ಅಖಿಲೇಶ್ ಬ್ರಾಹ್ಮಣ ಓಲೈಕೆಗೆ ಬಿಜೆಪಿ, ಬಿಎಸ್‌ಪಿ ಕೌಂಟರ್!..ಊಸರವಳ್ಳಿ ಎಂದು ಮಾಯಾವತಿ ಲೇವಡಿ | PDA Politics

PDA Politics | ಅಖಿಲೇಶ್ ಬ್ರಾಹ್ಮಣ ಓಲೈಕೆಗೆ ಬಿಜೆಪಿ, ಬಿಎಸ್‌ಪಿ ಕೌಂಟರ್!
PDA Politics | ಅಖಿಲೇಶ್ ಬ್ರಾಹ್ಮಣ ಓಲೈಕೆಗೆ ಬಿಜೆಪಿ, ಬಿಎಸ್‌ಪಿ ಕೌಂಟರ್!
Published on

ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ತಮ್ಮ ಪಕ್ಷದ ಪಿಡಿಎ ಸೂತ್ರದಲ್ಲಿರುವ (PDA Politics) ಪಿ ಅಕ್ಷರ ಪಂಡಿತ್ (ಬ್ರಾಹ್ಮಣರು) ಜನರಿಗೂ ಅನ್ವಯಿಸುತ್ತದೆ ಎಂದು ಹೇಳುವ ಮೂಲಕ ರಾಜ್ಯದ ಬ್ರಾಹ್ಮಣ ಸಮುದಾಯವನ್ನು ಓಲೈಸಲು ಮುಂದಾಗಿದ್ದಾರೆ. ಅವರ ಈ ನಡೆಯನ್ನು ಖಂಡಿಸಿರುವ ಬಿಜೆಪಿ, ಬಿಎಸ್​ಪಿ, ಅಖಿಲೇಶ್​ ಊಸರವಳ್ಳಿಯಂತೆ ಬಣ್ಣ ಬದಲಾಯಿಸುತ್ತಿದ್ದಾರೆ ಎಂದು ಟೀಕಿಸಿವೆ.

ಈ ವಿಷಯವಾಗಿ ಮಾತನಾಡಿರುವ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್, ಅಖಿಲೇಶ್​​ ಅವರೇ ಬ್ರಾಹ್ಮಣ ಸಮುದಾಯದ ಹಿತೈಷಿ ಎಂಬಂತೆ ನಟಿಸುತ್ತಿದ್ದೀರಿ. ಆದರೆ ಮಾಧ್ಯಮದವರ ಜಾತಿ ಕೇಳಿ ಮಿಶ್ರಾ ಜಿ, ಸ್ವಲ್ಪ ನಾಚಿಕೆಪಟ್ಟುಕೊಳ್ಳಿ ಎಂದು ಹೇಳಿದ ಅಂದಿನ ನಿಮ್ಮ ಮಾತುಗಳು ಇಂದಿಗೂ ಬ್ರಾಹ್ಮಣ ಸಮುದಾಯದ ಹೃದಯಕ್ಕೆ ಈಟಿಯಂತೆ ಚುಚ್ಚುತ್ತಿವೆ. ಒಂದೇ ಕುಟುಂಬಕ್ಕೆ ಅಧಿಕಾರ ನೀಡುವುದರಿಂದ ಸಮಾಜದ ಉದ್ಧಾರವಾಗುವುದಿಲ್ಲ, ಬದಲಿಗೆ ಪ್ರತಿಯೊಂದು ವರ್ಗಕ್ಕೂ ಸಮಾನ ಅವಕಾಶ, ನ್ಯಾಯ ಮತ್ತು ಗೌರವ ನೀಡುವ ಮೂಲಕ ಸಮಾಜದ ಅಭಿವೃದ್ಧಿಯಾಗಲಿದೆ ಎಂದು ತಿರುಗೇಟು ನೀಡಿದ್ದಾರೆ.

ಮಾಯಾವತಿ ಟೀಕೆ!...

ಮತ್ತೊಂದೆಡೆ, ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಕೂಡ ಅಖಿಲೇಶ್ ಅವರ ಪಿಡಿಎ ಸೂತ್ರವನ್ನು ತೀವ್ರವಾಗಿ ಟೀಕಿಸಿದ್ದು, ಸಮಾಜವಾದಿ ಪಕ್ಷವು ಬಣ್ಣ ಬದಲಾಯಿಸುವ ಊಸರವಳ್ಳಿಯಂತಿದೆ. ಆದ್ದರಿಂದ ಸಮಾಜವಾದಿ ಪಕ್ಷದ ಮೋಸದ ರಾಜಕೀಯಕ್ಕೆ ಜನರು ಬಲಿಯಾಗಬಾರದು ಎಂದು ಮನವಿ ಮಾಡಿದ್ದಾರೆ. ಇಂತಹ ಜಾತಿ ಆಧಾರಿತ ರಾಜಕೀಯದಿಂದ ಇಡೀ ಸಮಾಜದ ಕಲ್ಯಾಣ ಎಂದಿಗೂ ಸಾಧ್ಯವಿಲ್ಲ ಎಂದಿರುವ ಮಾಯಾವತಿ, ಯುಪಿಯಲ್ಲಿ ಬಿಎಸ್‌ಪಿ ರಚಿಸಿದ ನಾಲ್ಕು ಸರ್ಕಾರಗಳು ಸಮಾಜದ ಪ್ರತಿಯೊಂದು ವರ್ಗದ ಹಿತದೃಷ್ಟಿಯಿಂದ ಆಡಳಿತ ನಡೆಸಿದ್ದವು. ಆದರೆ ಸಮಾಜವಾದಿ ಪಕ್ಷವು ತನ್ನ ಕಿರಿದಾದ ಜಾತಿ ರಾಜಕೀಯ ಮತ್ತು ಚುನಾವಣಾ ಸ್ವಾರ್ಥಕ್ಕಾಗಿ ಮುಕ್ತವಾಗಿ ಊಸರವಳ್ಳಿಯಂತೆ ಬಣ್ಣ ಬದಲಾಯಿಸುತ್ತಿದೆ ಕಿಡಿಕಾರಿದ್ದಾರೆ.

ಅಖಿಲೇಶ್ ಹೇಳಿದ್ದೇನು...?

ಬುಧವಾರ ಲಖನೌದಲ್ಲಿರುವ ಪಕ್ಷದ ರಾಜ್ಯ ಕೇಂದ್ರ ಕಛೇರಿಯಲ್ಲಿ ಸಮಾಜವಾದಿ ನಾಯಕ ದಿವಂಗತ ಜಾನೇಶ್ವರ್ ಮಿಶ್ರಾ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ಬ್ರಾಹ್ಮಣ ಸಮ್ಮೇಳನದಲ್ಲಿ ಅಖಿಲೇಶ್ ಯಾದವ್ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದರು. ಪಿಡಿಎಯಲ್ಲಿನ ಪಿ ಅಕ್ಷರ ಪಂಡಿತ್ ಎಂದೂ ಸೂಚಿಸುತ್ತದೆ ಎಂದು ವ್ಯಾಖ್ಯಾನಿಸಿದ್ದ ಅವರು, ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ವಿರೋಧ ಪಕ್ಷದ ಕಾರ್ಯಕರ್ತರು, ಬ್ರಾಹ್ಮಣರು ಮತ್ತು ಶಂಕರಾಚಾರ್ಯರು ಸೇರಿದಂತೆ ಧಾರ್ಮಿಕ ನಾಯಕರನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ್ದರು.
ಅನೇಕರು ಪಿಡಿಎ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ ಮತ್ತು ಅದಕ್ಕೆ ಹೊಸ ವ್ಯಾಖ್ಯಾನಗಳನ್ನು ಕಂಡುಕೊಳ್ಳುತ್ತಾರೆ. ಪಿಡಿಎ ವಿರುದ್ಧ ಸೋತಾಗಿನಿಂದಲೂ ಅದನ್ನು ಮರುವ್ಯಾಖ್ಯಾನಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಪಿಡಿಎಯಲ್ಲಿರುವ ಪಿಡಿ ಅಕ್ಷರಗಳು ಪಂಡಿತ್ ಮತ್ತು ಪೀಡಾ (ನೋವು) ಎರಡನ್ನೂ ಸೂಚಿಸುತ್ತವೆ ಎಂಬುದನ್ನು ಅವರು ಮರೆತಿದ್ದಾರೆ. ಅವರು ಎಷ್ಟು ನೋವನ್ನು ನೀಡುತ್ತಾರೋ, ಪಿಡಿಎ ಅಷ್ಟೇ ಶಕ್ತಿಯುತವಾಗಿ ಬೆಳೆಯುತ್ತದೆ ಎಂದು ಅಖಿಲೇಶ್ ಹೇಳಿದ್ದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net