ಹೃದಯದಾಳದಿಂದ ಪ್ರೀತಿಸುವ ವೃತ್ತಿಯನ್ನೇ ಆರಿಸಿಕೊಳ್ಳಿ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಭೀಷಾಸ್ಮಾದಗ್ನಿಶ್ಚೇಂದ್ರಸ್ಯ | ಮೃತ್ಯುರ್ಧಾವತಿ ಪಂಚಮ ಇತಿ |

(ತೈತ್ತೀರಿಯೋಪನಿಷತ್ 2.8.1)

ಅವನ (ದೇವರ) ಭಯದಿಂದಲೇ ಗಾಳಿಯು ಬೀಸುತ್ತದೆ. ಅವನ ಭಯದಿಂದಲೇ ಸೂರ್ಯ ಉದಯಿಸುತ್ತಾನೆ. ಅವನ ಭಯದಿಂದಲೇ ಇಂದ್ರ, ಅಗ್ನಿ ಮತ್ತು ಮೃತ್ಯುದೇವತೆಯರು ತಮ್ಮ ಕರ್ತವ್ಯಗಳನ್ನು ನೆರವೇರಿಸುತ್ತಾರೆ.

ತೈತ್ತೀರಿಯೋಪನಿಷತ್ತಿನಲ್ಲಿ ಬರುವ ಈ ಮಹತ್ವದ ಶ್ಲೋಕವು ಪ್ರಕೃತಿಯ ಎಲ್ಲ ಶಕ್ತಿಗಳೂ ದೈವ ನಿಯಮಕ್ಕೆ ಒಳಪಟ್ಟಿವೆ ಎಂಬುದನ್ನು ತಿಳಿಸುತ್ತದೆ. ಇಲ್ಲಿ ಭಯ ಎಂದರೆ ಆತಂಕ ಅಥವಾ ಹೆದರಿಕೆ ಅಲ್ಲ; ದೇವರ ಕುರಿತಾದ ಗೌರವಪೂರ್ವಕ ಶಿಸ್ತು ಮತ್ತು ನಿಯಮಪಾಲನೆ ಎಂದರ್ಥ.

ಸತ್ಯಯುಗದಲ್ಲಿ, ಎಲ್ಲರೂ ದೇವರ ಕುರಿತಾಗಿ ಪ್ರೇಮ ಮತ್ತು ಭಕ್ತಿಗಳನ್ನು ಹೊಂದಿ ಬದುಕು ಸಾಗಿಸಿದರು. ಆಗಲೂ ಕೆಲವು ದೈತ್ಯರು ಇದ್ದರು, ಅವರನ್ನು ಸಂಹರಿಸಿ, ಧರ್ಮಸಂಸ್ಥಾಪನೆ ಮಾಡಲು ದೇವರು ಅವತರಿಸಿ ಬಂದ. ನಂತರ ದ್ವಾಪರಯುಗದಲ್ಲಿ ಪ್ರಬಲ ರಾಕ್ಷಸರನ್ನು ಮಣಿಸಿ ಧರ್ಮರಕ್ಷಣೆಗೆ ಮಹಾಭಾರತದಂತಹ ಯುದ್ಧವೇ ನಡೆಯಬೇಕಾಯಿತು.

ಆದರೆ ಈಗ ಕಲಿಯುಗದಲ್ಲಿ ಯುದ್ಧ ಹೊರಗಿನವರೊಂದಿಗೆ ಅಲ್ಲ; ಅದು ನಮ್ಮೊಳಗೇ ನಡೆಯುತ್ತಿದೆ. ಹೃದಯ ಮತ್ತು ಮನಸ್ಸಿನ ನಡುವೆ ನಿರಂತರ ಸಂಘರ್ಷ ನಡೆಯುತ್ತಿದೆ. ಲೌಕಿಕ ಸುಖಗಳು ಶಾಶ್ವತವಲ್ಲ, ಅವೆಲ್ಲವೂ ಕ್ಷಣಿಕ ಭ್ರಮೆ ಎಂದು ಹೃದಯವು ಎಚ್ಚರಿಸುತ್ತಿರುತ್ತದೆ. ಆದರೆ ಮನಸ್ಸು ನಮ್ಮನ್ನು ಆ ಸುಖಗಳತ್ತ ಎಳೆದುಕೊಂಡು ಹೋಗಲು ಪ್ರಯತ್ನಿಸುತ್ತಿರುತ್ತದೆ. ಮನಸ್ಸು ಚಾಂಚಲ್ಯ, ದ್ವಂದ್ವ ಮತ್ತು ಸ್ವಾರ್ಥದ ಕಡೆಗೆ ಓಡುತ್ತಿದ್ದರೆ, ಹೃದಯವು ನಿಸ್ವಾರ್ಥ, ಪ್ರೀತಿ ಮತ್ತು ಮಾನವಸೇವೆಯ ದಾರಿಯನ್ನು ತೋರಿಸುತ್ತದೆ.

