Childhood Friends : ಕಾಲ ಕಳೆದಂತೆ ಮನುಷ್ಯನು ಕೂಡ ಬೆಳೆಯುತ್ತಾ ಹೋಗುತ್ತಾನೆ. ಕಾಲದ ಜತೆ ಸಾಗುವ ಮನುಷ್ಯ ಶಾಶ್ವತವಾಗಿ ಕಣ್ಣು ಮುಚ್ಚುವಷ್ಟರಲ್ಲಿ ಜೀವನದ ವಿವಿಧ ಹಂತಗಳನ್ನು ದಾಟಿ ಬರುತ್ತಾನೆ. ಮುಗ್ಧ ಮನಸ್ಸಿನ ಬಾಲ್ಯ, ಮೋಜು-ಮಸ್ತಿಯ ಯೌವ್ವನ, ಜವಾಬ್ದಾರಿ ಎಂಬ ಮಧ್ಯ ವಯಸ್ಸು ಹಾಗೂ ಸಾವಿನ ಕೊನೆಯ ದಿನಗಳು ಮನುಷ್ಯ ಜೀವನದ ವಿವಿಧ ಮೆಟ್ಟಿಲುಗಳನ್ನು ದಾಟಿ ಬರುತ್ತಾನೆ. ಆದರೆ, ಕೊನೆಯಲ್ಲಿ ಮನುಷ್ಯನಲ್ಲಿ ಉಳಿಯುವುದು ಕೇವಲ ಸುಂದರ ನೆನಪುಗಳು ಮಾತ್ರ. ಇದಿಷ್ಟೂ ಹಂತದಲ್ಲಿ ನಿಮ್ಮ ನೆಚ್ಚಿನ ಕ್ಷಣ ಯಾವುದು ಅಂತಾ ಯಾರನ್ನಾದರೂ ಕೇಳಿದರೆ ಎಲ್ಲರೂ ಹೇಳುವುದು ಒಂದೇ ಮಾತು ಅದುವೇ ಬಾಲ್ಯದ ಜೀವನ. ಮನಸ್ಸಿನಲ್ಲಿ ಯಾವುದೇ ಕಲ್ಮಶವಿರದೇ, ಜವಾಬ್ದಾರಿಗಳೆಂಬ ಭಾರವಿರದೇ ನಿರ್ಮಲವಾಗಿ ಹಾಗೂ ಸ್ವಚ್ಛಂದದಿಂದ ಇರುವ ಈ ಕಾಲ ಯಾರಿಗೂ ತಾನೇ ಇಷ್ಟವಿಲ್ಲ ಹೇಳಿ. ಮನುಷ್ಯನಿಗೆ ಎಷ್ಟೇ ವಯಸ್ಸಾದರೂ ಒಂದು ಕ್ಷಣ ತನ್ನ ಬಾಲ್ಯಕ್ಕೆ ಹಿಂದಿರುಗಬೇಕೆಂದು ಬಯಸುತ್ತಾನೆ. ಅದರಲ್ಲೂ ಸ್ನೇಹಿತರ ಗುಂಪು, ಆಟ-ಪಾಠ ಅನ್ನೋ ಶಾಲಾ ದಿನಗಳನ್ನು ಮತ್ತೆ ಸವಿಯಲು ಹಾತೊರೆಯುತ್ತಾನೆ. ಆದರೆ, ಬದುಕು ಎಷ್ಟೇ ಬಿಜಿಯಾಗಿದ್ದರೂ ಹಳೆಯ ಸ್ನೇಹಿತರೊಂದಿಗೆ ಕಳೆದ ಆ ದಿನಗಳನ್ನು ಮೆಲುಕು ಹಾಕುವ ಭಾಗ್ಯ ಕೆಲವರಿಗೆ ಮಾತ್ರ ಸಿಗುತ್ತದೆ. ಅಂತಹ ಅಪರೂಪದ ಹಾಗೂ ಮನಸ್ಸಿಗೆ ಮುದಾ ನೀಡುವ ಹೃದಯಸ್ಪರ್ಶಿ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಈಗ ಭಾರೀ ವೈರಲ್ ಆಗಿದ್ದು, ವೃದ್ಧಾಪ್ಯದಲ್ಲೂ ಬಾಲ್ಯದ ತುಂಟಾಟವನ್ನು ಮರೆಯದ 1976ರ ಬ್ಯಾಚ್ನ ಗೆಳೆಯರ ಗುಂಪೊಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.