ದಿಗ್ವಿಜಯ್ ಸಿಂಗ್ ಆರ್​ಎಸ್ಎಸ್ ಶ್ಲಾಘನೆಗೆ ಸೋನಿಯಾ ಗಾಂಧಿಯನ್ನು ಹೊಗಳಿ ಸಿಎಂ ರೇವಂತ್ ರೆಡ್ಡಿ ಕೌಂಟರ್ | CM Revanth Reddy

ಸಿಎಂ ರೇವಂತ್ ರೆಡ್ಡಿ ಮತ್ತು ಸೋನಿಯಾ ಗಾಂಧಿ
ಸಿಎಂ ರೇವಂತ್ ರೆಡ್ಡಿ ಮತ್ತು ಸೋನಿಯಾ ಗಾಂಧಿ
Published on
ನವದೆಹಲಿ: ಬಿಜೆಪಿ ಹಿರಿಯ ನಾಯಕ ಎಲ್​.ಕೆ.ಅಡ್ವಾಣಿ ಮುಂದೆ ನೆಲದ ಮೇಲೆ ಕುಳಿತಿದ್ದ ನರೇಂದ್ರ ಮೋದಿ ಮುಂದೆ ಸಿಎಂ ಮತ್ತು ಪ್ರಧಾನಿಯಾಗಿದ್ದನ್ನು ಆರ್​ಎಸ್​ಎಸ್​ನ ಸಂಘಟನಾ ಶಕ್ತಿಯ ಬಲ ಎಂದು ಶ್ಲಾಘಿಸಿದ್ದ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್​ಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ(CM Revanth Reddy) ಸಾಫ್ಟ್​ ಆಗಿ ಕೌಂಟರ್ ನೀಡಿದ್ದಾರೆ.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರನ್ನು ಹೊಗಳಿರುವ ಸಿಎಂ ರೇವಂತ್, ಅವರ ನಾಯತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಪಿ.ವಿ.ನರಸಿಂಹ್ ರಾವ್ ಮತ್ತು ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಹುದ್ದೆಗೇರುಸುವಲ್ಲಿನ ಪಾತ್ರವನ್ನು ಉಲ್ಲೇಖಿಸಿದ್ದಾರೆ.
ಈ ಕುರಿತು ಕಾಂಗ್ರೆಸ್ ಪಕ್ಷದ 140ನೇ ಸಂಸ್ಥಾಪನಾ ದಿನದಂದು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಅವರು, ಪಕ್ಷವು ಆಧುನಿಕ ಭಾರತದ ಪ್ರತಿಯೊಂದು ನಿರ್ಣಾಯಕ ಅಧ್ಯಾಯವನ್ನು ರೂಪಿಸಿದೆ. ಕಾಂಗ್ರೆಸ್ ಭಾರತದ ಜನರಿಗೆ ಒಂದು ಶಕ್ತಿಯಾಗಿ 140 ವರ್ಷಗಳ ಹಿಂದೆ ಈ ದಿನ ಜನಿಸಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಕಥೆಯು ಚಲನೆಯಲ್ಲಿರುವ ಭಾರತೀಯ ಪ್ರಜಾಪ್ರಭುತ್ವದ ಕಥೆಯಾಗಿದೆ. ಶ್ರೀಮತಿ ಸೋನಿಯಾ ಗಾಂಧಿ ಅವರ ನಾಯಕತ್ವವನ್ನು ನಾವು ಪ್ರತಿಬಿಂಬಿಸಿದಾಗ, ನಾವು ಸೇವೆ, ಬದ್ಧತೆ, ನೀತಿಶಾಸ್ತ್ರ ಮತ್ತು ಮೌಲ್ಯಗಳನ್ನು ಕಂಡುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಮುಂದುವರೆದು, ಸೋನಿಯಾ ಗಾಂಧಿ ಅವರ ನಾಯಕತ್ವದಲ್ಲಿ, ತೆಲಂಗಾಣದ ದೂರದ ಹಳ್ಳಿಯಿಂದ ತಮ್ಮ ಸಾರ್ವಜನಿಕ ಜೀವನವನ್ನು ಆರಂಭಿಸಿದ ಪಿ.ವಿ. ನರಸಿಂಹ ರಾವ್ ಅವರು ದೇಶದ ಪ್ರಧಾನಿ ಹುದ್ದೆ ಏರಲು ಸಾಧ್ಯವಾಯಿತು. ಹಾಗೆಯೇ ಡಾ. ಮನಮೋಹನ್ ಸಿಂಗ್ ಅವರಂತಹ ಅರ್ಥಶಾಸ್ತ್ರಜ್ಞರನ್ನು ಪ್ರಧಾನಿಯನ್ನಾಗಿ ಮಾಡಿದರು. ಭಾರತದ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸುವುದರಿಂದ ಹಿಡಿದು ಸಂವಿಧಾನವನ್ನು ರೂಪಿಸುವವರೆಗೆ, ಪ್ರಜಾಪ್ರಭುತ್ವ ಸಂಸ್ಥೆಗಳನ್ನು ನಿರ್ಮಿಸುವುದರಿಂದ ಹಿಡಿದು ವೈವಿಧ್ಯಮಯ ರಾಷ್ಟ್ರವನ್ನು ಒಗ್ಗೂಡಿಸುವವರೆಗೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಆಧುನಿಕ ಭಾರತದ ಪ್ರತಿಯೊಂದು ನಿರ್ಣಾಯಕ ಅಧ್ಯಾಯವನ್ನು ರೂಪಿಸಿದೆ ಎಂದು ಪ್ರತಿಪಾದಿಸಿದ್ದಾರೆ.

