ಬಜೆಟ್ ಅಧಿವೇಶನಕ್ಕೆ ಸಂಸತ್ ಸಜ್ಜು; ಸರ್ವಪಕ್ಷ ಸಭೆ ಕರೆದ ಸರ್ಕಾರ | All Party Meeting

Parliament | ಭಾರತದ ಸಂಸತ್​
Parliament | ಭಾರತದ ಸಂಸತ್​
Published on
ದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಮತ್ತು ಇತರ ಕಾರ್ಯಸೂಚಿಗಳನ್ನು ಚರ್ಚಿಸಲು ಸರ್ಕಾರ ಜನವರಿ 27 ರಂದು ಸರ್ವಪಕ್ಷ ಸಭೆಯನ್ನು ಕರೆದಿದೆ ಎಂದು ವರದಿಯಾಗಿದೆ. ಜ.28 ರಿಂದ ಅಧಿವೇಶನ ಪ್ರಾರಂಭವಾಗಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಕರೆದಿರುವ ಸರ್ವಪಕ್ಷ ಸಭೆಯು ಜನವರಿ 27 ರಂದು ಬೆಳಿಗ್ಗೆ 11 ಗಂಟೆಗೆ ಸಂಸತ್ ಭವನದ ಅನೆಕ್ಸ್‌ನ ಮುಖ್ಯ ಸಮಿತಿ ಕೊಠಡಿಯಲ್ಲಿ ನಡೆಯಲಿದೆ ಎಂದು ಪಿಟಿಐ ವರದಿ ಮಾಡಿದೆ.

ಫೆಬ್ರವರಿ 1 ರಂದು ಬಜೆಟ್ ಮಂಡನೆ

ಬಜೆಟ್ ಅಧಿವೇಶನ ಜನವರಿ 28 ರಂದು ಆರಂಭವಾಗಲಿದ್ದು, ಮೊದಲ ಹಂತ ಫೆಬ್ರವರಿ 13 ರಂದು ಮುಕ್ತಾಯಗೊಳ್ಳಲಿದೆ. ಎರಡನೇ ಹಂತ ಮಾರ್ಚ್ 9 ರಂದು ಆರಂಭವಾಗಲಿದ್ದು, ಏಪ್ರಿಲ್ 2 ರಂದು ಅಧಿವೇಶನ ಮುಕ್ತಾಯಗೊಳ್ಳಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು (ಭಾನುವಾರ) 2026-27 ನೇ ಸಾಲಿನ ಕೇಂದ್ರ ಬಜೆಟ್​ ಮಂಡಿಸಲಿದ್ದಾರೆ. ಇದು ಅವರ ಸತತ ಒಂಬತ್ತನೇ ಬಜೆಟ್ ಆಗಲಿದೆ.
ರಾಷ್ಟ್ರಪತಿ ಮುರ್ಮು ಅವರ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸಲು ಫೆಬ್ರವರಿ 2 ರಿಂದ 4 ರವರೆಗೆ ಲೋಕಸಭೆ ಮೂರು ದಿನಗಳನ್ನು ನಿಗದಿಪಡಿಸಿದ್ದು, ಇದರ ಹೊರತಾಗಿ, ವಿಕಸಿತ ಭಾರತ ಶಿಕ್ಷಾ ಅಧಿಷ್ಠಾನ ಮಸೂದೆ, 2025, ಸೆಕ್ಯುರಿಟೀಸ್ ಮಾರುಕಟ್ಟೆ ಸಂಹಿತೆ 2025 ಸೇರಿದಂತೆ ಅನೇಕ ಮಸೂದೆಗಳ ಕುರಿತಾಗಿ ಚರ್ಚೆಗಳು ನಡೆಯಲಿವೆ. ಇತ್ತೀಚಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾದ ಜಿ ರಾಮ್​ ಜಿ ಕಾಯ್ದೆಯ ಬಗ್ಗೆಯೂ ಚರ್ಚೆ ನಡೆಯಬಹುದು ಎನ್ನಲಾಗಿದೆ. ಈ ನೂತನ ಖಾಯ್ದೆಯ ವಿರುದ್ಧ ಕಾಂಗ್ರೆಸ್ ಪಕ್ಷ ನಿರಂತರವಾಗಿ ರಾಷ್ಟ್ರವ್ಯಾಪಿ ಅಭಿಯಾನವನ್ನು ನಡೆಸುತ್ತಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net