_1766858465571.webp?w=480&auto=format%2Ccompress&fit=max)
_1766858465571.webp?w=480&auto=format%2Ccompress&fit=max)
ಭಾರತದಲ್ಲೂ ಹದಿನಾರು ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ ಬಳಕೆ ನಿಷೇಧಿಸುವ ಆಗ್ರಹ ವ್ಯಾಪಕವಾಗುತ್ತಿದೆ. ಶುಕ್ರವಾರ ಈ ಕುರಿತಂತೆ ಮದ್ರಾಸ್ ಹೈಕೋರ್ಟ್ನ ಮದುರೈ ಪೀಠ ಮಹತ್ವದ ಸೂಚನೆ ನೀಡಿದ್ದು, ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮದ ಹಾವಳಿಯಿಂದ ಮಕ್ಕಳ ಸುರಕ್ಷೆಗಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು, ಇದಕ್ಕಾಗಿ ಪ್ರತ್ಯೇಕ ಕಾನೂನು ರೂಪಿಸಬೇಕು ಎಂದಿದೆ.
ಆಸ್ಟ್ರೇಲಿಯಾದಲ್ಲಿ ಈಗಾಗಲೇ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಷೇಧಿಸಲಾಗಿದೆ. ಭಾರತದಲ್ಲಿ 14-16 ವಯೋಮಾನದ ಮಕ್ಕಳ ಪೈಕಿ ಶೇಕಡ 82ರಷ್ಟು ಮಕ್ಕಳು ಸ್ಮಾರ್ಟ್ ಫೋನ್ ಬಳಸುತ್ತಿರುವುದು, ಈ ಸಮಸ್ಯೆಯ ವ್ಯಾಪಕತೆಗೆ ಸಾಕ್ಷಿ. ಭಾರತದಲ್ಲಿ 16 ವರ್ಷದೊಳಗಿನ ಮಕ್ಕಳ ಸಂಖ್ಯೆ 35 ಕೋಟಿ! ಈ ಪೈಕಿ ಬಹುತೇಕರು ಡಿಜಿಟಲ್ ವ್ಯಸನ ಅಥವಾ ಅತಿಯಾದ ಸ್ಕ್ರೀನ್ಟೈಮ್ವುದ ಬಳಲಿದ್ದಾರೆ. ಸ್ಮಾರ್ಟ್ ಫೋನ್ಗಳು ಮಕ್ಕಳ ಬಾಲ್ಯ, ಮುಗ್ಧತೆ, ಕುತೂಹಲ, ಉತ್ಸಾಹ ಎಲ್ಲವನ್ನೂ ಕಸಿದುಕೊಳ್ಳುತ್ತಿವೆ.
2024ರ ವರದಿಯ ಪ್ರಕಾರ ದೇಶದಲ್ಲಿ 14ರಿಂದ 16 ವಯೋಮಾನದ ಮಕ್ಕಳ ಪೈಕಿ ಶೇಕಡ 82ರಷ್ಟು ಚಿಣ್ಣರು ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. 76% ಮಕ್ಕಳು ಸಾಮಾಜಿಕ ಜಾಲತಾಣದ ಖಾತೆ ಹೊಂದಿದ್ದು, ಅದರಲ್ಲಿ ಆಕ್ಟಿವ್ ಆಗಿದ್ದಾರೆ. ಲೋಕಲ್ ಸರ್ಕರ್ಲ್ಸ್ ಸಂಸ್ಥೆಯ ಸಮೀಕ್ಷೆ ವರದಿ ಪ್ರಕಾರ, ಈ ಮಕ್ಕಳು ಆನ್ಲೈನ್ನಲ್ಲಿ ಪ್ರತಿದಿನ ಸರಾಸರಿ ಮೂರು ಗಂಟೆ ಕಳೆಯುತ್ತಿದ್ದಾರೆ. ಸಾಮಾಜಿಕ ಮಾಧ್ಯಮ, ಒಟಿಟಿ ಹಾಗೂ ಗೇಮಿಂಗ್ನಿಂದ ಮಕ್ಕಳಲ್ಲಿ ಸಿಟ್ಟು, ಬೇಸರ, ದಣಿವು ಕಾಣಿಸಿಕೊಂಡಿದೆ ಎಂದು 9ರಿಂದ 17 ವರ್ಷದ ಮಕ್ಕಳ ಶೇಕಡ 66ರಷ್ಟು ಪಾಲಕರು ಒಪ್ಪಿಕೊಂಡಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಮಕ್ಕಳು ಬೆಳೆಯುವ ಹಂತದಲ್ಲೇ ಗಂಭೀರ ಮಾನಸಿಕ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ಹಾಗಾಗಿಯೇ, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ ಬಳಕೆ ನಿಷೇಧಿಸಬೇಕು ಎಂಬ ಆಗ್ರಹ ಜೋರು ಪಡೆದಿದೆ.
