ಭಾರತ-ಪಾಕ್ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ ಬಗ್ಗೆ ಚೀನಾ ಹೇಳಿಕೆ; ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ | Congress

ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್
Published on
ನವದೆಹಲಿ: ಭಾರತ -ಪಾಕಿಸ್ತಾನ ನಡುವೆ ನಡೆದ ಮೇನಲ್ಲಿ ನಡೆದ ಆಪರೇಷನ್​ ಸಿಂಧೂರ್ ಕಾರ್ಯಾಚರಣೆಯಲ್ಲಿ ಎರಡೂ ರಾಷ್ಟ್ರಗಳ ನಡುವೆ ಮಧ್ಯಸ್ಥಿಕೆ ವಹಿಸಿ ಯುದ್ಧ ನಿಲ್ಲಿಸಿದ್ದೇವೆ ಎಂಬ ಚೀನಾ ವಿದೇಶಾಂಗ ಸಚಿವರ ಹೇಳಿಕೆ ಸಂಬಂಧ ಇಂದು(ಡಿ. 31) ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, 2025 ಮೇ 10ರಂದು ಪಾಕ್ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ನಾನು ಮಧ್ಯಸ್ಥಿಕೆ ವಹಿಸಿ ನಿಲ್ಲಿಸಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನೇಕ ವೇದಿಕೆಗಳಲ್ಲಿ ಸುಮಾರು 65 ಬಾರಿ ಹೇಳಿದ್ದಾರೆ. ಆದರೆ ಈ ಬಗ್ಗೆ ಮೋದಿಯವರು ಯಾವುದೇ ಮಾತನ್ನು ಆಡಲಿಲ್ಲ. ಈಗ ಚೀನಾದ ವಿದೇಶಾಂಗ ಸಚಿವರು ಇದೇ ರೀತಿ ಮಧ್ಯಸ್ಥಿಕೆ ವಹಿಸಿದ್ದಾಗಿ ಹೇಳಿದ್ದಾರೆ ಎಂದು ತರಾಟೆಗೆ ತೆಗದುಕೊಂಡಿದ್ದಾರೆ.
2025 ಜುಲೈ 4ರಂದು ಸೇನಾ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಾಹುಲ್ ಸಿಂಗ್ ಅವರು ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತವು ವಾಸ್ತವವಾಗಿ ಚೀನಾವನ್ನು ಎದುರಿಸುತ್ತಿದೆ ಮತ್ತು ಹೋರಾಡುತ್ತಿದೆ ಎಂದು ಸಾರ್ವಜನಿಕವಾಗಿ ಹೇಳಿದ್ದರು. ಚೀನಾ ಪಾಕಿಸ್ತಾನದೊಂದಿಗೆ ನಿರ್ಣಾಯಕವಾಗಿ ಹೊಂದಾಣಿಕೆ ಮಾಡಿಕೊಂಡಿರುವುದರಿಂದ, ಎರಡು ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸಿರುವುದಾಗಿ ಚೀನಾದ ಹೇಳಿದೆ. ಇದು ಕಳವಳಕಾರಿ ಬದಲಾಗಿ ನಮ್ಮ ದೇಶದ ಭದ್ರತೆಯನ್ನು ತಮಾಷೆ ಮಾಡುತ್ತಿರುವಂತೆ ಕಾಣುತ್ತಿದೆ ಎಂದು ಕಿಡಿಕಾರಿದ್ದಾರೆ.
ಚೀನಾದೊಂದಿಗಿನ ನಮ್ಮ ಸಂಬಂಧದ ಸಂದರ್ಭದಲ್ಲೂ ಈ ಹೇಳಿಕೆಯನ್ನು ಅರ್ಥಮಾಡಿಕೊಳ್ಳಬೇಕು. ನಾವು ಅವರೊಂದಿಗೆ ಮರು ಮಾತುಕತೆ ಆರಂಭಿಸಿದ್ದೇವೆ ಆದರೆ ದುರದೃಷ್ಟವಶಾತ್, ಅದು ಚೀನಾದ ನಿಯಮಗಳ ಮೇಲೆ ಆಗಿದೆ. 2020ರ ಗಾಲ್ವಾನ್ ಘಟನೆ ಸಂಬಂಧ ಪ್ರಧಾನಿ ಮೋದಿ ಚೀನಾಕ್ಕೆ ಕ್ಲೀನ್ ಚಿಟ್ ನೀಡಿದ್ದಾರೆ. ಇದು ಭಾರತದ ಸ್ಥಾನವನ್ನು ಗಣನೀಯವಾಗಿ ದುರ್ಬಲಗೊಳಿಸಿದೆ ಎಂದು ಆಕ್ರೋಶ ವ್ಯಕ್ತಡಿಸಿದ್ದಾರೆ.

ಚೀನಾ ಹೇಳಿದ್ದೇನು..?

ಚೀನಾದ ವಿದೇಶಾಂಗ ಸಂಬಂಧಗಳ ಕುರಿತಾದ ವಿಚಾರ ಸಂಕಿರಣದಲ್ಲಿ ಮಾತನಾಡಿದ ವಾಂಗ್ ಯಿ, ಎರಡನೇ ಮಹಾಯುದ್ಧದ ಬಳಿಕ ಈ ವರ್ಷ ಹೆಚ್ಚಾಗಿ ಸ್ಥಳೀಯ ಯುದ್ಧಗಳು ಮತ್ತು ಗಡಿಯಾಚೆಗಿನ ಘರ್ಷಣೆಗಳು ಭುಗಿಲೆದ್ದವು. ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತೆ ಹರಡುತ್ತಲೇ ಇತ್ತು, ಶಾಶ್ವತ ಶಾಂತಿಯನ್ನು ನಿರ್ಮಿಸುವ ಸಲುವಾಗಿ ಚೀನಾ ವಸ್ತುನಿಷ್ಠ ಮತ್ತು ತಟಸ್ಥ ನಿಲುವನ್ನು ತೆಗೆದುಕೊಂಡಿದೆ ಎಂದು ಹೇಳಿದರು.
ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಚೀನಾದ ಈ ವಿಧಾನವನ್ನು ಅನುಸರಿಸಿ, ನಾವು ಉತ್ತರ ಮ್ಯಾನ್ಮಾರ್, ಇರಾನಿನ ಪರಮಾಣು ಸಮಸ್ಯೆ, ಪಾಕಿಸ್ತಾನ ಮತ್ತು ಭಾರತದ ನಡುವಿನ ಉದ್ವಿಗ್ನತೆ, ಪ್ಯಾಲೆಸ್ಟೈನ್ ಮತ್ತು ಇಸ್ರೇಲ್ ನಡುವಿನ ಸಮಸ್ಯೆಗಳು ಮತ್ತು ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವಿನ ಇತ್ತೀಚಿನ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸಿದ್ದೇವೆ ಎಂದು ಚೀನಾದ ವಿದೇಶಾಂಗ ಸಚಿವರು ಹೇಳಿಕೊಂಡಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net