ಕಾರಿನ ಡಿಕ್ಕಿಯಲ್ಲಿ ಮಕ್ಕಳ ಸವಾರಿ: ನೆಟ್ಟಿಗರ ಗರಂ, ಪೊಲೀಸರ ಆಕ್ಷನ್, ಅಸಲಿ ಘಟನೆ ಏನು? Child Safety

 Child Safety ಸಾಂದರ್ಭಿಕ ಚಿತ್ರ
Child Safety ಸಾಂದರ್ಭಿಕ ಚಿತ್ರ
Published on
ಹೈದರಾಬಾದ್: ಇಲ್ಲಿನ ಔಟರ್ ರಿಂಗ್ ರೋಡ್​ನಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಪೋಷಕರ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಂತಿದೆ. ವೇಗವಾಗಿ ಚಲಿಸುತ್ತಿದ್ದ ಕಾರಿನ ತೆರೆದ ಡಿಕ್ಕಿಯಲ್ಲಿ (Child Safety) ಮೂವರು ಮಕ್ಕಳು ಕುಳಿತು ಪ್ರಯಾಣಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸಾರ್ವಜನಿಕರು ಮತ್ತು ಸಂಚಾರ ಪೊಲೀಸರು ಕಳವಳ ವ್ಯಕ್ತಪಡಿಸಿದ್ದಾರೆ.

ಘಟನೆ ಏನು?

ವೈರಲ್ ಆದ ವಿಡಿಯೋದಲ್ಲಿ, ಹೈದರಾಬಾದ್‌ನ ಔಟರ್ ರಿಂಗ್ ರೋಡ್‌ನಲ್ಲಿ ಬಿಳಿ ಬಣ್ಣದ ಎಸ್‌ಯುವಿ (SUV) ಕಾರು ಅತಿವೇಗದಲ್ಲಿ ಚಲಿಸುವುದನ್ನು ಕಾಣಬಹುದು. ಅದರ ಡಿಕ್ಕಿ ಸಂಪೂರ್ಣವಾಗಿ ತೆರೆದಿದ್ದು, ಅದರಲ್ಲಿ ಮೂರು ಮಕ್ಕಳು ಕುಳಿತಿದ್ದಾರೆ. ಕಾರು ಹೆಚ್ಚಿನ ವೇಗದಲ್ಲಿ ಸಾಗುತ್ತಿದ್ದಾಗ ಮಕ್ಕಳು ಗಾಳಿಯ ವೇಗಕ್ಕೆ ಸಮತೋಲನ ಕಾಯ್ದುಕೊಳ್ಳಲು ಹರಸಾಹಸ ಪಡುತ್ತಿರುವುದು ದೃಶ್ಯಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
ಆದಾಗ್ಯೂ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಆಕ್ರೋಶ ಹೊರಹಾಕಿದ್ದಾರೆ. ಒಬ್ಬ ಬಳಕೆದಾರರು ಎಕ್ಸ್‌ಪ್ರೆಸ್‌ವೇಗಳಲ್ಲಿ ವಾಹನಗಳು ಅತಿ ವೇಗದಲ್ಲಿ ಚಲಿಸುತ್ತವೆ ಎಂಬ ಕನಿಷ್ಠ ಜ್ಞಾನವೂ ಇಲ್ಲದೆ ಮಕ್ಕಳನ್ನು ಓಪನ್ ಬೂಟ್‌ನಲ್ಲಿ ಕೂರಿಸಿದ್ದು ಆಶ್ಚರ್ಯ ಮೂಡಿಸಿದೆ ಎಂದು ಕಾಮೆಂಟ್​ ಮಾಡಿದ್ದರೆ. ಇನ್ನೊಬ್ಬ ಬಳಕೆದಾರರು ಕಾರಿನಿಂದ ಮಕ್ಕಳು ಆಕಸ್ಮಿಕವಾಗಿ ಕೆಳಗೆ ಬಿದ್ದರೆ, ಹಿಂದಿನಿಂದ ಬರುವ ವಾಹನ ಸವಾರರು ಆ ಮಗುವನ್ನು ಉಳಿಸಲು ಹಠಾತ್ ಬ್ರೇಕ್ ಹಾಕಬೇಕಾಗುತ್ತದೆ. ಇದು ಸರಣಿ ಅಪಘಾತಗಳಿಗೆ ಕಾರಣವಾಗಿ, ಆ ತಪ್ಪಿನಲ್ಲಿ ಭಾಗಿಯಾಗದ ಇತರರಿಗೂ ಪ್ರಾಣಾಪಾಯ ಉಂಟುಮಾಡಬಹುದು ಎಂದು ಬರೆದಿದ್ದಾರೆ.

ಪೊಲೀಸ್​ ಹೇಳಿದ್ದೇನು?

ವೈರಲ್ ಆದ ವಿಡಿಯೋಗೆ ಪ್ರತಿಕ್ರಿಯಿಸಿದ ಹೈದರಾಬಾದ್ ಸಂಚಾರ ಪೊಲೀಸರು, ವಾಹನ ಮಾಲೀಕರು ಸ್ಥಳದಲ್ಲಿ ಇಲ್ಲದಿದ್ದರೂ ಸಿಸಿಟಿವಿಯಲ್ಲಿ ಸೆರೆಯಾದ ವಿಡಿಯೋಗಳ ಮೂಲಕ ಪತ್ತೆ ಹಚ್ಚಿ ದಂಡ ವಿಧಿಸಲಾಗಿದೆ ಎಂದರು.
ಈಗಾಗಲೇ ನಾವು ಟೆಲಿ-ಕೌನ್ಸೆಲಿಂಗ್ ನಡೆಸಿದ್ದೇವೆ ಮತ್ತು ಭವಿಷ್ಯದಲ್ಲಿ ಇಂತಹ ಅಪಾಯಕಾರಿ ಚಾಲನಾ ಅಭ್ಯಾಸಗಳು ಮತ್ತು ಸಂಚಾರ ನಿಯಮಗಳನ್ನು ಉಲ್ಲಂಘಿಸದಂತೆ ಕಟುನಿಟ್ಟಾಗಿ ಸಲಹೆ ನೀಡಿದ್ದೇವೆ ಎಂದು ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆದಾಗ್ಯೂ, ಎಲ್ಲಾ ವಾಹನ ಚಾಲಕರು ಮತ್ತು ಸಾರ್ವಜನಿಕರು ವಿಶೇಷವಾಗಿ ಮಕ್ಕಳು ಮತ್ತು ಇತರ ರಸ್ತೆ ಬಳಕೆದಾರರ ಜೀವಗಳಿಗೆ ಅಪಾಯವನ್ನುಂಟು ಮಾಡುವ ಅಸುರಕ್ಷಿತ ಚಾಲನೆಯಲ್ಲಿ ತೊಡಗಿಕೊಳ್ಳಬೇಡಿ ಎಂದು ನಾವು ವಿನಂತಿಸಿಕೊಳ್ಳುತ್ತೇವೆ ಎಂದು ಪೋಸ್ಟ್​ ಹಂಚಿಕೊಂಡಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net