ತಮಿಳುನಾಡಿನ ರಾಜಕಾರಣದಲ್ಲಿ ಸಿಎಂ ವಿಜಯ್ ಬಿಗ್ ಮಾಸ್ಟರ್ ಸ್ಟ್ರೋಕ್! ಜಯಲಲಿತಾರ ಅಮ್ಮ ಕ್ಯಾಂಟೀನ್​ಗೆ ಹೊಸ ಜೀವ ನೀಡಿದ ದಳಪತಿ! Amma Canteens Revamp

ತಮಿಳುನಾಡಿನ ರಾಜಕಾರಣದಲ್ಲಿ ಸಿಎಂ ವಿಜಯ್ ಬಿಗ್ ಮಾಸ್ಟರ್ ಸ್ಟ್ರೋಕ್! ಜಯಲಲಿತಾ ಅವರ ಅಮ್ಮ ಕ್ಯಾಂಟೀನ್​ಗೆ ಹೊಸ ಜೀವ ನೀಡಿದ ದಳಪತಿ!
ತಮಿಳುನಾಡಿನ ರಾಜಕಾರಣದಲ್ಲಿ ಸಿಎಂ ವಿಜಯ್ ಬಿಗ್ ಮಾಸ್ಟರ್ ಸ್ಟ್ರೋಕ್! ಜಯಲಲಿತಾ ಅವರ ಅಮ್ಮ ಕ್ಯಾಂಟೀನ್​ಗೆ ಹೊಸ ಜೀವ ನೀಡಿದ ದಳಪತಿ!
Published on
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿರುವ ನಟ, ರಾಜಕಾರಣಿ ಸಿಎಂ ಜೋಸೆಫ್ ವಿಜಯ್ ಸೋಮವಾರ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿದ್ದ ರಾಜ್ಯದ ಹೆಮ್ಮೆಯ ಅಮ್ಮ ಕ್ಯಾಂಟೀನ್​ಗಳ(Amma Canteens Revamp) ಮೂಲಸೌಕರ್ಯವನ್ನು ಸಂಪೂರ್ಣವಾಗಿ ನವೀಕರಿಸಲು ಮತ್ತು ಅಲ್ಲಿ ವಿತರಿಸಲಾಗುವ ಆಹಾರದ ಗುಣಮಟ್ಟವನ್ನು ಸುಧಾರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಚೆನ್ನೈನ ಸಚಿವಾಲಯದಲ್ಲಿ ನಡೆದ ಹೈ-ಪ್ರೊಫೈಲ್ ಸಭೆಯಲ್ಲಿ ಕ್ಯಾಂಟೀನ್‌ಗಳ ಪ್ರಸ್ತುತ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಿದ ಮುಖ್ಯಮಂತ್ರಿ, ಜನಸಾಮಾನ್ಯರಿಗೆ ಸಿಗುವ ಅತ್ಯಂತ ಕಡಿಮೆ ಬೆಲೆಯ ಆಹಾರವು ರುಚಿಕರ ಹಾಗೂ ಅತ್ಯಂತ ಶುದ್ಧವಾಗಿರಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಹಾರದ ಗುಣಮಟ್ಟದ ಕುರಿತು ಸಾರ್ವಜನಿಕರ ದೂರಿಗೆ ತಕ್ಷಣದ ಸ್ಪಂದನೆ!

