Hell-holes; ಒಮ್ಮೆ ಭಾರತಕ್ಕೆ ಬಂದು ನೋಡಿ: ಇಂಡಿಯಾವನ್ನು ‘ನರಕ’ ಎಂದ ಟ್ರಂಪ್‌ಗೆ ಇರಾನ್ ತಿರುಗೇಟು!

Hell-holes
Hell-holes
Published on
ನವದೆಹಲಿ/ಮುಂಬೈ: ಅಮೆರಿಕದ ಪೌರತ್ವ ಕಾಯ್ದೆ ಕುರಿತಾದ ಚರ್ಚೆಯ ಸಂದರ್ಭದಲ್ಲಿ ಭಾರತ ಮತ್ತು ಚೀನಾವನ್ನು ‘ನರಕ’ (Hell-holes) ಎಂದು ಕರೆದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇರಾನ್ ಈಗ ಖಾರವಾಗಿ ವ್ಯಂಗ್ಯವಾಡಿದೆ. ಟ್ರಂಪ್ ಅವರ ಈ ವರ್ಣದ್ವೇಷದ ಹೇಳಿಕೆಯನ್ನು ಟೀಕಿಸಿರುವ ಇರಾನ್, "ಒಮ್ಮೆ ಭಾರತಕ್ಕೆ ಬಂದು ನೋಡಿ, ಆಮೇಲೆ ಮಾತನಾಡಿ" ಎಂದು ತಿರುಗೇಟು ನೀಡಿದೆ.
ಮುಂಬೈನಲ್ಲಿರುವ ಇರಾನ್‌ನ ಕಾನ್ಸುಲೇಟ್ ಜನರಲ್ ಕಚೇರಿಯು ಈ ಕುರಿತು ಸಾಮಾಜಿಕ ಜಾಲತಾಣ 'X' ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಮಹಾರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಮತ್ತು ಭೌಗೋಳಿಕ ಪರಂಪರೆಯನ್ನು ಬಿಂಬಿಸುವ ವಿಡಿಯೋವನ್ನು ಲಗತ್ತಿಸಿದೆ.

ಇರಾನ್ ನೀಡಿದ ‘ಸಾಂಸ್ಕೃತಿಕ ಡಿಟಾಕ್ಸ್’ ಸಲಹೆ

ಟ್ರಂಪ್ ಅವರ ಹೇಳಿಕೆಯನ್ನು ಟೀಕಿಸಿದ ಇರಾನ್ ಕಾನ್ಸುಲೇಟ್, "ಬಹುಶಃ ಯಾರಾದರೂ ಟ್ರಂಪ್ ಅವರಿಗೆ ಒಂದು ಕಡೆಯ 'ಸಾಂಸ್ಕೃತಿಕ ಶುದ್ಧೀಕರಣ'ದ (Cultural Detox) ಪ್ರವಾಸವನ್ನು ಬುಕ್ ಮಾಡಬೇಕು. ಇದರಿಂದ ಅವರ ಅನಗತ್ಯ 'ಬಕ್ವಾಸ್' (ಹರಟೆ) ಕಡಿಮೆಯಾಗಬಹುದು. ಕಭಿ ಇಂಡಿಯಾ ಆ ಕೆ ದೇಕೋ (ಒಮ್ಮೆ ಭಾರತಕ್ಕೆ ಬಂದು ನೋಡಿ), ಆಮೇಲೆ ಮಾತನಾಡಿ," ಎಂದು ಹಿಂದಿಯಲ್ಲಿ ಬರೆಯುವ ಮೂಲಕ ವ್ಯಂಗ್ಯವಾಡಿದೆ.

ವಿವಾದದ ಹಿನ್ನೆಲೆ ಏನು?

