ಗಾಲ್ವಾನ್ ಕಣಿವೆ ಸಂಘರ್ಷ ನಡೆದು 4 ವರ್ಷಗಳ ಬಳಿಕ ಚೀನಾಗೆ ಭಾರತದ ರಾಯಭಾರಿ; ವಿಕ್ರಮ್ ದೊರೈಸ್ವಾಮಿ ನೇಮಿಸಿದ ಕೇಂದ್ರ | Vikram Doraiswamy

 ವಿಕ್ರಮ್ ದೊರೈಸ್ವಾಮಿ
ವಿಕ್ರಮ್ ದೊರೈಸ್ವಾಮಿ
Published on
ನವದೆಹಲಿ: 2020ರಲ್ಲಿ ಪೂರ್ವ ಲಡಾಖ್​ನಲ್ಲಿ ಭಾರತ ಮತ್ತು ಚೀನಾ ನಡುವೆ ಮಿಲಿಟರಿ ಸಂಘರ್ಷದ ನಡೆದ 4 ವರ್ಷಗಳ ಬಳಿಕ ಮತ್ತು ಎರಡೂ ದೇಶಗಳ ನಡುವಿನ ಸಂಬಂಧವನ್ನು ಪುನರ್ನಿರ್ಮಿಸಲು ಗುರುವಾರ(ಮಾ. 19) ಹಿರಿಯ ಐಎಫ್​ಎಸ್ ಅಧಿಕಾರಿ ಮತ್ತು ಅನುಭವಿ ರಾಜತಾಂತ್ರಿಕ ವಿಕ್ರಮ್ ದೊರೈಸ್ವಾಮಿಯವರನ್ನು ಚೀನಾದ ರಾಯಭಾರಿಯಾಗಿ ಕೇಂದ್ರ ಸರ್ಕಾರ ನೇಮಿಸಿದೆ.
ಗಾಲ್ವಾನ್ ಕಣಿವೆ ಸಂಘರ್ಷದ ಬಳಿಕ ಭಾರತ ಮತ್ತು ಚೀನಾದ ನಡುವಿನ ಸಂಬಂಧಗಳು ಅಳಿಸಿ ಹೋಗಿದ್ದವು. ಇತ್ತೀಚೆಗೆ ಕಳೆದ ಕೆಲವು ತಿಂಗಳಿನಿಂದ ಎರಡು ದೇಶಗಳು ತಮ್ಮ ಸಂಬಂಧಗಳನ್ನು ಸ್ಥಿರಗೊಳಿಸುವ ಪ್ರಯತ್ನವನ್ನು ಚುರುಕುಗೊಳಿಸಿವೆ. ಅದರ ಭಾಗವಾಗಿ ಭಾರತ ಚೀನಾದಲ್ಲಿ ಭಾರತದ ರಾಯಭಾರಿಯನ್ನು ನೇಮಿಸಿದೆ ಎನ್ನಲಾಗಿದೆ.
1992ರ ಬ್ಯಾಚ್​ನ ಭಾರತೀಯ ವಿದೇಶಾಂಗ ಸೇವೆ(ಐಎಫ್​ಎಸ್​) ಅಧಿಕಾರಿಯಾಗಿರುವ ದೊರೈಸ್ವಾಮಿ ಪ್ರಸ್ತುತ ಯುನೈಟೈಟ್ ಕಿಂಗ್​ಡಮ್​ನಲ್ಲಿ ಭಾರತೀಯ ಹೈಕಮಿಷನರ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯದಲ್ಲಿ ಅವರು ಚೀನಾ ರಾಯಭಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಯಾರು ಈ ವಿಕ್ರಮ್ ದೊರೈಸ್ವಾಮಿ?

ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮತ್ತು ದೆಹಲಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿರುವ ವಿಕ್ರಮ್ ದೊರೈಸ್ವಾಮಿ, ಐಎಫ್​​ಎಸ್​​ಗೆ ಆಯ್ಕೆಯಾಗುವ ಮೊದಲು ಒಂದು ವರ್ಷ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. 1992-93ರಲ್ಲಿ ಐಎಫ್​ಎಸ್​​ ಸೇವಾ ತರಬೇತಿ ಬಳಿಕ ಅವರನ್ನು ಹಾಂಗ್​ಕಾಂಗ್​ಗೆ ಮೂರನೇ ಕಾರ್ಯದರ್ಶಿಯಾಗಿದ್ದರು.
