_1769969814419.webp?w=480&auto=format%2Ccompress&fit=max)
_1769969814419.webp?w=480&auto=format%2Ccompress&fit=max)
ದೇಶದಲ್ಲಿ ಸಣ್ಣ ಹಾಗೂ ಅತಿಸಣ್ಣ ರೈತರ ಸಂಖ್ಯೆ ಹೆಚ್ಚಿದ್ದು ಇಂತಹ ಕೃಷಿಕರಿಗೆ ಆದಾಯ ವೃದ್ಧಿಸಿಕೊಳ್ಳಲು ‘ಅಧಿಕ ಮೌಲ್ಯದ ಕೃಷಿ’ಗೆ ಒತ್ತು ನೀಡುವ ಹೊಸ ಪ್ರಸ್ತಾಪವು ಕೇಂದ್ರ ಬಜೆಟ್ನಲ್ಲಿ ಪ್ರಕಟಿಸಲಾಗಿದೆ. ಜತೆಗೆ ತೆಂಗು, ಗೋಡಂಬಿ, ಬಾದಾಮಿ, ಕೋಕೋ ಬೆಳೆಗಳನ್ನು ಉತ್ತೇಜಿಸಿ ವಿಶೇಷ ಕಾರ್ಯಕ್ರಮವನ್ನು ರೂಪಿಸುವ ಮೂಲಕ ರೈತರ ಕಲ್ಯಾಣಕ್ಕೆ ವಿಶೇಷ ಕಾಳಜಿ ವಹಿಸಲಾಗಿದೆ. ಈವರೆಗೂ ಭತ್ತ, ಗೋಧಿ ಸೇರಿ ಸಾಂಪ್ರದಾಯಿಕ ಬೆಳೆಗಳನ್ನು ಮಾತ್ರ ಕೇಂದ್ರೀಕರಿಸಿರುವ ರೈತರು, ಇನ್ನು ಮುಂದೆ ಹೆಚ್ಚು ಆದಾಯವನ್ನು ತಂದುಕೊಡುವ ಬೆಳೆಗಳಲ್ಲಿ ತೊಡಗಿಸಿಕೊಳ್ಳಲು ಕೆಲ ಕಾರ್ಯಕ್ರಮಗಳನ್ನು ಪ್ರಕಟಿಸಲಾಗಿದೆ.
ಕೃಷಿ ಉತ್ಪನ್ನಗಳನ್ನು ವೈವಿಧ್ಯಗೊಳಿಸಿ ಉತ್ಪಾದಕತೆಯನ್ನು ಅಧಿಕಗೊಳಿಸುವುದು ಹಾಗೂ ರೈತರ ಆದಾಯವನ್ನು ಇನ್ನಷ್ಟು ಹೆಚ್ಚಳ ಮಾಡಲು ತೆಂಗು ಹಾಗೂ ಶ್ರೀಗಂಧ ಬೆಳೆಯನ್ನು ಹೆಚ್ಚಾಗಿ ಪ್ರೋತ್ಸಾಹಿಸಲು ನಿರ್ಧರಿಸಲಾಗಿದೆ. ಅಧಿಕ ಪ್ರಮಾಣದ ಮೌಲ್ಯವರ್ಧನೆಗೆ ಅವಕಾಶವಿರುವ ಈ ಎರಡೂ ಬೆಳೆಗಳು ರೈತರಿಗೆ ವರದಾನವಾಗಿದೆ. ಪ್ರಾಕೃತಿಕ ವಿಪತ್ತಿನ ಮಧ್ಯೆಯೂ ಲಾಭ ತಂದುಕೊಡುವ ಈ ಬೆಳೆಗಳು ಅನ್ನದಾತರ ಕೈಹಿಡಿಯಲಿವೆ.
