ಗುಮಾಸ್ತರಿಗೆ ಗುನ್ನಾ ಕೊಟ್ಟ ಡಿಎಂ: ಟೈಪಿಂಗ್​ ಬರದ ಕ್ಲರ್ಕ್​ಗಳನ್ನು ಪ್ಯೂನ್ ಹುದ್ದೆಗೆ ಹಿಂಬಡ್ತಿ ನೀಡಿದ ಜಿಲ್ಲಾಡಳಿತ! Clerk To Peon Demotion

 ಕ್ಲರ್ಕಗಳನ್ನು ಪ್ಯೂನ್​ ಹುದ್ದೆಗೆ ಹಿಂಬಡ್ತಿ ನೀಡಿದ ಜಿಲ್ಲಾಡಳಿತ (ಸಾಂದರ್ಭಿಕ ಚಿತ್ರ))
ಕ್ಲರ್ಕಗಳನ್ನು ಪ್ಯೂನ್​ ಹುದ್ದೆಗೆ ಹಿಂಬಡ್ತಿ ನೀಡಿದ ಜಿಲ್ಲಾಡಳಿತ (ಸಾಂದರ್ಭಿಕ ಚಿತ್ರ))
Published on

ಪ್ರಮುಖ ಮುಖ್ಯಾಂಶಗಳು

  • ಮೂರು ವರ್ಷವಾದರೂ ಟೈಪಿಂಗ್​ ಕಲಿಯದ ಕ್ಲರ್ಕಗಳು
  • ಕ್ಲರ್ಕಗಳನ್ನು ಪ್ಯೂನ್​ ಹುದ್ದೆಗೆ ಹಿಂಬಡ್ತಿ ನೀಡಿದ ಜಿಲ್ಲಾಡಳಿತ
  • ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಘಟನೆ
ಕಾನ್ಪುರ: ಸಾಮಾನ್ಯವಾಗಿ ಸರ್ಕಾರಿ ಕೆಲಸ ಸೇರಿದರೆ ಸಾಕು, ಆರಾಮವಾಗಿ ಇರಬಹುದು ಎಂದು ಅನೇಕರು ಭಾವಿಸುತ್ತಾರೆ. ಆದರೆ, ಕೆಲಸದಲ್ಲಿ ದಕ್ಷತೆ ಇಲ್ಲದಿದ್ದರೆ ಪರಿಸ್ಥಿತಿ ಏನಾಗಬಹುದು ಎಂಬುದಕ್ಕೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಈ ಘಟನೆಯೇ ಸಾಕ್ಷಿಯಾಗಿದೆ. ಇಲ್ಲಿನ ಜಿಲ್ಲಾ ಮ್ಯಾಜಿಸ್ಟ್ರೇಟ್ (DM) ಜಿತೇಂದ್ರ ಪ್ರತಾಪ್ ಸಿಂಗ್ ಅವರು ತೆಗೆದುಕೊಂಡ ಒಂದು ನಿರ್ಧಾರ ಈಗ ಇಡೀ ಕಲೆಕ್ಟರೇಟ್‌ನಲ್ಲಿ ನಡುಕ ಹುಟ್ಟಿಸಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.

ಕ್ಲರ್ಕ್‌ಗಳಾದವರು ಪ್ಯೂನ್‌ಗಳಾದ ಕಥೆ!

ಕಾನ್ಪುರ ಕಲೆಕ್ಟರೇಟ್‌ನಲ್ಲಿ ಜೂನಿಯರ್ ಕ್ಲರ್ಕ್‌ಗಳಾಗಿ ಕೆಲಸ ಮಾಡುತ್ತಿದ್ದ ನೇಹಾ ಶ್ರೀವಾಸ್ತವ, ಅಮಿತ್ ಯಾದವ್ ಮತ್ತು ಪ್ರೇಮ್‌ನಾಥ್ ಯಾದವ್ ಎಂಬುವವರಿಗೆ ಈಗ ದೊಡ್ಡ ಶಾಕ್ ಎದುರಾಗಿದೆ. ಈ ಮೂವರು ಗುಮಾಸ್ತರನ್ನು ಅವರ ಹುದ್ದೆಯಿಂದ ಕೆಳಗಿಳಿಸಿ, ಪ್ಯೂನ್ (IV ವರ್ಗದ ನೌಕರರು) ಕೆಲಸಕ್ಕೆ ನೇಮಿಸಲಾಗಿದೆ (Clerk To Peon Demotion). ಕಲೆಕ್ಟರೇಟ್ ಇತಿಹಾಸದಲ್ಲೇ ಇಂತಹ ಘಟನೆ ನಡೆದಿರುವುದು ಇದೇ ಮೊದಲು ಎನ್ನಲಾಗುತ್ತಿದೆ.
ತಪ್ಪಿದ್ದು ಎಲ್ಲಿ?
ಈ ಮೂವರು ನೌಕರರು ಮೃತರ ಅವಲಂಬಿತರ ಕೋಟಾದ ಅಡಿಯಲ್ಲಿ ಜೂನಿಯರ್ ಕ್ಲರ್ಕ್‌ಗಳಾಗಿ ಕೆಲಸಕ್ಕೆ ಸೇರಿದ್ದರು. ಸರ್ಕಾರಿ ನಿಯಮದ ಪ್ರಕಾರ, ಈ ಹುದ್ದೆಗೆ ಸೇರಿದ ಒಂದು ವರ್ಷದೊಳಗೆ ಟೈಪಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ. ಅಂದರೆ, ನಿಮಿಷಕ್ಕೆ ಕನಿಷ್ಠ 25 ಪದಗಳನ್ನು ಟೈಪ್ ಮಾಡುವ ವೇಗ ಹೊಂದಿರಬೇಕು. ಆದರೆ, ಈ ಮೂವರು ನೌಕರರು ಮೂರು ವರ್ಷ ಕಳೆದರೂ ಈ ವೇಗವನ್ನು ಸಾಧಿಸಲು ವಿಫಲರಾಗಿದ್ದಾರೆ.

