ಸಿಜೆಪಿಯಿಂದ ಚಲೋ ಸಂಸತ್ ಯಾತ್ರೆ: ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಅಶ್ರುವಾಯು ಪ್ರಯೋಗ; ಪ್ರತಿಭಟನೆಗೆ ಆಪ್, ಎಸ್​ಪಿ ಬೆಂಬಲ | Chalo Sansad

ಸಿಜೆಪಿಯ ಪ್ರತಿಭಟನೆಯ ಸ್ಥಳ
ಸಿಜೆಪಿಯ ಪ್ರತಿಭಟನೆಯ ಸ್ಥಳ
Published on
ನವದೆಹಲಿ: ನೀಟ್ ಪರೀಕ್ಷೆ ಅಕ್ರಮಕ್ಕೆ ಹೊಣೆ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ಚಲೋ ಸಂಸತ್ ಯಾತ್ರೆಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದು, ಅದಾಗ್ಯೂ ಸಾವಿರಾರು ಪ್ರತಿಭಟನಾಕಾರರು ಸಂಸತ್​ಗೆ ಚಲೋ ನಡೆಸಿದ್ದು, ಈ ವೇಳೆ ಗುಂಪು ಚದುರಿಸಲು ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್​ ಮತ್ತು ಅಶ್ರುಪ್ರಯೋಗ ಮಾಡಿದ್ದಾರೆ.
ಇನ್ನೂ ಪ್ರತಿಭಟನೆಗೆ ಆಪ್ ನಾಯಕರಾದ ಮನೀಷ್ ಸಿಸೋಡಿಯಾ, ಅತಿಷಿ, ಎಸ್​ಪಿ ನಾಯಕಿ ಡಿಂಪಲ್ ಯಾದವ್ ಸೇರಿ ಹಲವು ನಾಯಕರು ಯಾತ್ರೆಯಲ್ಲಿ ಪಾಲ್ಗೊಂಡು ಸಿಜೆಪಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಆಜಾದ್ ಸಮಾಜ ಪಕ್ಷದ (ಕಾನ್ಶಿರಾಮ್) ಮುಖ್ಯಸ್ಥ ಚಂದ್ರಶೇಖರ್ ಆಜಾದ್, ಟಿಎಂಸಿ ಸಂಸದ ಮಹುವಾ ಮೊಯಿತ್ರಾ, ನಟರಾದ ಪ್ರಕಾಶ್ ರಾಜ್ ಮತ್ತು ಶಬಾನಾ ಅಜ್ಮಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಸಂಸತ್ತಿನ ಸುತ್ತಮುತ್ತಲಿನ ಹೈ-ಸೆಕ್ಯುರಿಟಿ ವಲಯದಲ್ಲಿ ಭಾರೀ ಭದ್ರತಾ ವ್ಯವಸ್ಥೆಗಳ ನಡುವೆ ಸಾವಿರಾರು ಪ್ರತಿಭಟನಾಕಾರರು ಜಮಾಯಿಸಿದ್ದರಿಂದ, ಜಂತರ್ ಮಂತರ್, ಕನ್ನಾಟ್ ಪ್ಲೇಸ್, ರೈಲ್ ಭವನ, ಶಾಸ್ತ್ರಿ ಭವನ ಮತ್ತು ಜನಪಥ್‌ನ ಕೆಲವು ಭಾಗಗಳು ಸೇರಿದಂತೆ ಹಲವು ಸ್ಥಳಗಳಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯಿತು.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ಸಂಸತ್ತಿನ ಬಳಿಯ ಹೆಚ್ಚಿನ ಭದ್ರತಾ ಪ್ರದೇಶದಲ್ಲಿ ನಿರ್ಮಿಸಲಾದ ಬ್ಯಾರಿಕೇಡ್‌ಗಳನ್ನು ಪ್ರತಿಭಟನಾಕಾರರು ಭೇದಿಸಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಹೋರಾಟಗಾರರ ನಡುವೆ ಘರ್ಷಣೆ ಸಂಭವಿಸಿದ್ದು, ಈ ಸಂದರ್ಭದಲ್ಲಿ ಹಲವಾರು ಪ್ರತಿಭಟನಾಕಾರರು ಮತ್ತು ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಹಲವಡೆ ಇಂಟರ್ನೆಟ್ ಸ್ಥಗಿತ

ಇನ್ನೂ ಪ್ರತಿಭಟನಯ ಸ್ಥಳದಲ್ಲಿ ಸಿಗ್ನಲ್ ಜಾಮರ್‌ಗಳ ಬಳಕೆಯಿಂದಾಗಿ ಇಂಟರ್ನೆಟ್ ನಿರ್ಬಂಧಿಸಲಾಗಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಆದರೆ ಈ ಬಗ್ಗೆ ಖಚಿತ ಮಾಹಿತಿಯಿಲ್ಲ. ಏತನ್ಮಧ್ಯೆ, ಕೇಂದ್ರ ಸರ್ಕಾರ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಲು ಒಪ್ಪಿಕೊಂಡಿದೆ ಎಂದು ಸಿಜೆಪಿ ಹೇಳಿದ್ದು, ಜೆಪಿ ನಡ್ಡಾರೊಂದಿಗೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net