್ತಿವೆ ಎಂದಿದ್ದಾರೆ. ಇನ್ನೂ ರೂಪಾಯಿ ಅಪಮೌಲ್ಯವು ಕೇವಲ ಕೇವಲ ಭಾರತದ ಕರೆನ್ಸಿಗೆ ಮಾತ್ರವಾಗಿಲ್ಲ, ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದ ಎಲ್ಲಾ ದೇಶಗಳ ಕರೆನ್ಸಿಗಳು ಕುಸಿತ ಕಂಡಿವೆ ಎಂದಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net