ಪದೇ ಪದೇ ಅವಕಾಶ ನೀಡಿದರೂ ಸುಧಾರಿಸಲಿಲ್ಲ!

ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಈ ನೌಕರರಿಗೆ ಸುಧಾರಿಸಿಕೊಳ್ಳಲು ಸಾಕಷ್ಟು ಅವಕಾಶ ನೀಡಿದ್ದರು. 2023-24ರಲ್ಲಿ ನಡೆದ ಮೊದಲ ಪರೀಕ್ಷೆಯಲ್ಲಿ ಫೇಲ್ ಆದಾಗ, ಅವರ ವೇತನ ಹೆಚ್ಚಳವನ್ನು ತಡೆಹಿಡಿದು ಮುಂದಿನ ಪರೀಕ್ಷೆಯೊಳಗೆ ಕಲಿತುಕೊಳ್ಳಿ ಎಂದು ತಿಳಿಹೇಳಿದ್ದರು. ಆದರೆ, 2025ರಲ್ಲಿ ನಡೆದ ಅಂತಿಮ ಪರೀಕ್ಷೆಯಲ್ಲೂ ಈ ಮೂವರು ಅತಿ ಕಡಿಮೆ ವೇಗದಲ್ಲಿ ಟೈಪ್ ಮಾಡಿದ್ದು ಕಂಡುಬಂದಿದೆ.
ಸತತ ಮೂರು ವರ್ಷಗಳ ಕಾಲ ಅವಕಾಶ ನೀಡಿದರೂ ಇವರು ಕನಿಷ್ಠ ವೇಗ ತಲುಪದ ಕಾರಣ, ಡಿಎಂ ಜಿತೇಂದ್ರ ಪ್ರತಾಪ್ ಸಿಂಗ್ ಅವರು ಕಠಿಣ ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ. ಕೆಲಸ ಮಾಡಲು ಯೋಗ್ಯತೆ ಇಲ್ಲದಿದ್ದರೆ ಗುಮಾಸ್ತನ ಕುರ್ಚಿಯಲ್ಲಿ ಕೂರುವ ಹಕ್ಕಿಲ್ಲ ಎಂಬ ಸಂದೇಶ ರವಾನಿಸಿ, ಮೂವರನ್ನೂ ಪ್ಯೂನ್ ಹುದ್ದೆಗೆ ಹಿಂಬಡ್ತಿ ನೀಡಿದ್ದಾರೆ.

ನೌಕರರ ವಲಯದಲ್ಲಿ ಭೀತಿ

ನಗರದ ಎಡಿಎಂ ಡಾ. ರಾಜೇಶ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸೇವಾ ನಿಯಮಗಳ ಪ್ರಕಾರ ಟೈಪಿಂಗ್ ಕಡ್ಡಾಯ. ಪದೇ ಪದೇ ಅವಕಾಶ ನೀಡಿದರೂ ಪ್ರಯೋಜನವಾಗದ ಕಾರಣ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಿರ್ಧಾರ ಪ್ರಕಟವಾಗುತ್ತಿದ್ದಂತೆ ಕಲೆಕ್ಟರೇಟ್‌ನ ಇತರ ಕೆಲಸಗಾರರಲ್ಲೂ ಆತಂಕ ಶುರುವಾಗಿದೆ. ಕೆಲಸದಲ್ಲಿ ನಿರ್ಲಕ್ಷ್ಯ ತೋರಿದರೆ ಅಥವಾ ಅಸಮರ್ಥರಾಗಿದ್ದರೆ ಅಧಿಕಾರಿಗಳು ಸುಮ್ಮನಿರುವುದಿಲ್ಲ ಎನ್ನುವುದು ಈಗ ಎಲ್ಲರಿಗೂ ಮನವರಿಕೆಯಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net