ಕರಾವಳಿ ರಾಜ್ಯಗಳಿಗೆ ಹೆಚ್ಚಿನ ಲಾಭ: ವಿಶೇಷವಾಗಿ ಕರ್ನಾಟಕ ಸೇರಿ ಕರಾವಳಿ ಪ್ರದೇಶ ಹೊಂದಿರುವ 9 ರಾಜ್ಯಗಳಲ್ಲಿ ತೆಂಗು ಬೆಳೆ ಅತ್ಯಧಿಕ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಕಲ್ಪವೃಕ್ಷದ ಕೃಷಿ ರೈತರಿಗೆ ಲಾಭಾದಾಯಕವಾಗಿ ಪರಿಣಮಿಸಿದೆ. ಇದರ ಜತೆಗೆ ಗೋಡಂಬಿ, ಶ್ರೀಗಂಧ, ಬಾದಾಮಿ ಬೆಳೆಗೆ ಹೊಸ ಮಾರುಕಟ್ಟೆ ಸೃಷ್ಟಿಸಲು ವೇದಿಕೆ ಕಲ್ಪಿಸಲಾಗಿದೆ. ಹೆಚ್ಚಿನ ಮೌಲ್ಯದ ಕೃಷಿ ಕೈಗೊಳ್ಳುವವರಿಗೆ ನೆರವಾಗಲು ಸರ್ಕಾರ ಪ್ರತ್ಯೇಕ ಅನುದಾನವನ್ನು ಮೀಸಲಿಡುವ ಘೋಷಣೆ ಮಾಡಿದೆ. ಈಶಾನ್ಯ ರಾಜ್ಯಗಳಲ್ಲಿ ಅಗರ್ ಮರಗಳು ಹಾಗೂ ಗಿರಿ ಪ್ರದೇಶಗಳಲ್ಲಿ ಬಾದಾಮಿ, ವಾಲ್ನಟ್ಸ್ ಮತ್ತು ಪೈನ್ ಬೀಜಗಳ ಬೆಳೆಗಳನ್ನು ಬೆಂಬಲಿಸುವ ಮೂಲಕ ದೊಡ್ಡ ಸಂಖ್ಯೆಯಲ್ಲಿ ಕೃಷಿಕರಿಗೆ ಉತ್ತೇಜನ ನೀಡುವ ಸಂಕಲ್ಪ ಕೈಗೊಳ್ಳಲಾಗಿದೆ.
ಅಗ್ರಿಸ್ಟಾಕ್ ಪೋರ್ಟಲ್ಗಳು ಮತ್ತು ಕೃಷಿ ಪದ್ಧತಿಗಳ ಕುರಿತಾದ ಭಾರತೀಯ ಕೃಷಿ ಸಂಶೋಧನಾ ಕೇಂದ್ರದ (ಐಸಿಎಆರ್) ಪ್ಯಾಕೇಜ್ ಅನ್ನು ಎಐ (ಕೃತಕ ಬುದ್ಧಿಮತ್ತೆ) ವ್ಯವಸ್ಥೆಗಳೊಂದಿಗೆ ಸಂಯೋಜಿಸುವ ಬಹುಭಾಷಾ ಎಐ ಸಾಧನ ‘ಭಾರತ್ ವಿಸ್ತಾರ್’ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ. ಇದು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದಲ್ಲದೆ, ರೈತರಿಗೆ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ವೇದಿಕೆ ಕಲ್ಪಿಸಲಿದೆ. ಹಳೆಯ, ಕಡಿಮೆ ಇಳುವರಿ ನೀಡುವ ತೋಟಗಳನ್ನು ಪುನರುಜ್ಜೀವನಗೊಳಿಸಲು ಮತ್ತು ವಾಲ್ನಟ್, ಬಾದಾಮಿ ಮತ್ತು ಪೈನ್ ಬೀಜಗಳ ಹೆಚ್ಚಿನ ಸಾಂದ್ರತೆಯ ಕೃಷಿಯನ್ನು ವಿಸ್ತರಿಸಲು, ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಯುವಕರನ್ನು ತೊಡಗಿಸಿಕೊಳ್ಳುವ ಮೂಲಕ ಮೌಲ್ಯವರ್ಧನೆಗಾಗಿ ಕೃಷಿ ಸಂಪನ್ಮೂಲ/ ಸಂಯೋಜಿತ ವ್ಯವಸ್ಥೆ ಒಳಗೊಂಡ ‘ಭಾರತ್-ವಿಸ್ತಾರ್’ ಕಾರ್ಯಕ್ರಮ ಜಾರಿಗೊಳಿಸಲಾಗುತ್ತದೆ
ಶ್ರೀಗಂಧವು ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ದೇಶದ ಶ್ರೀಗಂಧದ ಪರಿಸರ ವ್ಯವಸ್ಥೆಯ ವೈಭವವನ್ನು ಪುನರ್ ಸ್ಥಾಪಿಸಲು ಕೇಂದ್ರೀಕೃತ ಕೃಷಿ ಹಾಗೂ ಕೊಯ್ಲಿನ ನಂತರದ ಸಂಸ್ಕರಣೆಯನ್ನು ಉತ್ತೇಜಿಸಲು ಕೇಂದ್ರವು ರಾಜ್ಯ ಸರ್ಕಾರಗಳೊಂದಿಗೆ ಪಾಲುದಾರಿಕೆ ಹೊಂದುವ ಆಶಯ ವ್ಯಕ್ತಪಡಿಲಾಗಿದೆ. ದೇಶದ ಒಟ್ಟು ಉತ್ಪಾದನೆಯಲ್ಲಿ ಶೇ.90 ಪಾಲು ಹೊಂದಿರುವ ಕರ್ನಾಟಕ ಹಾಗೂ ತಮಿಳುನಾಡು ಭಾಗದ ರೈತರಿಗೆ ಶ್ರೀಗಂಧ ಬೆಳೆ ವರದಾನವಾಗುವ ನಿರೀಕ್ಷೆ ಇದೆ.
