ಗೀತರಚನೆಕಾರ ಪ್ರಸೂನ್ ಜೋಶಿಯವರನ್ನು ಪ್ರಸಾರ ಭಾರತಿ ಅಧ್ಯಕ್ಷರನ್ನಾಗಿ ನೇಮಿಸಿದ ಕೇಂದ್ರ ಸರ್ಕಾರ | Prasoon Joshi

ಪ್ರಸೂನ್ ಜೋಶಿ
ಪ್ರಸೂನ್ ಜೋಶಿ
Published on
ನವದೆಹಲಿ: ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಅಧ್ಯಕ್ಷ ಮತ್ತು ಗೀತರಚನೆಕಾರ ಪ್ರಸೂನ್ ಜೋಶಿ(Prasoon Joshi) ಅವರನ್ನು ಭಾರತದ ಸಾರ್ವಜನಿಕ ಸೇವಾ ಪ್ರಸಾರಕವಾದ ಪ್ರಸಾರ ಭಾರತಿಯ ಅಧ್ಯಕ್ಷರನ್ನಾಗಿ ಶನಿವಾರ(ಮೇ 02) ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನೇಮಕ ಮಾಡಿದೆ.
ಇತ್ತೀಚೆಗೆ ಪ್ರಸಾರ ಭಾರತಿ ಅಧ್ಯಕ್ಷ ಸ್ಥಾನಕ್ಕೆ ನವನೀತ್ ಕುಮಾರ್ ಸೆಹಗಲ್ ಅವರ ರಾಜೀನಾಮೆ ನೀಡಿದ ಬಳಿಕ, 2017ರಿಂದ ಸಿಬಿಎಫ್​ಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಪ್ರಸೂನ್ ಜೋಶಿಯವರನ್ನು ನೇಮಕ ಮಾಡಲಾಗಿದೆ.
ಈ ಕುರಿತು ಪ್ರಕಟಣೆಯಲ್ಲಿ ಜೋಶಿಯವರಿಗೆ ಅಭಿನಂದನೆ ತಿಳಿಸಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಪ್ರಸಾರ ಭಾರತಿ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡ ಶ್ರೀ ಪ್ರಸೂನ್ ಜೋಶಿ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಅವರು ಜಾಹೀರಾತು, ಸಾಹಿತ್ಯ, ಕಲೆ ಮತ್ತು ಸಿನಿಮಾ ರಂಗದ ಅಪರೂಪದ ಸೃಜನಶೀಲ ಮನೋಭಾವದವರಾಗಿದ್ದರೂ, ಅವರ ಹೃದಯವು ಭಾರತಕ್ಕಾಗಿ ನಿಸ್ಸಂದೇಹವಾಗಿ ಬಡಿಯುತ್ತದೆ.
ಅವರ ಮಾತುಗಳು ನಮ್ಮ ಮಣ್ಣಿನ ಪರಿಮಳವನ್ನು ಹೊತ್ತಿವೆ. ಮತ್ತು ಅವರ ದೃಷ್ಟಿಕೋನವು ನಮ್ಮ ಸಂಸ್ಕೃತಿಯ ಕಾಲಾತೀತ ಸಾರವನ್ನು ಪ್ರತಿಬಿಂಬಿಸುತ್ತದೆ. ಅವರ ನಾಯಕತ್ವದಲ್ಲಿ, ಪ್ರಸಾರ ಭಾರತಿ ನವೀಕೃತ ಶಕ್ತಿ, ಆಳವಾದ ಉದ್ದೇಶ ಮತ್ತು ಹೊಸ ಸೃಜನಶೀಲ ಧ್ವನಿಯನ್ನು ಕಂಡುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಸಿಬಿಎಫ್‌ಸಿ ಅಧ್ಯಕ್ಷರಾಗುವ ಮೊದಲು ಪ್ರಸೂನ್ ಜೋಶಿ, ಮೆಕ್‌ಕ್ಯಾನ್ ವರ್ಲ್ಡ್ ಗ್ರೂಪ್ ಇಂಡಿಯಾದ ಸಿಇಒ ಮತ್ತು ಮೆಕ್‌ಕ್ಯಾನ್ ಎರಿಕ್ಸನ್‌ನ ಅಂಗಸಂಸ್ಥೆಯಾದ ಮೆಕ್‌ಕ್ಯಾನ್ ವರ್ಲ್ಡ್ ಗ್ರೂಪ್ ಏಷ್ಯಾ ಪೆಸಿಫಿಕ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2016ರಿಂದ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್‌ನ ಟ್ರಸ್ಟಿಯೂ ಆಗಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net