1996 ಸೆಪ್ಟೆಂಬರ್​ನಲ್ಲಿ ನಾಲ್ಕು ವರ್ಷಗಳ ಅವಧಿಗೆ ಬೀಜಿಂಗ್​ ತೆರಳುವ ಮೊದಲು ನ್ಯೂ ಏಷ್ಯಾ ಯೇಲ್-ಇನ್-ಏಷ್ಯಾ ಭಾಷಾ ಶಾಲೆಯಿಂದ ಚೈನೀಸ್ ಭಾಷೆಯಲ್ಲಿ ಐಚ್ಛಿಕ ದಿಪ್ಲೋಮಾವನ್ನು ಪಡೆದಿದ್ದಾರೆ. 2000ರಲ್ಲಿ ವಿದೇಶಾಂಗ ಸಚಿವಾಲಯದ ಶಿಷ್ಟಾಚಾರ ಉಪ ಮುಖ್ಯಸ್ಥರನ್ನಾಗಿ ನೇಮಕವಾಗಿದ್ದರು. ಬಳಿಕ ಎರಡು ವರ್ಷಗಳ ಅವಧಿಗೆ ಪ್ರಧಾನ ಮಂತ್ರಿ ಕಚೇರಿಗೆ ನಿಯೋಜನೆಗೊಂಡಿದ್ದರು. ಪಿಎಂ ಅವರ ಖಾಸಗಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ನಂತರ ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಶಾಶ್ವತ ವಿಶ್ವಸಂಸ್ಥೆಯ ಮಿಷನ್ ಮತ್ತು ಜೋಹಾನ್ಸ್‌ಬರ್ಗ್‌ನಲ್ಲಿರುವ ಕಾನ್ಸುಲೇಟ್ ಜನರಲ್‌ನಲ್ಲಿಯೂ ಸೇವೆ ಸಲ್ಲಿಸಿದ್ದಾರೆ. 2011ರ ಜುಲೈನಲ್ಲಿ ನವದೆಹಲಿಯ MEA ಗೆ ಮರಳಿದರು, ಅಲ್ಲಿ ಅವರು ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ (SAARC) ವಿಭಾಗವನ್ನು ಮುನ್ನಡೆಸಿದ್ದಾರೆ. 2012ರ ಅಕ್ಟೋಬರ್​ದಿಂದ 2014 ಅಕ್ಟೋಬರ್​ವರೆಗೆ ವಿದೇಶಾಂಗ ಸಚಿವಾಲಯದ ಅಮೆರಿಕಾಸ್ ವಿಭಾಗದ ಜಂಟಿ ಕಾರ್ಯದರ್ಶಿಯಾಗಿದ್ದರು.
2014ರಲ್ಲಿ ಉಜ್ಬೇಕಿಸ್ತಾನ್‌ಗೆ ಭಾರತದ ರಾಯಭಾರಿಯಾದರು. 2015 ಏಪ್ರಿಲ್​ನಲ್ಲಿ ಕೊರಿಯಾಗೆ ಭಾರತದ ರಾಯಭಾರಿಯಾದರು. ಈ ನಿಯೋಜನೆ ಪೂರ್ಣಗೊಂಡ ನಂತರ ಜುಲೈ 2018 ರಲ್ಲಿ ವಿದೇಶಾಂಗ ಸಚಿವಾಲಯದ ಪ್ರಧಾನ ಕಚೇರಿಗೆ ಮರಳಿದರು, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ.
2022ರಿಂದ ಯುನೈಟೆಡ್​ ಕಿಂಗ್‌ಡಮ್‌ಗೆ ಭಾರತದ ಹೈಕಮಿಷನರ್ ಆಗುವ ಮೊದಲು, 2020 ಸೆ. 18ರಿಂದ 2022ರವರೆಗೆ ಬಾಂಗ್ಲಾದೇಶಕ್ಕೆ ಭಾರತದ ಹೈಕಮಿಷನರ್ ಆಗಿದ್ದರು. ದೊರೈಸ್ವಾಮಿ ಮ್ಯಾಂಡರಿನ್, ಫ್ರೆಂಚ್ ಮತ್ತು ಕೆಲವು ಕೊರಿಯನ್ ಭಾಷೆಗಳನ್ನು ಮಾತನಾಡುತ್ತಾರೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net