ದಿಗ್ವಿಜಯ್ ಸಿಂಗ್ ಹೇಳಿದ್ದೇನು?

1990ರ ದಶಕದ ಗುಜರಾತ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿರಿಯ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಬಳಿ ನೆಲದ ಮೇಲೆ ಕುಳಿತಿರುವ ಯುವ ನರೇಂದ್ರ ಮೋದಿಯನ್ನು ಕಪ್ಪು-ಬಿಳುಪಿನ ಫೋಟೋವನ್ನು ಸಾಮಾಜಿಕ ಪ್ರಶ್ನೋತ್ತರ ವೆಬ್​ಸೈಟ್ ಕೋರಾದಿಂದ ಎತ್ತಿಕೊಂಡು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ದಿಗ್ವಿಜಯ್ ಸಿಂಗ್ ಪಕ್ಷದ ಸಂಘಟನೆಯ ಶಕ್ತಿಯನ್ನು ಹೊಗಳಿದ್ದಾರೆ.
X ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ನಾನು ಈ ಚಿತ್ರವನ್ನು Quora ಸೈಟ್‌ನಲ್ಲಿ ನೋಡಿದೆ. ಇದು ತುಂಬಾ ಪ್ರಭಾವಶಾಲಿಯಾಗಿದೆ. RSSನ ತಳಮಟ್ಟದ ಸ್ವಯಂಸೇವಕ ಮತ್ತು ಜನಸಂಘದ ಕಾರ್ಯಕರ್ತ ಹೇಗೆ ನಾಯಕರ ಪಾದಗಳ ಮುಂದೆ ನೆಲದ ಮೇಲೆ ಕುಳಿತು ರಾಜ್ಯದ ಸಿಎಂ ಮತ್ತು ದೇಶದ ಪ್ರಧಾನ ಮಂತ್ರಿಯಾದರು? ಇದು ಸಂಘಟನೆಯ ಶಕ್ತಿ. ಜೈ ಸಿಯಾ ರಾಮ್ ಎಂದು ಬರೆದು, ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಸೇರಿ ಹಲವು ನಾಯಕರಿಗೆ ಟ್ಯಾಗ್ ಮಾಡಿದ್ದಾರೆ.
ಇನ್ನೂ ಪೋಸ್ಟ್ ಪಕ್ಷದಲ್ಲಿ ವಿವಾದವನ್ನು ಎಬ್ಬಿಸುತ್ತಿದ್ದಂತೆ ಸ್ಪಷ್ಟೀಕರಣ ನೀಡಿರುವ ಮಾಜಿ ಸಿಎಂ ದಿಗ್ವಿಜಯ್ ಸಿಂಗ್, ನಾನು ಆರ್‌ಎಸ್‌ಎಸ್‌ನ ಸಿದ್ಧಾಂತವನ್ನು ವಿರೋಧಿಸುತ್ತೇನೆ. ಅವರು ಸಂವಿಧಾನ ಅಥವಾ ದೇಶದ ಕಾನೂನುಗಳನ್ನು ಗೌರವಿಸುವುದಿಲ್ಲ, ಅದು ನೋಂದಾಯಿಸದ ಸಂಸ್ಥೆ. ಆದರೆ ಅವರ ಸಂಘಟನಾ ಸಾಮರ್ಥ್ಯವನ್ನು ಮೆಚ್ಚುತ್ತೇನೆ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net