_1778692455056.webp?w=480&auto=format%2Ccompress&fit=max)
_1778692455056.webp?w=480&auto=format%2Ccompress&fit=max)
ಬಾಂಗ್ಲಾದೇಶದ ತೀಸ್ತಾ ನದಿ ನಿರ್ವಹಣಾ ಯೋಜನೆಯಲ್ಲಿ ಚೀನಾದ ಹಸ್ತಕ್ಷೇಪ ಭಾರತದ ಪಾಲಿಗೆ ಆತಂಕಕಾರಿ ಬೆಳವಣಿಗೆ. ಭಾರತ ಮತ್ತು ಬಾಂಗ್ಲಾದೇಶದ ನಡುವೆ ತೀಸ್ತಾ ನದಿ ನೀರು ಹಂಚಿಕೆಯ ವಿವಾದ ದಶಕಗಳಿಂದ ಇತ್ಯರ್ಥವಾಗದೆ ಉಳಿದಿದೆ. ಈ ನಡುವೆ ಚೀನಾ ಈ ಯೋಜನೆಯಲ್ಲಿ ಅಪಾರ ಪ್ರಮಾಣದ ಹಣ ಹೂಡಿಕೆ ಮಾಡಲು ಮುಂದಾಗಿರುವುದು ಚಿಂತೆಗೆ ಕಾರಣವಾಗಿದೆ. ಭಾರತದ ಆಯಕಟ್ಟಿನ ಸ್ಥಳವಾದ ‘ಸಿಲಿಗುರಿ ಕಾರಿಡಾರ್’ (ಚಿಕನ್ ನೆಕ್) ಬಳಿ ಚೀನಾದ ಉಪಸ್ಥಿತಿ ಹೆಚ್ಚಲಿದೆ. ಇದು ಭಾರತದ ಭದ್ರತೆಗೆ ನೇರ ಸವಾಲು. ಇದರಿಂದ ಈಶಾನ್ಯ ರಾಜ್ಯಗಳ ಸಂಪರ್ಕಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ. ಅಲ್ಲದೆ, ಗಡಿಯ ಸಮೀಪದಲ್ಲಿ ಚೀನಾದ ತಾಂತ್ರಿಕ ಮತ್ತು ಮಿಲಿಟರಿ ಪ್ರಭಾವ ಹೆಚ್ಚುವುದು ಭಾರತದ ಪ್ರಾದೇಶಿಕ ರಾಜತಾಂತ್ರಿಕತೆಯ ಮೇಲೆ ಒತ್ತಡ ಹೇರಲಿದೆ. ತನ್ನ ನೆರೆಯ ರಾಷ್ಟ್ರಗಳ ಮೇಲೆ ಚೀನಾ ಸಾಧಿಸುತ್ತಿರುವ ಆರ್ಥಿಕ ಹಿಡಿತ ಭಾರತಕ್ಕೆ ರಾಜತಾಂತ್ರಿಕವಾಗಿ ಹೊಸ ಸವಾಲನ್ನು ಒಡ್ಡಿದೆ.
ಬಾಂಗ್ಲಾದೇಶದ ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿರುವ ಚೀನಾ ಈಗ ಮತ್ತೊಂದು ಹೆಜ್ಜೆ ಮುಂದಿರಿಸಿದೆ. ಚೀನಾ ತೀಸ್ತಾ ನದಿ ನಿರ್ವಹಣಾ ಯೋಜನೆಯಲ್ಲಿ ಆಸಕ್ತಿ ತೋರಿಸುತ್ತಿರುವುದು ಮತ್ತು ಹೂಡಿಕೆ ಮಾಡಲು ಮುಂದಾಗಿರುವುದು ಭಾರತದ ಪಾಲಿಗೆ ಭದ್ರತಾ ಮತ್ತು ರಾಜತಾಂತ್ರಿಕ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ಬಾಂಗ್ಲಾದೇಶದ ಮೂಲಕ ಭಾರತದ ಗಡಿಯ ಸಮೀಪಕ್ಕೆ ಚೀನಾ ಕಾಲಿಡುತ್ತಿರುವುದು ಹಲವು ಆತಂಕಗಳಿಗೆ ಕಾರಣವಾಗಿದೆ. ಮುಖ್ಯವಾಗಿ, ಸಿಲಿಗುರಿ ಕಾರಿಡಾರ್ ಭಾರತದ ಪಾಲಿಗೆ ನಿರ್ಣಾಯಕವಾದ ಆಯಕಟ್ಟಿನ ಸ್ಥಳವಾಗಿದೆ. ಕೇವಲ 20ರಿಂದ 22 ಕಿ.