ಮದ್ರಾಸ್ ಹೈಕೋರ್ಟ್ನ ಮದುರೈ ಪೀಠದ ನ್ಯಾಯಮೂರ್ತಿ ಜಿ.ಜಯಾಚಂದ್ರನ್ ಹಾಗೂ ನ್ಯಾಯಮೂರ್ತಿ ಕೆ.ಕೆ.ರಾಧಾಕೃಷ್ಣನ್, ಮಕ್ಕಳಲ್ಲಿ ಹೆಚ್ಚುತ್ತಿರುವ ಆನ್ಲೈನ್ ವ್ಯಸನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮಕ್ಕಳನ್ನು ಹಾನಿಕಾರಕ ಆನ್ಲೈನ್ ಕಂಟೆಂಟ್ಗಳಿಂದ ರಕ್ಷಿಸುವುದು ಅಗತ್ಯವಾಗಿದೆ. ಇದಕ್ಕಾಗಿ ಸಾಮಾಜಿಕ ಮಾಧ್ಯಮ ಬಳಕೆಗೆ ವಯಸ್ಸಿನ ಮಿತಿ ನಿಗದಿಪಡಿಸಬೇಕು. ಈ ಕುರಿತು ಸ್ಪಷ್ಟ ನಿಯಮ ಹಾಗೂ ಹೊಸ ಕಾನೂನು ರೂಪುಗೊಳ್ಳುವವರೆಗೆ ರಾಜ್ಯ ಹಾಗೂ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ ಒಟ್ಟಾಗಿ ಒಂದು ಕ್ರಿಯಾಯೋಜನೆ ರೂಪಿಸಬೇಕು ಎಂದಿದ್ದಾರೆ. ಇಂಟರ್ನೆಟ್ ಸೇವೆ ಒದಗಿಸುವ ಕಂಪನಿಗಳು ಪೆರೆಂಟಲ್ ವಿಂಡೋ ಸರ್ವಿಸ್ ಒದಗಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಲಯ ಈ ಮಾತುಗಳನ್ನು ಹೇಳಿದೆ. ಮಕ್ಕಳಿಗೆ ಇಂಟರ್ನೆಟ್ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲು ಅಭಿಯಾನ ನಡೆಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಇಂದಿನ ದಿನಗಳಲ್ಲಿ ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಯಾವುದೇ ಕಾವಲುಗಾರ (ಗೇಟ್ಕೀಪಿಂಗ್) ಇಲ್ಲ. ಅಪ್ರಾಪ್ತ ವಯಸ್ಸಿನ ಮಕ್ಕಳು ಸುಲಭವಾಗಿ ಮಾದಕದ್ರವ್ಯ, ತಂಬಾಕು ಅಥವಾ ಅಶ್ಲೀಲ ಕಂಟೆಂಟ್ವರೆಗೆ ತಲುಪಬಹುದಾಗಿದೆ. ಇದು ಚಿಂತೆಯ ವಿಷಯ ಎಂದಿರುವ ನ್ಯಾಯಾಲಯ, ಶಾಲಾ ಮಕ್ಕಳಲ್ಲಿ ಆತ್ಮಹತ್ಯೆ ಭಾವನೆ ಹೆಚ್ಚಿರುವುದನ್ನೂ ಉಲ್ಲೇಖಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಶ್ಲೀಲ ಸಂಗತಿಗಳ ಹಾವಳಿ ಮಿತಿಮೀರಿದೆ. ಇದು ಸಮಾಜದ ಸ್ವಾಸ್ಥ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ವಿಷಯವನ್ನು ಸುಪ್ರೀಂ ಕೋರ್ಟ್ ಕೂಡ ಗಂಭೀರವಾಗಿ ಪರಿಗಣಿಸಿದೆ. ‘ಸಾಮಾಜಿಕ ಮಾಧ್ಯಮಗಳಲ್ಲಿ ಹಾಕುವ ಪೋಸ್ಟ್ಗಳಿಗೆ ಹೊಣೆಗಾರಿಕೆ ಅಗತ್ಯವಿದೆ’ ಎಂದು ಪ್ರತಿಪಾದಿಸಿರುವ ನ್ಯಾಯಾಲಯ ಇವುಗಳನ್ನು ನಿಯಂತ್ರಿಸಲು ಒಂದು ಸ್ವತಂತ್ರ ಸಂಸ್ಥೆ ಅಗತ್ಯವಿಲ್ಲವೇ ಎಂದು ನವೆಂಬರ್ 27ರಂದು ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿದೆ. ಮಾತ್ರವಲ್ಲ, ಈ ಕುರಿತಂತೆ ಕರಡು ನಿಯಮ ಸಿದ್ಧಪಡಿಸುವಂತೆ ಸೂಚಿಸಿದೆ. ಡಿಜಿಟಲ್ ವೇದಿಕೆಗಳಲ್ಲಿನ ಅಶ್ಲೀಲ ಹಾಗೂ ಆಕ್ಷೇಪಾರ್ಹ ಕಂಟೆಂಟ್ಗಳನ್ನು ನಿಯಂತ್ರಿಸುವ ಕುರಿತು ನಡೆದ ವಿಚಾರಣೆ ವೇಳೆ ಸವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನು ಒಳಗೊಂಡ ಪೀಠವು
ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಸರ್ಕಾರ ಸಾರ್ವಜನಿಕ ಅಭಿಪ್ರಾಯಕ್ಕಾಗಿ ಕರಡು ಮಾರ್ಗಸೂಚಿಗಳನ್ನು ಪ್ರಕಟಿಸಿ, ನಂತರ ಸಮಸ್ಯೆಗಳ ಅಧ್ಯಯನಕ್ಕಾಗಿ ವಿಷಯ ತಜ್ಞರು ಹಾಗೂ ನ್ಯಾಯಾಂಗ ತಜ್ಞರ ಸಮಿತಿ ರಚಿಸಬೇಕು ಎಂದೂ ಪೀಠ ಹೇಳಿದೆ. ‘ಯೂಟ್ಯೂಬ್ ಹಾಗೂ ಇತರ ಸಾಮಾಜಿಕ ವೇದಿಕೆಗಳಲ್ಲಿನ ಬಳಕೆದಾರರು ರಚಿಸಿದ ಕಂಟೆಂಟ್ಗಳ ವಿಷಯ ಅಶ್ಲೀಲತೆಯನ್ನು ಮೀರಿ ವಿಕೃತಿಗೆ ವಿಸ್ತರಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಅಮೂಲ್ಯವಾದುದು, ಹಾಗಂತ ಅದು ವಿಕೃತಿಗೆ ತಲುಪಬಾರದು’ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯದಲ್ಲಿ ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿಷೇಧಿಸುವ ಕಾನೂನು ಇದೇ ಡಿಸೆಂಬರ್ 10ರಿಂದ ಜಾರಿಗೆ ಬಂದಿದೆ. ಮಕ್ಕಳ ಸಾಮಾಜಿಕ ಜಾಲತಾಣ ಬಳಕೆಗೆ ಸಂಬಂಧಿಸಿದಂತೆ ಸಮಗ್ರವಾದ ಕಾನೂನು ರೂಪಿಸಿ, ಜಾರಿಗೊಳಿಸಿದ ಮೊದಲ ದೇಶ ಆಸ್ಟ್ರೇಲಿಯಾ. ಈ ಕಾನೂನಿನ ಮೂಲಕ ಸಾಮಾಜಿಕ ಜಾಲತಾಣ ವೇದಿಕೆಗಳು ಬಳಕೆದಾರರ ವಯಸ್ಸನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಭಾರಿ ದಂಡ ತೆರಬೇಕಾಗುತ್ತದೆ. ‘ಮಕ್ಕಳ ಸುರಕ್ಷತೆಯನ್ನು ಖಾತ್ರಿ ಪಡಿಸಲು ಸಾಮಾಜಿಕ ಹೊಣೆಗಾರಿಕೆಯನ್ನು ನಿಗದಿಪಡಿಸುವ ಉದ್ದೇಶ ಈ ಕಾನೂನಿಗೆ ಇದೆ’ ಎಂದು ಆಸ್ಟ್ರೇಲಿಯಾ ಸರ್ಕಾರ ಹೇಳಿದೆ. 16 ವರ್ಷದೊಳಗಿನ ಯಾವುದೇ ಮಗು ಕಾನೂನು ಉಲ್ಲಂಘಿಸಿದರೆ ಶಿಕ್ಷೆ ಮಕ್ಕಳಿಗೆ ಅಥವಾ ತಂದೆ- ತಾಯಿಗೆ ಆಗುವುದಿಲ್ಲ. ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ಶಿಕ್ಷೆ ವಿಧಿಸಲಾಗುತ್ತದೆ. ಹಾಗಾಗಿ, ಏಜ್ ವೇರಿಫಿಕೇಶನ್ ಸಿಸ್ಟಮ್ಸ್ ಸಾಮಾಜಿಕ ಜಾಲತಾಣ ವೇದಿಕೆಗಳು ಅಭಿವೃದ್ಧಿ ಪಡಿಸುತ್ತಿವೆ.
16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು 2026ರಿಂದ ನಿಷೇಧಿಸುವ ಕುರಿತಂತೆ ಮಲೇಷ್ಯಾ ಸರ್ಕಾರ ಕೂಡ ಗಂಭೀರ ಚಿಂತನೆ ನಡೆಸಿದೆ. ಸಾಮಾಜಿಕ ಜಾಲತಾಣಗಳ ಬಳಕೆಗೆ ವಯಸ್ಸಿನ ನಿರ್ಬಂಧ ವಿಧಿಸುವ ಮಲೇಷ್ಯಾ ಸರ್ಕಾರದ ನಿರ್ಧಾರಕ್ಕೆ ಸಂಸದರು ಹಾಗೂ ಶೇಕಡ 72ರಷ್ಟು ಜನರು ಬೆಂಬಲ ಸೂಚಿಸಿರುವುದು ಮಹತ್ವದ ಬೆಳವಣಿಗೆ. ಅಲ್ಲದೆ, ದೇಶದಲ್ಲಿ 80 ಲಕ್ಷ ಬಳಕೆದಾರರಿಗಿಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಮಾಧ್ಯಮಗಳು ಸರ್ಕಾರದಿಂದ ಪರವಾನಗಿ ಪಡೆಯಬೇಕು ಎಂಬ ನಿಯಮ ರೂಪಿಸಿದೆ. ನ್ಯೂಜಿಲೆಂಡ್ ಮತ್ತು ನೆದರ್ಲೆಂಡ್ನಲ್ಲೂ ಸಾಮಾಜಿಕ ಮಾಧ್ಯಮಗಳ ಬಳಕೆಗೆ ವಯಸ್ಸಿನ ನಿರ್ಬಂಧ ವಿಧಿಸಲಾಗಿದೆ.