ಶಾಸ್ತ್ರಗಳು ನಮ್ಮ ದೇಹವನ್ನು ಕ್ಷೇತ್ರ ಮತ್ತು ಅದರೊಳಗೆ ನೆಲೆಸಿರುವ ಆತ್ಮನನ್ನು ಕ್ಷೇತ್ರಜ್ಞ ಎಂದು ಕರೆಯುತ್ತವೆ. ಆದರೆ ಇಂದು ನಮ್ಮ ದೇಹವೇ ಕುರುಕ್ಷೇತ್ರವಾಗಿದೆ. ಈ ಯುದ್ಧದಲ್ಲಿ ಜಯ ಸಾಧಿಸಬೇಕಾದರೆ ನಮ್ಮ ಜತೆ ಕೃಷ್ಣನಿರಬೇಕು; ಅಂದರೆ ದೈವಚೈತನ್ಯ ನಮಗೆ ಮಾರ್ಗದರ್ಶನ ಮಾಡಬೇಕು. ದೇವರ ಸಾನ್ನಿಧ್ಯವಿದ್ದಾಗ ಮಾತ್ರ ಮನಸ್ಸಿನ ಮೇಲಿನ ಜಯ ಸಾಧ್ಯವಾಗುತ್ತದೆ.

ಆದ್ದರಿಂದಲೇ, ನಮ್ಮ ವಿದ್ಯಾಸಂಸ್ಥೆಗಳಲ್ಲಿ ಓದುತ್ತಿರುವ ಮಕ್ಕಳು ಸ್ವಾಮಿಯಲ್ಲಿ (ದೈವಚಿಂತನೆಯಲ್ಲಿಯೇ) ತಮ್ಮನ್ನು ಲೀನವಾಗಿಸಿಕೊಂಡು ಯಾವಾಗಲೂ ಸಂತೋಷವಾಗಿರುತ್ತಾರೆ; ಅವರ ಪರಿಶುದ್ಧವಾದ ಮನಸ್ಸುಗಳು ಸಿಟ್ಟು, ಸ್ವಾರ್ಥ ಮತ್ತು ಮಲಿನವಾದ ಯೋಚನೆಗಳೆಂಬ ನಕಾರಾತ್ಮಕ ಭಾವನೆಗಳಿಗೆ ಬಲಿಯಾಗುವುದಿಲ್ಲ.

ವಿದ್ಯಾರ್ಥಿಗಳಿಗೆ ಇದು ಅಮೂಲ್ಯ ಸಮಯ: ನೀವು ಯಾವುದೇ ಶಿಕ್ಷಣವನ್ನು ಪಡೆಯಿರಿ. ನಿಮ್ಮ ಗುರಿಯನ್ನು ಸಾಧಿಸುವ ವಿಷಯದಲ್ಲಿ ಗಟ್ಟಿಯಾಗಿರಬೇಕು. ವಿದ್ಯಾರ್ಥಿ ಜೀವನದಲ್ಲಿ ನೀವು ಕಾಲಹರಣ ಮಾಡಿದರೆ, ನಿಮಗೆ ಇಂಥ ಅವಕಾಶಗಳು ಮತ್ತೆ ದೊರಕುವುದಿಲ್ಲ. ಹೇಗೆ ನದಿಯೊಂದು ಸಾಗರಕ್ಕೆ ಸೇರಿದ ನಂತರ ಮತ್ತೆ ತನ್ನ ಹಿಂದಿನ ರೂಪಕ್ಕೆ ಮರಳಿ ಬರಲಾರದೋ, ಹಾಗೆ ನೀವು ಈ ಅಮೂಲ್ಯವಾದ ಸಮಯವನ್ನು ಹಾಳು ಮಾಡಿಕೊಂಡರೆ, ಅದನ್ನು ಮರಳಿ ಪಡೆಯಲಾರಿರಿ.