ಮೀ ಅಗಲವಿರುವ ಈ ಭೂಭಾಗವು ಈಶಾನ್ಯ ಭಾರತದ ಏಳು ರಾಜ್ಯಗಳನ್ನು ಉಳಿದ ಭಾರತದೊಂದಿಗೆ ಸಂಪರ್ಕಿಸುತ್ತದೆ. ತೀಸ್ತಾ ನದಿ ಯೋಜನೆಯು ಭಾರತದ ಗಡಿಯಿಂದ ಕೇವಲ 100 ಕಿ.ಮೀ. ದೂರದಲ್ಲಿದೆ. ಇಲ್ಲಿ ಚೀನಾದ ಇಂಜಿನಿಯರ್‌ಗಳು ಮತ್ತು ತಂತ್ರಜ್ಞರ ಉಪಸ್ಥಿತಿಯು ಭಾರತದ ಈ ‘ಚಿಕನ್ ನೆಕ್’ ಪ್ರದೇಶದ ಮೇಲೆ ನೇರವಾಗಿ ನಿಗಾ ಇಡಲು ಅವರಿಗೆ ಅವಕಾಶ ಮಾಡಿಕೊಡುತ್ತದೆ. ಯುದ್ಧ ಅಥವಾ ಸಂಘರ್ಷದ ಸಮಯದಲ್ಲಿ ಚೀನಾ ಈ ಕಾರಿಡಾರ್ ಅನ್ನು ಗುರಿಯಾಗಿಸಿಕೊಂಡು ಈಶಾನ್ಯ ಭಾರತದ ಸಂಪರ್ಕವನ್ನೇ ಕಡಿತಗೊಳಿಸುವ ಕುತಂತ್ರ ರೂಪಿಸಬಹುದು ಎಂಬುದು ಭಾರತದ ದೊಡ್ಡ ಆತಂಕ.
ಚೀನಾ ತನ್ನ ಆರ್ಥಿಕ ಬಲದ ಮೂಲಕ ಬಾಂಗ್ಲಾದೇಶವನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಇದು ಭಾರತದ ನೆರೆಯ ರಾಷ್ಟ್ರದೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರಲಿದೆ. ಅಲ್ಲದೆ, ಶೇಖ್ ಹಸೀನಾ ಅವರನ್ನು 2024ರ ಆಗಸ್ಟ್‌ನಲ್ಲಿ ಪದಚ್ಯುತಗೊಳಿಸಿದ ಬಳಿಕ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿವೆ. ಇತ್ತೀಚೆಗೆ ಅಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆಯಾದರೂ, ಅದರ ವಿದೇಶಾಂಗ ನೀತಿ ಮತ್ತು ಭಾರತದೊಂದಿಗಿನ ಸಂಬಂಧದ ನಿಲುವು ಇನ್ನೂ ಸ್ಪಷ್ಟಗೊಂಡಿಲ್ಲ. ಭಾರತದ ನೆರೆರಾಷ್ಟ್ರಗಳಾದ ಶ್ರೀಲಂಕಾ, ಮ್ಯಾನ್ಮಾರ್, ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ ತನ್ನ ಪ್ರಭಾವ ಹೆಚ್ಚಿಸಲು ಚೀನಾ ಪ್ರಯತ್ನಿಸುತ್ತಲೇ ಇದೆ. ಈ ಸಣ್ಣ ರಾಷ್ಟ್ರಗಳಿಗೆ ಸಾಲ ನೀಡಿ ತನ್ನ ಹಿತವನ್ನು ಸಾಧಿಸಿಕೊಳ್ಳುತ್ತಿದೆ. ಚೀನಾ ಮತ್ತು ಬಾಂಗ್ಲಾದೇಶದ ನಡುವೆ ಬೆಳೆಯುತ್ತಿರುವ ಆರ್ಥಿಕ ಮತ್ತು ರಕ್ಷಣಾತ್ಮಕ ನಿಕಟತೆಯು ದಕ್ಷಿಣ ಏಷ್ಯಾದಲ್ಲಿ ಭಾರತದ ಪ್ರಭಾವಕ್ಕೆ ದೊಡ್ಡ ರಾಜತಾಂತ್ರಿಕ ಸವಾಲನ್ನು ಒಡ್ಡುತ್ತಿದೆ. 'ನೆರೆಹೊರೆಯವರೇ ಮೊದಲು' ಎಂಬ ಭಾರತದ ನೀತಿಗೆ ಇದು ನೇರ ಪೈಪೋಟಿ ನೀಡುತ್ತಿದೆ.
