"ಮುಕ್ತಿ ಧಾಮ್‌ಗೆ ಬನ್ನಿ, ಕ್ಷಮೆ ಕೇಳಿ... ನಿಮ್ಮ ಸುರಕ್ಷತೆ ನನ್ನ ಹೊಣೆ": ನಟ ಸಲ್ಮಾನ್‌ಗೆ ಲಾರೆನ್ಸ್ ಚಿಕ್ಕಪ್ಪ ಬಹಿರಂಗ ಆಹ್ವಾನ| Salman Khan

Lawrence Bishnoi's uncle, Ramesh Bishnoi, stated that if Salman Khan comes to the Mukti Dham temple and offers an apology, he himself will guarantee his safety.
ಮುಕ್ತಿ ಧಾಮ್ ಮುಕಾಮ್ ದೇಗುಲಕ್ಕೆ ಬಂದು ಸಲ್ಮಾನ್ ಖಾನ್ ಕ್ಷಮೆ ಕೇಳಿದರೆ ಅವರ ಜೀವಕ್ಕೆ ನನ್ನದೇ ಗ್ಯಾರಂಟಿ ಎಂದ ಲಾರೆನ್ಸ್ ಬಿಷ್ಣೋಯ್ ಚಿಕ್ಕಪ್ಪ ರಮೇಶ್ ಬಿಷ್ಣೋಯ್.
Published on: 

ಬಿಕಾನೇರ್: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಮತ್ತು ಗುಜರಾತಿನ ಸಾಬರಮತಿ ಜೈಲಿನಲ್ಲಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ನಡುವಿನ ದಶಕಗಳ ಹಳೆಯ ದ್ವೇಷಕ್ಕೆ ಈಗ ಅನಿರೀಕ್ಷಿತ ತಿರುವು ಸಿಕ್ಕಿದೆ.

ಬಿಷ್ಣೋಯ್ ಸಮಾಜದ 542ನೇ ಸ್ಥಾಪನಾ ದಿನದ ಸಂದರ್ಭದಲ್ಲಿ, ಲಾರೆನ್ಸ್‌ನ ಚಿಕ್ಕಪ್ಪ ರಮೇಶ್ ಬಿಷ್ಣೋಯ್ ನಟ ಸಲ್ಮಾನ್ ಖಾನ್‌ಗೆ ಬಹಿರಂಗ ಮನವಿಯೊಂದನ್ನು ಮಾಡಿದ್ದಾರೆ. "ನಮ್ಮ ಪವಿತ್ರ ದೇವಾಲಯಕ್ಕೆ ಬಂದು ಕೈಮುಗಿದು ಕ್ಷಮೆ ಕೇಳಿ, ನಿಮ್ಮ ಜೀವಕ್ಕೆ ನಾನು ಗ್ಯಾರಂಟಿ!" ಎಂದು ಭರವಸೆ ನೀಡಿದ್ದಾರೆ.

ಲಾರೆನ್ಸ್ ಚಿಕ್ಕಪ್ಪ ಹೇಳಿದ್ದೇನು?

ಲಾರೆನ್ಸ್ ಬಿಷ್ಣೋಯ್ ತಂದೆಯ ತಮ್ಮನಾಗಿರುವ ರಮೇಶ್ ಬಿಷ್ಣೋಯ್, ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದಾರೆ. "ನಾನು ಯಾವುದೇ ಕಾರಣಕ್ಕೂ ಹಿಂಸಾಚಾರವನ್ನು ಸಮರ್ಥಿಸುವುದಿಲ್ಲ. ಲಾರೆನ್ಸ್‌ಗೂ ನಾನು ಹಿಂಸೆಯಿಂದ ದೂರವಿರಲು ಸದಾ ಹೇಳುತ್ತಲೇ ಬಂದಿದ್ದೇನೆ. ಆತನ ಗ್ಯಾಂಗ್ ಸಲ್ಮಾನ್ ಖಾನ್ ಅವರ ಮೇಲೆ ಅಥವಾ ಅವರ ಆಪ್ತರ ಮೇಲೆ ದಾಳಿ ಮಾಡುವುದಾಗಲಿ, ಹತ್ಯೆಗೆ ಸಂಚು ರೂಪಿಸುವುದಾಗಲಿ ನನಗೆ ಇಷ್ಟವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

