ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವಧಿಯನ್ನು ಮತ್ತೆ ಮೂರು ವರ್ಷಕ್ಕೆ ವಿಸ್ತರಿಸಿದ ಕೇಂದ್ರ ಸರ್ಕಾರ | Tushar Mehta

ಸಾಲಿಸಿಟರ್ ಜನರಲ್​ ತುಷಾರ್ ಮೆಹ್ತಾ
ಸಾಲಿಸಿಟರ್ ಜನರಲ್​ ತುಷಾರ್ ಮೆಹ್ತಾ
Published on
ನವದೆಹಲಿ: ಹಿರಿಯ ವಕೀಲ ಮತ್ತು ಸುಪ್ರೀಂಕೋರ್ಟ್​ನ ಸಾಲಿಸಿಟರ್ ಜನರಲ್​ ತುಷಾರ್ ಮೆಹ್ತಾ(Tushar Mehta) ಅವರ ಅವಧಿಯನ್ನು ಮತ್ತೆ ಮೂರು ವರ್ಷಗಳಿಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂದು ಸೋಮವಾರ(ಜೂ. 22) ವರದಿಯಾಗಿದೆ.
ತುಷಾರ್ ಮೆಹ್ತಾ ಅವರು ಸಾಲಿಸಿಟರ್ ಜನರಲ್ ಆಗಿ ಮೂರು ವರ್ಷಗಳ ಅವಧಿಗೆ ಮರು ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿ (ಎಸಿಸಿ) ಅನುಮೋದನೆ ನೀಡಿದೆ. ಈ ಹಿನ್ನೆಲೆ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯವು ಜೂನ್ 20 ರಂದು ಹೊಸ ಅಧಿಸೂಚನೆ ಹೊರಡಿಸಿದ್ದು, ಜುಲೈ 01ರಿಂದ ಅವರ ಮರು ನೇಮಕ ಜಾರಿಗೆ ಬರಲಿದೆ ಎಂದು ಹೇಳಿದೆ.
ಮೆಹ್ತಾ ಅವರು ಕೇಂದ್ರ ಸರ್ಕಾರದ ಎರಡನೇ ಅತ್ಯುನ್ನತ ಕಾನೂನು ಅಧಿಕಾರಿ ಆಗಿ ಹೊಸ ಅಧಿಕಾರಾವಧಿಯ ಅಂತ್ಯದ ವೇಳೆಗೆ ಹನ್ನೊಂದು ವರ್ಷಗಳನ್ನು ಪೂರ್ಣಗೊಳಿಸಲಿದ್ದಾರೆ. 2018ರಲ್ಲಿ ಮೊದಲ ಬಾರಿಗೆ SG ಆಗಿದ್ದ ಅವರು, ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಹೆಚ್ಚು ಕಾಲ ಸೇವೆ ಸಲ್ಲಿಸಿದವರಲ್ಲಿ ಒಬ್ಬರಾಗುತ್ತಾರೆ.
ಇನ್ನೂ ಜುಲೈ 30ರಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಅವಧಿಗೆ ಹೆಚ್ಚುವರಿ ಸಾಲಿಸಿಟರ್ ಜನರಲ್‌ಗಳಾದ ಸೂರ್ಯಪ್ರಕಾಶ್ ವಿ. ರಾಜು, ಎನ್. ವೆಂಕಟರಾಮನ್, ಐಶ್ವರ್ಯ ಭಾಟಿ ಅವರನ್ನು ಮರು ನೇಮಕ ಮಾಡಲಾಗಿದೆ ಎಂದು ಎಸಿಸಿ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
ಸುಪ್ರೀಂಕೋರ್ಟ್‌ಗೆ ಇಬ್ಬರು ಎಎಸ್‌ಜಿಗಳಾದ ವಿಕ್ರಮ್‌ಜಿ ಬ್ಯಾನರ್ಜಿ ಮತ್ತು ಶ್ರೀ ಕೆ.ಎಂ. ನಟರಾಜ್ ಅವರನ್ನೂ ಜುಲೈ 30 ರಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಹೆಚ್ಚುವರಿ ಅವಧಿಗೆ ನೇಮಕ ಮಾಡಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net