ಚಂಡೀಗಢ ಮಸೂದೆ ವಿವಾದ: ಪಂಜಾಬ್​ ನಮಗೆ ಮೊದಲು; ಚಂಡೀಗಢ ನಮ್ಮ ಅವಿಭಾಜ್ಯ ಅಂಗ; ಬಿಜೆಪಿ ರಾಜ್ಯಾಧ್ಯಕ್ಷ ಸುನಿಲ್ ಜಾಖರ್​ | Sunil Jakhar

ಪಂಜಾಬ್ ಬಿಜೆಪಿ ರಾಜ್ಯಾಧ್ಯಕ್ಷ ಸುನಿಲ್ ಜಾಖರ್
ಪಂಜಾಬ್ ಬಿಜೆಪಿ ರಾಜ್ಯಾಧ್ಯಕ್ಷ ಸುನಿಲ್ ಜಾಖರ್
Published on
ಚಂಡೀಗಢ: ಕೇಂದ್ರಾಡಳಿತ ಪ್ರದೇಶ ಚಂಡೀಗಢವನ್ನು ರಾಷ್ಟ್ರಪತಿಗಳ ನೇರ ನಿಯಂತ್ರಣಕ್ಕೆ ತರುವ ಕೇಂದ್ರದ ಕ್ರಮದ ಬಗ್ಗೆ ಪಂಜಾಬ್‌ನಲ್ಲಿ ರಾಜಕೀಯ ವಿವಾದ ಎದ್ದಿರುವ ನಡುವೆ ಪಂಜಾಬ್ ಬಿಜೆಪಿ ರಾಜ್ಯಾಧ್ಯಕ್ಷ ಸುನಿಲ್ ಜಾಖರ್(Sunil Jakhar), ಚಂಡೀಗಡ ಪಂಜಾಬ್​ನ ಅವಿಭಾಜ್ಯ ಅಂಗ, ಪಂಜಾಬ್​ ನಮಗೆ ಮೊದಲು ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಅವರು, ಚಂಡೀಗಢ ಪಂಜಾಬ್‌ನ ಅವಿಭಾಜ್ಯ ಅಂಗವಾಗಿದೆ. ಮತ್ತು ಪಂಜಾಬ್ ಬಿಜೆಪಿ ಚಂಡೀಗಢದ ಸಮಸ್ಯೆಯಾಗಲಿ ಅಥವಾ ನೀರಿನ ಸಮಸ್ಯೆಯಾಗಲಿ ರಾಜ್ಯದ ಹಿತಾಸಕ್ತಿಗಳೊಂದಿಗೆ ದೃಢವಾಗಿ ನಿಂತಿದೆ. ಚಂಡೀಗಢಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲ ಉಂಟಾಗಿದ್ದರೂ ಅದನ್ನು ಸರ್ಕಾರದೊಂದಿಗೆ ಚರ್ಚಿಸುವ ಮೂಲಕ ಪರಿಹರಿಸಲಾಗುವುದು. ನಾನು ಪಂಜಾಬಿಯಾಗಿ, ನಮಗೆ ಪಂಜಾಬ್ ಯಾವಾಗಲೂ ಮೊದಲು ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಬರೆದಿದ್ದಾರೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ಡಿಯುಗಳಂತಹ ಇತರ ಕೇಂದ್ರಾಡಳಿತ ಪ್ರದೇಶಗಳಂತೆ, ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢವನ್ನು ಸಂವಿಧಾನದ 240ನೇ ವಿಧಿಯ ಅಡಿ ವ್ಯಾಪ್ತಿಗೆ ತರಲು ನಡೆಸಿರುವ ಕೇಂದ್ರ ಸರ್ಕಾರ ಮಸೂದೆ ಮಂಡಿಸಲು ಸಜ್ಜಾಗಿದೆ. ಈ ವಿಧಿ ನೇರವಾಗಿ ರಾಷ್ಟ್ರಪತಿಗಳಿಗೆ ಕೇಂದ್ರಾಡಳಿತ ಪ್ರದೇಶದ ನಿಯಮಗಳನ್ನು ರೂಪಿಸುವ ಅಧಿಕಾರ ನೀಡುತ್ತದೆ. ಪ್ರಸ್ತುತ ಪಂಜಾಬ್ ಮತ್ತು ಹರಿಯಾಣದ ಜಂಟಿ ರಾಜಧಾನಿಯಾಗಿರುವ ಚಂಡೀಗಢಕ್ಕೆ ಪಂಜಾಬ್ ರಾಜ್ಯಪಾಲರು ಆಡಳಿತಾಧಿಕಾರಿಯಾಗಿದ್ದಾರೆ.
ಪಂಜಾಬ್​ನ ಆಡಳಿತರೂಢ ಎಎಪಿಯಿಂದ ಹಿಡಿದು ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳ ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಇದನ್ನು ಪಂಜಾಬ್ ವಿರೋಧಿ ನಿಲುವು ಎಂದು ಕರೆದಿವೆ.
ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಪಂಜಾಬ್ ಸಿಎಂ ಭಗವಂತ್ ಮಾನ್, ಈ ತಿದ್ದುಪಡಿ ಪಂಜಾಬ್‌ನ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ನಾವು ಇದನ್ನು ಬಲವಾಗಿ ವಿರೋಧಿಸುತ್ತೇವೆ ಮತ್ತು ಕೇಂದ್ರ ಸರ್ಕಾರವು ಪಂಜಾಬ್ ವಿರುದ್ಧ ಹೂಡಿರುವ ಈ ಪಿತೂರಿ ಯಶಸ್ವಿಯಾಗಲು ಬಿಡುವುದಿಲ್ಲ. ನಮ್ಮ ಪಂಜಾಬ್‌ನ ಹಳ್ಳಿಗಳನ್ನು ನಾಶಮಾಡಿ ನಿರ್ಮಿಸಲಾದ ಚಂಡೀಗಢದ ಮೇಲೆ ಪಂಜಾಬ್‌ಗೆ ಮಾತ್ರ ಹಕ್ಕಿದೆ. ನಾವು ನಮ್ಮ ಹಕ್ಕುಗಳನ್ನು ಬಿಟ್ಟುಕೊಡುವುದಿಲ್ಲ. ಅದಕ್ಕಾಗಿ ಅಗತ್ಯವಿರುವ ಯಾವುದೇ ಕ್ರಮಗಳನ್ನು ನಾವು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net