"ಸಲ್ಮಾನ್ ಖಾನ್ ಮೇಲೆ ನಮಗಾಗಲಿ ಅಥವಾ ನಮ್ಮ ಸಮಾಜಕ್ಕಾಗಲಿ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಆದರೆ ಕೃಷ್ಣಮೃಗ ಹತ್ಯೆಯ ವಿಚಾರದಲ್ಲಿ ನಮ್ಮ ಇಡೀ ಸಮುದಾಯದಲ್ಲಿ ಆಳವಾದ ನೋವು ಮತ್ತು ಆಕ್ರೋಶವಿದೆ. ಸಲ್ಮಾನ್ ಖಾನ್ ಆರಂಭದಲ್ಲೇ ನಮ್ಮ ಸಮಾಜದ ದೇವಾಲಯಕ್ಕೆ ಬಂದು ಕ್ಷಮೆ ಕೇಳಿದ್ದರೆ, ಈ ಕಿಡಿ ಇಷ್ಟು ದೊಡ್ಡದಾಗಿ ಬೆಳೆಯುತ್ತಲೇ ಇರಲಿಲ್ಲ," ಎಂದು ರಮೇಶ್ ಬಿಷ್ಣೋಯ್ ಬೇಸರ ವ್ಯಕ್ತಪಡಿಸಿದ್ದಾರೆ.

"ಕ್ಷಮೆ ಕೇಳಿದರೆ ಸಾಕು, ಸಂಪೂರ್ಣ ಸುರಕ್ಷತೆ ನನ್ನ ಹೊಣೆ!"

ನಟ ಸಲ್ಮಾನ್ ಖಾನ್ ಬಿಷ್ಣೋಯ್ ದೇವಾಲಯಕ್ಕೆ ಹೋದರೆ ಅವರ ಪ್ರಾಣಕ್ಕೆ ಅಪಾಯವಿದೆ ಎಂದು ಅವರ ತಂದೆ, ಹಿರಿಯ ಚಿತ್ರಕಥೆಗಾರ ಸಲೀಂ ಖಾನ್ ಇತ್ತೀಚೆಗೆ ಆತಂಕ ವ್ಯಕ್ತಪಡಿಸಿದ್ದರು. ಈ ಕುರಿತು ಮಾತನಾಡಿದ ರಮೇಶ್ ಬಿಷ್ಣೋಯ್, ಸಲೀಂ ಖಾನ್ ಅವರ ಭಯವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

"ಸಲ್ಮಾನ್ ಖಾನ್ ರಾಜಸ್ಥಾನದ ಬಿಕಾನೇರ್‌ನಲ್ಲಿರುವ ನಮ್ಮ ಸಮಾಜದ ಪವಿತ್ರ 'ಮುಕ್ತಿ ಧಾಮ್ ಮುಕಾಮ್' ದೇವಾಲಯಕ್ಕೆ ಧೈರ್ಯವಾಗಿ ಬರಲಿ. ಅಲ್ಲಿ ಬಂದು ಗುರುಗಳ ಮುಂದೆ ನಮನ ಸಲ್ಲಿಸಿ ಕ್ಷಮೆಯಾಚಿಸಿದರೆ ಸಾಕು. ಅವರ ಸುರಕ್ಷತೆಯ ಸಂಪೂರ್ಣ ಜವಾಬ್ದಾರಿಯನ್ನು ನಾನೇ ವೈಯಕ್ತಿಕವಾಗಿ ವಹಿಸಿಕೊಳ್ಳುತ್ತೇನೆ. ಈ ವಿವಾದ ಈಗಾಗಲೇ ದಶಕಗಳ ಕಾಲ ಎಳೆದಾಡಿದೆ. ಕ್ಷಮೆಯೊಂದೇ ಇದಕ್ಕೆ ಶಾಶ್ವತ ಪರಿಹಾರ, ಈ ಪ್ರಕರಣ ಇಲ್ಲಿಗೇ ಅಂತ್ಯವಾಗಬೇಕು," ಎಂದು ಅವರು ಸಲ್ಮಾನ್‌ಗೆ ಓಪನ್ ಆಫರ್ ನೀಡಿದ್ದಾರೆ.

