ಹಿಮಪಾತದ ಮಧ್ಯೆ ದಿಢೀರ್​ ಕಣ್ಮರೆಯಾದ ಹೆಲಿಕಾಪ್ಟರ್ ಪತನ: ಆರು ಮಂದಿ ಪತ್ತೆಗೆ ತೀವ್ರ ಶೋಧ | Chopper Crash

Chopper Crash
ಹಿಮಪಾತದ ಮಧ್ಯೆ ದಿಢೀರ್​ ಕಣ್ಮರೆಯಾದ ಹೆಲಿಕಾಪ್ಟರ್ ಪತನ: ಆರು ಮಂದಿ ಪತ್ತೆಗೆ ತೀವ್ರ ಶೋಧ | Chopper Crash
Published on: 

ಉತ್ತರಾಖಂಡ: ಹಿಮಪಾತದ ನಡುವೆ ಬದರಿನಾಥದಿಂದ ಹೊರಟಿದ್ದ ಹೆಲಿಕಾಪ್ಟರ್ ಸಂಪರ್ಕ ಕಳೆದುಕೊಂಡ ಬೆನ್ನಲ್ಲೇ ಪತನಗೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ. ಈ ಕುರಿತು ಸ್ವತಃ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಾಹಿತಿ ಹಂಚಿಕೊಂಡಿದ್ದಾರೆ.

ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ–ಬದರಿನಾಥ ಮಾರ್ಗದಲ್ಲಿ ಪೈಲಟ್​ ಸೇರಿ ಆರು ಮಂದಿಯನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನಗೊಂಡಿದೆ. ಹಿಮಪಾತದ ನಡುವೆಯೇ ಹಾರಾಟ ನಡೆಸಿದ್ದ ಹೆಲಿಕಾಪ್ಟರ್ ಮಧ್ಯಾಹ್ನ 2.15ರ ಸುಮಾರಿಗೆ ಬದರಿನಾಥದಿಂದ ಪ್ರಯಾಣ ಆರಂಭಿಸಿತ್ತು. ಬಳಿಕ ಹಾಥಿ ಪರ್ವತ ಪ್ರದೇಶದ ಬಳಿ ದಿಢೀರ್​ ಸಂಪರ್ಕ ಕಳೆದುಕೊಂಡಿತು ಎಂದು ವರದಿಯಾಗಿದೆ.

ಜೋಶಿಮಠ ಸಮೀಪದ ಚಾಯೀ ಗ್ರಾಮದ ಬಳಿ ಹೆಲಿಕಾಪ್ಟರ್ ಪತನಗೊಂಡಿರುವ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳದಲ್ಲಿ ಜಿಲ್ಲಾಡಳಿತ, ವಿಪತ್ತು ನಿರ್ವಹಣಾ ಇಲಾಖೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್​ಡಿಆರ್​ಎಫ್​) ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಭಾರತೀಯ ಸೇನೆಯ ತಂಡಗಳನ್ನೂ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್​) ಮಾಹಿತಿ ಹಂಚಿಕೊಂಡಿರುವ ಸಿಎಂ, ಘಟನೆಯ ಬಗ್ಗೆ ನಿರಂತರ ನಿಗಾ ವಹಿಸಿದ್ದೇವೆ. ಗಾಯಗೊಂಡವರು ಪತ್ತೆಯಾದರೆ, ಅವರಿಗೆ ತಕ್ಷಣ ಉತ್ತಮ ಚಿಕಿತ್ಸೆ ದೊರೆಯುವಂತೆ ಉನ್ನತ ವೈದ್ಯಕೀಯ ಕೇಂದ್ರಗಳಿಗೆ ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ. ಪ್ರಯಾಣಿಕರು ಸುರಕ್ಷಿತವಾಗಿ ಮರಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

Also Read
ಎಐಗಿಂತ ಚುರುಕು ಈ ಆರ್ಯನ್ ಶುಕ್ಲಾ! 16ನೇ ವಯಸ್ಸಿಗೆ ಗಿನ್ನಿಸ್​ ವಿಶ್ವ ದಾಖಲೆ, ಚಿನ್ನದ ಪದಕಗಳ ಸಾಧನೆ | Aryan Shukla
Chopper Crash

ಜೋಶಿಮಠದ ಉಪವಿಭಾಗಾಧಿಕಾರಿ ಚಂದ್ರಶೇಖರ್ ವಶಿಷ್ಠ ಕೂಡ ಹೆಲಿಕಾಪ್ಟರ್ ಪತನವಾಗಿರುವ ಸಾಧ್ಯತೆಯನ್ನು ದೃಢಪಡಿಸಿದ್ದು, ಸೇನೆ, ಎಸ್‌ಡಿಆರ್‌ಎಫ್‌, ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ತಂಡಗಳು ಸ್ಥಳಕ್ಕೆ ಧಾವಿಸುತ್ತಿವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿಯೂ ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ದುರಂತ ಸಂಭವಿಸಿತ್ತು. ಕೇದಾರನಾಥದಿಂದ ಗುಪ್ತಕಾಶಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಅರಣ್ಯ ಪ್ರದೇಶದಲ್ಲಿ ಪತನಗೊಂಡು ಏಳು ಮಂದಿಯನ್ನು ಬಲಿ ಪಡೆದಿತ್ತು,(ಏಜೆನ್ಸೀಸ್).