ಸಿಎಂ ವಿಜಯ್‌ ಮೊದಲ ಕ್ಯಾಬಿನೆಟ್‌ ಕ್ರಾಂತಿ: ಡ್ರಗ್ಸ್ ಮುಕ್ತ ತಮಿಳುನಾಡು, ಯುವಜನತೆ ಹಾಗೂ ಮಹಿಳಾ ಕಲ್ಯಾಣಕ್ಕೆ 436 ಯೋಜನೆಗಳ ಬಂಪರ್ ಕೊಡುಗೆ! Drug Free Tamil Nadu

ಸಿಎಂ ವಿಜಯ್‌ ಮೊದಲ ಕ್ಯಾಬಿನೆಟ್‌ ಕ್ರಾಂತಿ: ಡ್ರಗ್ಸ್ ಮುಕ್ತ ತಮಿಳುನಾಡು, ಯುವಜನತೆ ಹಾಗೂ ಮಹಿಳಾ ಕಲ್ಯಾಣಕ್ಕೆ 436 ಯೋಜನೆಗಳ ಬಂಪರ್ ಕೊಡುಗೆ!
ಸಿಎಂ ವಿಜಯ್‌ ಮೊದಲ ಕ್ಯಾಬಿನೆಟ್‌ ಕ್ರಾಂತಿ: ಡ್ರಗ್ಸ್ ಮುಕ್ತ ತಮಿಳುನಾಡು, ಯುವಜನತೆ ಹಾಗೂ ಮಹಿಳಾ ಕಲ್ಯಾಣಕ್ಕೆ 436 ಯೋಜನೆಗಳ ಬಂಪರ್ ಕೊಡುಗೆ!
Published on
ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ನೇತೃತ್ವದಲ್ಲಿ ನಡೆದ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯು ರಾಜ್ಯದ ಅಭಿವೃದ್ಧಿಗೆ ಹೊಸ ದಿಕ್ಸೂಚಿ ನೀಡಿದೆ. ಶುಕ್ರವಾರ ಸಚಿವಾಲಯದಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಯುವ ಸಬಲೀಕರಣ, ಮಹಿಳಾ ಕಲ್ಯಾಣ, ಮೀನುಗಾರರ ಅಭಿವೃದ್ಧಿ ಹಾಗೂ ಪ್ರಮುಖವಾಗಿ ಡ್ರಗ್ಸ್ ಮುಕ್ತ ತಮಿಳುನಾಡು(Drug Free Tamil Nadu) ನಿರ್ಮಾಣಕ್ಕಾಗಿ ಬರೋಬ್ಬರಿ 436 ಹೊಸ ಯೋಜನೆಗಳನ್ನು ಘೋಷಿಸಲಾಗಿದೆ.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ಚೊಚ್ಚಲ ಕ್ಯಾಬಿನೆಟ್ ಸಭೆಯಲ್ಲಿ ವಿವಿಧ ಇಲಾಖೆಗಳ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುವ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಂಧನ ಸಂಪನ್ಮೂಲ ಮತ್ತು ಕಾನೂನು ಸಚಿವ ಸಿ.ಟಿ.ಆರ್. ನಿರ್ಮಲ್ ಕುಮಾರ್ ಅವರು ಸಭೆಯ ಪ್ರಮುಖ ನಿರ್ಧಾರಗಳನ್ನು ಹಂಚಿಕೊಂಡಿದ್ದಾರೆ.

ಇಲಾಖೆಗಳಿಗೆ ಖಡಕ್ ಟಾರ್ಗೆಟ್

ಮುಖ್ಯಮಂತ್ರಿ ವಿಜಯ್ ಅವರು ಕೇವಲ ಯೋಜನೆಗಳನ್ನು ಘೋಷಿಸುವುದಕ್ಕಷ್ಟೇ ಸೀಮಿತವಾಗದೆ, ಪ್ರತಿ ಇಲಾಖೆಗೂ ನಿರ್ದಿಷ್ಟ ಗುರಿಗಳನ್ನು ನಿಗದಿಪಡಿಸಿದ್ದಾರೆ. ಎಲ್ಲಾ 436 ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಇನ್ಮುಂದೆ ಆಯಾ ಇಲಾಖೆಯ ಸಚಿವರು ತಮ್ಮ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿ, ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಬ್ಲೂಪ್ರಿಂಟ್ ಸಿದ್ಧಪಡಿಸಲಿದ್ದಾರೆ. ಈ ಯೋಜನೆಗಳನ್ನು ಎಷ್ಟು ಬೇಗ ಜನರಿಗೆ ತಲುಪಿಸಲು ಸಾಧ್ಯವೋ ಅಷ್ಟು ವೇಗವಾಗಿ ಕೆಲಸ ಮಾಡಲು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಡ್ರಗ್ಸ್ ಮಾಫಿಯಾಗೆ ಸಿಎಂ ವಿಜಯ್ ಬ್ರೇಕ್