Also Read
ಭಾರತ-ಪಾಕ್ ಗಡಿಯಲ್ಲಿ ಭೀಕರ ಸ್ಫೋಟ: ಛಿದ್ರಗೊಂಡ ರೈಲ್ವೆ ಹಳಿ, ತಪ್ಪಿದ ಭಾರೀ ದುರಂತ! Train Track Blast
Lawrence Bishnoi's uncle, Ramesh Bishnoi, stated that if Salman Khan comes to the Mukti Dham temple and offers an apology, he himself will guarantee his safety.

ಏನಿದು 26 ವರ್ಷಗಳ ಹಳೆಯ ಪ್ರಕರಣ?

1998 ರ ಅಕ್ಟೋಬರ್‌ನಲ್ಲಿ 'ಹಮ್ ಸಾಥ್ ಸಾಥ್ ಹೈಂ' ಚಿತ್ರೀಕರಣದ ವೇಳೆ ಜೋಧ್‌ಪುರದ ಕಂಕಾನಿ ಗ್ರಾಮದಲ್ಲಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿ ಕೊಂದ ಆರೋಪ ಸಲ್ಮಾನ್ ಖಾನ್ ಮೇಲಿದೆ. 2018ರಲ್ಲಿ ನ್ಯಾಯಾಲಯ ಸಲ್ಮಾನ್‌ಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು, ನಂತರ ಅವರು ಜಾಮೀನಿನ ಮೇಲೆ ಹೊರಬಂದರು.

15 ನೇ ಶತಮಾನದ ಗುರು ಜಂಭೇಶ್ವರರು ಹಾಕಿಕೊಟ್ಟ 29 ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸುವ ಬಿಷ್ಣೋಯ್ ಸಮುದಾಯವು ವನ್ಯಜೀವಿಗಳು ಮತ್ತು ಮರಗಳನ್ನು ದೇವರಂತೆ ಪೂಜಿಸುತ್ತದೆ. ಕೃಷ್ಣಮೃಗ ಹತ್ಯೆಯ ಆಕ್ರೋಶವನ್ನು ಮುಂದಿಟ್ಟುಕೊಂಡೇ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹಲವು ಬಾರಿ ಸಲ್ಮಾನ್‌ಗೆ ಜೀವಬೆದರಿಕೆ ಹಾಕಿದೆ. 2024ರ ಏಪ್ರಿಲ್‌ನಲ್ಲಿ ಮುಂಬೈನ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ಹೊರಗೆ ನಡೆದ ಗುಂಡಿನ ದಾಳಿ ಸೇರಿದಂತೆ ಇತ್ತೀಚಿಗೆ ನಟ ಟೈಗರ್​ ಶ್ರಾಫ್​ ಮೇಲೆ ನಡೆದ ದಾಳಿಗೆ ಈ ಕೃಷ್ಣಮೃಗ ಬೇಟೆ ಪ್ರಕರಣವೇ ಮೂಲವಾಗಿದೆ.

ಕುತೂಹಲ ಕೆರಳಿಸಿದ ಸಲ್ಮಾನ್​ ಖಾನ್​ ನಡೆ!

ಈಗ ಗ್ಯಾಂಗ್‌ಸ್ಟರ್‌ನ ಸ್ವಂತ ಕುಟುಂಬದ ಹಿರಿಯರೇ ಮುಂದೆ ಬಂದು ಸುರಕ್ಷತೆಯ ಭರವಸೆ ನೀಡಿ, ಕ್ಷಮಾಪಣೆಯ ಆಫರ್ ಮುಂದಿಟ್ಟಿರುವುದು ದೇಶಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. "ನಟ ಸಲ್ಮಾನ್​ ಕೇವಲ ಒಂದು ಕ್ಷಮೆ ಕೇಳಿ ಈ 26 ವರ್ಷಗಳ ರಕ್ತಸಿಕ್ತ ಅಧ್ಯಾಯವನ್ನು ಮುಗಿಸುತ್ತಾರಾ? ಅಥವಾ ಕೋರ್ಟ್ ತೀರ್ಪಿಗಾಗಿ ಕಾಯುತ್ತಾರಾ?" ಎಂಬುದು ಸದ್ಯ ಎಲ್ಲರ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ, (ಏಜೆನ್ಸೀಸ್​).