ದ್ರಾವಿಡ ಕೋಟೆ ಗೆಲ್ಲಲು ಚಾಣಕ್ಯ ತಂತ್ರ...ಎನ್‌ಡಿಎ ಸೀಟು ಹಂಚಿಕೆ ಬಹುತೇಕ ಫೈನಲ್; ಎಐಎಡಿಎಂಕೆಗೆ ಸಿಂಹಪಾಲು | Tamil Nadu Election

Tamil Nadu Election | ಎನ್‌ಡಿಎ ಸೀಟು ಹಂಚಿಕೆ ಬಹುತೇಕ ಫೈನಲ್
Tamil Nadu Election | ಎನ್‌ಡಿಎ ಸೀಟು ಹಂಚಿಕೆ ಬಹುತೇಕ ಫೈನಲ್
Published on
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ (Tamil Nadu Election) ದಿನಾಂಕ ಸಮೀಪಿಸುತ್ತಿದ್ದಂತೆ, ಎನ್‌ಡಿಎ ತನ್ನ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲು ಚಟುವಟಿಕೆಗಳನ್ನು ಚುರುಕುಗೊಳಿಸಿದೆ. ಈ ಮಹತ್ವದ ಬೆಳವಣಿಗೆಯ ಭಾಗವಾಗಿ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್, ಶನಿವಾರ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಈ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದಿನಕರನ್, ಕೇವಲ ಸೀಟು ಹಂಚಿಕೆಗಾಗಿ ತಾವು ದೆಹಲಿಗೆ ಬಂದಿಲ್ಲ, ಬದಲಾಗಿ ಡಿಎಂಕೆಯನ್ನು ಸೋಲಿಸಲು ಅನುಸರಿಸಬೇಕಾದ ತಂತ್ರಗಳ ಕುರಿತು ಚರ್ಚಿಸಲು ಬಂದಿರುವುದಾಗಿ ತಿಳಿಸಿದರು. ಎಲ್ಲಾ 234 ಕ್ಷೇತ್ರಗಳಲ್ಲಿ ಮೈತ್ರಿಕೂಟದ ಗೆಲುವಿಗಾಗಿ ಹೇಗೆ ಕೆಲಸ ಮಾಡಬೇಕು ಎಂಬ ಬಗ್ಗೆ ಅಮಿತ್ ಷಾ ಅವರು ಕೆಲವು ಪ್ರಮುಖ ಸೂಚನೆಗಳನ್ನು ನೀಡಿದ್ದು, ಮುಂದಿನ ಎರಡು ಮೂರು ದಿನಗಳಲ್ಲಿ ಸೌಹಾರ್ದಯುತವಾಗಿ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಸೀಟು ಹಂಚಿಕೆ ಒಪ್ಪಂದದಲ್ಲಿ ಪ್ರಧಾನ ಮೈತ್ರಿ ಪಕ್ಷವಾದ ಎಐಎಡಿಎಂಕೆಗೆ ಸಿಂಹಪಾಲು ಸಿಗುವುದು ಬಹುತೇಕ ಖಚಿತವಾಗಿದ್ದು, ಮೂಲಗಳ ಪ್ರಕಾರ ಎಐಎಡಿಎಂಕೆ ಸುಮಾರು 160 ರಿಂದ 170 ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ತಮಿಳುನಾಡಿನಲ್ಲಿ ಸರ್ಕಾರ ರಚಿಸಲು 118 ಶಾಸಕರ ಬಲ ಬೇಕಾಗಿದ್ದು, ಎಐಎಡಿಎಂಕೆ ಈ ಬಾರಿ ಸ್ವಂತ ಬಲದ ಮೇಲೆ ಸ್ಪಷ್ಟ ಬಹುಮತ ಪಡೆಯುವ ಗುರಿ ಹೊಂದಿದೆ ಎಂದು ಪಿಟಿಐ ವರದಿ ಮಾಡಿದೆ.
ಇತ್ತ ಬಿಜೆಪಿ ಈ ಬಾರಿ 30 ಸ್ಥಾನಗಳಲ್ಲಿ ಸ್ಪರ್ಧಿಸುತ್ತದೆ ಎನ್ನಲಾಗಿದ್ದು, ಇದು 2021 ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ್ಕಕಿಂತ 10 ಸ್ಥಾನಗಳು ಹೆಚ್ಚು. ಅನ್ಬುಮಣಿ ರಾಮದಾಸ್ ನೇತೃತ್ವದ ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) 17 ಸ್ಥಾನಗಳಲ್ಲಿ ಮತ್ತು ಟಿಟಿವಿ ದಿನಕರನ್ ಅವರ ಎಎಂಎಂಕೆ ಒಂಬತ್ತು ಸ್ಥಾನಗಳಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಿದೆ. ಮಾಜಿ ಕೇಂದ್ರ ಸಚಿವ ಜಿ.ಕೆ. ವಾಸನ್​ರ ತಮಿಳು ಮಾನಿಲ ಕಾಂಗ್ರೆಸ್ ಪಾಲಿಗೆ ಮೂರು ಸ್ಥಾನಗಳು ಲಭ್ಯವಾಗುವ ಸಾಧ್ಯತೆಯಿದೆ.
ಸೀಟು ಹಂಚಿಕೆಯ ಈ ಮಾತುಕತೆಯ ವೇಳೆ ಅಮಿತ್ ಷಾ ನೇರವಾಗಿ ಭಾಗಿಯಾಗಿರುವುದು ಮೈತ್ರಿಕೂಟದ ಗಂಭೀರತೆಗೆ ಸಾಕ್ಷಿಯಾಗಿದ್ದು, ಈಗಾಗಲೇ ಎಐಎಡಿಎಂಕೆ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಅವರೊಂದಿಗೆ ಆರಂಭಿಕ ಹಂತದ ಮಾತುಕತೆಗಳು ಪೂರ್ಣಗೊಂಡಿವೆ ಎಂದು ಬಿಜೆಪಿಯ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
2021 ರ ವಿಧಾನಸಭಾ ಚುನಾವಣೆಯ ಅಂಕಿಅಂಶಗಳನ್ನು ಗಮನಿಸಿದರೆ, ಎಐಎಡಿಎಂಕೆ 179 ಸ್ಥಾನಗಳಲ್ಲಿ ಸ್ಪರ್ಧಿಸಿ 66 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಬಿಜೆಪಿ 20 ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ನಾಲ್ಕರಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಕಳೆದ ವರ್ಷ ನಾಯಕತ್ವದ ವಿವಾದದಿಂದಾಗಿ ವಿಭಜನೆಯಾದ ಪಿಎಂಕೆ ಪಕ್ಷವು 23 ಸ್ಥಾನಗಳಲ್ಲಿ ಸ್ಪರ್ಧಿಸಿ ಐದರಲ್ಲಿ ಗೆದ್ದಿತ್ತು. ಈ ಬಾರಿ ಹೊಸ ಸಮೀಕರಣಗಳೊಂದಿಗೆ ಎನ್‌ಡಿಎ ಕಣಕ್ಕಿಳಿಯುತ್ತಿದೆ.
234 ಸದಸ್ಯ ಬಲದ ತಮಿಳುನಾಡಿನಲ್ಲಿ ಏಪ್ರಿಲ್ 23 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಇತರ ರಾಜ್ಯಗಳ ಫಲಿತಾಂಶದ ಜೊತೆಗೆ ಮತ ಎಣಿಕೆ ನಡೆಯಲಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net