"ನೀವು ಈ ದೇಶದ ಪ್ರಜೆಯೇ?' ಎಂದು ಯಾರಾದರೂ ಕೇಳಿದರೆ, ನಾವು ತಕ್ಷಣವೇ ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ಪಾಸ್ಪೋರ್ಟ್ ತೋರಿಸುತ್ತೇವೆ. ಆದರೆ, ಇತ್ತೀಚೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ವಿಭಿನ್ನ ನ್ಯಾಯಾಲಯಗಳು ನೀಡಿರುವ ಸ್ಪಷ್ಟನೆಗಳು ದೇಶಾದ್ಯಂತ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿವೆ. ಆಧಾರ್ ಕಾರ್ಡ್ ಪೌರತ್ವದ ದಾಖಲೆಯಲ್ಲ ಎಂಬುದು ಮೊದಲೇ ಗೊತ್ತಿತ್ತು, ಆದರೆ ಈಗ ಪಾಸ್ಪೋರ್ಟ್ ಕೂಡ ಪೌರತ್ವದ ನಿರ್ಣಾಯಕ ದಾಖಲೆಯಲ್ಲ, ಅದು ಕೇವಲ ಪ್ರಯಾಣದ ದಾಖಲೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಹಾಗಾದರೆ, 140 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ ಒಬ್ಬ ವ್ಯಕ್ತಿ ತನ್ನ ಪೌರತ್ವವನ್ನು ಅಧಿಕೃತವಾಗಿ ಸಾಬೀತುಪಡಿಸುವುದು ಹೇಗೆ? ಬೇರೆ ದೇಶಗಳಲ್ಲಿ ಈ ವ್ಯವಸ್ಥೆ ಹೇಗಿದೆ? ನಮ್ಮಲ್ಲಿ ಈ ಗೊಂದಲಕ್ಕೆ ಕಾರಣವೇನು? ಇದಕ್ಕೆ ಪರಿಹಾರಗಳೇನು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.