ಜಿರಳೆಗಳಿಗೆ ಬಂಡಾಯದ ಬಿಸಿ!...ಇದು ಕೇಜ್ರಿವಾಲ್ ಟೀಮ್, ಬಿಜೆಪಿ ವಿರೋಧ ಒಂದೇ ಇವರ ಅಜೆಂಡಾ ಎಂದ ಸಿಜೆಪಿ ಕಾರ್ಯಕರ್ತ | CJP

CJP | ಜಿರಳೆಗಳಿಗೆ ಬಂಡಾಯದ ಬಿಸಿ!
CJP | ಜಿರಳೆಗಳಿಗೆ ಬಂಡಾಯದ ಬಿಸಿ!
Published on
ನವದೆಹಲಿ: ಅಭಿಜಿತ್ ದೀಪ್ಕೆ ನೇತೃತ್ವದ ಕಾಕ್ರೋಚ್ ಜನತಾ ಪಕ್ಷಕ್ಕೆ (CJP) ಮೊದಲ ಬಂಡಾಯದ ಬಿಸಿ ತಟ್ಟಿದ್ದು, ಕಾರ್ಯಕರ್ತ ಮನೀಶ್ ಬ್ರಹ್ಮಭಟ್ ಅವರು ಕಾಕ್ರೋಚ್ ಜನತಾ ಪಾರ್ಟಿ-ಡೆಮಾಕ್ರಟಿಕ್ (CJP-D) ಎಂಬ ಹೊಸ ಬಣವನ್ನು ರಚಿಸಿದ್ದಾರೆ. ಸಿಜೆಪಿ ಸಂಸ್ಥಾಪಕ ದೀಪ್ಕೆ ಅವರು ಹೋರಾಟಗಾರರನ್ನು ಬದಿಗೊತ್ತಿ, ಯುವಕರ ಈ ಚಳವಳಿಯನ್ನು ಕೇಜ್ರಿವಾಲ್ ಅವರ ಹಿತಾಸಕ್ತಿಗೆ ತಕ್ಕಂತೆ ಟೀಮ್ ಕೇಜ್ರಿವಾಲ್ ಅನ್ನಾಗಿ ಪರಿವರ್ತಿಸಿದ್ದಾರೆ ಎಂದು ಬ್ರಹ್ಮಭಟ್ ಆರೋಪಿಸಿದ್ದಾರೆ.
ಸಿಜೆಪಿಯ ನಾಯಕತ್ವದಲ್ಲಿ ಆಮ್ ಆದ್ಮಿ ಪಾರ್ಟಿ (ಎಎಪಿ) ಜೊತೆ ಗುರುತಿಸಿಕೊಂಡವರೇ ಹೆಚ್ಚಾಗಿದ್ದು, ಅವರು ಕೇವಲ ಬಿಜೆಪಿಯನ್ನು ವಿರೋಧಿಸುವುದರಲ್ಲಷ್ಟೇ ಆಸಕ್ತಿ ಹೊಂದಿದ್ದಾರೆ ಎಂದು ಮನೀಶ್ ಬ್ರಹ್ಮಭಟ್ ದೂರಿದ್ದಾರೆ.
ಇದಕ್ಕೂ ಮುನ್ನ ಆಗಸ್ಟ್‌ನಲ್ಲಿ, ದೀಪ್ಕೆ ನಿವಾಸದಲ್ಲಿ ಸಿಜೆಪಿ ಪ್ರಮುಖ ತಂಡದ ಸಭೆ ನಡೆಯುತ್ತಿರುವ ವಿಷಯ ತಿಳಿದು ಮನೀಶ್ ಬ್ರಹ್ಮಭಟ್ ಗುಜರಾತ್‌ನಿಂದ ಛತ್ರಪತಿ ಸಂಭಾಜಿನಗರಕ್ಕೆ ಬಂದಿದ್ದರು. ಜಂತರ್ ಮಂತರ್ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಕಾರ್ಯಕರ್ತರನ್ನು ಈ ಸಭೆಯಿಂದ ಹೊರಗಿಡಲಾಗಿದೆ ಎಂದು ಆರೋಪಿಸಿ, ಬ್ರಹ್ಮಭಟ್ ಮತ್ತು ಅವರ ಸಹವರ್ತಿ ರಾಹುಲ್ ಪಾಂಡ್ಯ ದೀಪ್ಕೆ ಮನೆ ಎದುರು ಧರಣಿ ಕುಳಿತಿದ್ದರು. ಈ ಪ್ರತಿಭಟನೆ ವೇಳೆ ಆರೋಗ್ಯ ಹದಗೆಟ್ಟಿದ್ದರಿಂದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಸಮಯದಲ್ಲಿ ಮಾಧ್ಯಮಗಳು ಬ್ರಹ್ಮಭಟ್ ಅವರನ್ನು ಸಿಜೆಪಿ ಕಾರ್ಯಕರ್ತ ಎಂದು ಗುರುತಿಸಿದ್ದವು.

