ಬಿಜೆಪಿಯ ನೂತನ ಸಾರಥಿ ನಿತಿನ್ ನಬಿನ್‌ಗೆ ಝೆಡ್ ಕೆಟಗರಿ ಭದ್ರತೆ.. ಕೇಂದ್ರದಿಂದ ಹೈ-ಲೆವೆಲ್ ಸೆಕ್ಯೂರಿಟಿ | Nitin Nabin

Nitin Nabin | ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್
Nitin Nabin | ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್
Published on
ದೆಹಲಿ: ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಿತಿನ್ ನಬಿನ್ ಅವರಿಗೆ ಕೇಂದ್ರ ಸರ್ಕಾರವು ಉನ್ನತ ದರ್ಜೆಯ ವಿಐಪಿ ಭದ್ರತಾ ವ್ಯವಸ್ಥೆಯನ್ನು ನೀಡಿದೆ ಎಂದು ಅಧಿಕಾರಿಗಳು ಮಂಗಳವಾರ (ಜ.20) ತಿಳಿಸಿದ್ದಾರೆ. ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ವಿಐಪಿ ಭದ್ರತಾ ವಿಭಾಗಕ್ಕೆ ನಬಿನ್ ಅವರಿಗೆ Z- ದರ್ಜೆಯ ಭದ್ರತೆಯನ್ನು ಒದಗಿಸುವ ಕಾರ್ಯವನ್ನು ವಹಿಸಲಾಗಿದೆ.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ನಬೀನ್​ರ ಹೆಸರನ್ನು ಘೋಷಿಸಿದ ಸ್ವಲ್ಪ ಸಮಯದ ಬಳಿಕ, ಕೆಲವು ವಾರಗಳ ಹಿಂದೆ ಅವರ ಭದ್ರತೆಯನ್ನು ವಹಿಸಿಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯವು ಸಿಆರ್‌ಪಿಎಫ್‌ಗೆ ನಿರ್ದೇಶನ ನೀಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿತಿನ್ ನಬಿನ್ ಜೊತೆ ಸಶಸ್ತ್ರ ಸಿಆರ್‌ಪಿಎಫ್ ಕಮಾಂಡೋಗಳು

ನಬೀನ್​ ದೇಶಾದ್ಯಂತ ಪ್ರವಾಸದ ಸಮಯದಲ್ಲಿ ಶಸ್ತ್ರಸಜ್ಜಿತ ಸಿಆರ್‌ಪಿಎಫ್ ಕಮಾಂಡೋಗಳು ಅವರೊಂದಿಗೆ ಇರುತ್ತಾರೆ ಎಂದು ಅವರು ಹೇಳಿದರು. ನಿಕಟಪೂರ್ವ ಅಧ್ಯಕ್ಷ, ಕೇಂದ್ರ ಸಚಿವ ಜೆ.ಪಿ. ನಡ್ಡಾಗೂ ಈ ಹಿಂದೆ ಸರ್ಕಾರದಿಂದ ಇದೇ ರೀತಿಯ ಭದ್ರತೆ ನೀಡಲಾಗಿದ್ದು, ಸಿಆರ್‌ಪಿಎಫ್ ವಿಐಪಿ ಭದ್ರತಾ ವಿಭಾಗವು ವ್ಯವಸ್ಥೆಗಳನ್ನು ನಿರ್ವಹಿಸುತ್ತಿತ್ತು.
ಐದು ಬಾರಿ ಬಿಹಾರ ಶಾಸಕರಾಗಿರುವ 45 ವರ್ಷದ ನಬೀನ್​ ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಪ್ರಮುಖ ರಾಜ್ಯ ಚುನಾವಣೆಗಳು ಸಮೀಪಿಸುತ್ತಿರುವಾಗ ಕೇಸರಿ ಪಕ್ಷವು ತನ್ನ ಹೆಜ್ಜೆಗುರುತನ್ನು ಮತ್ತಷ್ಟು ವಿಸ್ತರಿಸಲು ಪ್ರಯತ್ನಿಸುತ್ತಿರುವಾಗ, ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿ ಈ ಉನ್ನತ ಸ್ಥಾನವನ್ನು ವಹಿಸಿಕೊಂಡಿದ್ದಾರೆ.

ವಿಐಪಿ ಭದ್ರತೆ

ಕೇಂದ್ರ ರಕ್ಷಣಾ ಪಟ್ಟಿಯಡಿಯಲ್ಲಿ ವಿಐಪಿ ಭದ್ರತಾ ವ್ಯಾಪ್ತಿ, ಅತ್ಯುನ್ನತ Z-ಪ್ಲಸ್ (ASL) ನಿಂದ Z-ಪ್ಲಸ್, Z, Y, Y-ಪ್ಲಸ್ ಮತ್ತು X ವರ್ಗಗಳವರೆಗೆ ಇರುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಗಾಂಧಿ ಕುಟುಂಬ ಮತ್ತು ಇತರ ಹಲವಾರು ರಾಜಕಾರಣಿಗಳು ಮತ್ತು ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳಿಗೆ ಸಿಆರ್‌ಪಿಎಫ್ ರಕ್ಷಣೆ ನೀಡುತ್ತಿದ್ದು, ಈ ಪಡೆಯು ಸುಮಾರು 200 ವಿಐಪಿಗಳಿ ಈ ಮಟ್ಟದ ಭದ್ರತೆ ಒದಗಿಸುತ್ತದೆ.

ನಬೀನ್​ ಪದಗ್ರಹಣ

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯಾಧ್ಯಕ್ಷ ನಿತಿನ್ ನಬಿನ್ ಅವಿರೋಧವಾಗಿ ಆಯ್ಕೆಯಾಗಿದ್ದು, ಇಂದು(ಜ. 20) ಜೆ.ಪಿ ನಡ್ಡಾ ಅವರ ಉತ್ತರಾಧಿಕಾರಿಯಾಗಿ ಪಕ್ಷದ 12ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಚುನಾವಣಾಧಿಕಾರಿ ಕೆ. ಲಕ್ಷ್ಮಣ್ ಅವರು ಅವಿರೋಧವಾಗಿ ನಿತಿನ್ ನಬಿನ್ ಅವರ ಹೆಸರನ್ನು ಅಧ್ಯಕ್ಷರಾಗಿ ಘೋಷಣೆ ಮಾಡಿದರು. ಈ ವೇಳೆ ಪ್ರಧಾನಿ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ, ರಾಜನಾಥ್ ಸಿಂಗ್, ಹಾಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ನಿತಿನ್ ಗಡ್ಕರಿ, ಕಿರಣ್ ರಿಜಿಜು ಸೇರಿ ಹಲವು ನಾಯಕರು ಉಪಸ್ಥಿತರಿದ್ದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net