ಹೊಸ ಆರ್ಥಿಕ ವರ್ಷದ ಮೊದಲ ದಿನವೇ ಶಾಕ್; ವಾಣಿಜ್ಯ ಸಿಲಿಂಡರ್ ಬೆಲೆ 195.5 ರೂ. ಜಂಪ್! LPG Price Hike
LPG Price Hike (ಸಾಂದರ್ಭಿಕ ಚಿತ್ರ)
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಜಾಗತಿಕ ತೈಲ ಬೆಲೆಯಲ್ಲಿ ಏರಿಕೆ
ಬುಧವಾರ 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ಗಳ ಬೆಲೆಯನ್ನು 195.50 ರೂ. ಹೆಚ್ಚಳ
ಈ ಹಿಂದೆ ಮಾರ್ಚ್ 1 ರಂದು ಸಿಲಿಂಡರ್ ಬೆಲೆಯಲ್ಲಿ 114.5 ರೂ. ಏರಿಕೆ ಮಾಡಲಾಗಿತ್ತು
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಜಾಗತಿಕ ತೈಲ ಬೆಲೆಯಲ್ಲಿ ಏರಿಕೆ ಕಂಡುಬಂದ ಹಿನ್ನಲೆ, ಬುಧವಾರ (ಏ.01) (LPG Price Hike) 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ಗಳ ಬೆಲೆಯನ್ನು 195.50 ರೂ. ಹೆಚ್ಚಿಸಲಾಗಿದೆ. ಇದರೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಸಿಲಿಂಡರ್ ಬೆಲೆ 2,078.50 ರೂ. ಗೆ ತಲುಪಿದೆ.
ಆದಾಗ್ಯೂ, ಕಳೆದ ಒಂದು ತಿಂಗಳ ಅವಧಿಯಲ್ಲಿ ಇದು ಎರಡನೇ ಪ್ರಮುಖ ಏರಿಕೆಯಾಗಿದ್ದು, ಇದಕ್ಕೂ ಮೊದಲು, ಮಾರ್ಚ್ 1 ರಂದು ಸಿಲಿಂಡರ್ ಬೆಲೆಯಲ್ಲಿ 114.5 ರೂ. ಏರಿಕೆ ಮಾಡಲಾಗಿತ್ತು. ಸತತವಾದ ಈ ಏರಿಕೆಗಳಿಂದಾಗಿ ಹೋಟೆಲ್, ರೆಸ್ಟೋರೆಂಟ್ ಮತ್ತು ಸಣ್ಣ ಕೈಗಾರಿಕೆಗಳ ಮೇಲೆ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಾದಂತಾಗಿದೆ.
ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಸಂಘರ್ಷವು ಭಾರತದ ಇಂಧನ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರಲು ಪ್ರಾರಂಭಿಸಿತು. ಇದರಿಂದಾಗಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಎಲ್‌ಪಿಜಿ ಸರಬರಾಜಿನಲ್ಲಿ ಆರಂಭಿಕ ಕಡಿತ ಮಾಡಲಾಯಿತು. ಏಕೆಂದರೆ ಅಧಿಕಾರಿಗಳು ಗೃಹ ಬಳಕೆಗೆ ಮೊದಲು ಆದ್ಯತೆ ನೀಡಿದರು.
ಏತನ್ಮಧ್ಯೆ, ಯುದ್ಧದ ಮಧ್ಯೆ ದ್ರವೀಕೃತ ಪೆಟ್ರೋಲಿಯಂ ಅನಿಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಸಲುವಾಗಿ ಪ್ರಮುಖ ನಗರಗಳಲ್ಲಿ ವಾಣಿಜ್ಯ ಎಲ್‌ಪಿಜಿ ಗ್ರಾಹಕರು ಪಿಎನ್ಜಿಗೆ ಬದಲಾಯಿಸಲು ಸರ್ಕಾರ ಸೂಚನೆ ನೀಡಿತು.
ಈ ನಗರಗಳಲ್ಲಿ ಇಂತಿಷ್ಟು ಸಿಲಿಂಡರ್ ಬೆಲೆಗಳಿವೆ
ಪ್ರಸ್ತುತ ದೆಹಲಿಯಲ್ಲಿ 2078.50, ಕೋಲ್ಕತ್ತಾ 2208 ರೂ, ಮುಂಬೈ 2031 ರೂ ಮತ್ತು ಚೆನ್ನೈ 2246.50 ರೂಗಳಿಗೆ ವಾಣಿಜ್ಯ ಎಲ್‌ಪಿಜಿ ಮಾರಾಟವಾಗುತ್ತಿದೆ. ಆದಾಗ್ಯೂ, ದೇಶೀಯ ಎಲ್ಪಿಜಿಯಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ.
ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿನಿಮಯ ದರದ ಆಧಾರದ ಮೇಲೆ ಎಟಿಎಫ್ ಮತ್ತು ಎಲ್‌ಪಿಜಿ ಬೆಲೆಗಳನ್ನು ಪರಿಷ್ಕರಿಸುತ್ತವೆ.
ಪಶ್ಚಿಮ ಏಷ್ಯಾದಲ್ಲಿ ಉಂಟಾದ ಉದ್ವಿಗ್ನತೆಯಿಂದಾಗಿ ಇಂಧನ ಪೂರೈಕೆ ಸರಪಳಿಯನ್ನು ಅಡ್ಡಪಡಿಸಿದ ನಂತರ ಜಾಗತಿಕ ತೈಲ ಬೆಲೆಗಳು ಸುಮಾರು ಶೇ.50 ರಷ್ಟು ಹೆಚ್ಚಾಗಿದೆ.
ಕಳೆದ ವರ್ಷ ಮಾರ್ಚ್‌ನಲ್ಲಿ ಲೀಟರ್‌ಗೆ 2 ರೂ. ಇಳಿಕೆಯಾದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಬ್ದವಾಗಿ ಮುಂದುವರೆದಿದೆ. ಆದಾಗ್ಯೂ, ದೆಹಲಿಯಲ್ಲಿ ಪ್ರಸ್ತುತ ಪೆಟ್ರೋಲ್ ಲೀಟರ್‌ಗೆ 94.72 ಮತ್ತು ಡೀಸೆಲ್ 87.62 ರೂಗೆ ಮಾರಾಟವಾಗುತ್ತಿದೆ (ಏಜೆನ್ಸೀಸ್).