ಮಿಸ್ಟರ್ ಮೋದಿ ಏಕೆ ಮೌನವಾಗಿದ್ದೀರಿ..? ನೀಟ್ ಹಗರಣದ ತನಿಖೆ ನಡುವೆ ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ಗುಡುಗು! | NEET

NEET
NEET
Published on
ನವದೆಹಲಿ: ನೀಟ್-ಯುಜಿ (NEET) 2026 ರ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಭಾನುವಾರ ಆಗ್ರಹಿಸಿದ್ದಾರೆ. ಪರೀಕ್ಷಾ ಪತ್ರಿಕೆ ಸೋರಿಕೆಗಳನ್ನು ತಡೆಯಲು ವಿಫಲವಾಗಿರುವ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್​, ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೌನವನ್ನು ಪ್ರಶ್ನಿಸಿದ್ದಾರೆ.
2024 ಮತ್ತು 2026 ರ ನೀಟ್ ವಿವಾದಗಳನ್ನು ಸರ್ಕಾರ ನಿಭಾಯಿಸಿದ ರೀತಿಯನ್ನು ಹೋಲಿಕೆ ಮಾಡಿರುವ ರಾಹುಲ್ ಗಾಂಧಿ, ಪತ್ರಿಕೆ ಸೋರಿಕೆ, ತನಿಖೆ ಮತ್ತು ಸಮಿತಿಗಳ ರಚನೆಯ ಅದೇ ಹಳೆಯ ಚಕ್ರವು ಮತ್ತೆ ಪುನರಾವರ್ತನೆಯಾಗುತ್ತಿದೆ ಎಂದು ಟೀಕಿಸಿದ್ದಾರೆ.
ನೀಟ್ 2024: ಪತ್ರಿಕೆ ಸೋರಿಕೆಯಾಯಿತು. ಪರೀಕ್ಷೆ ರದ್ದುಗೊಳಿಸಲಿಲ್ಲ. ಸಚಿವರು ರಾಜೀನಾಮೆ ನೀಡಲಿಲ್ಲ. ಸಿಬಿಐ ತನಿಖೆ ಆರಂಭವಾಯಿತು. ಒಂದು ಸಮಿತಿಯನ್ನು ರಚಿಸಲಾಯಿತು. ನೀಟ್ 2026: ಪತ್ರಿಕೆ ಸೋರಿಕೆಯಾಯಿತು. ಪರೀಕ್ಷೆ ರದ್ದುಗೊಳಿಸಲಾಯಿತು. ಸಚಿವರು ಇನ್ನೂ ರಾಜೀನಾಮೆ ನೀಡಿಲ್ಲ. ಸಿಬಿಐ ಮತ್ತೆ ತನಿಖೆ ನಡೆಸುತ್ತಿದೆ. ಮತ್ತೊಂದು ಸಮಿತಿಯನ್ನು ರಚಿಸಲಾಗುತ್ತದೆ ಎಂದು ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ರಾಹುಲ್​, ಪದೇ ಪದೇ ಪತ್ರಿಕೆ ಸೋರಿಕೆ ಪ್ರಕರಣಗಳು ನಡೆಯುತ್ತಿದ್ದರೂ ಯಾರು ಏಕೆ ಹೊಣೆಗಾರಿಕೆ ತೆಗೆದುಕೊಳ್ಳುತ್ತಿಲ್ಲ..?, ಮಿಸ್ಟರ್ ಮೋದಿ, ದೇಶವು ನಿಮ್ಮನ್ನು ಕೆಲವು ಪ್ರಶ್ನೆಗಳನ್ನು ಕೇಳುತ್ತಿದೆ, ಉತ್ತರಿಸಿ! ಪತ್ರಿಕೆ ಸೋರಿಕೆಗಳು ಪದೇ ಪದೇ ಏಕೆ ಸಂಭವಿಸುತ್ತಿವೆ?, ಈ ಪರೀಕ್ಷಾ ಪೇಪರ್ ಚರ್ಚೆಯ ಬಗ್ಗೆ ನೀವು ಪ್ರತಿ ಬಾರಿಯೂ ಏಕೆ ಮೌನವಾಗಿದ್ದೀರಿ? ನಿರಂತರವಾಗಿ ವಿಫಲರಾಗುತ್ತಿರುವ ಶಿಕ್ಷಣ ಸಚಿವರನ್ನು ನೀವು ಏಕೆ ವಜಾಗೊಳಿಸುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.