ಅಮೆರಿಕದ ರಾಜಕೀಯ ವಿಶ್ಲೇಷಕ ಮೈಕಲ್ ಸ್ಯಾವೇಜ್ ಅವರ ಪಾಡ್‌ಕಾಸ್ಟ್ ಒಂದನ್ನು ಟ್ರಂಪ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮರುಹಂಚಿಕೊಂಡಿದ್ದರು (Repost). ಆ ಪಾಡ್‌ಕಾಸ್ಟ್‌ನಲ್ಲಿ ಸ್ಯಾವೇಜ್ ಭಾರತ ಮತ್ತು ಚೀನಾವನ್ನು ಅತ್ಯಂತ ಕೆಟ್ಟದಾಗಿ ನಿಂದಿಸಿದ್ದರು. ಭಾರತ ಮತ್ತು ಚೀನಾದಿಂದ ಜನರು ಅಮೆರಿಕಕ್ಕೆ ಬರುವುದು ಕೇವಲ ಮಗುವಿಗೆ ಜನ್ಮ ನೀಡಿ ಪೌರತ್ವ ಪಡೆಯಲು ಮಾತ್ರ ಎಂದು ಸ್ಯಾವೇಜ್ ಆರೋಪಿಸಿದ್ದರು.
ಅಲ್ಲದೆ, ಭಾರತೀಯ ಮತ್ತು ಚೀನೀ ವಲಸಿಗರನ್ನು "ಲ್ಯಾಪ್ಟಾಪ್ ಹಿಡಿದಿರುವ ದರೋಡೆಕೋರರು" (Gangsters with laptops) ಎಂದು ಕರೆದು, ಇವರು ಅಮೆರಿಕದ ಧ್ವಜವನ್ನು ಮೆಟ್ಟಿನಿಂತಿದ್ದಾರೆ ಎಂದು ವರ್ಣದ್ವೇಷದ ಮಾತುಗಳನ್ನಾಡಿದ್ದರು. ಟ್ರಂಪ್ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದರಿಂದ, ಅವರು ಸ್ಯಾವೇಜ್ ಅವರ ಮಾತುಗಳನ್ನು ಒಪ್ಪಿದ್ದಾರೆ ಎಂದು ವ್ಯಾಖ್ಯಾನಿಸಲಾಗಿತ್ತು.

ಭಾರತದ ತೀವ್ರ ಖಂಡನೆ

ಟ್ರಂಪ್ ಅವರ ಈ ನಡೆಯನ್ನು ಭಾರತ ಸರ್ಕಾರವು ತೀವ್ರವಾಗಿ ಖಂಡಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, "ಈ ಹೇಳಿಕೆಗಳು ಮಾಹಿತಿ ಇಲ್ಲದ, ಸೂಕ್ತವಲ್ಲದ ಮತ್ತು ಅತ್ಯಂತ ಕೆಟ್ಟ ಅಭಿರುಚಿಯಿಂದ ಕೂಡಿವೆ. ಪರಸ್ಪರ ಗೌರವದ ಮೇಲೆ ನಿಂತಿರುವ ಭಾರತ ಮತ್ತು ಅಮೆರಿಕದ ಬಾಂಧವ್ಯದ ನೈಜತೆಯನ್ನು ಇಂತಹ ಹೇಳಿಕೆಗಳು ಪ್ರತಿಬಿಂಬಿಸುವುದಿಲ್ಲ," ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಮೆರಿಕದಿಂದ ಡ್ಯಾಮೇಜ್ ಕಂಟ್ರೋಲ್

ವಿವಾದ ಬೆಳೆಯುತ್ತಿದ್ದಂತೆ ಎಚ್ಚೆತ್ತ ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯು ಪರಿಸ್ಥಿತಿ ತಿಳಿಗೊಳಿಸಲು ಮುಂದಾಗಿದೆ. ಅಮೆರಿಕ ರಾಯಭಾರ ಕಚೇರಿಯ ವಕ್ತಾರ ಕ್ರಿಸ್ಟೋಫರ್ ಎಲ್ಮ್ಸ್ ಮಾತನಾಡಿ, "ಟ್ರಂಪ್ ಅವರು ಭಾರತವನ್ನು ಒಬ್ಬ ಶ್ರೇಷ್ಠ ದೇಶವೆಂದು ನಂಬುತ್ತಾರೆ. ಅವರಿಗೆ ಭಾರತದ ಉನ್ನತ ನಾಯಕತ್ವದೊಂದಿಗೆ (ಪ್ರಧಾನಿ ಮೋದಿ) ಉತ್ತಮ ವೈಯಕ್ತಿಕ ಸ್ನೇಹವಿದೆ," ಎಂದು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಇಸ್ರೇಲ್-ಹಮಾಸ್ ಮತ್ತು ಇತರೆ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನಡುವೆ ಇರಾನ್ ಭಾರತದ ಪರವಾಗಿ ನಿಂತು ಟ್ರಂಪ್ ಅವರನ್ನು ಟೀಕಿಸಿರುವುದು ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net