ತೀಸ್ತಾ ನದಿ ನೀರಿನ ಹಂಚಿಕೆ ವಿಷಯವು ಭಾರತ ಮತ್ತು ಬಾಂಗ್ಲಾದೇಶದ ನಡುವೆ ದಶಕಗಳಿಂದ ನನೆಗುದಿಗೆ ಬಿದ್ದ ವಿವಾದವಾಗಿದೆ. ಆದರೆ, ಚೀನಾ ಈ ಯೋಜನೆಯ ಮೂಲಕ ನದಿಯ ಹರಿವು, ಹೂಳು ಮತ್ತು ಭೌಗೋಳಿಕ ದತ್ತಾಂಶಗಳನ್ನು ಸಂಗ್ರಹಿಸುತ್ತದೆ. ಈ ಮಾಹಿತಿಯು ಭವಿಷ್ಯದಲ್ಲಿ ನದಿಯ ಮೇಲೆ ಅಣೆಕಟ್ಟು ಕಟ್ಟಲು ಅಥವಾ ನೀರನ್ನು ನಿಯಂತ್ರಿಸಲು ಚೀನಾಕ್ಕೆ ಸಹಕಾರಿಯಾಗಬಹುದು. ಭಾರತವನ್ನು ಸುತ್ತುವರಿಯುವ ಚೀನಾದ ‘ಸ್ಟ್ರಿಂಗ್ ಆಫ್ ಪರ್ಲ್ಸ್’ ನೀತಿಯ ಭಾಗವಾಗಿ ಈ ಯೋಜನೆಯನ್ನು ನೋಡಲಾಗುತ್ತಿದೆ. ಶ್ರೀಲಂಕಾ (ಹಂಬಂತೋಟ), ಪಾಕಿಸ್ತಾನ (ಗ್ವಾದರ್) ಮತ್ತು ಮ್ಯಾನ್ಮಾರ್‌ಗಳ ನಂತರ ಈಗ ಬಾಂಗ್ಲಾದೇಶದ ಮೂಲಕ ಭಾರತದ ಭೂಗಡಿಯ ಸಮೀಪಕ್ಕೆ ಚೀನಾ ತಲುಪುತ್ತಿದೆ. ನದಿ ನಿರ್ವಹಣೆ ಹೆಸರಿನಲ್ಲಿ ಚೀನಾ ಬಾಂಗ್ಲಾದೇಶಕ್ಕೆ ಹತ್ತಿರವಾಗುತ್ತಿರುವುದು, ಬಾಂಗ್ಲಾ ಜನರಲ್ಲಿ ಭಾರತದ ವಿರುದ್ಧ ಅಸಮಾಧಾನ ಮೂಡಿಸಲು ಮತ್ತು ಚೀನಾ ಆಪ್ತಮಿತ್ರ ಎಂಬ ಭಾವನೆ ಬೆಳೆಸಲು ಪ್ರೇರಣೆಯಾಗುತ್ತಿದೆ.
ಬಾಂಗ್ಲಾದೇಶವು ಭಾರತದ ಈಶಾನ್ಯ ರಾಜ್ಯಗಳೊಂದಿಗೆ ಸುದೀರ್ಘ ಗಡಿಯನ್ನು ಹಂಚಿಕೊಂಡಿದೆ. ಬಾಂಗ್ಲಾದೇಶದಲ್ಲಿ ಚೀನಾದ ಪರವಾದ ಸರ್ಕಾರ ಅಥವಾ ಪ್ರಭಾವ ಹೆಚ್ಚಾದರೆ, ಈಶಾನ್ಯ ಭಾರತದ ಬಂಡಾಯ ಗುಂಪುಗಳಿಗೆ ಪರೋಕ್ಷ ಬೆಂಬಲ ಸಿಗುವ ಅಥವಾ ಗಡಿ ಭಾಗದಲ್ಲಿ ಅಸ್ಥಿರತೆ ಉಂಟಾಗುವ ಭೀತಿ ಭಾರತಕ್ಕಿದೆ.