ಮುದ್ದೇನಹಳ್ಳಿಯ ಒಬ್ಬ ಹುಡುಗ ಸ್ವಾಮಿಯ ಹತ್ತಿರ ಬಂದು, ತಾನು ಏರೋನಾಟಿಕಲ್ ಇಂಜಿನಿಯರಿಂಗ್​ನಲ್ಲಿ ಮುಂದಿನ ಪದವಿ ಅಧ್ಯಯನ ಮಾಡಬೇಕೆಂದು ಬಯಸಿದ್ದೇನೆ ಎಂದು ಕೇಳಿದ. ಈ ಕುರಿತು ವಿಚಾರಿಸಿದಾಗ ತಿಳಿದಿದ್ದೇನೆಂದರೆ, ಅವನು ಯಾವುದೋ ಒಂದು ಮದುವೆಯ ಸಮಾರಂಭಕ್ಕೆ ಹೋದಾಗ, ಅವನ ಕುಟುಂಬದ ಸ್ನೇಹಿತರೊಬ್ಬರು ಅವನಿಗೆ ಈ ಶಿಕ್ಷಣ ಕೊಡಿಸಿದರೆ ಚೆನ್ನಾಗಿರುತ್ತದೆ ಎಂದು ಹೇಳಿದ್ದರಿಂದ ಅವನಿಗೆ ಇದನ್ನು ಕಲಿಯುವ ಬಯಕೆ ಉಂಟಾಗಿತ್ತು. ಈ ಪಠ್ಯವು ಏನೆಂಬುದು ಅವನಿಗೂ, ಅವನ ತಂದೆಗೂ ಅರಿವಿರಲಿಲ್ಲ. ಹೀಗೆ ಕೇವಲ ಯಾರೋ ಹೇಳಿದ ಕಾರಣಕ್ಕೆ ಜೀವನದ ಮಹತ್ವದ ನಿರ್ಧಾರ ತೆಗೆದುಕೊಳ್ಳುವುದು ಎಷ್ಟು ಅಪಾಯಕಾರಿ!

ಇದಕ್ಕೆ ತದ್ವಿರುದ್ಧವಾಗಿ, ಹಾಸನ ವಿದ್ಯಾನಿವೇಶನದ ಆರನೆಯ ತರಗತಿಯ ಒಬ್ಬ ವಿದ್ಯಾರ್ಥಿಯು ಸ್ವಾಮಿಗೆ ಪತ್ರ ಬರೆದು, ಸಮುದ್ರದ ಮಧ್ಯದಲ್ಲಿ ಅತ್ಯಂತ ಸುಸಜ್ಜಿತವಾದ ರಾಕೆಟ್ ಉಡಾವಣೆಯ ಕೇಂದ್ರ ಸ್ಥಾಪಿಸಬೇಕೆನ್ನುವ ಕುರಿತು ವಿವರವಾದ ನಕ್ಷೆಯೊಂದಿಗೆ ಪ್ರಸ್ತುತಪಡಿಸಿದ್ದ. ಆ ಹುಡುಗನಿಗೆ ಏರೋನಾಟಿಕಲ್ ಇಂಜಿನಿಯರಿಂಗ್​ನಲ್ಲಿ ಪದವಿ ಪಡೆಯಲು ಸಲಹೆ ಕೊಟ್ಟರೆ ಅದು ಯೋಗ್ಯ.