ಭಾರತವು ವಿಶ್ವದ ಅತಿದೊಡ್ಡ ತೆಂಗು ಉತ್ಪಾದಕ ರಾಷ್ಟ್ರವಾಗಿದೆ. 10 ದಶಲಕ್ಷ ರೈತರು ಸೇರಿ ಅಂದಾಜು 30 ದಶಲಕ್ಷ ಜನರು ತಮ್ಮ ಜೀವನೋಪಾಯಕ್ಕಾಗಿ ತೆಂಗು ಬೆಳೆಯನ್ನು ಅವಲಂಬಿಸಿದ್ದಾರೆ. ತೆಂಗು ಉತ್ಪಾದನೆಯಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿಸಲು ‘ತೆಂಗು ಉತ್ತೇಜನಾ ಯೋಜನೆ’ ಯನ್ನು ಪ್ರಕಟಿಸಲಾಗಿದೆ. ಹಳೆಯ ಮತ್ತು ಉತ್ಪಾದಕವಲ್ಲದ ಮರಗಳನ್ನು ಪ್ರಮುಖ ತೆಂಗು ಬೆಳೆಯುವ ರಾಜ್ಯಗಳಲ್ಲಿ ಹೊಸ ಸಸಿ/ಪ್ರಭೇದಗಳೊಂದಿಗೆ ಬದಲಾಯಿಸುವುದು ಸೇರಿ ರೈತರ ಸಶಕ್ತೀಕರಣಗೊಳಿಸುವ ಗುರಿ ಹೊಂದಲಾಗಿದೆ.
2030ರ ವೇಳೆಗೆ ಕಚ್ಚಾ ಗೋಡಂಬಿ ಮತ್ತು ಕೋಕೋ ಉತ್ಪಾದನೆ ಹಾಗೂ ಸಂಸ್ಕರಣೆ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸಲು, ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಮತ್ತು ಭಾರತೀಯ ಗೋಡಂಬಿ, ಕೋಕೋವನ್ನು ಪ್ರೀಮಿಯಂ ಜಾಗತಿಕ ಬ್ರಾ್ಯಂಡ್ಗಳಾಗಿ ಪರಿವರ್ತಿಸಲು ಕಾರ್ಯಕ್ರಮ ರೂಪಿಸುವ ಆಶಯ ಹೊಂದಲಾಗಿದೆ.
ಹೆಸರು ಬದಲಾವಣೆಯಿಂದ ಇತ್ತೀಚೆಗೆ ಹೆಚ್ಚು ಚರ್ಚೆಗೊಳಗಾದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ಮನರೇಗಾ) ಬದಲಾದ ಸ್ವರೂಪ ‘ವಿಬಿ-ಜಿ ರಾಮ್ ಜಿ’ಗೆ ಭರ್ಜರಿ ಅನುದಾನ ಮೀಸಲಿಡಲಾಗಿದೆ. ವಿಬಿ-ಜಿ ರಾಮ್ ಜಿ ಯೋಜನೆಗೆ ಕೇಂದ್ರ ಸರ್ಕಾರ 2026-27ರ ಬಜೆಟ್ನಲ್ಲಿ -ಠಿ; 95,692.31 ಕೋಟಿ ಹಣವನ್ನು ಮೀಸಲಿಟ್ಟಿದೆ.
