_1764870947877.webp?w=480&auto=format%2Ccompress&fit=max)
_1764870947877.webp?w=480&auto=format%2Ccompress&fit=max)
ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ, ಕೇರಳ, ತಮಿಳುನಾಡು, ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಎಸ್ಐಆರ್ ಕಾರ್ಯ ನಡೆಯುತ್ತಿದೆ. ಕಳೆದ ಒಂದು ತಿಂಗಳಲ್ಲಿ 35-40 ಬಿಎಲ್ಒಗಳು ವಿವಿಧ ರಾಜ್ಯಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಗಂಭೀರವಾದದ್ದು. ಆಧಾರ್ ಕಾರ್ಡ್ ದುರ್ಬಳಕೆ ಆಪಾದನೆ, ಜೈಲಿನ ಭಯ ತೋರಿಸಿ ಕೆಲಸ ಮಾಡಿಸುವುದು, ವಿವಾಹಕ್ಕೂ ರಜೆ ನಿರಾಕರಿಸುವುದು- ಇಂತಹ ಘಟನೆಗಳು ಮಾನವೀಯತೆ ಬಗ್ಗೆಯೇ ಪ್ರಶ್ನೆ ಹುಟ್ಟಿಸುವಂತಿವೆ.
ಕೆಲಸದ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಬಿಎಲ್ಒಗಳ ಕುಟುಂಬಗಳಿಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶವೂ ದೊರೆತಿದೆ. ಸುಪ್ರೀಂಕೋರ್ಟ್ನ ನಿರ್ದೇಶನಗಳನ್ನು ಸಂಬಂಧಿಸಿದ ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು. ನಿಜವಾದ ಅರ್ಥದಲ್ಲಿ ಅವುಗಳನ್ನು ಜಾರಿಗೆ ತರಬೇಕು. ಆಗ ಮಾತ್ರ ಎಸ್ಐಆರ್ ಪ್ರಕ್ರಿಯೆ ಯಾವುದೇ ಗೊಂದಲಗಳಿಲ್ಲದೆ ಮುಂದುವರಿಯಲು ಸಾಧ್ಯ.
ಲಕ್ಷ ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆಯಲಾಗಿದೆ ಎಂಬ ಆರೋಪ ಪ್ರಸ್ತುತ ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ಎರಡು ದಿನ ಸಾಕಷ್ಟು ಗದ್ದಲಕ್ಕೆ ಕಾರಣವಾಗಿದೆ. ಎಸ್ಐಆರ್ ವಿರೋಧಿ ಗದ್ದಲದಿಂದ ಕಲಾಪ ವ್ಯರ್ಥವಾಗಿದೆ. ಕಾಂಗ್ರೆಸ್, ಡಿಎಂಕೆ, ಟಿಎಂಸಿ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಘೊಷಣೆಗಳನ್ನು ಕೂಗಿ ಪ್ರತಿಭಟಿಸಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಇಡೀ ಅಧಿವೇಶನದ ಕಲಾಪ ವ್ಯರ್ಥವಾಗುತ್ತದೆ ಎಂದರಿತ ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಉಭಯ ಪಕ್ಷಗಳ ಸಭೆ ನಡೆಸಿ ಒಮ್ಮತದ ತೀರ್ಮಾನಕ್ಕೆ ಬಂದಿದ್ದಾರೆ.
ಡಿ. 9ರಂದು ಚುನಾವಣಾ ಸುಧಾರಣೆಗಳ ಕುರಿತ ಚರ್ಚೆಯಲ್ಲಿ ಎಸ್ಐಆರ್ ವಿಷಯವನ್ನು ಸೇರಿಸುವುದಕ್ಕೆ ಒಪ್ಪಂದ ಆಗಿದೆ. ಇದು ಸ್ವಾಗತಾರ್ಹ ಬೆಳವಣಿಗೆ. ಪ್ರತಿದಿನ ಗದ್ದಲ ಮಾಡಿ ಜನರ ತೆರಿಗೆ ಹಣವನ್ನು ಪೋಲು ಮಾಡುವ ಬದಲು ಸಂಸತ್ನಲ್ಲಿ ಅರ್ಥಪೂರ್ಣ ಚರ್ಚೆ ನಡೆಯಲಿ. ವಿರೋಧ ಪಕ್ಷಗಳು ಸೂಕ್ತ ಸಾಕ್ಷ್ಯಾಧಾರ, ದಾಖಲೆಗಳೊಂದಿಗೆ ತಮ್ಮ ಸಂಶಯಗಳನ್ನು ಮಂಡಿಸಲಿ; ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಈ ಸಂಶಯಗಳಿಗೆ ಸಂಪೂರ್ಣ ಪಾರದರ್ಶಕತೆಯೊಂದಿಗೆ ಉತ್ತರ ನೀಡಲಿ.
ಚುನಾವಣಾ ಮತದಾರರ ಪಟ್ಟಿಯ ಶುದ್ಧೀಕರಣ ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯ. ಆದರೆ ಅದು ಮಾನವೀಯತೆಯನ್ನು ಮರೆತು ಮಾಡುವಂಥದ್ದಲ್ಲ. ದೇಶದ ಯಾವ ನಾಗರಿಕನಿಗೂ ಈ ಪ್ರಕ್ರಿಯೆಯಲ್ಲಿ ಅನ್ಯಾಯ ಆಗಬಾರದು. ಸಂಸತ್ ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಗೊಂದಲ ದೂರ ಮಾಡಲಿ, ಜನತಂತ್ರವನ್ನು ಬಲಪಡಿಸಲಿ.