ಯಾರದ್ದಾದರೂ ಸಲಹೆಯನ್ನು ಕಣ್ಣುಮುಚ್ಚಿ ಅನುಸರಿಸುವ ಬದಲಾಗಿ, ನೀವು ಮುಂದುವರಿಸಬೇಕೆಂದಿರುವ ವಿಷಯದ ಕುರಿತು ನಿಮಗೆ ಆಸಕ್ತಿಯಿರಬೇಕು, ಪ್ರೇಮವಿರಬೇಕು. ಅನಾರೋಗ್ಯಪೀಡಿತರಿಗೆ ಮತ್ತು ದುರ್ಬಲರಿಗೆ ಸೇವೆ ಸಲ್ಲಿಸುವ ಬಯಕೆ ಕೆಲವರಿಗೆ ಇರುತ್ತದೆ. ಅವರು ವೈದ್ಯರಾಗಬಹುದು. ದೌರ್ಭಾಗ್ಯದ ಸಂಗತಿಯೆಂದರೆ, ಕೆಲವರು ವೈದ್ಯಕೀಯ ಶಿಕ್ಷಣವನ್ನು ಮುಗಿಸಿದ್ದರೂ ಆ ವೃತ್ತಿಯಲ್ಲಿ ಆಸಕ್ತಿಯನ್ನೇ ಹೊಂದಿರುವುದಿಲ್ಲ.

ಕೆಲವು ಅತ್ಯಂತ ಹೆಚ್ಚು ಸಂಬಳ ಹೊಂದಿರುವ ಸಾಫ್ಟ್ವೇರ್ ಇಂಜಿನಿಯರುಗಳು ತಮ್ಮ ಕೆಲಸ ತೊರೆದು ಮರಳಿ ತಮ್ಮ ಹಳ್ಳಿಗಳಿಗೆ ಹೋಗಿ ಕೃಷಿ ಮಾಡುತ್ತಾರೆ. ಹೀಗೇಕೆ ಆಗುತ್ತಿದೆ ಎಂದರೆ, ಅವರಿಗೆ ಸರಿಯಾದ ಸಮಯದಲ್ಲಿ ಸರಿಯಾದ ಮಾರ್ಗದರ್ಶನ ದೊರಕಿರುವುದಿಲ್ಲ. ಆ ಎಲ್ಲ ಶಿಕ್ಷಣವು ಎಷ್ಟೊಂದು ವ್ಯರ್ಥವಲ್ಲವೇ?

ಆಸಕ್ತಿಯೇ ಯಶಸ್ಸಿನ ಗುಟ್ಟು: ಆದ್ದರಿಂದ, ಪ್ರತಿಯೊಬ್ಬ ವಿದ್ಯಾರ್ಥಿಗೆ ಒಂದು ನಿರ್ದಿಷ್ಟವಾದ ಕ್ಷೇತ್ರದಲ್ಲಿ ಅಥವಾ ವಿಷಯದಲ್ಲಿ ಆಸಕ್ತಿಯು ಅವನ ಹೃದಯಾಂತರಾಳದಿಂದಲೇ ಬರಬೇಕು. ಕೆಲವರಿಗೆ ಸಂಗೀತದಲ್ಲಿ ಆಸಕ್ತಿ ಇರುತ್ತದೆ ಮತ್ತು ಅವರು ಹಾಡುವುದರಲ್ಲಿಯೇ ಸಂತೋಷ ಪಡೆಯುತ್ತಾರೆ; ಕೆಲವರಿಗೆ ಕ್ರೀಡೆಯಲ್ಲಿ ಆಸಕ್ತಿ ಹೆಚ್ಚು; ಕೆಲವರು ನಿಸರ್ಗದ ನಡುವೆ ಇದ್ದು ಸಂತೋಷ ಪಡುತ್ತಾರೆ. ಕೆಲವರಿಗೆ ಯಂತ್ರಗಳಲ್ಲಿ ಮತ್ತು ವಾಹನವಿಜ್ಞಾನದಲ್ಲಿ ಆಸಕ್ತಿ ಇರುತ್ತದೆ. ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್​ಗೆ ಸೇರಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಕಲೆ ಮತ್ತು ವಿನ್ಯಾಸ ಶಾಸ್ತ್ರಗಳಲ್ಲಿ ಆಸಕ್ತಿಯಿರುವವರು ವಾಸ್ತುಶಿಲ್ಪಿಗಳಾಗಬಹುದು. ಯಾರಿಗೆ ಭಾಷಣಕಲೆ ಮತ್ತು ಚರ್ಚೆಗಳಲ್ಲಿ ಪ್ರಬುದ್ಧತೆ ಇರುತ್ತದೆಯೋ, ಅವರು ವಕೀಲವೃತ್ತಿಯನ್ನು ಆರಿಸಿಕೊಳ್ಳಬಹುದು. ಹಾಗೆಯೇ, ಯಾರಿಗೆ ಲೆಕ್ಕದಲ್ಲಿ ಪರಿಣತಿ ಇರುತ್ತದೆಯೋ, ಅವರು ವ್ಯವಹಾರಗಳ ಕ್ಷೇತ್ರವನ್ನು ಸೇರಬಹುದು. ನೀವೇನು ಮಾಡುತ್ತೀರೋ, ಅದನ್ನು ಸಂತೋಷದಿಂದ ಮಾಡುವುದೇ ಬಹಳ ಮುಖ್ಯ.