ರಾಜ್ಯದಲ್ಲಿ ಮಾದಕ ವಸ್ತುಗಳ ಹಾವಳಿಯನ್ನು ಸಂಪೂರ್ಣವಾಗಿ ಬೇರುಸಹಿತ ಕಿತ್ತೊಗೆಯಲು ಸರ್ಕಾರ ಯುದ್ಧೋಪಾದಿಯಲ್ಲಿ ಕೆಲಸ ಆರಂಭಿಸಿದೆ. ಕಳೆದ ಐದು ವರ್ಷಗಳಲ್ಲಿ ತಮಿಳುನಾಡಿನಲ್ಲಿ ಗಾಂಜಾದಿಂದ ಹಿಡಿದು ಮೆಥಾಂಫೆಟಮೈನ್‌ನಂತಹ ಸಿಂಥೆಟಿಕ್ ಡ್ರಗ್ಸ್‌ಗಳವರೆಗೆ ಮಾದಕ ವಸ್ತುಗಳ ಜಾಲ ವ್ಯಾಪಕವಾಗಿ ಹರಡಿಕೊಂಡಿತ್ತು. ಇದಕ್ಕೆ ಬ್ರೇಕ್ ಹಾಕಲು ಸಿಎಂ ಪೊಲೀಸರಿಗೆ ಮುಕ್ತ ಅವಕಾಶ ನೀಡಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ಇದರ ಮೊದಲ ಭಾಗವಾಗಿ ಈಗಾಗಲೇ ರಾಜ್ಯ ಸರ್ಕಾರಿ ಸ್ವಾಮ್ಯದ 717 ಮದ್ಯದ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ನಿಷೇಧಿತ ಗುಟ್ಕಾ ಮಾರಾಟ ಮಾಡುವ ಅಂಗಡಿಗಳಿಗೆ ಬೀಗ ಜಡಿಯಲಾಗುತ್ತಿದೆ. ಕೇವಲ ಮದುರೈ ಒಂದರಲ್ಲೇ ಕಳೆದ ಒಂದು ವಾರದಲ್ಲಿ ಗುಟ್ಕಾ ಮಾರುತ್ತಿದ್ದ 24ಕ್ಕೂ ಹೆಚ್ಚು ಅಂಗಡಿಗಳನ್ನು ಸೀಲ್ ಮಾಡಲಾಗಿದೆ. ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಗೂಂಡಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಜೈಲಿಗಟ್ಟಲಾಗುತ್ತಿದೆ ಎಂದು ನಿರ್ಮಲ್ ಕುಮಾರ್ ಎಚ್ಚರಿಸಿದ್ದಾರೆ.

ಯುವಕರು ಮತ್ತು ಮಹಿಳೆಯರೇ ಆಧಾರ

ನೂತನ ಸರ್ಕಾರದ ಮೊದಲ ಆದ್ಯತೆ ಯುವಜನತೆ ಮತ್ತು ಮಹಿಳೆಯರ ಏಳಿಗೆಯಾಗಿದೆ. ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುವುದು, ಕೌಶಲ್ಯಾಭಿವೃದ್ಧಿ ಹಾಗೂ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ವಿಶೇಷ ಯೋಜನೆಗಳನ್ನು ಈ 436 ಪ್ರಾಜೆಕ್ಟ್‌ಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಜೊತೆಗೆ ಕರಾವಳಿ ಭಾಗದ ಮೀನುಗಾರರ ಬದುಕನ್ನು ಹಸನುಗೊಳಿಸಲು ತಂತ್ರಜ್ಞಾನ ಆಧಾರಿತ ನೆರವು ನೀಡಲು ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ.
ಒಟ್ಟಾರೆಯಾಗಿ, ಸಿಎಂ ವಿಜಯ್ ಅವರ ಮೊದಲ ಸಂಪುಟ ಸಭೆಯು ಕೇವಲ ಭರವಸೆಗಳ ಮೂಟೆಯಾಗದೆ, ತಮಿಳುನಾಡನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸುವ ಸಾಂಘಿಕ ಪ್ರಯತ್ನಕ್ಕೆ ಗಟ್ಟಿ ಬುನಾದಿ ಹಾಕಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net