ಕಳೆದ ಕೆಲವು ಸಮಯದಿಂದ ತಮಿಳುನಾಡಿನಾದ್ಯಂತ ಇರುವ ಅಮ್ಮ ಕ್ಯಾಂಟೀನ್‌ಗಳಲ್ಲಿ ಸಿಗುವ ಆಹಾರದ ರುಚಿ ಮತ್ತು ಗುಣಮಟ್ಟ ತೃಪ್ತಿದಾಯಕವಾಗಿಲ್ಲ ಎಂಬ ವ್ಯಾಪಕ ದೂರುಗಳು ಹಾಗೂ ಸಾರ್ವಜನಿಕರಿಂದ ನೆಗೆಟಿವ್ ಫೀಡ್‌ಬ್ಯಾಕ್ ಕೇಳಿಬಂದಿದ್ದವು. ಬಡವರು, ಕೂಲಿ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಅವಲಂಬಿಸಿರುವ ಈ ಯೋಜನೆಯು ಹಳ್ಳ ಹಿಡಿಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ ವಿಜಯ್, ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ.
ಕ್ಯಾಂಟೀನ್‌ಗಳಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ಸೌಕರ್ಯಗಳು, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಸ್ವಚ್ಛತೆಯನ್ನು ತಕ್ಷಣವೇ ಸುಧಾರಿಸಬೇಕು. ಅಡುಗೆ ಮಾಡಲು ಆಧುನಿಕ ಸಲಕರಣೆಗಳು ಹಾಗೂ ಹೊಸ ಪಾತ್ರೆಗಳನ್ನು ಖರೀದಿಸಬೇಕು. ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ಕಳಪೆ ಆಹಾರ ಸಿಗಬಾರದು, ಅತ್ಯಂತ ರುಚಿಕರ ಹಾಗೂ ಗುಣಮಟ್ಟದ ಊಟವನ್ನು ಖಚಿತಪಡಿಸುವುದು ಸರ್ಕಾರದ ಜವಾಬ್ದಾರಿ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ.

ಅಮ್ಮ ಕ್ಯಾಂಟೀನ್' ಇತಿಹಾಸ ಮತ್ತು ರಾಜಕೀಯ ಪ್ರಾಮುಖ್ಯತೆ!

2013 ರ ಫೆಬ್ರವರಿಯಲ್ಲಿ AIADMK ಅಧಿನಾಯಕಿ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆಡಳಿತಾವಧಿಯಲ್ಲಿ (2011-2016) ಈ ಕ್ರಾಂತಿಕಾರಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪ್ರೀತಿಯಿಂದ ಜಯಲಲಿತಾ ಅವರನ್ನು ಅಮ್ಮ ಎಂದು ಕರೆಯುತ್ತಿದ್ದ ಕಾರಣ, ಈ ಯೋಜನೆಗೆ ಅಮ್ಮ ಕ್ಯಾಂಟೀನ್ ಎಂದು ಹೆಸರಿಡಲಾಗಿತ್ತು. ಕೇವಲ 1 ರೂಪಾಯಿಗೆ ಇಡ್ಲಿ, 5 ರೂಪಾಯಿಗೆ ಸಾಂಬಾರ್ ರೈಸ್ ನೀಡುವ ಮೂಲಕ ಈ ಯೋಜನೆ ಇಡೀ ದೇಶದಲ್ಲೇ ಭಾರಿ ಮಾದರಿಯಾಗಿ ಹೊರಹೊಮ್ಮಿತ್ತು.
ಸದ್ಯದ ಮಾಹಿತಿ ಪ್ರಕಾರ, ಗ್ರೇಟರ್ ಚೆನ್ನೈ ಕಾರ್ಪೊರೇಷನ್ (GCC) ವ್ಯಾಪ್ತಿಯಲ್ಲಿ ಸುಮಾರು 383 ಅಮ್ಮ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿದ್ದು, ತಮಿಳುನಾಡಿನ ಇತರೆ ಸ್ಥಳೀಯ ಸಂಸ್ಥೆಗಳ ಮೇಲ್ವಿಚಾರಣೆಯಲ್ಲಿ 237 ಕ್ಯಾಂಟೀನ್‌ಗಳು ಬಡವರ ಹಸಿವು ನೀಗಿಸುತ್ತಿವೆ. ರಾಜಕೀಯವಾಗಿ ಎದುರಾಳಿ ಪಕ್ಷದ ಯೋಜನೆಯಾಗಿದ್ದರೂ, ಸಿಎಂ ವಿಜಯ್ ಅವರು ರಾಜಕೀಯ ದ್ವೇಷ ಸಾಧಿಸದೆ ಬಡವರ ಹಿತದೃಷ್ಟಿಯಿಂದ ಈ ಯೋಜನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಮುಂದಾಗಿರುವುದು ತಮಿಳುನಾಡು ಜನತೆಯ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net