ಬಂಡಾಯ ನಾಯಕನಿಂದ ಹೊಸ ಬಣದ ಘೋಷಣೆ

ಗುರುವಾರ ದೆಹಲಿಯಲ್ಲಿ ಸಿಜೆಪಿ-ಡಿ ಸ್ಥಾಪನೆಯನ್ನು ಘೋಷಿಸಿದ ಬ್ರಹ್ಮಭಟ್, ಮೂಲ ಚಳವಳಿಯನ್ನು ಕೇಜ್ರಿವಾಲ್ ಮತ್ತು ಎಎಪಿಯ ರಾಜಕೀಯ ಹಿತಾಸಕ್ತಿಗಳಿಗೆ ಸೇವೆ ಸಲ್ಲಿಸುವ ಜನರು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಇಂದು ನಾವು ಕಾಕ್ರೋಚ್ ಜನತಾ ಪಕ್ಷ-ಡೆಮಾಕ್ರಟಿಕ್ ಅನ್ನು ಪ್ರಾರಂಭಿಸುತ್ತಿದ್ದೇವೆ. ಜನರ ರಕ್ತ ಮತ್ತು ಬೆವರಿನಿಂದ ರೂಪುಗೊಂಡ ಮೂಲ ಪಕ್ಷವು ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿಗೆ ಅನುಕೂಲವಾಗುವಂತೆ ಆಯ್ದ ಜನರ ತಂಡವಾಗಿ ಬದಲಾಗಿದೆ. ರಾಜಕೀಯ ವ್ಯವಹಾರಗಳನ್ನು ಮಾಡುವುದೇ ಅವರ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಅಥವಾ ಇತರ ರಾಜ್ಯಗಳ ಜನರು ಎದುರಿಸುತ್ತಿರುವ ಸಮಸ್ಯೆಗಳಿಗಾಗಿ ಹೋರಾಡುವ ಆಸಕ್ತಿ ಅವರಿಗೆ ಇಲ್ಲ, ಬದಲಾಗಿ, ಕೇಜ್ರಿವಾಲ್ ಅವರ ಸೂಚನೆಯಂತೆ ನಡೆದುಕೊಳ್ಳುತ್ತಾ, ಬಿಜೆಪಿ ವಿರೋಧಿ ಪಕ್ಷಗಳನ್ನು ಬೆಂಬಲಿಸಲು ಬಿಜೆಪಿಯನ್ನು ಮಾತ್ರ ವಿರೋಧಿಸಲು ಬಯಸಿದ್ದಾರೆ ಎಂದು ಬ್ರಹ್ಮಭಟ್ ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಸಿಜೆಪಿ ತಂಡಕ್ಕೆ ಆಯ್ಕೆಯಾದ ಎಂಟು ಜನರು ಎಎಪಿ ಜೊತೆ ಸಂಪರ್ಕ ಹೊಂದಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ. ದೇಶಾದ್ಯಂತ ಪ್ರತಿಭಟನೆಯಲ್ಲಿ ಭಾಗವಹಿಸಿದವರಿಗೆ ಪ್ರಾತಿನಿಧ್ಯ ನೀಡುವ ರಾಷ್ಟ್ರೀಯ ರಚನೆಯನ್ನು ಅಸಮಾಧಾನಿತ ಕಾರ್ಯಕರ್ತರು ಪ್ರಸ್ತಾಪಿಸಿದ್ದರು ಎಂದು ಬ್ರಹ್ಮಭಟ್ ಹೇಳಿದ್ದಾರೆ. ಸಿಜೆಪಿ ನಾಯಕತ್ವದ ಆಯ್ಕೆಯನ್ನು ಪ್ರಶ್ನಿಸಿದ ಅವರು, ಜಂತರ್ ಮಂತರ್ ಚಳವಳಿಯನ್ನು ಬೆಂಬಲಿಸಿದ ಜನರು ಮತ್ತು ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಲಾಗಿಲ್ಲ ಎಂದು ದೂರಿದ್ದಾರೆ.
ಇದಕ್ಕೂ ಮುನ್ನ, ಸಿಜೆಪಿಯು ದೀಪ್ಕೆಯನ್ನು ರಾಷ್ಟ್ರೀಯ ಸಂಚಾಲಕರನ್ನಾಗಿ ಮಾಡಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ಘೋಷಿಸಿತ್ತು. ಆ ಸಮಯದಲ್ಲಿಯೂ ಬ್ರಹ್ಮಭಟ್ ಮತ್ತು ಅವರ ಬೆಂಬಲಿಗರು, ಆಯ್ಕೆ ಪ್ರಕ್ರಿಯೆಯು ದೀಪ್ಕೆ ಆಪ್ತರಿಗೆ ಮಾತ್ರ ಆದ್ಯತೆ ನೀಡಿದೆ ಮತ್ತು ಹೋರಾಟದಲ್ಲಿ ಭಾಗವಹಿಸಿದವರನ್ನು ಸರಿಯಾಗಿ ಸಂಪರ್ಕಿಸಿಲ್ಲ ಎಂದು ಆರೋಪಿಸಿದ್ದರು. ಜಂತರ್ ಮಂತರ್‌ನಲ್ಲಿ ಸಿಜೆಪಿ ನಡೆಸಿದ ಪ್ರತಿಭಟನೆ ವೇಳೆ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಎಎಪಿ ನಾಯಕರು ದೀಪ್ಕೆ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಈ ಬಹಿರಂಗ ಬೆಂಬಲ ಮತ್ತು ಸಿಜೆಪಿಯ ಕೆಲವು ಸದಸ್ಯರಿಗಿದ್ದ ಹಳೆಯ ಎಎಪಿ ಸಂಪರ್ಕಗಳು, ಎರಡೂ ಸಂಘಟನೆಗಳ ನಡುವಿನ ಬಾಂಧವ್ಯದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿವೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net