ಶುದ್ಧ ಕುಡಿಯುವ ನೀರು ಮರೀಚಿಕೆ

ಶುದ್ಧ ಕುಡಿಯುವ ನೀರು ಮರೀಚಿಕೆ
ಶುದ್ಧ ಕುಡಿಯುವ ನೀರು ಮರೀಚಿಕೆ
Published on
ಶುದ್ಧ ಕುಡಿಯುವ ನೀರಿನ ಲಭ್ಯತೆಯಲ್ಲಿ ಜಗತ್ತಿನ 172 ದೇಶಗಳಲ್ಲಿ ಭಾರತ 138ನೇ ಸ್ಥಾನದಲ್ಲಿದೆ ಎಂಬುದು ಸ್ಥಿತಿಯ ಗಂಭೀರತೆಯನ್ನು ಸೂಚಿಸುತ್ತದೆ. ಭಾರತದಲ್ಲಿ ಮನೆಗಳಿಗೆ ನಲ್ಲಿ ನೀರು ಪೂರೈಕೆಯ ಜಾಲ ವಿಸ್ತರಣೆಯಾಗಿದ್ದರೂ, ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಇನ್ನೂ ದಯನೀಯವಾಗಿದೆ. ಯಾವುದೇ ರಾಜಕೀಯ ಪಕ್ಷಗಳ ಕಾರ್ಯಸೂಚಿಯಲ್ಲಿ ‘ಶುದ್ಧ ಕುಡಿಯುವ ನೀರು’ ಪ್ರಮುಖ ಸ್ಥಾನ ಪಡೆದಿಲ್ಲ. ಜಲಮೂಲಗಳ ಶೋಚನೀಯ ಪರಿಸ್ಥಿತಿ ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟಾಗಿಸಿದೆ.  
ಮಧ್ಯಪ್ರದೇಶದ ವಾಣಿಜ್ಯ ರಾಜಧಾನಿ ಇಂದೋರ್​ನ ಭಗೀರಥಪುರ ಪ್ರದೇಶದಲ್ಲಿ ಕಲುಷಿತ ನೀರಿನ ಸೇವನೆಯಿಂದ ಸಂಭವಿಸಿದ ದುರಂತ ದೇಶವನ್ನು ಬೆಚ್ಚಿಬೀಳಿಸಿದೆ. ಕುಡಿಯುವ ನೀರು ಪೂರೈಸುವ ಪೈಪ್​ನಲ್ಲೇ ಕೊಳಚೆ ನೀರು ಸೇರಿ, ಜನರು ಅದೇ ನೀರನ್ನು ಸೇವಿಸಿದ್ದು ದುರಂತಕ್ಕೆ ಕಾರಣವಾಗಿದೆ. ವಾಂತಿಭೇದಿಯಿಂದ ಐದು ತಿಂಗಳ ಮಗು ಸೇರಿದಂತೆ 15 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಇದು ಯಾವುದೋ ಒಂದು ನಗರ ಮತ್ತು ರಾಜ್ಯಕ್ಕೆ ಸೀಮಿತವಾದ ಸಮಸ್ಯೆಯಲ್ಲ. ಜನರ ಆರೋಗ್ಯ ರಕ್ಷಣೆಯಲ್ಲಿ ಶುದ್ಧ ಕುಡಿಯುವ ನೀರಿನ ಪಾತ್ರ ಮಹತ್ವದ್ದು ಎಂಬ ಸರಳಸತ್ಯವನ್ನು ನಮ್ಮ ಆಳುಗರು ಅರ್ಥಮಾಡಿಕೊಂಡಿಲ್ಲ. 
ವರ್ಲ್ಡ್ ಪಾಪ್ಯುಲೇಶನ್ ರಿವ್ಯೂನ ಸ್ವಚ್ಛ ಜಲ ರ್ಯಾಂಕಿಂಗ್-2025ರ ಪ್ರಕಾರ 172 ದೇಶಗಳಲ್ಲಿ ಭಾರತ 132ನೇ ಸ್ಥಾನದಲ್ಲಿದೆ. ಅಂದರೆ, ಈ ವಿಷಯದಲ್ಲಿ ಭಾರತ ತುಂಬ ದೂರ ಕ್ರಮಿಸಬೇಕಿದೆ ಎಂಬುದು ವಾಸ್ತವ. 
ನಲ್ಲಿ ನೀರು ಪೂರೈಕೆಯ ಜಾಲ ವ್ಯಾಪಕವಾಗಿ ವಿಸ್ತಾರವಾಗಿರುವುದಕ್ಕೆ ಭಾರತದಲ್ಲಿ ಸಂಭ್ರಮ ಪಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲೂ ನಲ್ಲಿಗಳ ಸಂಖ್ಯೆ ಹೆಚ್ಚಾಗಿದೆ. ಕಳೆದೊಂದು ದಶಕದಲ್ಲಿ ಹೆಚ್ಚು ಜನರವರೆಗೆ ನೀರು ಪೂರೈಕೆಯಾಗುತ್ತಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಮೇಲ್ನೋಟಕ್ಕೆ ಸ್ವಚ್ಛವಾಗಿ ಕಾಣುವ ಈ ನೀರು ನಿಜಕ್ಕೂ ಸುರಕ್ಷಿತವೆ? ಭಾರತದ ಜಲಸಂಕಷ್ಟವು ಈಗ ಪೂರೈಕೆಗೆ ಸಂಬಂಧಿಸಿದ್ದಲ್ಲ, ಬದಲಾಗಿ ಅದು ಆರೋಗ್ಯ ರಕ್ಷಣೆಗೆ ಎದುರಾಗಿರುವ ಸಂಕಷ್ಟವಾಗಿ ಮಾರ್ಪಟ್ಟಿದೆ ಎಂಬುದನ್ನು ಇಂದೋರ್ ಘಟನೆಯಿಂದ ತಿಳಿಯಬಹುದು. ಜಲ ಮತ್ತು ಆರೋಗ್ಯದ ನಿಟ್ಟಿನಲ್ಲಿ ನಮ್ಮ ರಾಜಕೀಯ ಪಕ್ಷಗಳು, ಅವುಗಳ ನೀತಿಗಳು ಕೂಡ ಗಂಭೀರವಾಗಿಲ್ಲ ಎಂಬುದನ್ನು ಈ ಬೆಳವಣಿಗೆಗಳು ದರ್ಶಿಸುತ್ತಿವೆ.