ದೇವರ ದೃಷ್ಟಿಯಲ್ಲಿ, ಯಾವುದೇ ಸತ್ಕರ್ಮ ಸಣ್ಣದೂ ಅಲ್ಲ, ದೊಡ್ಡದೂ ಅಲ್ಲ. ಕರ್ಮಣ್ಯೇ ನಮಃ. ಎಲ್ಲ ವಿಧದ ಕೆಲಸಗಳಿಗೂ ವಂದನೆಗಳು. ನೀವೇನು ಮಾಡುತ್ತೀರೊ ಅದನ್ನು ಅವನಿಗೆ ಅರ್ಪಿಸಿಬಿಡಿ, ಅವನು ಅವೆಲ್ಲವನ್ನೂ ಸ್ವೀಕರಿಸಿ, ನಿಮ್ಮ ಮೇಲೆ ಅನುಗ್ರಹದ ಮಳೆಯನ್ನೇ ಸುರಿಸುತ್ತಾನೆ.

ಚಾತುರ್ವಣರ್ಣಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ (ಭಗವದ್ಗೀತೆ 4.13)

ಗುಣಕರ್ಮಗಳ ವಿಭಾಗದ ಮೂಲಕ ಚಾತುರ್ವಣರ್Âವು ನನ್ನಿಂದ ಸೃಷ್ಟಿಸಲ್ಪಟ್ಟಿದೆ. ಜನರ ಗುಣಗಳು ಮತ್ತು ಕರ್ಮಗಳ ವಿಭಿನ್ನತೆಗಳ ಆಧಾರದ ಮೇಲೆ ಈ ನಾಲ್ಕು ವರ್ಣಗಳನ್ನು ಸೃಷ್ಟಿಸಲಾಗಿದೆ. ಎಲ್ಲ ಕರ್ಮ(ಕೆಲಸ ಅಥವಾ ಚಟುವಟಿಕೆಗಳು)ಗಳನ್ನು ಜನರ ಗುಣಗಳ ಆಧಾರದ ಮೇಲೆ ದೇವರೇ ವಿಭಾಗಿಸಿದ್ದಾನೆ. ಧೈರ್ಯವಂತ ಜನರು ಸೈನ್ಯವನ್ನು ಸೇರಿ ದೇಶಕ್ಕಾಗಿ ಹೋರಾಡುವ ಬಯಕೆ ಹೊಂದಿರುತ್ತಾರೆ. ಆ ಜನರು ಹಾಡುವುದನ್ನು ತಮ್ಮ ವೃತ್ತಿಯನ್ನಾಗಿ ಮಾಡಿಕೊಳ್ಳಲಾರರು ಮತ್ತು ಸಂಗೀತಗಾರರು ಸೈನಿಕರಾಗಲಾರರು. ಯಾವುದೇ ಕೆಲಸವು ವ್ಯಕ್ತಿಯ ಗುಣಗಳಿಗೆ ಹೊಂದಿಕೊಂಡರೆ ಮಾತ್ರ ಸಂತೋಷ ಸಿಗುತ್ತದೆ. ಹಣ-ಸಂಪತ್ತುಗಳು ಮನುಷ್ಯನಿಗೆ ಐಷಾರಾಮಿ ಜೀವನವನ್ನು ಕೊಡಬಲ್ಲವು. ಆದರೆ, ಅವು ಶಾಶ್ವತವಾದ ಆನಂದವನ್ನು ನೀಡಲಾರವು.

ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರಿಗೆ ಸಿವಿಲ್ ಇಂಜಿನಿಯರಿಂಗ್​ನಲ್ಲಿ ಅಪ್ರತಿಮ ಆಸಕ್ತಿಯಿತ್ತು. ಅವರು ಚಿಕ್ಕಂದಿನಿಂದಲೇ ಅಣೆಕಟ್ಟುಗಳನ್ನು ಕಟ್ಟುವ ಮತ್ತು ಜನರಿಗೆ ಕಲ್ಯಾಣಕರ ಕೆಲಸಗಳನ್ನು ಮಾಡುವ ಕನಸುಗಳನ್ನು ಕಂಡಿದ್ದರು. ತಮ್ಮ ಶಿಕ್ಷಣವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳದೆ ದೇಶದ ಜನರಿಗೆ ಸಹಾಯವಾಗುವಂಥ ಅಣೆಕಟ್ಟುಗಳನ್ನು ಕಟ್ಟಿ, ತಮ್ಮ ಕನಸುಗಳನ್ನು ಈಡೇರಿಸಿಕೊಂಡರು. ಅವರು ಹಲವಾರು ಬ್ಯಾಂಕುಗಳನ್ನೂ ಮತ್ತು ಕಾರ್ಖಾನೆಗಳನ್ನೂ ನಿರ್ವಿುಸಿ ಎಲ್ಲ ಇಂಜಿನಿಯರುಗಳಿಗೆ ಆದರ್ಶಪ್ರಾಯರಾದರು.

ನಿಸ್ವಾರ್ಥತೆಯೇ ತಳಹದಿ: ಒಂದು ಸಲ, ತ್ಯಾಗರಾಜರಿಗೆ ರಾಜನ ಕೀರ್ತಿ, ವೈಭವಗಳ ಮೇಲೆ ಹಾಡು ರಚಿಸಿ ಹಾಡಲು ರಾಜನಿಂದ ಆಹ್ವಾನ ಬಂತು. ಆ ಕೆಲಸಕ್ಕೆ ಅವರಿಗೆ ಕೈತುಂಬ ಸಂಪತ್ತು ಸಿಗುತ್ತಿತ್ತು. ಬಹುಮಾನಗಳು ಅವರನ್ನು ಅರಸಿ ಬರುತ್ತಿದ್ದವು. ಆ ಆಹ್ವಾನಕ್ಕೆ ಪ್ರತಿಯಾಗಿ ತ್ಯಾಗರಾಜರು, ‘ನಿಧಿ ಚಾಲಾ ಸುಖಮಾ, ರಾಮುನಿ ಸನ್ನಿಧಿ ಸೇವಾ ಸುಖಮಾ?’ ಎಂಬ ಹಾಡಿನ ಮೂಲಕ ಉತ್ತರ ಕೊಟ್ಟರು. ‘ಯಾವುದು ಹೆಚ್ಚು ಸಂತೋಷವನ್ನು ಕೊಡುತ್ತದೆ?- ಲೌಕಿಕ ಸಂಪತ್ತುಗಳೇ ಅಥವಾ ದೇವರ ಅನುಗ್ರಹವೇ?’ ತ್ಯಾಗರಾಜರು ಸಂಗೀತವನ್ನು ಅಮರಗೊಳಿಸಿದ್ದಾರೆ. ನವಕೋಟಿ ನಾರಾಯಣ ಎಂದು ಹೆಸರಾದ ಪುರಂದರದಾಸರು ಶ್ರೀಮಂತ ಅಕ್ಕಸಾಲಿಗನಾಗಿದ್ದರು. ಅವರಿಗೆ ಸಮೃದ್ಧವಾದ ಬಂಗಾರದ ವ್ಯಾಪಾರವೂ ಇತ್ತು. ಆದರೂ ಅವರು ತಮ್ಮದೆಲ್ಲವನ್ನೂ ತ್ಯಜಿಸಿ, ತಮ್ಮ ತಂಬೂರಿಯನ್ನು ನುಡಿಸುತ್ತ ಭಗವಂತನ ಲೀಲೆಗಳನ್ನು ಕೊಂಡಾಡುವ ಕೀರ್ತನೆಗಳನ್ನು ಹಾಡುತ್ತ ಶಾಶ್ವತವಾದ ಆನಂದದಲ್ಲಿ ತಲ್ಲೀನತೆ ಪಡೆದರು.

