ಸರ್ಕಾರಿ ಬಸ್‌ನಲ್ಲಿ ಸಿಎಂ ವಿಜಯ್ ಸವಾರಿ! ಕಂಡಕ್ಟರ್ ಜೊತೆ ಫೋಟೋ, ಡ್ರೈವರ್‌ಗೆ ಬೆನ್ನು ತಟ್ಟಿದ ವಿಡಿಯೋ ವೈರಲ್! Vijay Bus Ride

ಸರ್ಕಾರಿ ಬಸ್‌ನಲ್ಲಿ ಸಿಎಂ ವಿಜಯ್ ಸವಾರಿ! ಕಂಡಕ್ಟರ್ ಜೊತೆ ಫೋಟೋ, ಡ್ರೈವರ್‌ಗೆ ಬೆನ್ನು ತಟ್ಟಿದ ವಿಡಿಯೋ ವೈರಲ್!
ಸರ್ಕಾರಿ ಬಸ್‌ನಲ್ಲಿ ಸಿಎಂ ವಿಜಯ್ ಸವಾರಿ! ಕಂಡಕ್ಟರ್ ಜೊತೆ ಫೋಟೋ, ಡ್ರೈವರ್‌ಗೆ ಬೆನ್ನು ತಟ್ಟಿದ ವಿಡಿಯೋ ವೈರಲ್!
Published on
ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿ ಹಾಗೂ ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಜೋಸೆಫ್ ವಿಜಯ್(Vijay Bus Ride) ಅವರು ಗುರುವಾರ ಚೆನ್ನೈನಲ್ಲಿ ಸಾಮಾನ್ಯರಂತೆ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸುವ ಮೂಲಕ ಸಾರ್ವಜನಿಕರ ಹೃದಯ ಗೆದ್ದಿದ್ದಾರೆ. ಚೆನ್ನೈನಲ್ಲಿ ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯ 300 ಹೊಸ ಸರ್ಕಾರಿ ಬಸ್‌ಗಳ ಸೇವೆಗೆ ಚಾಲನೆ ನೀಡಿದ ಸಿಎಂ, ತಾವೂ ಕೂಡ ಒಂದು ಬಸ್ ಹತ್ತಿ ನಗರದ ರಸ್ತೆಗಳಲ್ಲಿ ಸಂಚರಿಸಿದರು. ಸಿಎಂ ವಿಜಯ್ ಅವರು ಬಸ್ ನಿರ್ವಾಹಕ (ಕಂಡಕ್ಟರ್) ಮತ್ತು ಚಾಲಕನೊಂದಿಗೆ (ಡ್ರೈವರ್) ಅತ್ಯಂತ ಆತ್ಮೀಯವಾಗಿ ಸಂಭಾಷಣೆ ನಡೆಸುತ್ತಿರುವ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.
ರಾಜ್ಯದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಸಂಪರ್ಕವನ್ನು ಸುಧಾರಿಸಲು ತಮಿಳುನಾಡು ಸರ್ಕಾರವು ಈ 300 ಹೊಸ ಬಸ್‌ಗಳ ಸಮೂಹವನ್ನು ಪರಿಚಯಿಸಿದೆ. ಇದರ ಉದ್ಘಾಟನಾ ಕಾರ್ಯಕ್ರಮದ ಬಳಿಕ ಸಿಎಂ ವಿಜಯ್ ಅವರ ಈ ಸರಳ ನಡೆ ಅಭಿಮಾನಿಗಳು ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಕಂಡಕ್ಟರ್ ಜೊತೆ ಮಾತುಕತೆ, ಡ್ರೈವರ್‌ಗೆ ಬೆನ್ನು ತಟ್ಟಿದ ಸಿಎಂ!

ಬಿಳಿ ಶರ್ಟ್ ಧರಿಸಿ, ಕೂಲಿಂಗ್ ಗ್ಲಾಸ್ ಹಾಕಿಕೊಂಡಿದ್ದ ಮುಖ್ಯಮಂತ್ರಿ ವಿಜಯ್ ಅವರು ಚಲಿಸುತ್ತಿದ್ದ ಹೊಸ ಬಸ್‌ನ ಸೀಟಿನಲ್ಲಿ ಕುಳಿತು ಪ್ರಯಾಣಿಸಿದರು. ಈ ವೇಳೆ ಅವರೊಂದಿಗೆ ಬಂದಿದ್ದ ಸಚಿವರು ಪಕ್ಕದಲ್ಲೇ ನಿಂತಿದ್ದರು. ಬಸ್‌ನಲ್ಲಿ ಪ್ರಯಾಣಿಸುವಾಗ ಸಿಎಂ ವಿಜಯ್ ಅವರು ಅಲ್ಲಿನ ಕಂಡಕ್ಟರ್ ಜೊತೆ ದೀರ್ಘಕಾಲ ಮಾತನಾಡುತ್ತಾ ಅವರ ಕುಂದುಕೊರತೆಗಳನ್ನು ಆಲಿಸಿದ್ದಾರೆ.
ಇಷ್ಟೇ ಅಲ್ಲದೆ, ಕಂಡಕ್ಟರ್ ಹೆಗಲ ಮೇಲೆ ಕೈಹಾಕಿ ಅತ್ಯಂತ ನಗುತ್ತಾ ಫೋಟೋಗೆ ಫೋಸ್ ನೀಡಿದರು. ಬಸ್‌ನಿಂದ ಇಳಿಯುವ ಮುನ್ನ ಚಾಲಕನ ಬಳಿ ತೆರಳಿ ಅತ್ಯಂತ ಪ್ರೀತಿಯಿಂದ ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಬಸ್ ಕಿಟಕಿಯ ಮೂಲಕ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳು ಮತ್ತು ಸಾರ್ವಜನಿಕರತ್ತ ಕೈಬೀಸಿ ಮುಖ್ಯಮಂತ್ರಿಗಳು ಶುಭ ಕೋರಿದರು. ಈ ಎಲ್ಲಾ ಅಪರೂಪದ ಕ್ಷಣಗಳ ವಿಡಿಯೋ ತುಣುಕುಗಳನ್ನು ಪಿಟಿಐ ಸೇರಿದಂತೆ ಹಲವು ಮಾಧ್ಯಮಗಳು ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ‘ನಮ್ಮ ಸಿಎಂ’ ಎಂಬ ಟ್ರೆಂಡ್ ಸೃಷ್ಟಿಯಾಗಿದೆ.

ರಾಜಕೀಯದಲ್ಲೂ ಸೂಪರ್‌ಸ್ಟಾರ್ ಆದ 'ದಳಪತಿ'

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ವಿಜಯ್ ಅವರು ಸಾರ್ವಜನಿಕವಾಗಿ ಇಷ್ಟು ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲು ಎನ್ನಲಾಗಿದೆ. ಮೂರು ದಶಕಗಳಿಗೂ ಹೆಚ್ಚು ಕಾಲ ತಮಿಳು ಚಿತ್ರರಂಗದಲ್ಲಿ ನಾಳಯ ತೀರ್ಪು, ಗಿಲ್ಲಿ, ತುಪ್ಪಾಕಿ, ವಾರಿಸು ಮತ್ತು ಲಿಯೋ ನಂತಹ ಹತ್ತಾರು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿರುವ ನಟ ವಿಜಯ್, 2024ರಲ್ಲಿ ತಮಿಳಗ ವೆಟ್ರಿ ಕಳಗಂ (TVK) ಪಕ್ಷವನ್ನು ಸ್ಥಾಪಿಸುವ ಮೂಲಕ ರಾಜಕೀಯಕ್ಕೆ ಧುಮುಕಿದ್ದರು.
ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲೇ ಭರ್ಜರಿ ಯಶಸ್ಸು ಸಾಧಿಸಿದ ಅವರು, 2026ರ ಮೇ 10ರಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದೀಗ ಸಿನಿಮಾ ರಂಗದ ಗ್ಲಾಮರ್ ಪಕ್ಕಕ್ಕಿಟ್ಟು ಅಧಿಕೃತವಾಗಿ ಜನರ ಮಧ್ಯೆ ಇಳಿದು ಕೆಲಸ ಮಾಡುತ್ತಿರುವ ಅವರ ಶೈಲಿ ತಮಿಳುನಾಡು ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net