ಅಭಿಷೇಕ್ ಬ್ಯಾನರ್ಜಿ ನಿವಾಸಕ್ಕೆ ಸಿಐಡಿ ಭೇಟಿ; ಜೂನ್ 1ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ | Abhishek Banerjee

Abhishek Banerjee | ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ
Abhishek Banerjee | ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ
Published on
Abhishek Banerjee: ಪಶ್ಚಿಮ ಬಂಗಾಳದ ಸಿಐಡಿ ಅಧಿಕಾರಿಗಳು ಶನಿವಾರ ತೃಣಮೂಲ ಕಾಂಗ್ರೆಸ್ (TMC) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಕೋಲ್ಕತ್ತಾ ನಿವಾಸಕ್ಕೆ ಭೇಟಿ ನೀಡಿ, ಜೂನ್ 1 ರಂದು ಪಶ್ಚಿಮ ಬಂಗಾಳ ಪೊಲೀಸ್ ಪ್ರಧಾನ ಕಚೇರಿಯಾದ ಭವಾನಿ ಭವನದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಸಿಐಡಿ ಅಧಿಕಾರಿಗಳು ಕೋಲ್ಕತ್ತಾದ ಕಾಳೀಘಾಟ್ ಪ್ರದೇಶದಲ್ಲಿರುವ ಬ್ಯಾನರ್ಜಿ ನಿವಾಸಕ್ಕೆ ತೆರಳಿ ನೋಟಿಸ್ ನೀಡಿದ್ದು, ಸಮನ್ಸ್‌ನ ವಿವರಗಳನ್ನು ಅಧಿಕಾರಿಗಳು ಇನ್ನು ಬಹಿರಂಗಪಡಿಸದಿದ್ದರೂ, ಸೋಮವಾರ ಹಾಜರಾಗಲು ನಿರ್ದೇಶನ ನೀಡಲಾಗಿದೆ. ಟಿಎಂಸಿ ನಾಯಕನಿಗೆ ಲಿಂಕ್ ಮಾಡಲಾದ ಹಲವಾರು ಆಸ್ತಿಗಳಲ್ಲಿ ಅನಧಿಕೃತ ನಿರ್ಮಾಣ ನಡೆದಿದೆ ಎಂಬ ಆರೋಪದ ಮೇಲೆ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ನೀಡಿದ ನೋಟಿಸ್‌ಗಳ ಸುತ್ತಲಿನ ವಿವಾದದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.

ಟಿಎಂಸಿ ಆಕ್ರೋಶ

ಪೊಲೀಸ್​​ರ ಈ ಕ್ರಮವನ್ನು ಪ್ರಶ್ನಿಸಿರುವ ಟಿಎಂಸಿ ನಾಯಕ ಶೋಭಂದೇಬ್ ಚಟ್ಟೋಪಾಧ್ಯಾಯ, ಬ್ಯಾನರ್ಜಿ ಅವರು ನಿಯಮ ಉಲ್ಲಂಘನೆಗಳ ಬಗ್ಗೆ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ಸ್ಪಷ್ಟನೆ ಕೋರಿದ್ದರು, ಆದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ. ಈ ವಿಷಯದಲ್ಲಿ ಪೊಲೀಸರ ಹಸ್ತಕ್ಷೇಪವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಮತ್ತು ಈ ಬೆಳವಣಿಗೆಗಳು ಪ್ರಜಾಪ್ರಭುತ್ವದ ನಿಯಮಗಳಿಗೆ ವಿರುದ್ಧವಾಗಿವೆ ಎಂದು ಅವರು ಆರೋಪಿಸಿದ್ದಾರೆ.
ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಕೂಡ ಬಿಜೆಪಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದು, ಅಧಿಕಾರಿಗಳು ಆಯ್ದ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ ಮತ್ತು ಇದು ರಾಜಕೀಯ ದ್ವೇಷ. ಆಡಳಿತ ಯಂತ್ರ ಎನ್ನುವುದು ಪಕ್ಷಪಾತದ ರೀತಿಯಲ್ಲಿ ವರ್ತಿಸುತ್ತಿದ್ದು, ಬೇರೆ ಕಡೆಗಳಲ್ಲಿ ನಡೆದಿರುವ ಇಂತಹದೇ ನಿಯಮ ಉಲ್ಲಂಘನೆಗಳನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ದೂರಿದ್ದಾರೆ.
ಈ ಘಟನೆಯನ್ನು ಖಂಡಿಸಿ ಪಕ್ಷವು ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ್ದು, ಅದರಲ್ಲಿ, ಈ ನೋಟಿಸ್‌ಗಳನ್ನು ಮಾಧ್ಯಮಗಳ ಕೆಲವು ವರ್ಗಗಳಿಗೆ ಅನಧಿಕೃತವಾಗಿ ಸೋರಿಕೆ ಮಾಡಲಾಗಿದೆ, ಅಭಿಷೇಕ್ ಬ್ಯಾನರ್ಜಿ ಹಾಗೂ ಇತರ ಹಿರಿಯ ನಾಯಕರ ವರ್ಚಸ್ಸಿಗೆ ಧಕ್ಕೆ ತರುವ ಅಭಿಯಾನದ ಭಾಗವಾಗಿ ಸೋಶಿಯಲ್ ಮೀಡಿಯಾಗಳ ಮೂಲಕ ಇದನ್ನು ಹರಡಲಾಗುತ್ತಿದೆ ಎಂದು ಆರೋಪಿಸಿದೆ. ವಿಪಕ್ಷಗಳ ಆರೋಪಗಳನ್ನು ಕಟ್ಟುಕಥೆ ಎಂದಿರುವ ಟಿಎಂಸಿ, ತನ್ನ ಪಕ್ಷದ ನಾಯಕರನ್ನು ರಾಜಕೀಯವಾಗಿ ಹಣಿಯುವ ಪ್ರಯತ್ನಗಳು ನಡೆಯುತ್ತಿದ್ದು, ಸಿಐಡಿ ಸಮನ್ಸ್‌ಗೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದೆ(ಏಜೆನ್ಸೀಸ್​​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net