ಡಿಜಿಟಲ್ ಕಂಟೆಂಟ್ ರೂಪಿಸುವವರು ಸಾಮಾಜಿಕ ಸ್ವಾಸ್ಥ್ಯವನ್ನು ಕಡೆಗಣಿಸಬಾರದು. ಹಾಸ್ಯದ ಹೆಸರಿನಲ್ಲಿ ವಿಕೃತಿಯನ್ನು ತೋರಿಸುತ್ತ, ಸಮಾಜವನ್ನು ತಪು್ಪದಾರಿಗೆ ಎಳೆಯುವುದು ಅಕ್ಷಮ್ಯ. ‘ಸ್ವಯಂ ನಿಯಂತ್ರಣ’ದ ಲಕ್ಷ್ಮಣರೇಖೆಯನ್ನು ಹಲವು ಡಿಜಿಟಲ್ ವೇದಿಕೆಗಳು ಮೇಲಿಂದ ಮೇಲೆ ಉಲ್ಲಂಘಿಸುತ್ತಲೇ ಇವೆ. ಸಮಸ್ಯೆಯೆಂದರೆ, ಇಂಥ ಕಂಟೆಂಟ್ಗಳ ಬಗ್ಗೆ ಅದನ್ನು ರೂಪಿಸಿದವರನ್ನು ಹೊಣೆಗಾರರಾಗಿಸಬೇಕೆ, ಅವುಗಳನ್ನು ಬಿತ್ತರಿಸುವ ಡಿಜಿಟಲ್ ವೇದಿಕೆಗಳನ್ನು ಹೊಣೆಗಾರರಾಗಿಸಬೇಕೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಇದಕ್ಕೆ ಮುಖ್ಯ ಕಾರಣ ಒಟಿಟಿಯಂಥ ಡಿಜಿಟಲ್ ಮಾಧ್ಯಮದ ನಿಯಂತ್ರಣದ ಕುರಿತಂತೆ ಕೇಂದ್ರ ಸರ್ಕಾರದ ಬಳಿಯೇ ಸ್ಪಷ್ಟ ನೀತಿ ಇಲ್ಲದಿರುವುದು.
ಜಾಗತಿಕವಾಗಿ ಅವಲೋಕಿಸಿದರೆ 12 ವರ್ಷದೊಳಗಿನ ಮಕ್ಕಳ ಪೈಕಿ ಶೇಕಡ 42ರಷ್ಟು ಚಿಣ್ಣರು ದಿನಕ್ಕೆ ಸರಾಸರಿ 2ರಿಂದ 4 ಗಂಟೆ ಎಲೆಕ್ಟ್ರಾನಿಕ್ ಸಾಧನಗಳ ಮುಂದೆಯೇ ಇರುತ್ತಾರೆ. 12 ವರ್ಷ ಮೇಲ್ಪಟ್ಟ ಮಕ್ಕಳಂತೂ ದಿನಕ್ಕೆ 7-8 ಗಂಟೆ ಮೊಬೈಲ್ ಫೋನ್ ಅಥವಾ ಟ್ಯಾಬ್ಲೆಟ್ ಬಳಸುತ್ತಿದ್ದಾರೆ. ಐದು ವರ್ಷದಿಂದಲೇ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಹೆಚ್ಚು ಹೊತ್ತು ಕಳೆಯುವ ಮಕ್ಕಳು ತಾರುಣ್ಯಾವಸ್ಥೆಯಲ್ಲೇ ಮಾನಸಿಕ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಅಂದರೆ, ಮಕ್ಕಳಿಗೆ ಎಷ್ಟು ಬೇಗ (ಸಣ್ಣ ವಯಸ್ಸಿನಲ್ಲಿ) ಸ್ಮಾರ್ಟ್ ಫೋನ್ ನೀಡುತ್ತೇವೆಯೋ, ಅಷ್ಟೇ ಬೇಗ ಅವರಲ್ಲಿ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
ತಮ್ಮ ಕೆಲಸಕ್ಕೆ ಅಡ್ಡಿಯಾಗಬಾರದೆಂದು ಪಾಲಕರು ಮಕ್ಕಳಿಗೆ ಪ್ರತ್ಯೇಕ ಸ್ಮಾರ್ಟ್ಫೋನ್ ಅಥವಾ ಟ್ಯಾಬ್ಲೆಟ್ ಕೊಡಿಸುವ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ, ಚಿಣ್ಣರು ಯಾವುದೇ ನಿಯಂತ್ರಣವಿಲ್ಲದೆ ನೋಡಬಾರದ್ದನ್ನೆಲ್ಲ ನೋಡಿ, ದಿಗ್ಭ್ರಮೆಗೆ ಒಳಗಾಗುತ್ತಿದ್ದಾರೆ. ಕೆಲ ಮಕ್ಕಳಂತೂ ಸದಾ ಯೂಟ್ಯೂಬ್ ಅಥವಾ ರೀಲ್ಸ್ಗಳಲ್ಲಿ ಮುಳುಗಿರುತ್ತಾರೆ. ಕೆಲ ಹೊತ್ತು ಇದರಿಂದ ದೂರವಿದ್ದರೂ, ಅವರಿಗೆ ಏನೋ ಕಳೆದುಕೊಂಡ ಭಾವ.