ನೀಟ್ ಸೋರಿಕೆ ಪ್ರಕರಣ 2026
ನೀಟ್-ಯುಜಿ 2026 ರ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ತನಿಖೆ ನಡೆಸುತ್ತಿದ್ದು, ಹಲವಾರು ರಾಜ್ಯಗಳಲ್ಲಿ ಹಲವರನ್ನು ಬಂಧಿಸಿರುವ ನಡುವೆಯೇ ರಾಹುಲ್ ಗಾಂಧಿ ಕಡೆಯಿಂದ ಈ ಹೇಳಿಕೆ ಹೊರಬಿದ್ದಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಒಳಗಿನಿಂದಲೇ, ಪತ್ರಿಕೆ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಸದಸ್ಯರ ಮೂಲಕ ಗೌಪ್ಯ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ಮೇ 3 ರ ಪರೀಕ್ಷೆಗೆ ಮುನ್ನ ಪ್ರಶ್ನೆಗಳನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಪರೀಕ್ಷಾ ಪ್ರಕ್ರಿಯೆಗೆ ಸಂಬಂಧ ಹೊಂದಿದ್ದ ನಿವೃತ್ತ ರಸಾಯನಶಾಸ್ತ್ರ ಉಪನ್ಯಾಸಕ ಪಿ.ವಿ. ಕುಲಕರ್ಣಿ ಮತ್ತು ಪುಣೆ ಮೂಲದ ಸಸ್ಯಶಾಸ್ತ್ರ ಶಿಕ್ಷಕಿ ಮನಿಷಾ ಗುರುನಾಥ್ ಮಾಂಧರೆಯನ್ನು ಬಂಧಿಸಲಾಗಿದೆ.
ಆರೋಪಿಗಳು ಆಯ್ದ ವಿದ್ಯಾರ್ಥಿಗಳಿಗೆ ಭಾರಿ ಹಣದ ಬದಲಾಗಿ ಪ್ರಶ್ನೆಗಳು ಮತ್ತು ಉತ್ತರಗಳನ್ನು ಸೋರಿಕೆ ಮಾಡಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ ಐದು ರಾಜ್ಯಗಳಿಂದ ಒಟ್ಟು ಒಂಬತ್ತು ಜನರನ್ನು ಬಂಧಿಸಲಾಗಿದೆ. ಆರು ಸ್ಥಳಗಳಲ್ಲಿ ನಡೆಸಿದ ಶೋಧ ಕಾರ್ಯದಲ್ಲಿ ತನಿಖೆಗೆ ಸಂಬಂಧಿಸಿದ ದಾಖಲೆಗಳು, ಲ್ಯಾಪ್‌ಟಾಪ್‌ಗಳು, ಬ್ಯಾಂಕ್ ದಾಖಲೆಗಳು ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಿಜೆಪಿ, ಆರ್‌ಎಸ್‌ಎಸ್‌ನ ಹಣ ಗಳಿಸುವ ಜಾಲ ಎಂದ ರಾಹುಲ್ ಗಾಂಧಿ
ಮೋದಿ ಸರ್ಕಾರವು ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿದೆ ಎಂದು ಶನಿವಾರವಷ್ಟೇ ಆರೋಪಿಸಿದ್ದ ರಾಹುಲ್ ಗಾಂಧಿ, ಪರೀಕ್ಷೆಗೆ ಎರಡು ದಿನ ಮುಂಚಿತವಾಗಿಯೇ ಪ್ರಶ್ನೆ ಪತ್ರಿಕೆಯನ್ನು ವಾಟ್ಸಾಪ್‌ನಲ್ಲಿ ಹರಿಬಿಡಲಾಗಿತ್ತು ಎಂದು ದೂರಿದ್ದಾರೆ. ಇದಷ್ಟೆ ಅಲ್ಲದೆ, ಬಿಜೆಪಿ, ಆರ್‌ಎಸ್‌ಎಸ್ ಮತ್ತು ವಿಶ್ವವಿದ್ಯಾಲಯಗಳಲ್ಲಿ ಅಧಿಕಾರದಲ್ಲಿರುವ ವ್ಯಕ್ತಿಗಳು ಶಾಮೀಲಾಗಿರುವ ಹಣ ಗಳಿಸುವ ಜಾಲ (Money making nexus) ಇದರ ಹಿಂದೆ ಕೆಲಸ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net