ಚೀನಾ ಹೂಡಿಕೆ ಮಾಡುವ ಮೂಲಸೌಕರ್ಯ ಯೋಜನೆಗಳು ಮೇಲ್ನೋಟಕ್ಕೆ ನಾಗರಿಕ ಉದ್ದೇಶಕ್ಕೆ (ನದಿಯ ಹೂಳು ತೆಗೆಯುವುದು, ತಡೆಗೋಡೆ ನಿರ್ಮಾಣ) ಎಂದು ಕಂಡರೂ, ಅವುಗಳನ್ನು ತುರ್ತು ಸಂದರ್ಭದಲ್ಲಿ ಮಿಲಿಟರಿ ಉದ್ದೇಶಗಳಿಗಾಗಿ ಬಳಸುವ ಸಾಧ್ಯತೆ ಇರುತ್ತದೆ. ಅಲ್ಲಿ ನಿರ್ಮಾಣವಾಗುವ ಬಲವಾದ ರಸ್ತೆಗಳು ಅಥವಾ ಸೇತುವೆಗಳು ಚೀನಾದ ಸೇನಾ ಚಟುವಟಿಕೆಗಳಿಗೆ ಪೂರಕವಾಗಬಹುದು ಎಂಬುದು ರಕ್ಷಣಾ ತಜ್ಞರ ಅಭಿಪ್ರಾಯ. ಅಲ್ಲದೆ, ಬಾಂಗ್ಲಾದೇಶಕ್ಕೆ ಸಾಲ ನೀಡುವ ಮೂಲಕ ಅದನ್ನು ಸಾಲದ ಸುಳಿಯಲ್ಲಿ ಸಿಲುಕಿಸಿ, ಅಲ್ಲಿನ ಆಯಕಟ್ಟಿನ ಪ್ರದೇಶಗಳಲ್ಲಿ ಚೀನಾ ಕಾಯಂ ನೆಲೆ ಕಂಡುಕೊಳ್ಳಬಹುದು. ಇದರಿಂದ ಭಾರತದ ಗಡಿಯಂಚಿನಲ್ಲಿ ಸದಾ ಕಾಲ ಚೀನಾದ ಹಸ್ತಕ್ಷೇಪ ಇರುವಂತಾಗುತ್ತದೆ.
ಚೀನಾ ತನ್ನ ‘ಬೆಲ್ಟ್ ಆಂಡ್ ರೋಡ್ ಇನಿಶಿಯೇಟಿವ್’ (ಬಿಆರ್‌ಐ) ಅಡಿಯಲ್ಲಿ ಬಾಂಗ್ಲಾದೇಶದ ಮೂಲಸೌಕರ್ಯ ಯೋಜನೆಗಳಲ್ಲಿ ಬಿಲಿಯನ್‌ಗಟ್ಟಲೆ ಡಾಲರ್ ಹೂಡಿಕೆ ಮಾಡುತ್ತಿದೆ. ಬಾಂಗ್ಲಾದೇಶವು ಚೀನಾದ ಸಾಲವನ್ನು ತೀರಿಸಲಾಗದ ಸ್ಥಿತಿಗೆ ತಲುಪಿದರೆ, ಅಲ್ಲಿನ ಆಯಕಟ್ಟಿನ ಬಂದರು ಅಥವಾ ಭೂಭಾಗಗಳು ಚೀನಾದ ವಶವಾಗಬಹುದು. ಇದು ಭಾರತದ ಗಡಿಯಲ್ಲೇ ಚೀನಾದ ಶಾಶ್ವತ ಉಪಸ್ಥಿತಿಗೆ ದಾರಿ ಮಾಡಿಕೊಡುತ್ತದೆ. ಬಾಂಗ್ಲಾದೇಶವು ತನ್ನ ಸೇನಾ ಶಸ್ತ್ರಾಸ್ತ್ರಗಳಿಗಾಗಿ ಚೀನಾದ ಮೇಲೆ ಅತಿ ಹೆಚ್ಚು ಅವಲಂಬಿತವಾಗಿದೆ. ಸಬ್‌ಮರೀನ್‌ಗಳು, ಯುದ್ಧ ವಿಮಾನಗಳು ಮತ್ತು ಕ್ಷಿಪಣಿ ವ್ಯವಸ್ಥೆಗಳನ್ನು ಚೀನಾದಿಂದಲೇ ಖರೀದಿಸುತ್ತಿದೆ. ಬಾಂಗ್ಲಾದೇಶದ ಮಿಲಿಟರಿ ತರಬೇತಿ ಮತ್ತು ರಕ್ಷಣಾ ತಂತ್ರಜ್ಞಾನದಲ್ಲಿ ಚೀನಾದ ಹಸ್ತಕ್ಷೇಪ ಹೆಚ್ಚಾದರೆ, ಭಾರತದೊಂದಿಗೆ ಬಾಂಗ್ಲಾ ಹೊಂದಿರುವ ಸಾಂಪ್ರದಾಯಿಕ ರಕ್ಷಣಾ ಸಂಬಂಧಗಳು ದುರ್ಬಲಗೊಳ್ಳಬಹುದು.