ಅರ್ಥ ವ್ಯವಸ್ಥೆ ಮೇಲೆ ಹೊರೆ

ವಿಶ್ವ ಆರ್ಥಿಕ ವೇದಿಕೆ ವರದಿ ಪ್ರಕಾರ (World Economic Forum) ಭಾರತದಲ್ಲಿ ಸಂಗ್ರಹಗೊಂಡಿರುವ ನೀರಿನ ಶೇಕಡ 70ರಷ್ಟು ಬಳಕೆಗೆ ಯೋಗ್ಯವಲ್ಲ. ಪರಿಸ್ಥಿತಿ ಎಷ್ಟು ಗಂಭೀರವಾಗಿದೆಯೆಂದರೆ ಪ್ರತಿನಿತ್ಯ 4 ಕೋಟಿ ಲೀಟರ್ ಕೊಳಚೆ ನೀರು ನದಿಗಳು ಹಾಗೂ ಇತರ ಜಲಮೂಲಗಳಿಗೆ ಸೇರುತ್ತಿದೆ. ಆದರೆ, 4 ಕೋಟಿ ಲೀಟರ್ ಪೈಕಿ ಬಹಳ ಸಣ್ಣ ಪ್ರಮಾಣದಲ್ಲಿ ನೀರು ಸಂಸ್ಕರಣೆಯಾಗುತ್ತಿದೆ. ಉಳಿದ ಬಹುತೇಕ ಕೊಳಚೆ ನೀರು ಜಲಮೂಲಗಳಿಗೆ ಸೇರಿ, ಜಲಜೀವಿಗಳು ಹಾಗೂ ಮಾನವನ ದೇಹ ಸೇರುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ಸಮಸ್ಯೆಯ ಬಗ್ಗೆ ಗಮನ ಸೆಳೆದಿದೆ. 
ಭಾರತದಲ್ಲಿನ ಸಾಂಕ್ರಾಮಿಕ ಕಾಯಿಲೆಗಳಿಗೆ 5ನೇ ಮುಖ್ಯ ಕಾರಣ ಕಲುಷಿತ ನೀರು ಎಂದು ಅದು ಕಳವಳ ವ್ಯಕ್ತಪಡಿಸಿದೆ. ವಾಂತಿಭೇದಿ ಕಾಯಿಲೆಯಿಂದ ಶಿಶುಗಳು ಹಾಗೂ ಮಕ್ಕಳ ಮರಣ ಪ್ರಮಾಣ ಹೆಚ್ಚುತ್ತಿದೆ. ವಿಶ್ವಬ್ಯಾಂಕ್​ನ ವರದಿಯ ಪ್ರಕಾರ, ಕಲುಷಿತ ನೀರಿನ ಕಾರಣದಿಂದಲೇ ಭಾರತದ ಅರ್ಥವ್ಯವಸ್ಥೆಯ ಮೇಲೆ 470 ರಿಂದ 610 ಶತಕೋಟಿ ರೂಪಾಯಿಯ ಹೊರೆ ಬೀಳುತ್ತಿದೆ. ಇದರ ನಿವಾರಣೆಯಾಗಬೇಕಾದರೆ, ಶುದ್ಧ ಕುಡಿಯುವ ನೀರಿನ ಲಭ್ಯತೆ ಹಾಗೂ ಪೂರೈಕೆ ಪ್ರಮುಖ ಆದ್ಯತೆಯಾಗಬೇಕು, ಅಭಿವೃದ್ಧಿಯ ಮಾನದಂಡವಾಗಿ ಪರಿಗಣಿಸಬೇಕು.
 ಪರಿಹಾರ ಕ್ರಮಗಳು