ಪ್ರಖ್ಯಾತ ಸಂಗೀತ ವಿದ್ವಾಂಸರಾದ ಪಂಡಿತ್ ಭೀಮಸೇನ ಜೋಶಿಯವರ ತಂದೆಗೆ ಅವರು ಸಂಗೀತ ಕಲಿಯುವುದು ಬೇಡವಾಗಿತ್ತು. ಬದಲಾಗಿ, ತಮ್ಮ ಮಗನು ವಕೀಲಿ ವೃತ್ತಿ ನಡೆಸಬೇಕೆಂದು ಬಯಸಿದ್ದರು. ಹೀಗಾಗಿ ಭೀಮಸೇನರು ಮನೆಯನ್ನು ತ್ಯಜಿಸಿ, ತಮ್ಮ ಗುರುಗಳಿಗೆ ಶರಣಾಗಿ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದರು. ಕೆಲವು ವರ್ಷಗಳ ತರುವಾಯ ಅವರು ಭಾರತರತ್ನರಾದರು.

ಸಚಿನ್ ತೆಂಡುಲ್ಕರ್ ಕೂಡ ಶಾಲಾ ವಿದ್ಯಾಭ್ಯಾಸದಲ್ಲಿ ಹಿಂದುಳಿದಿದ್ದು, ಎಲ್ಲ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುತ್ತಿದ್ದರು. ಅವರ ತಂದೆ, ‘ಸಚಿನ್ ಶಾಲೆಯಲ್ಲಿ ಒಳ್ಳೆಯ ಅಂಕ ಪಡೆಯಲಿ’ ಎಂದು ಬಯಸಿದರೆ, ಅವರ ತಾಯಿ ಮತ್ತು ಅಣ್ಣ, ಸಚಿನ್​ಗೆ ಕ್ರಿಕೆಟ್ ಆಡಲು ಪೋ›ತ್ಸಾಹಿಸುತ್ತಿದ್ದರು. ಇವತ್ತು, ಸಚಿನ್ ತೆಂಡುಲ್ಕರ್ ಭಾರತರತ್ನ.

ಇದರಿಂದ ತಿಳಿಯುವುದೇನೆಂದರೆ, ನೀವು ಕೂಡ ಭಾರತರತ್ನ ಆಗಬಹುದು, ಅಥವಾ ವಿಶ್ವರತ್ನರಾಗಲೂಬಹುದು. ಇನ್ನೂ ಮುಂದೆ, ದೇವರತ್ನರೂ ಆಗಬಹುದು.

ನೀವು ಕೇವಲ ಇಂಜಿನಿಯರ್, ವೈದ್ಯ ಅಥವಾ ವಕೀಲರಾಗಿ ಯಶಸ್ವಿಯಾಗುವುದೇ ಜೀವನದ ಗುರಿಯಲ್ಲ. ನಿಮ್ಮ ಅಭಿರುಚಿ, ಸಾಮರ್ಥ್ಯ ಮತ್ತು ಸ್ವಭಾವವನ್ನು ಅರಿತು, ಅದಕ್ಕೆ ತಕ್ಕ ಮಾರ್ಗವನ್ನು ಆರಿಸಿಕೊಳ್ಳಬೇಕು. ಜ್ಞಾನವನ್ನು ಕೇವಲ ಸ್ವಾರ್ಥಕ್ಕಾಗಿ ಬಳಸದೇ, ಪ್ರೀತಿಯಿಂದ ಸಮಾಜದ ಸೇವೆಗೆ ಅರ್ಪಿಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಆಗ ದೇವರ ಅನುಗ್ರಹವೂ ಸಹಜವಾಗಿ ಲಭಿಸುತ್ತದೆ. ಮಾನವ ಜೀವನದ ಸಾರ್ಥಕತೆ ಅವನು ಗಳಿಸಿದ ಸಂಪತ್ತಿನಲ್ಲಿ ಅಲ್ಲ; ತನ್ನ ಪ್ರತಿಭೆಯನ್ನು ಎಷ್ಟು ನಿಸ್ವಾರ್ಥವಾಗಿ ಲೋಕಹಿತಕ್ಕೆ ಬಳಸಿದ್ದಾನೆ ಎಂಬುದರಲ್ಲಿ ಅಡಕವಾಗಿದೆ.

-(ಲೇಖಕರು ಜಾಗತಿಕ ಮಾನವತಾವಾದಿ ಹಾಗೂ ಆಧ್ಯಾತ್ಮಿಕ ಗುರುಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net