ಈ ಆತಂಕಗಳನ್ನು ಗಮನದಲ್ಲಿಟ್ಟುಕೊಂಡೇ ಭಾರತವು ಇತ್ತೀಚೆಗೆ ಬಾಂಗ್ಲಾದೇಶದೊಂದಿಗೆ ತೀಸ್ತಾ ನದಿ ಸಂರಕ್ಷಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ತಾನೇ ತಾಂತ್ರಿಕ ನೆರವು ಮತ್ತು ಹೂಡಿಕೆ ಮಾಡಲು ಆಸಕ್ತಿ ತೋರಿದೆ. ಚೀನಾವನ್ನು ಈ ಪ್ರದೇಶದಿಂದ ದೂರವಿಡುವುದು ಭಾರತದ ಪ್ರಮುಖ ರಾಜತಾಂತ್ರಿಕ ಆದ್ಯತೆಯಾಗಿದೆ.
ಬಾಂಗ್ಲಾದೇಶದ ಪಯ್ರಾ ಬಂದರು ಅಥವಾ ಕಾಕ್ಸ್ ಬಜಾರ್ ಸಮೀಪದ ನೌಕಾನೆಲೆಗಳ ಅಭಿವೃದ್ಧಿಯಲ್ಲಿ ಚೀನಾದ ಪಾತ್ರ ದೊಡ್ಡದಿದೆ. ಇದು ಬಂಗಾಳ ಕೊಲ್ಲಿಯಲ್ಲಿ ಭಾರತದ ನೌಕಾಪಡೆಯ ಪ್ರಾಬಲ್ಯಕ್ಕೆ ಸವಾಲು ಹಾಕುತ್ತದೆ. ಚೀನಾದ ನೌಕೆಗಳ ಓಡಾಟ ಹೆಚ್ಚಾದರೆ ಭಾರತದ ಕಡಲ ಭದ್ರತೆಗೆ ಅಪಾಯವಿದೆ. ದಕ್ಷಿಣ ಏಷ್ಯಾದಲ್ಲಿ ಭಾರತವು ಸ್ವಾಭಾವಿಕ ನಾಯಕನಂತೆ ಕಾರ್ಯನಿರ್ವಹಿಸುತ್ತಿದೆ. ಆದರೆ ಚೀನಾ ಹಣಕಾಸಿನ ನೆರವಿನ ಮೂಲಕ ಬಾಂಗ್ಲಾದೇಶವನ್ನು ತನ್ನತ್ತ ಸೆಳೆಯುತ್ತಿದೆ. ಸಾರ್ಕ್ ಅಥವಾ ಬಿಮ್ಸ್‌ಟೆಕ್‌ನಂತಹ ವೇದಿಕೆಗಳಲ್ಲಿ ಬಾಂಗ್ಲಾದೇಶವು ಭಾರತಕ್ಕಿಂತ ಚೀನಾದ ನಿಲುವುಗಳಿಗೆ ಬೆಂಬಲ ನೀಡುವ ಪರಿಸ್ಥಿತಿ ನಿರ್ಮಾಣವಾಗಬಹುದು. ಇದು ಪ್ರಾದೇಶಿಕ ನಿರ್ಧಾರಗಳಲ್ಲಿ ಭಾರತದ ಹಿಡಿತವನ್ನು ಕಡಿಮೆ ಮಾಡುತ್ತದೆ.