ಜಲಮೂಲಗಳ ಸುಸ್ಥಿರ ರಕ್ಷಣೆ

ಜಲಮೂಲಗಳ ಶೋಚನೀಯ ಸ್ಥಿತಿಯೇ ಶುದ್ಧ ಕುಡಿಯುವ ನೀರಿನ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಭಾರತದಲ್ಲಿ ಜಲಮೂಲಗಳ ಸಂಖ್ಯೆಗೆ ಕಡಿಮೆ ಇಲ್ಲ. ಆದರೆ, ಇವುಗಳ ಸುಸ್ಥಿರ ನಿರ್ವಹಣೆ ನಿಟ್ಟಿನಲ್ಲಿ ಸ್ಪಷ್ಟವಾದ ಯೋಜನೆಯೂ ಇಲ್ಲ, ದೂರದೃಷ್ಟಿಯೂ ಇಲ್ಲ. ಜಲಮೂಲಗಳು ನೀರನ್ನು ಶುದ್ಧವಾಗಿ ಸಂಗ್ರಹಿಸಿಟ್ಟುಕೊಳ್ಳಬೇಕಾದರೆ, ಅವುಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳಬೇಕು ಮತ್ತು ಕಾಲಕಾಲಕ್ಕೆ ನಿರ್ವಹಣೆ ಅಗತ್ಯ. 
ಪರಿಸ್ಥಿತಿ ಎಷ್ಟು ಶೋಚನೀಯವಾಗಿದೆಯೆಂದರೆ ನಮ್ಮ ದೇಶದ ಹಳ್ಳಿಗಳಲ್ಲಿ ಕುಡಿಯುವ ನೀರಿನ ಟ್ಯಾಂಕ್​ಗಳೇನೋ ನಿರ್ವಿುಸಲಾಗಿದೆ. ಆ ಟ್ಯಾಂಕುಗಳು ಸ್ವಚ್ಛತೆ ಕಾಣದೆ ವರ್ಷಗಳೇ ಕಳೆದಿವೆ. ಅಷ್ಟೇ ಅಲ್ಲ, ಆ ಟ್ಯಾಂಕ್ ಆವರಣದಲ್ಲೇ ಅಥವಾ ಸುತ್ತಮುತ್ತಲೇ ಕೊಳಚೆ ನೀರು ಸಂಗ್ರಹವಾಗಿರುತ್ತದೆ. ಇನ್ನು, ನದಿ ಮತ್ತು ಕೆರೆಗಳ ಸ್ಥಿತಿಯಂತೂ ದಯನೀಯವಾಗಿದೆ. ಕೈಗಾರಿಕೆಗಳ ತ್ಯಾಜ್ಯ, ಊರಿನ ಕೊಳಚೆ ನೀರು, ಮಾನವನಿರ್ವಿುತ ಇತರ ಚಟುವಟಿಕೆಗಳು ನದಿ, ಕೆರೆಗಳ ಒಡಲನ್ನು ಯಾವ ಪ್ರಮಾಣದಲ್ಲಿ ಮಲೀನಗೊಳಿಸಿವೆ ಎಂದರೆ, ಎಷ್ಟೋ ನದಿ, ಕೆರೆಗಳ ನೀರು ಕುಡಿಯಲು ಬಿಡಿ, ಬಳಕೆಗೂ ಯೋಗ್ಯವಾಗಿ ಉಳಿದಿಲ್ಲ. 
  • ಜಲಮೂಲಗಳ ಸಂರಕ್ಷಣೆಗೆ ಸ್ಥಳೀಯ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಪರಿಣಾಮಕಾರಿ ಹಾಗೂ ಸ್ಪಷ್ಟ ನೀತಿ ಅಗತ್ಯ. 