ವಿಬಿ-ಜಿ ರಾಮ್ ಜಿ ಯೋಜನೆಗೆ (ವಿಕಸಿತ ಭಾರತ-ರೋಜ್ಗಾರ್ ಮತ್ತು ಆಜಿವಿಕಾಸ ಮಿಷನ್ -ಗ್ರಾಮೀಣ)’ ಹಂಚಿಕೆಯಾದ -ಠಿ; 95,692.31 ಕೋಟಿ ಹಣದಲ್ಲಿ ಬಾಕಿ ಇರುವ ಮನರೇಗಾ ಯೋಜನೆಯ ಕಾಮಗಾರಿ, ಕೆಲಸಗಳಿಗೆ -ಠಿ;30 ಸಾವಿರ ಕೋಟಿ ಮೀಸಲಿಡಲಾಗಿದೆ. 2025-26ನೇ ಸಾಲಿನ ಬಜೆಟ್ನಲ್ಲಿ ಮನರೇಗಾಗೆ 88 ಸಾವಿರ ಕೋಟಿ ರೂ. ತೆಗೆದಿರಿಸಲಾಗಿತ್ತು. ಆದರೆ, ಹಂಚಿಕೆಯಾದದ್ದು 86 ಸಾವಿರ ಕೋಟಿ ರೂ.
ಬಜೆಟ್ನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಒಟ್ಟು 1,94,368.81 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಕಳೆದ (2025-26) ವರ್ಷ 1,86,995.61 ಕೋಟಿ ರೂ. ನೀಡಲಾಗಿತ್ತು. ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ ಹಂಚಿಕೆಯಾಗಿರುವ ಹಣದಲ್ಲಿ ಶೇಕಡ 50ರಷ್ಟು ಉದ್ಯೋಗ ಖಾತ್ರಿ ಯೋಜನೆಗಾಗಿಯೇ ವೆಚ್ಚವಾಗುತ್ತದೆ. ಒಂದು ವರ್ಷದಲ್ಲಿ 125 ದಿನಗಳ ಕೆಲಸದ ಭರವಸೆ ನೀಡುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್ಗಾರ್ ಆಜೀವಿಕಾ ಮಿಷನ್ ಯೋಜನೆ ರೂಪಿಸಲಾಗಿದೆ. ಜಿ-ರಾಮ್ ಜಿ ಜಾರಿಗೆ ಬರುವವರೆಗೆ ಮತ್ತು ಬಾಕಿ ಕೆಲಸಗಳು ಪೂರ್ಣಗೊಳ್ಳುವವರೆಗೆ ಮನರೇಗಾ ಯೋಜನೆ ಮುಂದುವರಿಯಲಿದೆ.
ವಿಬಿ-ಜಿ ರಾಮ್ ಜಿಗೆ ಅನುದಾನ ಕಡಿತಗೊಳಿಸ ಲಾಗುತ್ತದೆ, ರಾಜ್ಯಗಳಿಗೆ ಹೆಚ್ಚು ಹೊಣೆ ವರ್ಗಾಯಿಸಲಾಗುತ್ತದೆ ಎಂಬ ಆತಂಕ ರಾಜ್ಯಗಳನ್ನು ಕಾಡುತ್ತಿತ್ತು. ಆದರೆ, ಬಜೆಟ್ ಮುಖೇನ ಈ ಆತಂಕ ದೂರವಾಗಿದ್ದು, ನಿರ್ಮಲಾ ಸೀತಾರಾಮನ್ ಕಳೆದ ಬಜೆಟ್ಗಿಂತಲೂ ಈ ಬಾರಿ ಅನುದಾನವನ್ನು ಗಮನಾರ್ಹವಾಗಿ ಹೆಚ್ಚಿಸಿದ್ದಾರೆ
2026-27ನೇ ಸಾಲಿಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್ವೈ) ಗಾಗಿ ಹಂಚಿಕೆ ಯಾದ ಮೊತ್ತ 19,000 ಕೋಟಿ ರೂ.ಗಳು. 2025-26ನೇ ಸಾಲಿನಲ್ಲಿ ಹಣಕಾಸು ವರ್ಷದಲ್ಲಿ 11,000 ಕೋಟಿ ರೂ.ಹಂಚಿಕೆಯಾಗಿತ್ತು.
ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (ಪಿಎಂವೈಜಿ) ಬಜೆಟ್ನಲ್ಲಿ -ಠಿ;54,916.70 ಕೋಟಿ ಮೀಸಲಿಡ ಲಾಗಿದೆ. ಕಳೆದ ಬಜೆಟ್ನಲ್ಲಿ -ಠಿ;54, 832 ಕೋಟಿ ಹಂಚಿಕೆ ಮಾಡಲಾಗಿತ್ತು.
ಸಾರ್ವಜನಿಕ ವಲಯದ ಬ್ಯಾಂಕ್ಗಳು ಅಭಿವೃದ್ಧಿಪಡಿಸಲಿರುವ ‘ಗ್ರಾಮೀಣ ಕ್ರೆಡಿಟ್ ಸ್ಕೋರ್’ ಹೊಸ ಉಪಕ್ರಮದ ಕೇಂದ್ರ ಆಯವ್ಯಯದಲ್ಲಿ ಘೋಷಣೆ ಮಾಡಲಾಗಿದೆ. ಈ ಚೌಕಟ್ಟು ಸ್ವಸಹಾಯ ಸಂಘದ (ಎಸ್ಎಚ್ಜಿ) ಸದಸ್ಯರು ಮತ್ತು ಗ್ರಾಮೀಣ ನಿವಾಸಿಗಳು ಔಪಚಾರಿಕ ಸಾಲಕ್ಕೆ ತಮ್ಮ ಪ್ರವೇಶವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಈ ಹೊಸ ಅಂಕ ಗಳಿಕೆಯ ವ್ಯವಸ್ಥೆಯ ಪ್ರಾಥಮಿಕ ಗುರಿ ಸ್ವ-ಸಹಾಯ ಗುಂಪುಗಳ ಸದಸ್ಯರನ್ನು ಒಳಗೊಂಡಿದೆ. ಅವರ ಸಾಲ ಅರ್ಹತೆಯನ್ನು ಔಪಚಾರಿಕಗೊಳಿಸುವ ಮೂಲಕ, ಸರ್ಕಾರವು ಈ ಗುಂಪುಗಳಿಗೆ ಸಾಲದ ಪ್ರವೇಶವನ್ನು ಸುಲಭ ಮತ್ತು ನ್ಯಾಯಯುತವಾಗಿಸುವ ಗುರಿ ಹೊಂದಿದೆ. ಸಾಂಪ್ರದಾಯಿಕ ನಗರ ಕೇಂದ್ರಿತ ಕ್ರೆಡಿಟ್ ಸ್ಕೋರ್ಗಳು ಗ್ರಾಮೀಣ ಆರ್ಥಿಕ ಚಟುವಟಿಕೆಯನ್ನು ಸೆರೆಹಿಡಿಯುವಲ್ಲಿ ವಿಫಲವಾಗುವ ಅಂತರವನ್ನು ಇದು ಪರಿಹರಿಸುವುದೆಂದು ನಿರೀಕ್ಷಿಸಲಾಗಿದೆ. ಕೇಂದ್ರ ಸರ್ಕಾರದ ಈ ಉಪಕ್ರಮದಿಂದ ಲಕ್ಷಾಂತರ ಸಂಖ್ಯೆಯ ಗ್ರಾಮೀಣರಿಗೆ ಸಾಲ ಅರ್ಜಿ ಪ್ರಕ್ರಿಯೆಯನ್ನು ಸುಗಮಗೊಳಿಸಲಿದೆ. ಈ ಕ್ರಮವು ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಸಾಲ ಮಿತಿಯ ಹೆಚ್ಚಳದೊಂದಿಗೆ ಕಾರ್ಯನಿರ್ವಹಿಸುತ್ತದೆ. ಬಜೆಟ್ನಲ್ಲಿ ಕೆಸಿಸಿ ಅಡಿಯಲ್ಲಿ ಮೇಲಾಧಾರ ರಹಿತ ಸಾಲದ ಮಿತಿಯನ್ನು 3 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.