ಚೀನಾದಲ್ಲಿ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ಅಲ್ಲಿನ ಸೇನೆ ನಡುವಿನ ಆಂತರಿಕ ತಿಕ್ಕಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಜಿನ್‌ಪಿಂಗ್ ಚೀನಾ ಸೇನೆಯ ಶಕ್ತಿಶಾಲಿ ಕಮಾಂಡರ್‌ಗಳನ್ನು ವಜಾಗೊಳಿಸಿದ್ದು, ಚೀನಾದ ಅತ್ಯುನ್ನತ ಸೇನಾ ಸಮಿತಿಯಾದ ಸೆಂಟ್ರಲ್ ಮಿಲಿಟರಿ ಕಮಿಷನ್‌ನಲ್ಲಿದ್ದ ಪ್ರಮುಖ ನಾಯಕರನ್ನು ಗುರಿಯಾಗಿಸಿಕೊಂಡಿದ್ದಾರೆ. 2026ರ ಜನವರಿಯಲ್ಲಿ ಚೀನಾ ಸೇನೆಯ ಹಿರಿಯ ಅಧಿಕಾರಿಗಳಾದ ಜನರಲ್ ಜಾಂಗ್ ಯೌಕ್ಸಿಯಾ ಮತ್ತು ಜನರಲ್ ಲಿಯು ಝೆನ್ಲಿ ಅವರನ್ನು ವಜಾಗೊಳಿಸಿ ತನಿಖೆಗೆ ಒಳಪಡಿಸಲಾಗಿದೆ. ಚೀನಾದ ಪರಮಾಣು ಶಸ್ತ್ರಾಸ್ತ್ರಗಳನ್ನು ನಿರ್ವಹಿಸುವ ‘ರಾಕೆಟ್ ಫೋರ್ಸ್’ನ ಇಡೀ ಉನ್ನತ ನಾಯಕತ್ವವನ್ನೇ ಜಿನ್‌ಪಿಂಗ್ ಬದಲಿಸಿದ್ದಾರೆ. ಅಲ್ಲದೆ, ಕಳೆದ ಎರಡು ವರ್ಷಗಳಲ್ಲಿ ಚೀನಾದ ಇಬ್ಬರು ರಕ್ಷಣಾ ಸಚಿವರು (ಲಿ ಶಾಂಗ್ಫು ಮತ್ತು ವೇ ಫೆಂಗ್ಹೆ) ನಿಗೂಢವಾಗಿ ಮಾಯವಾಗಿ ನಂತರ ವಜಾಗೊಂಡಿದ್ದಾರೆ. ಸೇನೆಯ ಆಂತರಿಕ ಭ್ರಷ್ಟಾಚಾರದಿಂದಾಗಿ ಶಸ್ತ್ರಾಸ್ತ್ರಗಳ ಗುಣಮಟ್ಟ ಕುಸಿದಿದೆ ಮತ್ತು ಇದು ಚೀನಾದ ಸೇನಾ ಆಧುನೀಕರಣದ ಗುರಿಗೆ ಅಡ್ಡಿಯಾಗಿದೆ ಎಂಬುದು ಜಿನ್‌ಪಿಂಗ್ ಆಕ್ರೋಶಕ್ಕೆ ಕಾರಣ. ಸೇನಾಧಿಕಾರಿಗಳ ವಜಾಗೆ ಸರ್ಕಾರ ಭ್ರಷ್ಟಾಚಾರ ಮತ್ತು ಶಿಸ್ತು ಉಲ್ಲಂಘನೆ ಎಂದು ಸಬೂಬು ಹೇಳುತ್ತಿದ್ದರೂ, ಇದರ ಹಿಂದೆ ಆಳವಾದ ರಾಜಕೀಯ ಕಾರಣಗಳಿವೆ. ಸೇನೆಯ ನಾಯಕರು ತನ್ನ ನಿರ್ಧಾರಗಳಿಗೆ ಸಂಪೂರ್ಣವಾಗಿ ಬದ್ಧರಾಗಿಲ್ಲ ಅಥವಾ ತನ್ನ ವಿರುದ್ಧ ಗುಂಪುಗಾರಿಕೆ ಮಾಡುತ್ತಿದ್ದಾರೆ ಎಂಬ ಸಂಶಯ ಜಿನ್‌ಪಿಂಗ್‌ಗೆ ಕಾಡುತ್ತಿದೆ.