  •  ಜಲಮೂಲಗಳ ಸುರಕ್ಷತೆ, ನೈರ್ಮಲ್ಯ ಕಾಪಾಡಿಕೊಳ್ಳುವುದು ಸ್ಥಳೀಯ ಆಡಳಿತದ ಜತೆಗೆ, ಸಮುದಾಯದ ಕರ್ತವ್ಯವೂ ಹೌದು. 
  • ಜಲಮೂಲಗಳನ್ನು ಕಲುಷಿತಗೊಳಿಸುವ ಅಥವಾ ಅದಕ್ಕೆ ಹಾನಿಯೆಸಗುವವರಿಗೆ ಭಾರಿ ದಂಡದ ಜತೆಗೆ ಶಿಕ್ಷೆ ವಿಧಿಸುವಂಥ ನಿಯಮ ಅನುಷ್ಠಾನಕ್ಕೆ ಬರಬೇಕು.
  •  ಜಲಮೂಲಗಳ ಸ್ವಚ್ಛತೆ ಮತ್ತು ನಿರ್ವಹಣೆಗೆ ಸ್ಥಳೀಯ ಮಟ್ಟದಲ್ಲಿ ಸಮಿತಿ ರಚಿಸಿಕೊಂಡು, ಉತ್ತರದಾಯಿತ್ವ ವಹಿಸಿಕೊಳ್ಳುವುದು ಅಗತ್ಯ. ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ಜಲಮೂಲಗಳನ್ನು ಸ್ವಚ್ಛಗೊಳಿಸಿ, ನೀರಿನ ಸಂಗ್ರಹಕ್ಕೆ ಅನುವು ಮಾಡಿಕೊಡಬೇಕು.
  • ನಿಗಾ ವ್ಯವಸ್ಥೆ
ನೀರು ಪೂರೈಕೆ ಜಾಲವನ್ನು ನಿರ್ವಿುಸುವುದು ಎಷ್ಟು ಮುಖ್ಯವೋ, ಶುದ್ಧ ಕುಡಿಯುವ ನೀರು ಪೂರೈಕೆ ಆಗುವಂತೆ ನಿಗಾ ವಹಿಸುವುದು ಕೂಡ ಅಷ್ಟೇ ಮುಖ್ಯ. ಅಲ್ಲದೆ, ಕಲುಷಿತ ನೀರಿನಿಂದ ಸಂಭವಿಸುವ ಕಾಯಿಲೆಗಳು, ಅವು ಉಂಟು ಮಾಡುವ ಅಪಾಯಗಳ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಬೇಕು. 

ಪಾರದರ್ಶಕತೆ

ಇಂದೋರ್​ನಂಥ ಗಂಭೀರ ಹಾಗೂ ಕಳವಳಕಾರಿ ಘಟನೆಗಳು ನಡೆದಾಗ ಮಾತ್ರವೇ ನೀರಿನ ಗುಣಮಟ್ಟದ ಬಗ್ಗೆ ಚರ್ಚೆಗಳು ನಡೆಯುತ್ತವೆ. ಆದರೆ, ನೀರಿನ ಗುಣಮಟ್ಟದ ಅಂಕಿಸಂಖ್ಯೆಗಳು, ಸ್ಥಿತಿಗತಿಗಳ ವಿವರಗಳು ಪಾರದರ್ಶಕವಾಗಿ ಜನರಿಗೆ ಲಭ್ಯವಾಗುವಂಥ ವ್ಯವಸ್ಥೆ ರೂಪಿಸುವುದು ಅಗತ್ಯ.

