ಪ್ರತಿಭಟನೆ ಸಮಯದಲ್ಲಿ ಕುರ್ಮಿಗಳ ವಿರುದ್ಧ ಟಿಎಂಸಿ ಸರ್ಕಾರ ದಾಖಲಿಸಿದ್ದ ಎಲ್ಲಾ ಪ್ರಕರಗಳನ್ನು ಹಿಂಪಡೆದ ಸಿಎಂ ಸುವೇಂದು ಅಧಿಕಾರಿ | CM Suvendu Adhikari

ಮುಖ್ಯಮಂತ್ರಿ ಸುವೇಂದು ಅಧಿಕಾರಿ
ಮುಖ್ಯಮಂತ್ರಿ ಸುವೇಂದು ಅಧಿಕಾರಿ
Published on
ಕೋಲ್ಕತ್ತಾ: ಹಿಂದಿನ ತೃಣಮೂಲ ಕಾಂಗ್ರೆಸ್ ಸರ್ಕಾರವು ಪ್ರತಿಭಟನೆಯ ಸಂದರ್ಭದಲ್ಲಿ ಕುರ್ಮಿ ಸಮುದಾಯದ ವ್ಯಕ್ತಿಗಳ ವಿರುದ್ಧ ಹೂಡಿದ್ದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲಾಗುವುದು ಮತ್ತು ರದ್ದುಗೊಳಿಸಲಾಗುವುದು ಎಂದು ಭಾನುವಾರ(ಸೆ. 20) ಮುಖ್ಯಮಂತ್ರಿ ಸುವೇಂದು ಅಧಿಕಾರಿ(CM Suvendu Adhikari) ಘೋಷಣೆ ಮಾಡಿದ್ದಾರೆ.
ಪುರುಲಿಯಾದಲ್ಲಿ ನಡೆದ ಕರಮ್ ಉತ್ಸವದಲ್ಲಿ ಭಾಗವಹಿಸಿದ ಅಧಿಕಾರಿ, ಟಿಎಂಸಿ ಸರ್ಕಾರ ಪುರುಲಿಯಾದಲ್ಲಿ ಅಭಿವೃದ್ಧಿಯನ್ನು ಕಡೆಗಣಿಸಿತ್ತು. ಕುರ್ಮಿ ​​ಸಮುದಾಯದವರಲ್ಲಿ ಒಡಕನ್ನು ಉಂಟುಮಾಡಿತು. ಅವರು ಒಗ್ಗಟ್ಟಾಗಿರುವುದನ್ನು ಅದು ಎಂದಿಗೂ ಬಯಸಲಿಲ್ಲ ಎಂದು ಆರೋಪಿಸಿದ್ದಾರೆ.
ನಮ್ಮ ಸರ್ಕಾರ ಪುರುಲಿಯಾಕ್ಕೆ ಒಂದು ವರ್ಷದಲ್ಲಿ 1 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ತರಲಿದೆ. ಪುರುಲಿಯಾದ ರಘುನಾಥಪುರದಲ್ಲಿ 4,000 ಕೋಟಿ ರೂಪಾಯಿ ವೆಚ್ಚದ ಸಮಗ್ರ ಉಕ್ಕು ಉತ್ಪಾದನಾ ಘಟಕಕ್ಕೆ ನಾನು ಇತ್ತೀಚೆಗಷ್ಟೇ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಮತ್ತು ಇತರ ಕ್ಷೇತ್ರಗಳಲ್ಲೂ ಹೂಡಿಕೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ಈ ವರ್ಷ ಕುರ್ಮಿ ​​ಸಮುದಾಯದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 50 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಸ್ಥಗಿತಗೊಂಡಿರುವ ಕುರ್ಮಿ ​​ಅಭಿವೃದ್ಧಿ ಮಂಡಳಿಯನ್ನು ಶೀಘ್ರದಲ್ಲೇ ಪುನರಾರಂಭಿಸಲಾಗುವುದು. ಹಲವಾರು ಮನವಿಗಳನ್ನು ಸ್ವೀಕರಿಸಿದ ನಂತರ, ಕುರ್ಮಿ ​​ಸಮುದಾಯವನ್ನು ಏಕರೂಪ ನಾಗರಿಕ ಸಂಹಿತೆಯ ವ್ಯಾಪ್ತಿಯಿಂದ ಹೊರಗಿಡಲಾಗುವುದು ಎಂದು ಘೋಷಿಸಿದ್ದಾರೆ. 
ಕುರ್ಮಾಲಿ ಭಾಷೆಗೆ ಶೀಘ್ರದಲ್ಲೇ ಸಾಂವಿಧಾನಿಕ ಮಾನ್ಯತೆ ನೀಡಲಾಗುವುದು. ಮತ್ತು ಅದನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಜೊತೆಗೆ ಉಡಾನ್ ಯೋಜನೆಯಡಿ ಪುರುಲಿಯಾದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗಲಿದ್ದು , ಸೆಪ್ಟೆಂಬರ್ 28 ರಂದು ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net