ಸಮುದಾಯದ ಸಹಭಾಗಿತ್ವ

ಯಾವುದೇ ಯೋಜನೆ ಯಶಸ್ಸು ಕಾಣಬೇಕಾದರೆ ಸಮುದಾಯದ ಸಹಭಾಗಿತ್ವ ಅಗತ್ಯ. ಈ ನಿಟ್ಟಿನಲ್ಲಿ ಜಲಮೂಲಗಳ ಸರಂಕ್ಷಣೆ, ನಿರ್ವಹಣೆ ಹಾಗೂ ಶುದ್ಧ ಕುಡಿಯುವ ನೀರಿನ ಪೂರೈಕೆ ಖಾತ್ರಿ ಪಡಿಸಿಕೊಳ್ಳಲು ಸಮುದಾಯ ಕೂಡ ಸಂಘಟಿತವಾಗಿ ನಿಗಾ ವಹಿಸಬೇಕು, ಎಲ್ಲಾದರೂ ಪ್ರಮಾದಗಳಾದರೆ ಅಥವಾ ಯೋಜನೆ ಜಾರಿಯಲ್ಲಿ ವಿಳಂಬವಾದರೆ ಸ್ಥಳೀಯ ಆಡಳಿತದ ಮೇಲೆ ಒತ್ತಡ ಹೇರಬೇಕು ಮತ್ತು ಕಾಮಗಾರಿ ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಂಡರೆ ಸಮುದಾಯದ ಕ್ಷೇಮ ಸಾಧ್ಯ.

ಪ್ರಮುಖ ಕಾರಣಗಳು

ಪೈಪ್​ಲೈನ್​ಗಳ ಸೋರಿಕೆ

ಕುಡಿಯುವ ನೀರು ಪೂರೈಕೆಗೆ ಅಳವಡಿಸಲಾಗುವ ಪೈಪ್​ಲೈನ್​ನಲ್ಲಿನ ಸೋರಿಕೆ ದುರಂತಕ್ಕೆ ಕಾರಣವಾಗುತ್ತಿದೆ. ಈ ಮೂಲಕ ಅಮೂಲ್ಯವಾದ ನೀರು ವ್ಯರ್ಥವಾಗಿ ಹರಿದು ಹೋಗುತ್ತದೆ. ಅಲ್ಲದೆ, ಪೈಪ್ ಒಡೆದಿರುವುದರಿಂದ ಅಥವಾ ಸೋರುವುದರಿಂದ ಕೊಳಚೆ ನೀರು ಕೂಡ ಅದರೊಂದಿಗೆ ಸೇರಿಕೊಳ್ಳುತ್ತದೆ. ಇತರ ಕಲ್ಮಶಗಳು ಕೂಡ ನೀರನ್ನು ಸೇರಿ, ಆ ಮೂಲಕ ಮನುಷ್ಯನ ದೇಹದೊಳಗೆ ಪ್ರವೇಶಿಸುತ್ತವೆ.

ಪೂರೈಕೆ ಜಾಲದ ಕಡೆಗಷ್ಟೇ ಗಮನ

ಮನೆಗೆ ನಲ್ಲಿ ನೀರು ಬರುವಂತೆ ಮಾಡುತ್ತೇವೆ’ ಎಂಬುದಷ್ಟೇ ರಾಜಕಾರಣಿಗಳ ಅಥವಾ ಜನಪ್ರತಿನಿಧಿಗಳ ಆಶ್ವಾಸನೆಯಾಗಿರುತ್ತದೆ. ಆದರೆ, ‘ಶುದ್ಧ ಕುಡಿಯುವ ನೀರು ಪೂರೈಸುತ್ತೇವೆ. ಈ ನಿಟ್ಟಿನಲ್ಲಿ ಇರುವ ಅಡ್ಡಿ-ಆತಂಕಗಳನ್ನು ನಿವಾರಿಸುತ್ತೇವೆ’ ಎಂಬ ಬದ್ಧತೆಯೂ ಇಲ್ಲ, ಈ ಕುರಿತಾಗಿ ಸ್ಪಷ್ಟ ಯೋಜನೆಯೂ ಇಲ್ಲ. ಅಂದರೆ, ನಮ್ಮ ಸ್ಥಳೀಯ ಆಡಳಿತಗಳು ಅಥವಾ ಸರ್ಕಾರಗಳು ನೀರು ಪೂರೈಕೆ ಜಾಲವನ್ನು ವಿಸ್ತರಿಸಲು ಆಸಕ್ತಿ ವಹಿಸಿವೆಯೇ ಹೊರತು ಶುದ್ಧ ಕುಡಿಯುವ ನೀರು ಪೂರೈಕೆಯತ್ತ ಅಲ್ಲ.

ಸ್ಥಗಿತಗೊಂಡ ಘಟಕಗಳು

ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ವಿುಸಲಾಗಿದೆಯಾದರೂ, ಸರಿಯಾದ ನಿರ್ವಹಣೆ ಇಲ್ಲದೆ ಅಲ್ಪಾವಧಿಯಲ್ಲೇ ಈ ಘಟಕಗಳು ಸ್ಥಗಿತಗೊಂಡ ನಿದರ್ಶನಗಳು ಎಲ್ಲ ರಾಜ್ಯಗಳಲ್ಲೂ ಕಂಡುಬರುತ್ತವೆ.

ಗಂಭೀರ ಪರಿಸ್ಥಿತಿ

  1. ಗ್ರಾಮೀಣ ಪ್ರದೇಶಕ್ಕೆ ಪೂರೈಕೆಯಾಗುವ ನೀರಿನ ಪೈಕಿ ಶೇಕಡ 35ರಷ್ಟು ನೀರು ಮಾತ್ರ ಸಂಪೂರ್ಣ ಸುರಕ್ಷಿತವಾಗಿದೆ. ಅಗ್ರಿಕಲ್ಚರಲ್ ಡ್ರೆನೇಜ್​ನಿಂದ ನೈಟ್ರೇಟ್ ಮಾಲಿನ್ಯ ಕೂಡ ಹೆಚ್ಚುತ್ತಿದೆ. 
  2. ಅನೇಕ ರಾಜ್ಯಗಳ ನೀರಿನಲ್ಲಿ ಫ್ಲೋರೈಡ್, ಆರ್ಸೆನಿಕ್ ಅಂಶಗಳು ಕಂಡುಬಂದಿವೆ. ನಗರಗಳಲ್ಲಿ ಪೈಪ್​ಲೈನ್ ಆಧಾರಿತ ವಾಟರ್ ಟ್ರೀಟ್​ವೆುಂಟ್ ಸಿಸ್ಟಮ್ ಇದ್ದರೂ, ಪರಿಸ್ಥಿತಿ ಆಶಾದಾಯಕವಾಗಿಲ್ಲ. ಹಳೆಯ ಪೈಪ್​ಗಳು ಜೀರ್ಣಾವಸ್ಥೆ ತಲುಪಿದ್ದು, ಕೊಳಚೆ ನೀರು ಸೇರ್ಪಡೆಯಾಗುತ್ತಿದೆ. 
  3. ಇದರಿಂದ ಸಾಂಕ್ರಾಮಿಕ ಕಾಯಿಲೆಗಳ ಸಂಖ್ಯೆ ಹೆಚ್ಚಿದೆ. ಕೈಗಾರಿಕೆಗಳ ತ್ಯಾಜ್ಯ ಹಾಗೂ ರಾಸಾಯನಿಕಗಳು ಜಲಮೂಲಕ್ಕೆ ಭಾರಿ ಪ್ರಮಾಣದಲ್ಲಿ ಸೇರ್ಪಡೆಯಾಗುತ್ತಿವೆ.ಪೈಪ್​ಲೈನ್​ನಲ್ಲಿನ ಸೋರಿಕೆಯಿಂದ ಶೇಕಡ 30-40ರಷ್ಟು ನೀರು ಪೋಲಾಗುತ್ತಿರುವುದನ್ನು ವಿವಿಧ ಅಧ್ಯಯನ ವರದಿಗಳು ದೃಢಪಡಿಸಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net